ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ: ಸಚಿವ ಡಾ.ಶರಣಪ್ರಕಾಶ ಪಾಟೀಲ
ಯಾದಗಿರಿ: 'ಗ್ರಾಮ ಪಂಚಾಯಿತಿ ಪಿಡಿಒಗಳು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿದರೆ ಅವರೇ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಬರ ಅಧ್ಯಯನ ಸಂಬಂಧಿಸ

ಯಾದಗಿರಿ: 'ಗ್ರಾಮ ಪಂಚಾಯಿತಿ ಪಿಡಿಒಗಳು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿದರೆ ಅವರೇ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಬರ ಅಧ್ಯಯನ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.'ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾಲ ಹರಣ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇನ್ನು ಮುಂದೆ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ತಕ್ಷಣವೇ ಬಗೆಹರಿಸುವ ಕೆಲಸ ಮಾಡಬೇಕು' ಎಂದು ತಾಕೀತು ಮಾಡಿದರು.'ಟಾಸ್ಕ್ ಫೋರ್ಸ್ ಸಮಿತಿ ಸಭೆಯಾದಾಗ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯ ಇರುವ ಅನುದಾನದ ಮಾಹಿತಿಯನ್ನು ಪಿಡಿಒಗಳು ಶಾಸಕರಿಗೆ ಮಾಹಿತಿ ಕೊಡಬೇಕು' ಎಂದರು.'ಜೆಜೆಎಂ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಂಡರೆ ಅರ್ಧದಷ್ಟು ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗುತ್ತದೆ. ಬಾಕಿ ಇರುವ ಅನುದಾನದ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುವೆ. ಜಿ.ಪ. ಸಿಇಒ ಜೆಜೆಎಂ ಕಾಮಗಾರಿಗಳ ನಿರ್ವಹಣೆಯ ಮೇಲೆ ನಿಗ ಇರಿಸಬೇಕು. ಕುಡಿಯುವ ನೀರಿಗಾಗಿ ಕೆಕೆಆರ್ಡಿಬಿಯ ಅನುದಾನ ಬಳಸಿಕೊಳ್ಳುವ ಅವಕಾಶವೂ ಇದೆ' ಎಂದರು.'ಅದೃಷ್ಟವಶಾತ್ ನಮ್ಮಲ್ಲಿನ ಜಲಾಶಯಗಳು ಭರ್ತಿಯಾಗಿವೆ. ಆದರೆ, ಮಳೆಯ ಅಭಾವ ಮುಂದುವರಿದಿದ್ದು, ಅಂತರ್ಜಲದ ಮಟ್ಟ ಕುಸಿದಿದೆ. ಅಧಿಕಾರಿಗಳು ಸದಾ ಎಚ್ಚರಿಕೆಯಿಂದ ಇದ್ದು, ಮುಂಬರುವ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರಬೇಕು. ಶಾಸಕರಿಗೆ ಬಂದಿರುವ ₹1 ಕೋಟಿಯನ್ನು ಸರಿಯಾಗಿ ಬಳಕೆ ಮಾಡಬೇಕು' ಎಂದು ಹೇಳಿದರು.ಶೇ 25ರಷ್ಟು ಮಳೆ ಕೊರತೆ: 'ಜಿಲ್ಲೆಯಲ್ಲಿ ವಾರ್ಷಿಕ 710 ಮಿ.ಮೀ. ಮಳೆಯಾಗುತ್ತದೆ. ಆದರೆ, ಇದುವರೆಗೂ ಜಿಲ್ಲೆಯಲ್ಲಿ ಶೇ 25ರಷ್ಟು ಮಳೆ ಕೊರತೆಯಾಗಿದೆ. ಯಾದಗಿರಿ ಮತ್ತು ಗುರುಮಠಕಲ್ ತಾಲ್ಲೂಕುಗಳಲ್ಲಿ ಅತಿಹೆಚ್ಚು ಮಳೆಯಾಗುತ್ತದೆ. ಆದರೆ, ಈ ವರ್ಷ ಈ ಎರಡೂ ತಾಲ್ಲೂಕುಗಳಲ್ಲಿ ಬಹಳ ಕಡಿಮೆಯಾಗಿದೆ. ಶೇ 33ರಷ್ಟು ಕೊರತೆಯಾಗಿದ್ದು, ಅತಿ ಕಡಿಮೆಯಾಗುತ್ತಿದ್ದ ಹುಣಸಗಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ' ಎಂದು ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗೂರು ಅವರು ಸಚಿವರ ಗಮನಕ್ಕೆ ತಂದರು.'ಮುಂಗಾರು ಅವಧಿಯಲ್ಲಿ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಪೈಕಿ ಇದುವರೆಗೆ 3.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈಗಾಗಲೇ ಶೇ 80ರಷ್ಟು ಬಿತ್ತನೆಯಾಗಿದ್ದು, ಕಾಲುವೆಗೆ ಈಗ ನೀರು ಹರಿಸುತ್ತಿರುವುದರಿಂದ ಭತ್ತ ನಾಟಿ ಕಾರ್ಯವು ಎಲ್ಲಾ ಕಡೆಗಳಲ್ಲಿ ನಡೆಯುತ್ತಿದೆ. ಆಗಸ್ಟ್ 15ರ ವರೆಗೆ ತೊಗರಿ ಬಿತ್ತನೆಯಾಗಲಿದೆ' ಎಂದರು.ಪರವಾನಗಿ ರದ್ದತಿಗೆ ತಾಕೀತು; 'ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ತಕ್ಷಣವೇ ಅಂಗಡಿಗಳ ಪರವಾಗಿ ರದ್ದು ಮಾಡಬೇಕು. ಜನರಿಗೆ ಗೊತ್ತಾಗಿ ಪ್ರತಿಭಟನೆ ನಡೆದ ನಂತರ ಎಚ್ಚೆತ್ತುಕೊಳ್ಳಬಾರದು' ಎಂದು ಸಚಿವರು ತಾಕೀತು ಮಾಡಿದರು.ಶೇ 9.4,ರಷ್ಟು ತೋಟಗಾರಿಕೆ ಬೆಳೆಗಳ ಬಿತ್ತನೆ: '12,300 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದುವರೆಗೆ 757 (ಶೇ 9.4ರಷ್ಟು) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16.36ರಷ್ಟು ಬಿತ್ತನೆಯಾಗಿತ್ತು. ಕಳೆದ ಒಂದು ವಾರದಿಂದ ತೋಟಗಾರಿಕೆ ಬೆಳೆಗಳ ನಾಟಿ ನಡೆಯುತ್ತಿದೆ. ಏಪ್ರಿಲ್ನಿಂದ ಮೇ ನಡುವಿನ ಅಕಾಲಿಕ ಮಳೆಯಿಂದಾಗಿ 37.44 ಹೆಕ್ಟೇರ್ ಪ್ರದೇಶದ 38 ರೈತರ ಬೆಳೆಗಳಿಗೆ ಹಾನಿಯಾಗಿದೆ. ಏಪ್ರಿಲ್ ಕಂತಿನ 7.4 ಹೆಕ್ಟೇರ್ಗೆ ಪರಿಹಾರ ಜಮೆಯಾಗಿದೆ' ಎಂದು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಉಕ್ಕಿನಾಳ ಹೇಳಿದರು.ಅಧಿಕಾರಿಗಳಿಂದ ಸಿಗದ ಸ್ಪಂದನೆ: ಶಾಸಕ ಕಂದಕೂರ ಅಸಮಾಧಾನ'ಕುಡಿಯುವ ನೀರು ಪೂರೈಕೆಗಾಗಿ ಬಿಡುಗಡೆಯಾದ ₹ 1 ಕೋಟಿ ಅನುದಾನ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿಲ್ಲ. ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಗೊತ್ತಾಗಿದೆ' ಎಂದು ಶಾಸಕ ಶರಣಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿದರು.'ಪಂಚಾಯಿತಿಗಳಿಗೆ ಪಿಡಿಒಗಳು ಬರುವುದಿಲ್ಲ. ತಾಲ್ಲೂಕು ಪಂಚಾಯಿತಿ ಇಒಗಳ ಮಾತು ಸಹ ಕೇಳುವುದಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಎ.ಸಿ. ರೂಮ್ನಿಂದ ಹೊರ ಬರುವುದಿಲ್ಲ. ಕೇಸ್ ವರ್ಕರ್ಗಳನ್ನು ಗುರಿಯಾಗಿಸಿ ಕಿರುಕುಳ ಕೊಡುತ್ತಿದ್ದಾರೆ. ಏಳು ಬಾರಿ ನಾನೇ ಫೋನ್ ಮಾಡಿದರೂ ಸ್ಪಂದಿಸಿಲ್ಲ' ಎಂದು ಕಿಡಿಕಾರಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ, 'ಸಭೆಯಲ್ಲಿ ಅಧಿಕಾರಿಗಳಿಗೆ ಈ ರೀತಿಯಾಗಿ ದಬಾಯಿಸುವುದು ಸರಿಯಲ್ಲ. ಇದರಿಂದ ಅಧಿಕಾರಿಗಳಿಗೂ ಮುಜುಗರ ಆಗುತ್ತದೆ. ಇಂತಹ ವಿಷಯಗಳನ್ನು ಬೇರೆಡೆ ಪ್ರಸ್ತಾಪಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಪರಿಹಾರ ಕಂಡುಕೊಳ್ಳಬೇಕು' ಎಂದರು. 'ಗ್ರಾಮೀಣ ಪ್ರದೇಶಕ್ಕೆ ಹೋದಾಗ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಸಮಸ್ಯೆ ಬಂದಾಗ ನಾವು ಯಾರಿಗೆ ಹೇಳಬೇಕು? ಅಧಿಕಾರಿಗಳಾದವರು ಸ್ಪಂದನೆ ಮಾಡದಿದ್ದರೆ ಹೇಗೆ' ಎಂದು ಶಾಸಕರು ಪ್ರಶ್ನಿಸಿದರು.ಸಭೆಯಲ್ಲಿ ಶಾಸಕರಾದ ಡಾ.ಶರಣಬಸಪ್ಪ ದರ್ಶನಾಪುರ, ಚನ್ನಾರೆಡ್ಡಿ ಪಾಟೀಲ ತುನ್ನೂರು, ರಾಜಾ ವೇಣುಗೋಪಾಲ ನಾಯಕ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, 'ಯುಡಾ' ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.