ನಗ್ಗರ್ ಕಥೆ ಹೇಳುವ ಕ್ಯಾಸಲ್ ದೇಗುಲಗಳು..
ಹಿಮಾಚಲ ಪ್ರದೇಶದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ ನಂತರ ಹಿಂತಿರುಗಲು ನಾಲ್ಕು ದಿನಗಳ ಕಾಲಾವಕಾಶ ಇದ್ದುದರಿಂದ, ನಗ್ಗರ್ ಪಟ್ಟಣದ ಸುಂದರ ಸ್ಥಳಗಳನ್ನು ವೀಕ್ಷಿಸಲು ಹೊರಟೆವು. ಅಂಕುಡೊಂಕಾದ ಬೆಟ್ಟದ ರಸ್ತೆಯಲ್ಲಿ ಸಾಗುತ್ತಾ ಹೋಗುವಾಗ, ಹಸಿರಿನಿಂದ ಕಂಗೊಳಿಸುತ್ತಿದ್ದ ಪರ್ವತಗಳು ಮನಸ್ಸಿಗೆ ಆನಂದ ನೀಡುತ್ತಿದ್ದವು. ಮಧ್ಯೆ ಮಧ್ಯೆ ಭೋರ್ಗರೆಯುತ್ತಾ ಹರಿಯುವ ಬಿ

ಹಿಮಾಚಲ ಪ್ರದೇಶದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ ನಂತರ ಹಿಂತಿರುಗಲು ನಾಲ್ಕು ದಿನಗಳ ಕಾಲಾವಕಾಶ ಇದ್ದುದರಿಂದ, ನಗ್ಗರ್ ಪಟ್ಟಣದ ಸುಂದರ ಸ್ಥಳಗಳನ್ನು ವೀಕ್ಷಿಸಲು ಹೊರಟೆವು. ಅಂಕುಡೊಂಕಾದ ಬೆಟ್ಟದ ರಸ್ತೆಯಲ್ಲಿ ಸಾಗುತ್ತಾ ಹೋಗುವಾಗ, ಹಸಿರಿನಿಂದ ಕಂಗೊಳಿಸುತ್ತಿದ್ದ ಪರ್ವತಗಳು ಮನಸ್ಸಿಗೆ ಆನಂದ ನೀಡುತ್ತಿದ್ದವು. ಮಧ್ಯೆ ಮಧ್ಯೆ ಭೋರ್ಗರೆಯುತ್ತಾ ಹರಿಯುವ ಬಿಯಾಸ್ ನದಿಯ ನಾದ ಮಧುರವಾಗಿ ಕೇಳಿಸುತ್ತಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಹರಡಿದ್ದ ಆ್ಯಪಲ್ ಮತ್ತು ಮಾಲ್ಟಾ ಹಣ್ಣುಗಳ ತೋಟಗಳು ಸುಂದರ ಚಿತ್ರವನ್ನೇ ಮೂಡಿಸುತ್ತಿದ್ದವು.ಈ ಎಲ್ಲಾ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾಗಲೇ, ನಮ್ಮ ಟ್ಯಾಕ್ಸಿ ನಗ್ಗರ್ ಕ್ಯಾಸಲ್ ಬಳಿ ನಿಂತಿತು. ನಗ್ಗರ್ ಪಟ್ಟಣದ ಮೇಲ್ಭಾಗದಲ್ಲಿರುವ ನಗ್ಗರ್ ಕ್ಯಾಸಲ್, ಕುಲು ರಾಜವಂಶದ ಪುರಾತನ ರಾಜಧಾನಿಯ ನೆನಪಿನ ಮೌನ ಸಾಕ್ಷಿಯಾಗಿದೆ. ಹಿಮಾಲಯದ ಶಿಖರಗಳ ನಡುವೆ ಮಿಂಚುತ್ತಿರುವ ಈ ಕಟ್ಟಡವು ಇತಿಹಾಸದ ಅಮೂಲ್ಯ ಮುತ್ತಿನಂತಿದೆ.ಕ್ಯಾಸೆಲ್ ಒಳಗೆ ಪ್ರವೇಶಿಸಿದ ತಕ್ಷಣವೇ ಕಾಣಿಸಿಕೊಂಡ ಕಲ್ಲಿನ ಗೋಡೆಗಳು ಗಮನಸೆಳೆಯುವಂತಿದ್ದವು. ಅವುಗಳನ್ನು ಮೃತ ಪ್ರಾಣಿಗಳ ಕೊಂಬುಗಳಿಂದ ಅಲಂಕರಿಸಲಾಗಿತ್ತು. ಅಲ್ಲಿದ್ದ ಬೃಹತ್ ಗಾತ್ರದ ಮರದ ದಿಮ್ಮಿಗಳು, ಅವುಗಳ ಮೇಲಿಡಲಾಗಿದ್ದ ಪ್ರಾಣಿಗಳ ಕೊಂಬುಗಳು ವಿಶಿಷ್ಟವಾಗಿ ಕಾಣಿಸುತ್ತಿದ್ದವು. ಮುಂದೆ ಸಾಗುತ್ತಿದ್ದಂತೆ ಕೋಟೆಯನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿರುವುದು ಕಂಡುಬಂದಿತು. ಅವುಗಳಲ್ಲಿ ಒಂದು ಅಂಗಳವು ಕೊಠಡಿಗಳು, ಮರಗಳು ಮತ್ತು ಕಲ್ಲಿನ ನೆಲಹಾಸುಗಳಿಂದ ಆವೃತವಾಗಿದೆ. ಇನ್ನೊಂದು ತೆರೆದ ಅಂಗಳವು ಪ್ರಸಿದ್ಧ ಜಗತ್ ಪತಿ ದೇವಾಲಯವನ್ನು ಹೊಂದಿದೆ. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಭಕ್ತರು ದೇವಾಲಯದ ಮುಂಭಾಗದಲ್ಲಿ ಕುಳಿತಿದ್ದರು. ಅಂದು ವಿಶೇಷ ದಿನವಾಗಿದ್ದು, ಉತ್ಸವ ಮೂರ್ತಿಯಿರುವ ಪಲ್ಲಕ್ಕಿ ಊರಿನೊಳಗೆ ಮೆರವಣಿಗೆ ಹೊರಡಲು ಸಿದ್ಧವಾಗಿತ್ತು.ಕೋಟೆಯೊಳಗಿನ ಬೆಂಕಿಗೂಡುಗಳು, ಮೆಟ್ಟಿಲುಗಳು, ಮರಗೆಲಸಗಳು, ವರ್ಣಚಿತ್ರಗಳು ಮತ್ತು ಸೊಗಸಾದ ಪೀಠೋಪಕರಣಗಳು ನಯನ ಮನೋಹರವಾಗಿದ್ದವು. ಪ್ರತಿ ಕಿಟಕಿ, ಬಾಗಿಲು, ಅಂಚುಗಳು ಪೌರಾಣಿಕ ಕಥೆಗಳ ಮತ್ತು ಪ್ರಕೃತಿಯ ರೂಪಕಗಳ ಆಕರ್ಷಕ ಕೆತ್ತನೆಗಳಿಂದ ಕೂಡಿದ್ದವು. ಈ ಕ್ಯಾಸಲ್ನಿಂದ ಕಾಣಿಸುವ ಕುಲು ಕಣಿವೆಯ ದೃಶ್ಯ ಅದ್ಭುತ. ದೂರದ ಹಿಮಪರ್ವತಗಳು, ತೇಲಾಡುವ ಶ್ವೇತ ವರ್ಣದ ಮೋಡಗಳು, ಹಸಿರು ತೋಟಗಳು ಹಾಗೂ ಬಿಯಾಸ್ ನದಿಯ ಜತೆಗೆ ಕುಲು ಕಣಿವೆ ಸಜೀವ ಚಿತ್ರಕಲೆಯಂತೆ ಕಾಣಿಸುತ್ತಿತ್ತು. ಕೋಟೆಯ ನೆಲಮಾಳಿಗೆಯಲ್ಲಿ ಶಾಲುಗಳು, ಕಾರ್ಪೆಟ್ಗಳು ಮತ್ತು ಹಿಮಾಚಲದ ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಗಳ ಸಂಗ್ರಹಾಲಯವಿದೆ.ನಗ್ಗರ್ ಕೋಟೆಯ ವೈಶಿಷ್ಟ್ಯನಗ್ಗರ್ ಕ್ಯಾಸಲನ್ನು ಕ್ರಿ.ಶ. 1460ರ ಸುಮಾರಿಗೆ ಕುಲು ರಾಜರಾದ ರಾಜಾ ಸಿದ್ಧ ಸಿಂಗ್ ನಿರ್ಮಿಸಿದರು. ಆಗ ನಗ್ಗರ್ ನಗರವೇ ಕುಲು ರಾಜವಂಶದ ರಾಜಧಾನಿಯಾಗಿತ್ತು. ಯುರೋಪಿಯನ್ ಮತ್ತು ಹಿಮಾಲಯನ್ ವಾಸ್ತುಶಿಲ್ಪದ ಅದ್ಭುತ ಮಿಶ್ರಣವಾಗಿರುವ ಈ ಕೋಟೆಯನ್ನು ಕಲ್ಲುಗಳು, ಮರಗಳಿಂದ ನಿರ್ಮಿಸಲಾಗಿದೆ. ಕೋಟೆಯ ಸಾಂಪ್ರದಾಯಿಕ ವಾಸ್ತುಶಿಲ್ಪವನ್ನು ‘ಕತ್ಕುನಿ’ ಎಂದು ಕರೆಯಲಾಗುತ್ತದೆ. ಕೋಟೆಯ ಮರದ ಚಾವಣಿಗಳು, ಕಿಟಕಿಗಳು ಮತ್ತು ಬಾಗಿಲುಗಳನ್ನು ವಿಶಿಷ್ಟ ಮಾದರಿ, ವಿನ್ಯಾಸಗಳೊಂದಿಗೆ ಕೆತ್ತಲಾಗಿದೆ. ಈ ಕೋಟೆಯ ಸುಮಾರು 42 ಇಂಚು ಅಗಲದ ಗೋಡೆಗಳನ್ನು ಎಷ್ಟು ಬಲವಾಗಿ ನಿರ್ಮಿಸಲಾಗಿದೆಯೆಂದರೆ, 1905ರ ವಿನಾಶಕಾರಿ ಭೂಕಂಪದಿಂದ ಹತ್ತಿರದ ನಗರ, ಮನೆಗಳು ಸಂಪೂರ್ಣವಾಗಿ ನಾಶವಾದರೂ, ಕ್ಯಾಸಲ್ ಮಾತ್ರ ಹಾನಿಗೊಳ್ಳಲಿಲ್ಲ.1978ರಲ್ಲಿ ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ವಿಶ್ರಾಂತಿ ಗೃಹ ಹಾಗೂ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿತು. ಇತ್ತೀಚಿನ ನವೀಕರಣದಿಂದ ಇದು ಮಹತ್ವದ ಪಾರಂಪರಿಕ ಆಸ್ತಿಯಾಗಿದೆ. ಇಲ್ಲಿ ತಂಗುವ ಮೂಲಕ ರಾಜಮನೆತನದ ಜೀವನದ ಝಲಕನ್ನು ಅನುಭವಿಸಬಹುದು.ನಗ್ಗರ್ ಕ್ಯಾಸಲ್ ಕೇವಲ ಒಂದು ಐತಿಹಾಸಿಕ ಕಟ್ಟಡವಾಗಿಲ್ಲ; ಪ್ರಕೃತಿ ಸೌಂದರ್ಯವನ್ನು ಅನುಭವಿಸುವ ವೇದಿಕೆಯೂ ಹೌದು. ಮುಂಜಾನೆ ಸೂರ್ಯ ಕಿರಣಗಳಲ್ಲಿ ಹಿಮಪರ್ವತಗಳು ಚಿನ್ನದ ಬಣ್ಣ ತಳೆಯುವ ದೃಶ್ಯ ನಯನ ಮನೋಹರವಾಗಿರುತ್ತದೆ. ಸೂಪರ್ಹಿಟ್ ಬಾಲಿವುಡ್ ಚಲನಚಿತ್ರ ‘ಜಬ್ ವಿ ಮೆಟ್’ನ ‘ಯೇ ಇಷ್ಕ್ ಹಾಯೇ’ ಹಾಡನ್ನು ಈ ಕೋಟೆಯಲ್ಲಿ ಚಿತ್ರೀಕರಿಸಲಾಗಿದೆ. ಬೆಳ್ಳಿಪರದೆ ಮೇಲೆ ಪ್ರದರ್ಶನವಾದಾಗಿನಿಂದ ಕೋಟೆಗೆ ಬರುವವರ ಸಂಖ್ಯೆ ಇನ್ನೂ ಹೆಚ್ಚಾಗಿದೆಯಂತೆ.ನಗ್ಗರ್ ಕ್ಯಾಸಲ್ ಇತಿಹಾಸ, ಶಿಲ್ಪಕಲೆ, ಪ್ರಕೃತಿ ಸೌಂದರ್ಯ ಮತ್ತು ಆಧ್ಯಾತ್ಮಿಕ ಶಾಂತಿಯ ಸಂಗಮವಾಗಿದೆ. ಮನಾಲಿಗೆ ಭೇಟಿ ನೀಡುವವರು ನಗ್ಗರ್ ಕ್ಯಾಸಲ್ ನೋಡದೆ ಹೋದರೆ ಪ್ರವಾಸ ಅಪೂರ್ಣ ಎನ್ನಬಹುದು. ಹಿಮಾಲಯದ ಮಡಿಲಲ್ಲಿ ನಿಂತು ನೂರು ಶತಮಾನಗಳ ಕಥೆಯನ್ನು ಮೌನವಾಗಿ ಹೇಳುವ ಈ ಶಿಲಾಸ್ಮಾರಕವು ಭಾರತದೆಲ್ಲೆಡೆ ಶಾಂತಿ ಹುಡುಕುವ ಮನಸ್ಸುಗಳಿಗೆ ಅವಿಸ್ಮರಣೀಯ ಅನುಭವ ನೀಡುತ್ತದೆ.ನಗ್ಗರ್ ಕ್ಯಾಸಲ್ನಿಂದ ಕೇವಲ 1.5 ಕಿ.ಮೀ. ದೂರದಲ್ಲಿರುವ ರೋರಿಚ್ ಆರ್ಟ್ ಗ್ಯಾಲರಿ ಪ್ರಸಿದ್ಧ ರಷ್ಯನ್ ಚಿತ್ರಕಾರ ನಿಕೋಲಸ್ ರೋರಿಚ್ ಅವರ ನಿವಾಸವಾಗಿತ್ತು. ಸುಂದರ ಪರ್ವತಗಳ ನಡುವೆ ಇರುವ ಈ ಸ್ಥಳವು ಪ್ರಕೃತಿ ಸೌಂದರ್ಯ ಮತ್ತು ಕಲೆಯ ಸಮ್ಮಿಲನವಾಗಿದೆ. ಇಲ್ಲಿ ರೋರಿಚ್ ಅವರ ಚಿತ್ರಗಳು, ವೈಯಕ್ತಿಕ ವಸ್ತುಗಳು, ಅವರ ಜೀವನಕ್ಕೆ ಸಂಬಂಧಿಸಿದ ಸಂಗ್ರಹಗಳು ಪ್ರದರ್ಶಿತವಾಗಿವೆ. ರೋರಿಚ್ ಅವರ ಸೃಜನಶೀಲತೆ ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಅವರ ಪ್ರೀತಿ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.ಚಾರಣಪ್ರಿಯರಿಗಾಗಿನಗ್ಗರ್ ಸುತ್ತಮುತ್ತಲಿನ ಪ್ರದೇಶಗಳು ಚಾರಣಪ್ರಿಯರಿಗೆ ಸ್ವರ್ಗವೇ ಸರಿ. ಇಲ್ಲಿ ಸಣ್ಣ– ಮಧ್ಯಮ ಮಟ್ಟದ ಟ್ರೆಕ್ಗಳು ಹಾಗೂ ಸಾಹಸಮಯ ಹಿಮಾಲಯ ಪರ್ವತ ಚಾರಣಗಳು ಲಭ್ಯವಿವೆ. ಚಂದ್ರಖಣಿ ಪಾಸ್, ದೇವ ತಿಬ್ಬಾ ಬೇಸ್ ಕ್ಯಾಂಪ್, ಜಾನಾ ಫಾಲ್ಸ್, ಬಿಜಲಿ ಮಹಾದೇವ ಹಾಗೂ ರುಮ್ಸು ವಿಲೇಜ್ ಟ್ರೆಕ್ಗಳು ಪ್ರಮುಖವಾದುವು. ಹಲವು ಪ್ರಮುಖ ದೇವಾಲಯಗಳೂ ಇಲ್ಲಿವೆ.11ನೇ ಶತಮಾನದ ‘ತ್ರಿಪುರ ಸುಂದರಿ ಮಂದಿರ’ ಪಗೋಡಾ ಶೈಲಿಯಲ್ಲಿದ್ದು ಸಂಪೂರ್ಣ ದೇವದಾರು ಮರದಿಂದ ನಿರ್ಮಿಸಲಾಗಿದೆ. ನಾವು ಈ ದೇವಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ, ಊರಿನ ಜಾತ್ರೆ ನಡೆಯುತ್ತಿದ್ದು ಜನಜಂಗುಳಿಯಿಂದ ತುಂಬಿತ್ತು. ಹಿಮಾಚಲ ಪ್ರದೇಶದ ಸ್ಥಳೀಯ ತಿನಿಸುಗಳ ಅನೇಕ ಅಂಗಡಿಗಳು ನಮ್ಮನ್ನಾಕರ್ಷಿಸಿದವು.12ನೇ ಶತಮಾನದ ಶಿಖರ ಶೈಲಿಯ ಗೌರಿಶಂಕರ ಮಂದಿರ ಸಂಪೂರ್ಣವಾಗಿ ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಆಕರ್ಷಕ ಕೆತ್ತನೆಗಳನ್ನು ಹೊಂದಿದೆ. ಪ್ರಸ್ತುತ ಈ ದೇವಾಲಯವು ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ.ಪಾಂಡವರು ನಿರ್ಮಿಸಿದ್ದಾರೆಂದು ಹೇಳಲಾಗುವ ಮುರಳೀಧರ ಕೃಷ್ಣ ಮಂದಿರ ನಗ್ಗರ್ನಲ್ಲಿರುವ ಪುರಾತನ ದೇವಾಲಯ. ಇದು ಹಿಮಾಚಲಿ ಕತ್ಕುನಿ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಶ್ರೀಕೃಷ್ಣನ ಸುಂದರ ಮೂರ್ತಿ ಹೊಂದಿದೆ. ಸುತ್ತಮುತ್ತಲಿನ ಹಸಿರು ಪರ್ವತಗಳು, ಶಾಂತ ವಾತಾವರಣ ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುತ್ತದೆ. ಇದು ಇತಿಹಾಸ, ಭಕ್ತಿ ಮತ್ತು ಪ್ರಕೃತಿಯ ಸಮ್ಮಿಲನವಾಗಿದೆ.ಜನಜೀವನ ಮತ್ತು ಸಂಸ್ಕೃತಿನಗ್ಗರ್ ಪಟ್ಟಣದ ಜನಜೀವನವು ಸರಳತೆ ಮತ್ತು ಸಂಸ್ಕೃತಿಯ ಮಧುರ ಸಂಯೋಜನೆಯಂತಿದೆ. ಇಲ್ಲಿ ಜನ ಮರ ಮತ್ತು ಕಲ್ಲಿನಿಂದ ನಿರ್ಮಿಸಿದ ಸಾಂಪ್ರದಾಯಿಕ ಮನೆಗಳಲ್ಲಿ ವಾಸಿಸುತ್ತಿದ್ದು, ಪ್ರಕೃತಿಯೊಂದಿಗೆ ಹೊಂದಿಕೊಂಡ ಜೀವನಶೈಲಿಯನ್ನು ನಡೆಸುತ್ತಾರೆ. ಸೇಬು ತೋಟಗಳು, ಹಸಿರು ಹೊಲಗಳು ಮತ್ತು ಬೆಟ್ಟಗಳ ನಡುವೆ ಅವರ ಜೀವನ ಸಾಗಿಹೋಗುತ್ತದೆ. ಸ್ಥಳೀಯರು ತಮ್ಮ ಸಂಪ್ರದಾಯಗಳನ್ನು ಕಾಪಾಡಿಕೊಂಡು ಹಬ್ಬಗಳನ್ನು ಹರ್ಷದಿಂದ ಆಚರಿಸುತ್ತಾರೆ. ಅವರ ಉಡುಪು, ಮಾತು ಮತ್ತು ಆತಿಥ್ಯ ಪ್ರವಾಸಿಗರ ಮನಸೆಳೆಯುತ್ತವೆ. ನಗ್ಗರ್ನ ಗ್ರಾಮೀಣ ಜೀವನದಲ್ಲಿ ಕಂಡುಬರುವ ಶಾಂತಿ ಮತ್ತು ಸರಳತೆ, ಆಧುನಿಕ ಜೀವನದ ಗದ್ದಲದಿಂದ ದೂರವಿರುವ ವಿಶಿಷ್ಟ ಅನುಭವವನ್ನು ನೀಡುತ್ತದೆ.ನಗ್ಗರ್ ಪ್ರದೇಶದ ಆಹಾರ ಪದ್ಧತಿ ಹಿಮಾಚಲದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ತಿನ್ನುವ ಪ್ರತಿಯೊಂದು ತಿನಿಸು ಶೀತ ಹವಾಮಾನಕ್ಕೆ ಹೊಂದಿಕೊಂಡ ಪೌಷ್ಟಿಕತೆಯನ್ನು ಹೊಂದಿದೆ. ವಿಶೇಷವಾಗಿ ‘ಸಿದ್ದು’ ಎಂಬ ಗೋಧಿ ಹಿಟ್ಟಿನ ತಿನಿಸನ್ನು ತುಪ್ಪ ಅಥವಾ ದಾಲ್ ಜೊತೆ ಸೇವಿಸಿದಾಗ ಅದ್ಭುತ ರುಚಿಯನ್ನು ನೀಡುತ್ತದೆ. ಹಬ್ಬ ಜಾತ್ರೆಗಳಲ್ಲಿ ನೀಡುವ ‘ಧಾಮ್’ ಅನ್ನವು ಬೇಳೆ, ಅಕ್ಕಿ, ಮದ್ರಾ ಹಾಗೂ ಸಿಹಿತಿಂಡಿಗಳ ಸಮೃದ್ಧ ಸಂಯೋಜನೆಯಾಗಿದೆ. ‘ಮದ್ರಾ’ ದಹಿ ಆಧಾರಿತ ಕರಿಯಾಗಿದ್ದು, ಅದರ ಮೃದುವಾದ ರುಚಿ ಮನಸೆಳೆಯುತ್ತದೆ. ಚಹಾ ಜೊತೆ ತಿನ್ನುವ ‘ಬಾಬ್ರು’ ಹಾಗೂ ಮಸಾಲೆ ಸುವಾಸನೆಯ ‘ತುಡ್ಕಿಯಾ ಭಾತ್’ ಪ್ರವಾಸಿಗರ ಮನ ಗೆಲ್ಲುವ ತಿನಿಸುಗಳಾಗಿವೆ. ನಗ್ಗರ್ನ ತಂಪಾದ ವಾತಾವರಣದಲ್ಲಿ ಈ ಆಹಾರಗಳನ್ನು ಸವಿಯುವ ಅನುಭವವು ಕೇವಲ ಹೊಟ್ಟೆ ತುಂಬಿಸುವುದಲ್ಲ, ಮನಸ್ಸಿಗೂ ತೃಪ್ತಿ ನೀಡುತ್ತದೆ.ಹಿಮಾಚಲ ಪ್ರದೇಶದಲ್ಲಿ ಭೇಟಿ ನೀಡಲು ನಗ್ಗರ್ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಕುಲು ಜಿಲ್ಲಾ ಕೇಂದ್ರದಿಂದ 22 ಕಿ.ಮೀ. ಉತ್ತರಕ್ಕೆ ಕುಲು-ನಗ್ಗರ್-ಮನಾಲಿ ರಸ್ತೆಯಲ್ಲಿದೆ. ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ನೈಸರ್ಗಿಕ ಸೌಂದರ್ಯ ಮತ್ತು ಸುಲಭ ಪ್ರವಾಸ ಮಾಡಲಿಚ್ಛಿಸುವವರಿಗೆ ಮಾರ್ಚ್–ಜೂನ್ ಹಾಗೂ ಹಿಮಪಾತವನ್ನು ಕಣ್ತುಂಬಿಕೊಳ್ಳಲು ಡಿಸೆಂಬರ್–ಜನವರಿ ಸೂಕ್ತ ಸಮಯ. ಕೇವಲ ಒಂದು ದಿನದಲ್ಲಿ ನಗ್ಗರ್ ಪಟ್ಟಣದಲ್ಲಿರುವ ಎಲ್ಲ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದಾಗಿದೆ. ನಗ್ಗರ್ನ ಪ್ರಕೃತಿ ಕೇವಲ ದೃಶ್ಯವಲ್ಲ, ಅದು ಆತ್ಮವನ್ನು ಸ್ಪರ್ಶಿಸುವ ಅನುಭವ ಎಂದೇ ಹೇಳಬಹುದು.(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)