ಕಂಬಳಿ ಕುರುಬ ಸಸ್ಯದ ನೆನಪು, ಮತ್ತೆ ಅಕೇಶಿಯಾ ಬೆಳೆಸುವ ಅರಣ್ಯ ಇಲಾಖೆ ಪ್ರಯತ್ನ
ನಮ್ಮ ಮಲೆನಾಡಿನ ಬೆಟ್ಟಗಳಲ್ಲಿ ವಾರ್ಷಿಕ 3500-6000 ಮಿಲಿ ಮೀಟರ್ ಮಳೆ ಸುರಿಯುವ ಪ್ರದೇಶದಲ್ಲಿ ಗುರುಗೆ ಕುಲದ ಈ ಕುಬ್ಜ ಸಸ್ಯ ಸ್ವಾಭಾವಿಕವಾಗಿ ಬೆಳೆಯುತ್ತಿತ್ತು. ನಾನಂತೂ ಮಳೆಗಾಲದಲ್ಲಿ ಈ ಸಸ್ಯ ನೋಡಲು ಗುಡ್ಡ ಬೆಟ್ಟ ಸುತ್ತಾಡುತ್ತಿದ್ದೆ. ನೋಡಲು ಹೂ ತೋಟದ ಅಲಂಕಾರಿಕ ಸಸ್ಯಗಳ ಹಾಗೇ ಆಕರ್ಷಕವಾಗಿ ಕಾಣುವ ಇವಕ್ಕೆ ನಮ್ಮ ದನ ಕಾಯುವವರು ವಾಡಿಕೆಯಲ್ಲಿ "ಕಂಬಳಿ ಕುರುಬ' ಎನ

ನಮ್ಮ ಮಲೆನಾಡಿನ ಬೆಟ್ಟಗಳಲ್ಲಿ ವಾರ್ಷಿಕ 3500-6000 ಮಿಲಿ ಮೀಟರ್ ಮಳೆ ಸುರಿಯುವ ಪ್ರದೇಶದಲ್ಲಿ ಗುರುಗೆ ಕುಲದ ಈ ಕುಬ್ಜ ಸಸ್ಯ ಸ್ವಾಭಾವಿಕವಾಗಿ ಬೆಳೆಯುತ್ತಿತ್ತು. ನಾನಂತೂ ಮಳೆಗಾಲದಲ್ಲಿ ಈ ಸಸ್ಯ ನೋಡಲು ಗುಡ್ಡ ಬೆಟ್ಟ ಸುತ್ತಾಡುತ್ತಿದ್ದೆ. ನೋಡಲು ಹೂ ತೋಟದ ಅಲಂಕಾರಿಕ ಸಸ್ಯಗಳ ಹಾಗೇ ಆಕರ್ಷಕವಾಗಿ ಕಾಣುವ ಇವಕ್ಕೆ ನಮ್ಮ ದನ ಕಾಯುವವರು ವಾಡಿಕೆಯಲ್ಲಿ "ಕಂಬಳಿ ಕುರುಬ' ಎನ್ನುತ್ತಿದ್ದರು. "ಹೊರಕಣೆ" ಎಂದು ಕರೆಯುವ ಇದರ ಎಳೆ ಸಸಿಗಳನ್ನು ದನಕರು ಮೇಯುತ್ತಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರದೇಶದ ಕಾಟಿ (ಕಾಡೆಮ್ಮೆ) ಗಳ ಹೊಟ್ಟೆ ತುಂಬಲು ಇದು ನೆರವಾಗುತ್ತಿತ್ತು.1985ರ ನಂತರದಲ್ಲಿ ಹುಲ್ಲುಗಾವಲು ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ನಿರ್ಮಾಣ ಶುರುವಾಯಿತು. ಕಾಡಿನ ಹುಲ್ಲು, ಹೊರಕಣೆ ಬೆಳೆಯುವ ಜಾಗಗಳು ಮರ ಉತ್ಪಾದನೆಯ ನೆಲೆಯಾದವು. ಒಂದೊಂದು ಎಕರೆಯಲ್ಲಿ ಅತಿಹೆಚ್ಚು ಸಸಿ ನೆಡುವ ಕಾರ್ಯ ಮಾಡುತ್ತಾ ಹೋದಂತೆ ಈ ಸಸ್ಯಗಳು ಕಣ್ಮರೆಯಾದವು. ಕಾಡಿನ ಹುಲ್ಲು, ಹೊರಕಣೆ ಮೇಯುವ ಕಾಟಿ, ಕಡವೆ, ಜಿಂಕೆಗಳು ಭತ್ತದ ಗದ್ದೆ, ಅಡಿಕೆ ತೋಟದತ್ತ ಮುಖ ಮಾಡಿದವು. ವನ್ಯ ಜೀವಿಗಳಿಂದ ಬೆಳೆ ಹಾನಿ, ಸಂಘರ್ಷ ಹೆಚ್ಚುತ್ತಾ ಹೋಯಿತು. ಕೃಷಿ ಬದುಕು ಕಷ್ಟವಾಯಿತು.ನೆಡುತೋಪಿನ ಒಂದು ಜಾತಿಯ ಸಸ್ಯ ಹಿಡಿದು ಇಡೀ ಹುಲ್ಲುಗಾವಲು ಪ್ರದೇಶದ ಸ್ವರೂಪ ಬದಲಿಸಿದ ಫಲ ಇಂದು ನಮ್ಮೆದುರಿದೆ. ಈ ಪ್ರದೇಶದ ಅಕೇಶಿಯಾ ನೆಡುತೋಪು ಕಟಾವು ಮಾಡಿದರೂ ವ್ಯಾಪಕವಾಗಿ ಮತ್ತೇ ಅದನ್ನೇ ನೆಡುವ ಕಾರ್ಯ ನಡೆಯುತ್ತಿದೆ. ವನ್ಯ ಜೀವಿ ವಲಯಗಳಲ್ಲಿ ಈ ವರ್ಷ ಕೂಡ ಅಕೇಶಿಯಾ ನಾಟಿ ಮಾಡಿದ ಮಾಹಿತಿ ಬಂದಿದೆ. ನೆಡುತೋಪು ಕಟಾವಿನ ಸಮಯದಲ್ಲಿ ನೀಡಿದ್ದ ಸೂಚನೆ ಇಲಾಖೆ ಅಧಿಕಾರಿಗಳು ಮರೆತಿದ್ದಾರೆ.ಮರಗಳೇ ಇಲ್ಲದ ಬಯಲು ಸೀಮೆಯ ಪ್ರದೇಶದಲ್ಲಿ ಸಸಿ ನೆಡುವ ಆಸಕ್ತಿ ಇಲಾಖೆಗೆ ಕಳೆದ 50ವರ್ಷಗಳಿಂದಲೂ ಕಡಿಮೆಯಿದೆ. ಕಾಡು ನೆಲದ ಮಲೆನಾಡಿನಲ್ಲಿ ಹೆಚ್ಚು ಹೆಚ್ಚು ಸಸಿ ನೆಡುವ ಅವಕಾಶ ಕಾರಣದಿಂದ ಇಲ್ಲಿಗೆ ಬಂದ ಅಧಿಕಾರಿಗಳು ಈ ವಲಯದಿಂದ ಆ ವಲಯಕ್ಕೆ ದಾಟುತ್ತಾ ಇಲ್ಲಿಯೇ ಆಳಕ್ಕೆ ಬೇರಿಳಿಸಿ ನೆಡುವ ಲೆಕ್ಕದ ಸಸಿಗಿಂತ ಹೆಚ್ಚು ವರ್ಷ ಇಲ್ಲಿ ಬದುಕುತ್ತಾರೆ.ಮಲೆನಾಡಿನ ಕೃಷಿ ನಂಬಿ ಬದುಕಿದ ಜನಕ್ಕೆ ಖರ್ಚಿಗೆ ಹಣವಿಲ್ಲ, ವಿಚಿತ್ರವೆಂದರೆ ಇಲಾಖೆ ವರ್ಗಾವಣೆಗೆ ಖುರ್ಚಿ ದರ ಮಾತ್ರ ಏರುತ್ತಲೇ ಇದೆ. ವರ್ಗಾವಣೆಯಾದ ಸ್ಥಳದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಲು 50-60 ಲಕ್ಷ ರೂಪಾಯಿ ಕೊಡುವ ಕಾಲ ಬಂದಿದೆಯೆಂದರೆ ಕಾಡಿನ ಕಥೆ ಏನಾದೀತು? ವನ್ಯ ಜೀವಿಗಳ ಸಂರಕ್ಷಣೆಗೆ ಕಾನೂನು ಬಿಗಿ ಮಾಡಿದ ಮಾತ್ರಕ್ಕೆ ಅವುಗಳ ಸಂತತಿ ಬೆಳೆಯುವುದಿಲ್ಲ, ಕಾಡಿನಲ್ಲಿ ಅವುಗಳ ಆಹಾರ, ಆವಾಸದ ಮೂಲ ಅಗತ್ಯ ಅರ್ಥಮಾಡಿಕೊಳ್ಳಬೇಕು. ಇಲಾಖೆ ಅರಣ್ಯ ಅರಿವಿನ "ಅರ್ಥ ವ್ಯವಸ್ಥೆ " ಬದಲಾಗಿದೆ, ಕಾಡು ಕುಲಗಳು ಹುಲ್ಲು, ಕಂಬಳಿ ಕುರುಬ ಸಸ್ಯ ಇಲ್ಲದೇ ಆತಂಕಕ್ಕೆ ಒಳಗಾಗಿವೆ.(ಲೇಖಕರು: ಪರಿಸರ ತಜ್ಞರು)