ಕೇಂದ್ರ Vs ಮೆಟಾ – ಎಚ್ಚರಿಕೆ ಬೆನ್ನಲ್ಲೇ ಕ್ಷಮೆ ಕೋರಿದ ಜುಕರ್ಬರ್ಗ್
ನವದೆಹಲಿ: ಮೆಟಾ (Meta) ಸಿಇಒ ಮಾರ್ಕ್ ಜುಕರ್ಬರ್ಗ್(Mark Zuckerberg) ಅವರು ತಮ್ಮ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾದ ಸಿಎಸ್ಎಎಮ್ (CSAM – ಮಕ್ಕಳ ಲೈಂಗಿಕ ಶೋಷಣೆ ವಿಷಯ) ವಿಷಯ, ಡಿಪ್ಫೇಕ್ ವಿಷಯಗಳು ಹಾಗೂ ಪ್ಲಾಟ್ಫಾರ್ಮ್ ನಿರ್ವಹಣೆಯಲ್ಲಿನ ಲೋಪದೋಷಗಳಿಗಾಗಿ ಕ್ಷಮೆಯಾಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narenndra Modi) ಅವರ ಫೇಸ್ಬುಕ್ ವೀಡಿಯೊವನ್ನು

ನವದೆಹಲಿ: ಮೆಟಾ (Meta) ಸಿಇಒ ಮಾರ್ಕ್ ಜುಕರ್ಬರ್ಗ್(Mark Zuckerberg) ಅವರು ತಮ್ಮ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾದ ಸಿಎಸ್ಎಎಮ್ (CSAM – ಮಕ್ಕಳ ಲೈಂಗಿಕ ಶೋಷಣೆ ವಿಷಯ) ವಿಷಯ, ಡಿಪ್ಫೇಕ್ ವಿಷಯಗಳು ಹಾಗೂ ಪ್ಲಾಟ್ಫಾರ್ಮ್ ನಿರ್ವಹಣೆಯಲ್ಲಿನ ಲೋಪದೋಷಗಳಿಗಾಗಿ ಕ್ಷಮೆಯಾಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narenndra Modi) ಅವರ ಫೇಸ್ಬುಕ್ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದಕ್ಕಾಗಿ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು 3 ದಿನಗಳ ಒಳಗೆ ಬೇಷರತ್ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಭಾರತದಲ್ಲಿ ಕಂಪನಿಯು ಪಡೆಯುತ್ತಿರುವ ‘ಸೇಫ್ ಹಾರ್ಬರ್’ (Safe Harbour) ರಕ್ಷಣೆಯನ್ನು ಹಿಂಪಡೆಯಲಾಗುವುದು ಎಂದು ಸಂಸದೀಯ ಸಮಿತಿ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ನಿರ್ದಿಷ್ಟ ರೀತಿಯ ವಿಷಯಗಳನ್ನು ಬೂಸ್ಟ್ ಮಾಡಲು (ಪ್ರಚಾರ ಮಾಡಲು) ಹೆಚ್ಚಿನ ಹಣ ಪಾವತಿಸಲಾಗಿದೆ ಎಂಬುದನ್ನು ಜುಕರ್ಬರ್ಗ್ ಒಪ್ಪಿಕೊಂಡಿದ್ದಾರೆ ಹಾಗೂ ಈ ತಪ್ಪಿಗಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ. ಮಂಗಳವಾರ ಸಂಸದೀಯ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಅವರು ಮಾತನಾಡಿ, ಕೇವಲ ಕ್ಷಮೆಯಾಚನೆ ಮಾತ್ರ ಸಾಕಾಗುವುದಿಲ್ಲ, ಈ ಲೋಪಕ್ಕೆ ಕಾರಣರಾದವರ ಮೇಲೆ ಜವಾಬ್ದಾರಿ ನಿಗದಿಪಡಿಸಬೇಕು” ಎಂದು ಸ್ಪಷ್ಟಪಡಿಸಿದ್ದಾರೆ. ಜುಕರ್ಬರ್ಗ್ ಅವರು ವೈಯಕ್ತಿಕವಾಗಿ ಕ್ಷಮೆಯಾಚಿಸದಿದ್ದರೆ, ಮಾಹಿತಿ ತಂತ್ರಜ್ಞಾನ (IT) ಕಾಯಿದೆಯ ಸೆಕ್ಷನ್ 79ರ ಅಡಿಯಲ್ಲಿ ಮೆಟಾ ಪಡೆಯುತ್ತಿರುವ ‘ಸೇಫ್ ಹಾರ್ಬರ್’ ರಕ್ಷಣೆಯನ್ನು ಹಿಂಪಡೆಯಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದರು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದ್ದ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದ ವೀಡಿಯೊ ಫೇಸ್ಬುಕ್ನಲ್ಲಿ ಸುಮಾರು 5 ಗಂಟೆಗಳ ಕಾಲ ಲಭ್ಯ ಇರಲಿಲ್ಲ. ತಾಂತ್ರಿಕ ದೋಷದಿಂದ (Technical glitch) ವೀಡಿಯೊ ಡಿಲೀಟ್ ಆಗಿತ್ತು ಮತ್ತು ನಂತರ ವಿಡಿಯೋವನ್ನು ಮರುಸ್ಥಾಪಿಸಲಾಗಿದೆ ಎಂದು ಮೆಟಾ ಸ್ಪಷ್ಟನೆ ನೀಡಿ ವಿಷಾದ ವ್ಯಕ್ತಪಡಿಸಿತ್ತು. ಆದರೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ಸಂಸದೀಯ ಸಮಿತಿಯ ಸದಸ್ಯರು ಈ ಸಮಜಾಯಿಷಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಸಭೆಯಲ್ಲಿ ಸಂಸದೀಯ ಸಮಿತಿಯು ಮೆಟಾ ಪ್ರತಿನಿಧಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಪ್ರಧಾನಿಯವರ ವೀಡಿಯೊ ತೆಗೆದುಹಾಕಲು ಯಾರು ಅನುಮತಿ ನೀಡಿದ್ದರು? ಇತರ ಆಕ್ಷೇಪಾರ್ಹ ವಿಷಯಗಳು ಪ್ಲಾಟ್ಫಾರ್ಮ್ನಲ್ಲಿ ಮುಕ್ತವಾಗಿ ಲಭ್ಯವಿರುವಾಗ, ಪ್ರಧಾನಿಯವರ ಅಧಿಕೃತ ವೀಡಿಯೊವನ್ನು ಮಾತ್ರ ಏಕೆ ತೆಗೆದುಹಾಕಿದ್ದು ಯಾಕೆ? ದೇಶದ ಪ್ರಧಾನ ಮಂತ್ರಿಯವರ ಪೋಸ್ಟ್ಗೇ ಈ ಗತಿ ಬಂದಿರುವಾಗ, ಸಾಮಾನ್ಯ ಬಳಕೆದಾರರ ಪೋಸ್ಟ್ಗಳಿಗೆ ಯಾವ ಸುರಕ್ಷತೆ ಇದೆ? ಮೆಟಾದ ಆಲ್ಗರಿದಮ್ (Algorithmic bias) ತಾರತಮ್ಯದಿಂದ ಕೂಡಿದೆಯೇ? ಮೆಟಾ ಪ್ರತಿನಿಧಿಗಳು ಸಮಿತಿಯ ಮುಂದೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದರೂ, ಸಂಸದರು ಮಾತ್ರ ಕಂಪನಿಯ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ನಿಗದಿಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿದ್ದರು, ಜುಕರ್ಬರ್ಗ್ ಅವರಿಗೆ 3 ದಿನಗಳ ಕಾಲಾವಕಾಶ ನೀಡಲಾಗಿತ್ತು. ಒಂದು ವೇಳೆ ‘ಸೇಫ್ ಹಾರ್ಬರ್’ ರಕ್ಷಣೆ ರದ್ದಾದರೆ, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಬಳಕೆದಾರರು ಹಾಕುವ ಪ್ರತಿಯೊಂದು ಅಕ್ರಮ/ಆಕ್ಷೇಪಾರ್ಹ ಪೋಸ್ಟ್ಗೂ ಮೆಟಾ ಅಧಿಕಾರಿಗಳ ವಿರುದ್ಧವೇ ನೇರವಾಗಿ ಎಫ್ಐಆರ್ (FIR) ಹಾಗೂ ಕಾನೂನು ಕ್ರಮ ಕೈಗೊಳ್ಳಬಹುದಾಗಿತ್ತು.