ವಿಶ್ಲೇಷಣೆ | ಕಾವೇರಿ: ಲೆಕ್ಕ ತಪ್ಪಿರುವುದೆಲ್ಲಿ? – ದಿನೇಶ್ ಅಮಿನ್ ಮಟ್ಟು ಲೇಖನ
ಕರ್ನಾಟಕ ಮತ್ತು ತಮಿಳುನಾಡು ನಡುವೆ ಇರುವುದು ಮಳೆ ಕೊರತೆಯ ದಿನಗಳ ಕಷ್ಟವನ್ನು ಹಂಚಿಕೊಳ್ಳುವ ಸಣ್ಣ ಸಮಸ್ಯೆ. ಸರಳವಾಗಿ ಹೇಳುವುದಾದರೆ, ಇದು ಜೂನ್ನಿಂದ ಸೆಪ್ಟೆಂಬರ್ ತಿಂಗಳವರೆಗಿನ ನಾಲ್ಕು ತಿಂಗಳ ಜಗಳ. ಮನಸ್ಸು ದೊಡ್ಡದಾಗಿದ್ದರೆ ಪರಿಹಾರ ಅಷ್ಟೇ ಸುಲಭವಾದುದು. ಆದರೆ, ಸುಖ ಹಂಚಿಕೊಂಡಷ್ಟು ಸುಲಭದಲ್ಲಿ ಕಷ್ಟ ಹಂಚಿಕೊಳ್ಳಲು ಯಾರೂ ಸಿದ್ಧ ಇರುವುದಿಲ್ಲ. ಹೀಗಾಗಿ, 1799ರಲ

ಕರ್ನಾಟಕ ಮತ್ತು ತಮಿಳುನಾಡು ನಡುವೆ ಇರುವುದು ಮಳೆ ಕೊರತೆಯ ದಿನಗಳ ಕಷ್ಟವನ್ನು ಹಂಚಿಕೊಳ್ಳುವ ಸಣ್ಣ ಸಮಸ್ಯೆ. ಸರಳವಾಗಿ ಹೇಳುವುದಾದರೆ, ಇದು ಜೂನ್ನಿಂದ ಸೆಪ್ಟೆಂಬರ್ ತಿಂಗಳವರೆಗಿನ ನಾಲ್ಕು ತಿಂಗಳ ಜಗಳ. ಮನಸ್ಸು ದೊಡ್ಡದಾಗಿದ್ದರೆ ಪರಿಹಾರ ಅಷ್ಟೇ ಸುಲಭವಾದುದು. ಆದರೆ, ಸುಖ ಹಂಚಿಕೊಂಡಷ್ಟು ಸುಲಭದಲ್ಲಿ ಕಷ್ಟ ಹಂಚಿಕೊಳ್ಳಲು ಯಾರೂ ಸಿದ್ಧ ಇರುವುದಿಲ್ಲ. ಹೀಗಾಗಿ, 1799ರಲ್ಲಿ ಆಗಿನ ಮೈಸೂರಿನ ಕೆರೆಗಳ ದುರಸ್ತಿಯನ್ನು ವಿರೋಧಿಸಿ ತಂಜಾವೂರು ಜಿಲ್ಲೆಯ ರೈತರು ನಡೆಸಿದ ಪ್ರತಿಭಟನೆಯ ದಿನದಿಂದ ಪ್ರಾರಂಭವಾಗಿರುವ ನೀರಿನ ಜಗಳ ಇನ್ನೂ ನಿಂತಿಲ್ಲ.ಸುಪ್ರೀಂ ಕೋರ್ಟ್ ಆದೇಶದಂತೆಯೇ 1990ರಲ್ಲಿ ರಚನೆಯಾದ ‘ಕಾವೇರಿ ನ್ಯಾಯಮಂಡಳಿ’ ಹದಿನೇಳು ವರ್ಷಗಳ ಕಾಲ ವಿಚಾರಣೆ ನಡೆಸಿ ಐತೀರ್ಪು ನೀಡಿತು. 2018ರಲ್ಲಿ ಸುಪ್ರೀಂ ಕೋರ್ಟ್ ಐತೀರ್ಪನ್ನು ಪರಿಷ್ಕರಿಸಿ ಹೊಸ ಆದೇಶ ನೀಡಿತು. ಜಗಳ ಮಾತ್ರ ಕೊನೆಗೊಂಡಿಲ್ಲ. ಈಗ ಎರಡು ರಾಜ್ಯಗಳು ಹೊರಟ ಜಾಗದಲ್ಲಿಯೇ ಬಂದು ನಿಂತಿವೆ. ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕಾರಣ ಮತ್ತೆ ವಿವಾದ ನ್ಯಾಯಾಲಯದ ಅಂಗಳಕ್ಕೆ ಹೋಗಿ ಬಿದ್ದಿದೆ.ಇದು ಮೂಲಭೂತವಾಗಿ ಕಾವೇರಿ ನ್ಯಾಯಮಂಡಳಿಯ ವೈಫಲ್ಯ. ಮಳೆ ಬಂದ ದಿನಗಳಲ್ಲಿ ನೀರು ಹಂಚಿಕೊಳ್ಳುವುದು ಹೇಗೆ ಎಂದಷ್ಟೇ ಐತೀರ್ಪಿನಲ್ಲಿ ಹೇಳಿದ್ದ ನ್ಯಾಯಮಂಡಳಿ, ಮಳೆ ಇಲ್ಲದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳುವುದು ಹೇಗೆ ಎನ್ನುವುದನ್ನು ಹೇಳಿಯೇ ಇಲ್ಲ. ‘ಮಳೆ ಕೊರತೆಯ ದಿನಗಳಲ್ಲಿ ಬಳಸಲು ಸಾಧ್ಯವಾಗುವಂತೆ ಉತ್ತಮ ಮಳೆಯಾದ ಸಾಮಾನ್ಯ ಜಲವರ್ಷದ ಕೊನೆಯಲ್ಲಿ ಜಲಾಶಯಗಳಲ್ಲಿ ಸಾಧ್ಯವಿರುವಷ್ಟು ನೀರನ್ನು ಸಂಗ್ರಹ ಇಟ್ಟುಕೊಳ್ಳಬೇಕು. ಸತತ ಎರಡು ವರ್ಷ ಮಳೆ ಕೊರತೆ ಕಾಣಿಸಿಕೊಂಡಲ್ಲಿ ಕಾವೇರಿ ಜಲನಿರ್ವಹಣಾ ಮಂಡಳಿ ಇಲ್ಲವೇ ಕಾವೇರಿ ನದಿ ಪ್ರಾಧಿಕಾರ ನೀರು ಬಿಡುಗಡೆಯ ಮಾಸಿಕ ಕಂತುಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು’ ಎಂದಷ್ಟೇ ಐತೀರ್ಪಿನಲ್ಲಿ ಹೇಳಲಾಗಿದೆ (ಐದನೇ ಸಂಪುಟ, ಪುಟ 213).ಈ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕವು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ ನಂತರ ಐತೀರ್ಪನ್ನು ತುಸು ಪರಿಷ್ಕರಿಸಿ ನೀಡಿದ ಆದೇಶದಲ್ಲಿ ಕರ್ನಾಟಕಕ್ಕೆ ಕೆಲವು ಅನುಕೂಲಗಳಾದರೂ, ಅಲ್ಲಿಯೂ ಸಂಕಷ್ಟ ಹಂಚಿಕೆಗೆ ನಿರ್ದಿಷ್ಟ ಪರಿಹಾರ ಸಿಗಲಿಲ್ಲ. ಕರ್ನಾಟಕಕ್ಕೆ ಆಗಿರುವ ಲಾಭಗಳಲ್ಲಿ ಮೊದಲನೆಯದು, ತಮಿಳುನಾಡಿಗೆ ಹರಿಸುವ ನೀರಿನ ಲೆಕ್ಕವನ್ನು ಮೆಟ್ಟೂರು ಜಲಾಶಯದ ಬದಲಿಗೆ ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿಯೇ ಮಾಡಬೇಕೆಂಬ ರಾಜ್ಯದ ಬೇಡಿಕೆ ಒಪ್ಪಿಕೊಂಡದ್ದು. ಎರಡನೆಯದಾಗಿ, ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ 192 ಟಿಎಂಸಿ ಅಡಿಯಿಂದ 177.25ಕ್ಕೆ ತಗ್ಗಿಸಿದ್ದು. ಇದರ ಜೊತೆ ಹೆಚ್ಚುವರಿಯಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರ–ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ 4.75 ಟಿಎಂಸಿ ಅಡಿ ಹೆಚ್ಚುವರಿ ನೀರು ನೀಡಿದ್ದು.ಆದರೆ, ಜಗಳದ ಮೂಲವಾಗಿರುವ ಸಂಕಷ್ಟ ಹಂಚಿಕೆಯ ಸಂಕಟವನ್ನು ಬಗೆಹರಿಸಲು ಯಾವ ಸೂತ್ರವನ್ನೂ ಸುಪ್ರೀಂ ಕೋರ್ಟ್ ನೀಡಲಿಲ್ಲ. ಇದರ ಬದಲಿಗೆ ಐತೀರ್ಪಿನ ಅನುಷ್ಠಾನದ ಹೊಣೆಯನ್ನು ಕೇಂದ್ರ ಸರ್ಕಾರದ ಹೆಗಲಿನಿಂದ ಜಾರಿಸಿ ತಜ್ಞರ ದೊಡ್ಡ ತಲೆಗಳನ್ನೊಳಗೊಂಡ ‘ಕಾವೇರಿ ನೀರು ನಿಯಂತ್ರಣ ಸಮಿತಿ’ (ಸಿಡಬ್ಲ್ಯುಆರ್ಸಿ) ಮತ್ತು ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ದ (ಸಿಡಬ್ಲ್ಯುಎಂಎ) ಹೆಗಲಿಗೇರಿಸಿತ್ತು.ಜಲವರ್ಷ ಪ್ರಾರಂಭವಾಗುವ ಜೂನ್ ತಿಂಗಳಿನಿಂದ ಮುಂದಿನ ವರ್ಷದ ಮೇ ತಿಂಗಳವರೆಗೆ ಕರ್ನಾಟಕವು ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಹರಿಸಬೇಕಾಗಿರುವುದು ದೊಡ್ಡ ಸಮಸ್ಯೆ ಅಲ್ಲ. 2016ರಿಂದ 2026ವರೆಗಿನ ಹತ್ತು ವರ್ಷಗಳಲ್ಲಿ 2016, 2017 ಮತ್ತು 2023 ವರ್ಷಗಳನ್ನು ಹೊರತುಪಡಿಸಿದರೆ, ನಿಗದಿಪಡಿಸಲಾದ ನೀರಿಗಿಂತ ಹೆಚ್ಚು ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಿದೆ. ನೀರನ್ನು ತಿಂಗಳು–ವಾರ–ದಿನಗಳ ಲೆಕ್ಕದಲ್ಲಿ ಹರಿಸಬೇಕು ಎಂದು ಹೇಳಿರುವುದು ಸಮಸ್ಯೆಯ ಮೂಲ.2018ರಲ್ಲಿ ಸುಪ್ರೀಂ ಕೋರ್ಟ್ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ಗಳಲ್ಲಿ ಕ್ರಮವಾಗಿ 9.19, 31.24,45.95, ಮತ್ತು 36.76 ಟಿಎಂಸಿ ಅಡಿಗಳಂತೆ ಒಟ್ಟು 123.14 ಟಿಎಂಸಿ ಅಡಿ ನೀರು ಹರಿಸಿದರೆ ಸಾಕು ಎಂದು ಆದೇಶ ನೀಡಿತ್ತು. ಇದೊಂದು ಸಣ್ಣ ಸಮಾಧಾನ, ಪರಿಹಾರ ಅಲ್ಲ. ಈ ಅವಧಿಯಲ್ಲಿ ಒಟ್ಟು 134ಟಿಎಂಸಿ ಅಡಿ ನೀರು ಹರಿಸಬೇಕೆಂದು ನ್ಯಾಯಮಂಡಳಿ ಹೇಳಿದ್ದನ್ನು ನ್ಯಾಯಾಲಯ ಪರಿಷ್ಕರಿಸಿತ್ತು.ಕಾನೂನುಬದ್ಧ ಸಂಕಷ್ಟ ಹಂಚಿಕೆ ಸೂತ್ರ ಇಲ್ಲದೆ ಇರುವ ಕಾರಣ ಪ್ರಾಧಿಕಾರ, ನ್ಯಾಯಾಲಯಗಳೆಲ್ಲ ಮಳೆ ಕೊರತೆಯ ಆಧಾರದಲ್ಲಿ ಹರಿಸುವ ನೀರಿನ ಪ್ರಮಾಣವನ್ನು ನಿರ್ಧರಿಸಿ ಕಾಲಕಾಲಕ್ಕೆ ಆದೇಶ ನೀಡುತ್ತವೆ. ಉದಾಹರಣೆಗೆ, ಶೇ 30ರಷ್ಟು ಮಳೆನೀರಿನ ಒಳಹರಿವು ಕಡಿಮೆಯಾಗಿದೆ ಎನ್ನುವುದರ ಆಧಾರದಲ್ಲಿ ಹರಿಸುವ ನೀರಿನ ಪ್ರಮಾಣವನ್ನು ಶೇ 30ರಷ್ಟು ಕಡಿಮೆ ಮಾಡಿ, ಉಳಿದ ನೀರು ಬಿಡಿ ಎಂದು ಆದೇಶ ನೀಡುತ್ತವೆ. ಈ ಸಂಕಷ್ಟ ಹಂಚಿಕೆಯ ಸೂತ್ರ ಮೇಲ್ನೋಟಕ್ಕೆ ನ್ಯಾಯೋಚಿತ ಎಂದು ಅನಿಸಬಹುದು. ಒಳಸುಳಿ ಬೇರೆ ಇದೆ.ನಾವು ಒಮ್ಮೆ ತಮಿಳುನಾಡಿಗೆ ನೀರು ಹರಿಸಿದರೆ ಮತ್ತೆ ವಾಪಸು ಪಡೆದುಕೊಳ್ಳಲಾಗುವುದಿಲ್ಲ. ಇದರಿಂದಾಗಿಯೇ ಅಲ್ಲಿನ ಮೆಟ್ಟೂರು, ಭವಾನಿ, ಅಮರಾವತಿ ಜಲಾಶಯಗಳಲ್ಲಿ ಈಗಲೂ ಅಂದಾಜು 43 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹ ಇದೆ. ಇದಕ್ಕೆ ಕಾರಣ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಂದು ಕೊಡುವ ಎರಡು ಮಾರುತಗಳು. ಜೂನ್ನಿಂದ ಸೆಪ್ಟೆಂಬರ್ವರೆಗಿನ ನೈಋತ್ಯ ಮಾರುತ; ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗಿನ ಈಶಾನ್ಯ ಮಾರುತ.ತಮಿಳುನಾಡಿಗೆ ಎರಡು ಮಾರುತಗಳ ಮಳೆಯ ಲಾಭ ಇರುವುದರಿಂದ ಅಲ್ಲಿನ ರೈತರು ಕುರುವೈ ಬೆಳೆಗೆ ನೈರುತ್ಯ ಮಾರುತವನ್ನು ಅವಲಂಬಿಸಿದ್ದರೆ, ನಂತರ ಬೆಳೆಯುವ ಸಾಂಬಾ ಬೆಳೆಗೆ ಬೇಕಾಗಿರುವ ಮಳೆಯ ಮೂರನೇ ಎರಡರಷ್ಟರನ್ನು ಈಶಾನ್ಯ ಮಾರುತದಿಂದ ಪಡೆಯುತ್ತಾರೆ. ಇಲ್ಲಿಯವರೆಗಿನ ಸಂಕಷ್ಟ ಹಂಚಿಕೆ ಸೂತ್ರಗಳು ಈಶಾನ್ಯ ಮಾರುತವನ್ನು ಪರಿಗಣಿಸಿಲ್ಲ. ಕರ್ನಾಟಕಕ್ಕೆ ನೈಋತ್ಯ ಮಾರುತ ಕೈಕೊಟ್ಟರೆ, ಅದನ್ನೇ ನಂಬಿರುವ ಮುಂಗಾರು ಬೆಳೆ ನಾಶವಾಗಿ ನಮ್ಮ ರೈತರಿಗೆ ಶಾಶ್ವತ ಬರಗಾಲ. ಹೀಗಾಗಿ ಈ ತಿಂಗಳು, ವಾರ ಮತ್ತು ನೀರಿನ ಲೆಕ್ಕ ಇದೆಯಲ್ಲ, ಅದು ನಮ್ಮ ರೈತರ ಪಾಲಿನ ಮರಣಶಾಸನ.ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಬೇಕಾದರೆ ರಾಜ್ಯದ ಮೂರು ಬೇಡಿಕೆಗಳಿಗೆ ಮಾನ್ಯತೆ ಸಿಗಬೇಕು. ಮೊದಲನೆಯದಾಗಿ, ಮಳೆಯ ಕೊರತೆ–ಮಿಗತೆಯ ಲೆಕ್ಕ ಹಾಕುವಾಗ ಕರ್ನಾಟಕದಲ್ಲಿ ಬಹುಪಾಲು ಮಳೆಯನ್ನು ತಂದುಕೊಡುವ ನೈರುತ್ಯಮಾರುತದ ಮಳೆಯನ್ನಷ್ಟೇ ಪರಿಗಣಿಸದೆ, ತಮಿಳುನಾಡಿನಲ್ಲಿ ಅಕ್ಟೋಬರ್ ಮಧ್ಯಭಾಗದಿಂದ ಜನವರಿವರೆಗೆ ಸುರಿಯುವ ಈಶಾನ್ಯ ಮಾರುತವನ್ನೂ ಪರಿಗಣಿಸಬೇಕು. ಎರಡನೆಯದಾಗಿ, ನ್ಯಾಯಮಂಡಳಿ ಐತೀರ್ಪು ನೀಡುವಾಗ ಜೂನ್ನಿಂದ ಡಿಸೆಂಬರ್ವರೆಗೆ ಬಿಟ್ಟ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡ ಹಾಗೆ, ಸಂಕಷ್ಟ ಸ್ಥಿತಿಯ ಅಂದಾಜಿಗೆ ನೀರಿನ ಕೊರತೆಯನ್ನು ಲೆಕ್ಕ ಹಾಕುವಾಗಲೂ ಆ ಅವಧಿಯನ್ನೇ (ಜೂನ್–ಡಿಸೆಂಬರ್) ಪರಿಗಣಿಸಬೇಕು.ಮೂರನೆಯದಾಗಿ, ಸಂಕಷ್ಟ ಹಂಚಿಕೆ ಸೂತ್ರ ರಚಿಸುವಾಗ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶವನ್ನಷ್ಟೇ ಪರಿಗಣಿಸದೆ, ತಮಿಳುನಾಡಿನ ಜಲಾಶಯಗಳ ನೀರು ಸಂಗ್ರಹವನ್ನೂ ಪರಿಗಣಿಸಬೇಕು. ನೀರಾವರಿ ವರ್ಷದ ಪ್ರಾರಂಭದಲ್ಲಿ ಮೆಟ್ಟೂರು ಜಲಾಶಯದಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು. ನರ್ಮದಾ ನದಿ ನೀರು ಹಂಚಿಕೆ ವಿವಾದವನ್ನು ಇತ್ಯರ್ಥಗೊಳಿಸಿದ್ದ ನ್ಯಾಯಮಂಡಳಿ, ‘ನಿರ್ದಿಷ್ಟ ನೀರಾವರಿ ವರ್ಷದಲ್ಲಿ ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣದಲ್ಲಿ ಹಿಂದಿನ ವರ್ಷದ ಮಿಗತೆ ನೀರಿನ ಪ್ರಮಾಣವೂ ಸೇರಿದೆ...’ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.ಇದರ ಜೊತೆಗೆ, ಕಳೆದ ತಿಂಗಳು ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ಕರ್ನಾಟಕ ಬಹುಮುಖ್ಯವಾದ ಇನ್ನೊಂದು ವಾದವನ್ನು ಮಂಡಿಸಿದೆ. ತಮಿಳುನಾಡಿಗೆ ಹರಿಸುವ ನೀರಿನ ಬಾಕಿಯನ್ನು ಮುಂದಿನ ತಿಂಗಳಲ್ಲಿ ಇಲ್ಲವೇ ಜನವರಿ ಅಂತ್ಯಕ್ಕೆ ಲೆಕ್ಕಹಾಕಬಹುದೆಂದು ಕಾವೇರಿ ನ್ಯಾಯಮಂಡಳಿ 1996ರ ಡಿ. 1ರಂದು ತನ್ನ ಆದೇಶದಲ್ಲಿ ತಿಳಿಸಿತ್ತು. ಇದನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿತ್ತು. ಯಥಾಪ್ರಕಾರ ಸಿಡಬ್ಲ್ಯುಎಂಎ ಇದನ್ನು ಪರಿಗಣಿಸಿಲ್ಲ.ಅನುಭವದಿಂದ ಹೇಳುವುದಾದರೆ, ಎರಡು ರಾಜ್ಯಗಳ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ನದಿಯಲ್ಲಿ ಮಳೆ ನೀರಿಗಿಂತ ಹೆಚ್ಚು ರಾಜಕೀಯದ ಕೊಳೆ ನೀರು ಹರಿಯುತ್ತದೆ. ಸಾಮಾನ್ಯವಾಗಿ ನೀರಿನ ಜಗಳ ಆಗಸ್ಟ್ ಮಧ್ಯಭಾಗ ಇಲ್ಲವೇ ಸೆಪ್ಟೆಂಬರ್ ತಿಂಗಳಲ್ಲಿ ತಾರಕಕ್ಕೇರುತ್ತದೆ. ಈ ಬಾರಿ ಜೂನ್ 22ಕ್ಕೆ ಸಭೆ ಸೇರಿದ್ದ ಸಿಡಬ್ಲ್ಯುಆರ್ಸಿ ಮತ್ತು ಸಿಡಬ್ಲ್ಯುಎಂಎ ಮತ್ತೊಮ್ಮೆ ಅವಸರದಲ್ಲಿ 28ಕ್ಕೆ ತುರ್ತು ಸಭೆ ನಡೆಸಿ, 3,500 ಕ್ಯುಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿರುವುದು ವಿವಾದವನ್ನು ಗಮನಿಸುತ್ತಾ ಬಂದವರಿಗೆ ಅಚ್ಚರಿ ಮೂಡಿಸಿದೆ. ಈ ಸಭೆಗಳ ನಡುವಿನ ಅವಧಿಯ ರಾಜಕೀಯ ಬೆಳವಣಿಗಳನ್ನು ಗಮನಿಸಿದರೆ, ಈ ಅಚ್ಚರಿಗೆ ಕಾರಣ ಅರಿವಿಗೆ ಬರಬಹುದು.ಜುಲೈ 25ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಮಾತುಕತೆಗಾಗಿ ಕರ್ನಾಟಕಕ್ಕೆ ಭೇಟಿ ನೀಡುವ ಬಯಕೆ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಾಗತಿಸಿದ್ದರು. ಆ ಭೇಟಿ ಸೌಹಾರ್ದಯುತವಾಗಿ ನಡೆದು ಸ್ವಲ್ಪ ಪ್ರಮಾಣದ ನೀರು ಬಿಡಲು ನಾವು ಒಪ್ಪಿ, ಅದಕ್ಕೆ ಪ್ರತಿಯಾಗಿ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡುವ ಇಂಗಿತವನ್ನು ಅವರು ನೀಡಿದ್ದರೆ, ಎರಡು ರಾಜ್ಯಗಳ ನಡುವೆ ಒಂದು ಸೌಹಾರ್ದಯುತ ಸಂಬಂಧ ಏರ್ಪಡುತ್ತಿತ್ತು. ಈ ಸ್ನೇಹಸಂಬಂಧವನ್ನು ಭಂಗಗೊಳಿಸಲಿಕ್ಕಾಗಿಯೇ ಸಿಡಬ್ಲ್ಯುಎಂಎ ಕಠಿಣವಾಗಿವರ್ತಿಸಿತೆ? ಸಾಂವಿಧಾನಿಕ ಸಂಸ್ಥೆಗಳನ್ನು ಮುಷ್ಟಿಯಲ್ಲಿಇಟ್ಟುಕೊಂಡ ಆಡಳಿತಾರೂಢರಿಗೆ ಈ ಸಮಿತಿ, ಪ್ರಾಧಿಕಾರಗಳನ್ನು ಕುಣಿಸುವುದು ಯಾವ ಲೆಕ್ಕ?ದಿನೇಶ್ ಅಮಿನ್ ಮಟ್ಟು