ಕೆ.ಆರ್. ಮಾರುಕಟ್ಟೆ: ಒತ್ತುವರಿ ತೆರವು
ಬೆಂಗಳೂರು: ಐತಿಹಾಸಿಕ ಬೆಂಗಳೂರು ಕೋಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಸುತ್ತಮುತ್ತಲಿನ ಪಾದಚಾರಿ ರಸ್ತೆಯನ್ನು ಆಕ್ರಮಿಸಿಕೊಂಡು, ಕೆ.ಆರ್. ಮಾರುಕಟ್ಟೆಯವರೆಗೆ ಹರಡಿಕೊಂಡಿದ್ದ ಸುಮಾರು 233 ಅಂಗಡಿಗಳನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ಬುಧವಾರ ತೆರವುಗೊಳಿಸಿತು.ಕೆ.ಆರ್. ಮಾರ್ಕೆಟ್ ಮುಂಭಾಗದಲ್ಲಿ ಮೈಸೂರು ರಸ್ತೆ ಮೇಲ್ಸೇತುವೆಯ ಕೆಳಭಾಗದಲ್ಲಿ ಹಾಗೂ ವಿಕ್ಟೋರಿಯಾ ಆಸ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕೋಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಸುತ್ತಮುತ್ತಲಿನ ಪಾದಚಾರಿ ರಸ್ತೆಯನ್ನು ಆಕ್ರಮಿಸಿಕೊಂಡು, ಕೆ.ಆರ್. ಮಾರುಕಟ್ಟೆಯವರೆಗೆ ಹರಡಿಕೊಂಡಿದ್ದ ಸುಮಾರು 233 ಅಂಗಡಿಗಳನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ಬುಧವಾರ ತೆರವುಗೊಳಿಸಿತು.ಕೆ.ಆರ್. ಮಾರ್ಕೆಟ್ ಮುಂಭಾಗದಲ್ಲಿ ಮೈಸೂರು ರಸ್ತೆ ಮೇಲ್ಸೇತುವೆಯ ಕೆಳಭಾಗದಲ್ಲಿ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಅತ್ಯಂತ ಕ್ಲಿಷ್ಟಕರ ಹಾಗೂ ಸವಾಲಿನ ಒತ್ತುವರಿ ಪ್ರದೇಶಗಳಲ್ಲಿ ಒಂದಾಗಿದ್ದ ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ, ಪಾದಚಾರಿಗಳಿಗೆ ಮುಕ್ತ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆಯುಕ್ತ ಜಗದೀಶ್ ತಿಳಿಸಿದರು.ಚಾಮರಾಜಪೇಟೆ ವಿಭಾಗದ ವಿವಿಧ ಪ್ರದೇಶಗಳಾದ ವಿಕ್ಟೋರಿಯಾ ಆಸ್ಪತ್ರೆಯ ಬಲಭಾಗದಲ್ಲಿದ್ದ ಅಂಗಡಿಗಳು ಮತ್ತು ಪಾದಚಾರಿಗಳ ಸುರಕ್ಷಾ ಗ್ರಿಲ್ ಒಳಭಾಗದಲ್ಲಿದ್ದ 200 ಅಂಗಡಿಗಳು, ಬಿಜಿಎಸ್ ಮೇಲ್ಸೇತುವೆ ಕೆಳಭಾಗದಲ್ಲಿದ್ದ 33 ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆರು ಜೆಸಿಬಿ, ನಾಲ್ಕು ಬೃಹತ್ ಟಿಪ್ಪರ್ ಲಾರಿಗಳು ಹಾಗೂ 10 ಟ್ರ್ಯಾಕ್ಟರ್ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು ಎಂದರು.ಒತ್ತುವರಿ ತೆರವು ಕಾರ್ಯಾಚರಣೆಗೆ ಮುನ್ನ ಕೇಂದ್ರ ನಗರ ಪಾಲಿಕೆಯ ಮಾರ್ಷಲ್ ತಂಡವು ಸೋಮವಾರ ಮತ್ತು ಮಂಗಳವಾರದಂದು ಕೆ.ಆರ್. ಮಾರ್ಕೆಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೈಕ್ ಮೂಲಕ ಸಾರ್ವಜನಿಕ ಪ್ರಕಟಣೆಗಳನ್ನು ನೀಡಿತ್ತು. ಪಾದಚಾರಿ ಮಾರ್ಗಗಳ ಮೇಲಿನ ಅನಧಿಕೃತ ಅಂಗಡಿಗಳು ಮತ್ತು ಒತ್ತುವರಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡಿತು. ಅಲ್ಲದೆ, ತೆರವು ಕಾರ್ಯಾಚರಣೆ ಬಗ್ಗೆ ಅಧಿಕೃತ ಸೂಚನಾ ಸ್ಟಿಕ್ಕರ್ಗಳನ್ನು ಸಂಬಂಧಿಸಿದ ಅಂಗಡಿಗಳಿಗೆ ಅಂಟಿಸುವ ಮೂಲಕ ಮಾಹಿತಿ ನೀಡಲಾಯಿತು. ಈ ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡ ಬಳಿಕವೇ ಕಾನೂನು ಬದ್ಧವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.ಕೇಂದ್ರ ನಗರ ಪಾಲಿಕೆಯ ಹೆಚ್ಚುವರಿ ಅಭಿವೃದ್ಧಿ ಆಯುಕ್ತ ವೆಂಕಟಾಚಲಪತಿ ಸ್ಥಳದಲ್ಲಿ ಉಪಸ್ಥಿತರಿದ್ದು, ಕಾರ್ಯಾರಣೆಯ ನೇತೃತ್ವ ವಹಿಸಿದ್ದರು.ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೋಟೆ ರಸ್ತೆಯ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡಲಾಯಿತು* ಒಟ್ಟು 233 ಅಂಗಡಿ–ಮಳಿಗೆಗಳ ತೆರವು * ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶದಂತೆ ಕಾನೂನುಬದ್ಧವಾಗಿ ಒತ್ತುವರಿ ತೆರವು * ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಸವಾಲಿನ ಒತ್ತುವರಿ ತೆರವು ಕಾರ್ಯಾಚರಣೆ20 ದಿನ ನಂತರ ತೆರವು ‘ಹಳೆಯ ಬಿಬಿಎಂಪಿಯ ನಕಲಿ ದಾಖಲೆಗಳನ್ನು ಆಧರಿಸಿ ಇಲ್ಲಿ ಲೋಹದ (ಮೆಟಲ್) ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಈ ಅಂಗಡಿಗಳಿಂದಾಗಿ ಐತಿಹಾಸಿಕ ಕೋಟೆಯು ರಸ್ತೆಯ ಕಡೆಯಿಂದ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಬೆಂಗಳೂರಿನಲ್ಲೇ ಅತ್ಯಂತ ಹೆಚ್ಚು ಪಾದಚಾರಿ ಮತ್ತು ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಿ ಜನರಿಗೆ ನಡೆಯಲು ಜಾಗವೇ ಇರಲಿಲ್ಲ. ಅಂಗಡಿಯವರ ಬಳಿ ನಕಲಿ ದಾಖಲೆಗಳಿರುವುದನ್ನು ಗುರುತಿಸಿದ ಹೈಕೋರ್ಟ್ 15 ದಿನಗಳ ಒಳಗೆ ಸ್ವತಃ ಖಾಲಿ ಮಾಡಿ ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತುವರಿದಾರರಿಗೆ ಆದೇಶಿಸಿತ್ತು. ಅಧಿಕಾರಿಗಳು 20 ದಿನ ಕಾದ ನಂತರ ತೆರವುಗೊಳಿಸಿದ್ದಾರೆ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.