ಚುರುಮುರಿ: ಸಂಪುಟ ಸಂಭ್ರಮ
ಮಹಾಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂತ್ರಿಮಹೋದಯರ ಸಭೆ ನಡೆದಿತ್ತು.‘ದೆಹಲಿ ದೇವರ ಕೃಪೆ, ದೈವಜ್ಜನ ಕಟಾಕ್ಷದಿಂದ ಮಂತ್ರಿಯಾದ ನಿಮ್ಮೆಲ್ಲರಿಗೂ ಅಭಿನಂದನೆಗಳು...’ ಎಂದು ಮಹಾಮಂತ್ರಿ ಹೇಳಿದರು.‘ಮಂತ್ರಿ ಪಟ್ಟಿ ಮಾನ್ಯ ಮಾಡಿಸಿಕೊಳ್ಳಲು ನಿಮ್ಮ ದೆಹಲಿ ಓಡಾಟ, ಪಟ್ಟ ಕಷ್ಟ ನಮಗೂ ಅರಿವಿದೆ ಪ್ರಭು’ ಎಂದು ಮಂತ್ರಿಗಳು ಹೇಳಿದರು.‘ಮಹಾಪ್ರಭು, ಗಾತ್ರ–ಘನತೆ ಇಲ್ಲದ ದುರ್ಬಲ ಖಾತೆ ಕ

ಮಹಾಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂತ್ರಿಮಹೋದಯರ ಸಭೆ ನಡೆದಿತ್ತು.‘ದೆಹಲಿ ದೇವರ ಕೃಪೆ, ದೈವಜ್ಜನ ಕಟಾಕ್ಷದಿಂದ ಮಂತ್ರಿಯಾದ ನಿಮ್ಮೆಲ್ಲರಿಗೂ ಅಭಿನಂದನೆಗಳು...’ ಎಂದು ಮಹಾಮಂತ್ರಿ ಹೇಳಿದರು.‘ಮಂತ್ರಿ ಪಟ್ಟಿ ಮಾನ್ಯ ಮಾಡಿಸಿಕೊಳ್ಳಲು ನಿಮ್ಮ ದೆಹಲಿ ಓಡಾಟ, ಪಟ್ಟ ಕಷ್ಟ ನಮಗೂ ಅರಿವಿದೆ ಪ್ರಭು’ ಎಂದು ಮಂತ್ರಿಗಳು ಹೇಳಿದರು.‘ಮಹಾಪ್ರಭು, ಗಾತ್ರ–ಘನತೆ ಇಲ್ಲದ ದುರ್ಬಲ ಖಾತೆ ಕೊಟ್ಟಿದ್ದೀರಿ...’ ಮಂತ್ರಿಯೊಬ್ಬರು ಬೇಸರ ಹೊರಹಾಕಿದರು.‘ಎಲ್ಲರಿಗೂ ಪ್ರಬಲ ಖಾತೆಯೇ ಬೇಕೆಂದರೆ ಸಾಧ್ಯವೇನ್ರೀ?’ ಮಹಾಮಂತ್ರಿ ಸಿಟ್ಟಾದರು.‘ಪಕ್ಷದಲ್ಲಿ ಸೀನಿಯರ್, ಸಿನ್ಸಿಯರ್ ಆಗಿರುವ ನನಗೂ ಲಘು ಖಾತೆ ಕೊಟ್ಟಿದ್ದೀರಿ, ಹೆಚ್ಚಿನ ಜವಾಬ್ದಾರಿ ಕೊಡಿ’ ಇನ್ನೊಬ್ಬರು ಕೇಳಿಕೊಂಡರು.‘ಪ್ರಭು, ಇವರಿಗೆ ಮಂತ್ರಿ ಹೊಣೆ ಜೊತೆಗೆ ಹೆಚ್ಚುವರಿಆಗಿ ತ್ಯಾಜ್ಯ ನಿರ್ವಹಣೆ ಕೊಟ್ಟುಬಿಡಿ. ತ್ಯಾಜ್ಯಭಾರ ಮಾಡಿಕೊಂಡಿರಲಿ’ ಮಂತ್ರಿಯೊಬ್ಬರು ವ್ಯಂಗ್ಯವಾಡಿದರು.‘ಹೊರಗಡೆ ಏನ್ರೀ ಗಲಾಟೆ?’ ಮಹಾಮಂತ್ರಿ ಕೇಳಿದರು.‘ಮಹಿಳೆಯರನ್ನು ಮಂತ್ರಿ ಮಾಡಿಲ್ಲ ಎಂದು ಹೆಣ್ಣುಮಕ್ಕಳು ಗೋಳಾಡುತ್ತಿದ್ದಾರೆ ಪ್ರಭು’.‘ನಮ್ಮ ಸರ್ಕಾರ ಯಾವತ್ತೂ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿಲ್ಲ, ಅವರು ಕೇಳದಿದ್ದರೂ ಗೃಹಲಕ್ಷ್ಮಿ ಹಣ, ಬಸ್ನಲ್ಲಿ ಉಚಿತ ಪ್ರಯಾಣ ಕೊಡ್ತಿದ್ದೀವಿ, ಸಾಲದಂತೇನ್ರೀ? ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ಬಂದಮೇಲೆ ಹೆಣ್ಣುಮಕ್ಕಳಿಗೂ ಸ್ಥಾನಮಾನ ಕೊಡ್ತೀವಿ ಎಂದು ಸಮಾಧಾನ ಮಾಡಿ ಹೋಗ್ರೀ’ ಮಹಾಮಂತ್ರಿ ಅಪ್ಪಣೆ ಮಾಡಿದರು.‘ನಮ್ಮಲ್ಲಿ ಮಹಿಳಾ ಮಂತ್ರಿಗಳಿಲ್ಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ಪುರುಷ–ಮಕ್ಕಳ ಅಭಿವೃದ್ಧಿ ಖಾತೆ ಎಂದು ಬದಲಾಯಿಸಿ ಪುರುಷರ ಕಲ್ಯಾಣ ಮಾಡಿರಿ ಎಂದು ಪ್ರಜೆಗಳು ಪತ್ರ ಬರೆದಿದ್ದಾರೆ... ದಯವಿಟ್ಟು ಪರಿಶೀಲಿಸಿ’ ಎಂದು ಮಂತ್ರಿಯೊಬ್ಬರು ಮಹಾಮಂತ್ರಿಗೆ ಪತ್ರ ಕೊಟ್ಟರು.‘ಪರಿಶೀಲನೆ ಮಾಡೋಣ’ ಎಂದ ಮಹಾಮಂತ್ರಿ, ‘ವಿರೋಧ ಪಕ್ಷಗಳ ಬಾಯಿಗೆ ಬೀಳದಂತೆ, ಕಣ್ಣಿಗೆ ಕಾಣದಂತೆ, ವೈರಲ್ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ...’ ಎಂದು ಹೇಳಿ ಸಭೆ ಮುಗಿಸಿ ಹೊರಟರು.