ತಹಶೀಲ್ದಾರ್, ಪಿಡಿಒಗಳ ಕಾರ್ಯವೈಖರಿಗೆ ಆಕ್ಷೇಪ; ಉಪಲೋಕಾಯುಕ್ತರಿಂದ ದೂರು ದಾಖಲು
ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿ ವ್ಯಾಪ್ತಿಯ ಮುಖ್ಯ ವಲಯ, ಹೆಚ್ಚುವರಿ ವಲಯ ಹಾಗೂ ಪರಿಧಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗಳು ಹಾಗೂ ಹೋಂಸ್ಟೇ ನಡೆಸಲು ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ಹಂಪಿ ವಿಶ್ವ ಪಾರಂಪರಿಕ
ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿ ವ್ಯಾಪ್ತಿಯ ಮುಖ್ಯ ವಲಯ, ಹೆಚ್ಚುವರಿ ವಲಯ ಹಾಗೂ ಪರಿಧಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗಳು ಹಾಗೂ ಹೋಂಸ್ಟೇ ನಡೆಸಲು ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ (ಹವಾಮ) ನಿಯಮಾವಳಿಗಳು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಿ ನಿಷೇಧಿತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಈ ಪ್ರಕ್ರಿಯೆಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆನ್ನಲಾದ ಹೊಸಪೇಟೆ ಮತ್ತು ಕೊಪ್ಪಳ ಅಧಿಕಾರಿಗಳಿಗೆ ವಿವರಣೆ ಕೋರಿ ನೋಟಿಸ್ ನೀಡಲಾಗಿದೆ. ಅವರಲ್ಲಿ ಮುಖ್ಯವಾಗಿ ‘ಹವಾಮ’ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಹೊಸಪೇಟೆ ಮತ್ತು ಕೊಪ್ಪಳ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸೇರಿದ್ದಾರೆ.ಯುನೆಸ್ಕೊ ನಿಯಮಾವಳಿ ಪ್ರಕಾರ ಹಂಪಿಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪ್ರಾಮುಖ್ಯತೆಯನ್ನು ಕಾಯ್ದುಕೊಳ್ಳಲು ಮುಖ್ಯ ವಲಯ (ಕೋರ್ ಝೋನ್) ಮತ್ತು ಹೆಚ್ಚುವರಿ ವಲಯಗಳಲ್ಲಿ (ಬಫರ್ ಝೋನ್) ಯಾವುದೇ ಮಾದರಿಯ ಅನಧಿಕೃತ ವಾಣಿಜ್ಯ ನಿರ್ಮಾಣಗಳು, ರೆಸಾರ್ಟ್ಗಳು ಅಥವಾ ಹೋಂಸ್ಟೇಗಳನ್ನು ನಡೆಸುವಂತಿಲ್ಲ. ಆದಾಗ್ಯೂ, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇಂತಹ ಚಟುವಟಿಕೆಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಹಾಗೂ ಕೆಲವೆಡೆ ನಿಯಮಬಾಹಿರವಾಗಿ ಸಮ್ಮತಿ ನೀಡಿದ್ದಾರೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಉಪಲೋಕಾಯುಕ್ತರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು.ಹಿನ್ನೆಲೆ: ಜುಲೈ 25ರಂದು ಉಪಲೋಕಾಯುಕ್ತರು ಹಂಪಿಗೆ ಭೇಟಿ ನೀಡಿದ್ದರು ಹಾಗೂ ನಿಯಮಬಾಹಿರವಾಗಿ ಹಾಗೂ ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದ್ದ ಅವರು, ಯಾವುದೇ ಸೂಕ್ತ ಅನುಮತಿ, ಪಂಚಾಯಿತಿ, ‘ಹವಾಮ’ದ ಪರವಾನಗಿ ಇಲ್ಲದೆ ಇಷ್ಟೊಂದು ಸಂಖ್ಯೆಯ ಹೋಂ ಸ್ಟೇಗಳು ಹೇಗೆ ನಡೆಯುತ್ತಿವೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಇದಕ್ಕೂ ಮೊದಲು ಲೋಕಾಯಕ್ತರಿಗೆ ಅಕ್ರಮ ವಾಣಿಜ್ಯ ಚಟುವಟಿಕೆ ಕುರಿತಂತೆ ದೂರುಗಳು ಸಲ್ಲಿಕೆಯಾಗಿದ್ದವು ಎಂದು ಹೇಳಲಾಗಿದೆ.