ಹಾಕಿ ವಿಶ್ವಕಪ್ ಅಂಗಳದಲ್ಲಿ ಕನ್ನಡಿಗ ಮೋಹಿತ್ ಗೋಲ್ಕೀಪರ್
ಬೆಂಗಳೂರು: ಬಾಲ್ಯದಿಂದಲೂ ಕ್ರಿಕೆಟ್ ಆಡುವ ಕನಸು ಕಾಣುತ್ತಿದ್ದ ಎಚ್.ಎಸ್. ಮೋಹಿತ್, ಹಾಕಿ ಗೋಲ್ಕೀಪರ್ ಆಗಿ ರೂಪುಗೊಂಡಿದ್ದು ಆಕಸ್ಮಿಕ. ಆದರೆ ಅವರೀಗ ಬೆಲ್ಜಿಯಂ–ನೆದರ್ಲೆಂಡ್ಸ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಗೋಲ್ಕೀಪರ್ ಆಗಿ ಆಡಲಿದ್ದಾರೆ. ವಿಶ್ವಕಪ್ನಲ್ಲಿ 50 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವತ

ಬೆಂಗಳೂರು: ಬಾಲ್ಯದಿಂದಲೂ ಕ್ರಿಕೆಟ್ ಆಡುವ ಕನಸು ಕಾಣುತ್ತಿದ್ದ ಎಚ್.ಎಸ್. ಮೋಹಿತ್, ಹಾಕಿ ಗೋಲ್ಕೀಪರ್ ಆಗಿ ರೂಪುಗೊಂಡಿದ್ದು ಆಕಸ್ಮಿಕ. ಆದರೆ ಅವರೀಗ ಬೆಲ್ಜಿಯಂ–ನೆದರ್ಲೆಂಡ್ಸ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಗೋಲ್ಕೀಪರ್ ಆಗಿ ಆಡಲಿದ್ದಾರೆ. ವಿಶ್ವಕಪ್ನಲ್ಲಿ 50 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವತ್ತ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ತಂಡವು ಚಿತ್ತ ನೆಟ್ಟಿದೆ. ಇಂತಹ ತಂಡದ ಭಾಗವಾಗಿರುವ ಮೋಹಿತ್ ಏಷ್ಯನ್ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದಾರೆ. ಈ ಕುರಿತು ಮೋಹಿತ್ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ‘ನಮ್ಮದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ. ಅಪ್ಪ ಸಣ್ಣ ಉದ್ಯಮಿ. ಕ್ರಿಕೆಟ್ ಶಿಬಿರಕ್ಕೆ ಸೇರಿಸಲು ನನ್ನ ತಾತನಿಗೆ ದುಂಬಾಲು ಬಿದ್ದಿದ್ದೆ. ನಾಲ್ಕನೇ ತರಗತಿಯಲ್ಲಿದ್ದ ನನ್ನನ್ನು ಬೇಸಿಗೆ ಶಿಬಿರಕ್ಕೆ ಸೇರಿಸಿದ್ದರು. ಆದರೆ ಮನೆಯಿಂದ ಆರೇಳು ಕಿಲೋಮೀಟರ್ ದೂರ ಇತ್ತು. ಪ್ರತಿದಿನ ನನ್ನನ್ನು ಕರ್ಕೊಂಡು ಹೋಗಿ, ಮರಳಿ ಕರೆ ತರುವುದು ತಾತಾನ ಕೆಲಸವೇ ಆಗಿತ್ತು. ಅಲ್ಲಿ ನನ್ನ ಆಸಕ್ತಿಯನ್ನು ಗಮನಿಸಿದರು ತಾತಾ, ಕ್ರೀಡೆಯಲ್ಲಿ ತರಬೇತಿ ಕೊಡಿಸಲು ನಿರ್ಧರಿಸಿದರು. ಕ್ರೀಡಾ ವಸತಿ ನಿಲಯದಲ್ಲಿ ಆಯ್ಕೆ ಪ್ರಕ್ರಿಯೆಗೆ ಕರ್ಕೊಂಡು ಹೋದರು. ನನ್ನ ಎತ್ತರ ಚೆನ್ನಾಗಿದ್ದ ಕಾರಣ ವಾಲಿಬಾಲ್ಗೆ ಸೇರಿಸಿಕೊಂಡರು. ಕೆಲವು ತಿಂಗಳುಗಳ ನಂತರ ಹಾಸ್ಟೆಲ್ ಹಾಕಿ ತಂಡವು ಟೂರ್ನಿಯೊಂದಕ್ಕೆ ಹೋಗಬೇಕಿತ್ತು. ಆಗ ಆ ತಂಡದಲ್ಲಿ ಗೋಲ್ಕೀಪರ್ ಇರಲಿಲ್ಲ. ನನ್ನ ಎತ್ತರ ನೋಡಿ ಕರೆದುಕೊಂಡು ಹೋಗಿ ಗೋಲ್ಕೀಪರ್ ಮಾಡಿದರು. ಅಲ್ಲಿಂದ ಹಾಕಿ ಆಟದ ನಂಟು ಶುರುವಾಯಿತು. ಆದರೆ ನನಗೆ ಫಾರ್ವರ್ಡ್ ಆಗಿ ಗೋಲುಗಳನ್ನು ಗಳಿಸುವ ಆಸೆಯಿತ್ತು. ಕೋಚ್ ನನಗೆ ಅವಕಾಶ ಕೊಡದೇ ಗೋಲ್ಕೀಪಿಂಗ್ ಮಾಡು ಎಂದು ಸೂಚಿಸಿದರು’ ಎಂದು ಮೋಹಿತ್ ನೆನಪಿಸಿಕೊಂಡರು. ‘ಹತ್ತನೇ ತರಗತಿಯಲ್ಲಿದ್ದಾಗ ಬೆಂಗಳೂರಿನಲ್ಲಿ ನಡೆದಿದ್ದ ಒಂದು ಟೂರ್ನಿಯಲ್ಲಿ ಆಡಿದೆ. ಆಗ ಗೋಲ್ಕೀಪರ್ ಮಹತ್ವದ ಅರಿವಾಯಿತು. ಫಾರ್ವರ್ಡ್, ಮಿಡ್ಫೀಲ್ಡರ್ ಮತ್ತು ಡಿಫೆಂಡರ್ ಪಾತ್ರಗಳಿಗಿಂತಲೂ ಕೀಪಿಂಗ್ ಕಠಿಣ ಮತ್ತು ಮುಖ್ಯ ಎಂಬ ಅರಿವು ಮೂಡಿತು. ಅಲ್ಲಿಂದ ಗೋಲ್ಪೋಸ್ಟ್ ರಕ್ಷಣೆ ಮಾಡುವ ಆಟವು ಮುದ ನೀಡತೊಡಗಿತು. ಶ್ರದ್ಧೆಯಿಂದ ಅಭ್ಯಾಸ ಮಾಡಿದೆ. ಕೋವಿಡ್ ಸಮಯದಲ್ಲಿ ಕಷ್ಟವಾಯಿತು. ಏಕೆಂದರೆ; ಆಗ ಹಾಸ್ಟೆಲ್ ಇರಲಿಲ್ಲ. ಯಶವಂತಪುರದಲ್ಲಿ ಸ್ನೇಹಿತನೊಂದಿಗೆ ಇದ್ದೆ. ಪ್ರತಿದಿನವೂ ಅಲ್ಲಿಂದ ಶಾಂತಿನಗರ ಕ್ರೀಡಾಂಗಣಕ್ಕೆ ಬೈಕ್ನಲ್ಲಿ ಬಂದು ಬೆಳಗಿನಿಂದ ಸಂಜೆಯವರೆಗೂ ಒಬ್ಬನೇ ಅಭ್ಯಾಸ ಮಾಡುತ್ತಿದ್ದೆ. ಅದರ ಫಲ ಸಿಕ್ಕಿತು. ರಾಜ್ಯ ತಂಡದಲ್ಲಿ ಉತ್ತಮವಾಗಿ ಆಡಿದೆ. ಜೂನಿಯರ್ ಭಾರತ ತಂಡಕ್ಕೆ ಆಯ್ಕೆಯಾದೆ. ಮೂರು ವರ್ಷಗಳ ಹಿಂದೆ ಒಮಾನ್ನಲ್ಲಿ ನಡದಿದ್ದ ಜೂನಿಯರ್ ಏಷ್ಯಾ ಕಪ್ನಲ್ಲಿ ಗೆದ್ದ ಭಾರತ ತಂಡದಲ್ಲಿ ನಾನು ಕೂಡ ಇದ್ದೆ. 2022ರಲ್ಲಿ ಸುಲ್ತಾನ್ ಜೊಹರ್ ಕಪ್ ಟೂರ್ನಿಯಲ್ಲಿ ಚಿನ್ನದ ಪದಕ ಹಾಗೂ 2023ರಲ್ಲಿ ಕಂಚಿನ ಪದಕ ಜಯಿಸಿದ ತಂಡದಲ್ಲಿಯೂ ಆಡಿದ್ದೆ’ ಎಂದರು 24 ವರ್ಷದ ಮೋಹಿತ್. ‘2023ರಲ್ಲಿ ನಡೆದ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ತಂಡ ನಾಲ್ಕನೇ ಸ್ಥಾನ ಪಡೆದಿತ್ತು. ಆಗ ಅತೀವ ಬೇಸರವಾಗಿತ್ತು. ಅದರ ನಂತರ ಸೀನಿಯರ್ ತಂಡದಲ್ಲಿ ಸ್ಥಾನ ಲಭಿಸಿತು. ಈ ಸಲ ವಿಶ್ವಕಪ್ ಜಯಿಸುವ ವಿಶ್ವಾಸವೂ ಇದೆ. ಸಾಮರ್ಥ್ಯವೂ ಇದೆ. ನಾಯಕ ಹರ್ಮನ್ಪ್ರೀತ್ ಸಿಂಗ್, ಮನದೀಪ್ ಸಿಂಗ್ ಅವರಂತಹ ಅನುಭವಿ ಆಟಗಾರರೊಂದಿಗೆ ತಂಡದಲ್ಲಿದ್ದೇನೆ. ಈಚೆಗೆ ನೆದರ್ಲೆಂಡ್ಸ್ ಪ್ರವಾಸದಲ್ಲಿ ಆಡಿದ್ದೆ. ಜರ್ಮನಿಯ ಎದುರಿನ ಪಂದ್ಯದಲ್ಲಿ ಕೀಪಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಎದುರಾಳಿಗಳ ಎರಡ್ಮೂರು ಪ್ರಯತ್ನಗಳನ್ನು ತಡೆದಿದ್ದೆ’ ಎಂದು ಮೋಹಿತ್ ಹೇಳಿದರು. ‘ಕಠಿಣ ತರಬೇತಿ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ತಾಲೀಮು ಶುರುವಾಗುತ್ತದೆ. ಏಷ್ಯನ್ ಕ್ರೀಡಾಕೂಟಕ್ಕೆ ಜಪಾನಿಗೆ ಹೋದಾಗ ತೊಂದರೆಯಾಗಬಾರದೆಂದು ಇಲ್ಲಿ ನಮಗೆ ಜಪಾನಿ ಸುಶಿ, ಸೂಪು, ಚಿಕನ್ ಖಾದ್ಯಗಳನ್ನು ನೀಡಿದ್ದರು. ತಂಡದ ಸಂಯೋಜನೆಗಾಗಿ ವಾರಕ್ಕೊಮ್ಮೆ ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತೇವೆ. ಜೊತೆಯಾಗಿ ಊಟಕ್ಕೆ ತೆರಳುತ್ತೇವೆ. ಇದರಿಂದ ಪರಸ್ಪರ ಬಾಂಧವ್ಯ ಉತ್ತಮಗೊಳ್ಳುತ್ತದೆ’ ಎಂದರು. ಹಾಕಿ ಕ್ರೀಡೆಯಲ್ಲಿಯೇ ಬದುಕು ರೂಪಿಸಿಕೊಳ್ಳುವತ್ತ ಹೆಚ್ಚು ಗಂಭೀರವಾಗಿರುವ ಮೋಹಿತ್ ಆನ್ಲೈನ್ ಮೂಲಕ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಪದವಿಯನ್ನು ಮಾಡುತ್ತಿದ್ದಾರೆ. ‘ಸಮಯ ಸಿಕ್ಕಾಗಲೆಲ್ಲ ಆನ್ಲೈನ್ನಲ್ಲಿ ಓದಿಕೊಳ್ಳುತ್ತೇನೆ’ ಎಂದು ಮುಗುಳ್ನುಗುತ್ತಾರೆ.ಭಾರತ ಹಾಕಿ ತಂಡದ ಗೋಲ್ಕೀಪರ್ ಎಚ್.ಎಸ್. ಮೋಹಿತ್ –ಪ್ರಜಾವಾಣಿ ಚಿತ್ರ