ರಾಜ್ಯಸಭೆಯಲ್ಲಿ ರಣಕಹಳೆ – ‘ವಿಪಕ್ಷ ನಾಯಕನ ಹುದ್ದೆಯ ದುರುಪಯೋಗ’ ಎಂದ ರಿಜಿಜುಗೆ ಖರ್ಗೆ ತಿರುಗೇಟು
– ವಿಪಕ್ಷಗಳ ಭಾವನೆಗಳನ್ನ ಅಮಿತ್ ಶಾಗೆ ತಿಳಿಸಿ – ರಿಜಿಜುಗೆ ಸೂಚನೆ ನವದೆಹಲಿ: ರಾಜ್ಯಸಭೆಯು ಇಂದು (ಗುರುವಾರ) ತೀವ್ರ ಗದ್ದಲಕ್ಕೆ ಸಾಕ್ಷಿಯಾಯಿತು. ಕಳೆದ ತಿಂಗಳು ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸದನದಲ್ಲಿ ಉತ್ತರ ಕೊಡಬೇಕು ಎಂಬ ವಿಪಕ್ಷಗಳ ಆಗ್ರಹ ಮತ್ತೊಮ್ಮೆ ವಾಕ್ಸಮರಕ್ಕೆ ಕಾರಣವಾಯಿತು. ಸ

– ವಿಪಕ್ಷಗಳ ಭಾವನೆಗಳನ್ನ ಅಮಿತ್ ಶಾಗೆ ತಿಳಿಸಿ – ರಿಜಿಜುಗೆ ಸೂಚನೆ ನವದೆಹಲಿ: ರಾಜ್ಯಸಭೆಯು ಇಂದು (ಗುರುವಾರ) ತೀವ್ರ ಗದ್ದಲಕ್ಕೆ ಸಾಕ್ಷಿಯಾಯಿತು. ಕಳೆದ ತಿಂಗಳು ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸದನದಲ್ಲಿ ಉತ್ತರ ಕೊಡಬೇಕು ಎಂಬ ವಿಪಕ್ಷಗಳ ಆಗ್ರಹ ಮತ್ತೊಮ್ಮೆ ವಾಕ್ಸಮರಕ್ಕೆ ಕಾರಣವಾಯಿತು. ಸದನ ಪುನಾರಂಭ ಆಗುತ್ತಿದ್ದಂತೆ ವಿಪಕ್ಷ ಸದಸ್ಯರು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಅಮಿತ್ ಶಾ ರಾಜ್ಯಸಭೆಗೆ ಬಂದು ಈ ವಿಷಯದ ಕುರಿತು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಈ ವೇಳೆ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಗೃಹ ಸಚಿವರಿಗೆ ನಿರ್ದೇಶನ ನೀಡಿ ಸದನಕ್ಕೆ ಕರೆಸಿ ಉತ್ತರ ಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju), ಕಳೆದ ಏಳು ದಿನಗಳಿಂದ ಇದೇ ವಿಷಯವನ್ನು ಮರುಮರು ಪ್ರಸ್ತಾಪಿಸುತ್ತಿದ್ದಾರೆ. ಸದನದ ನಿಯಮಗಳ ಪ್ರಕಾರ, ಸಭಾಪತಿಗೆ ಈ ರೀತಿಯ ನಿರ್ದೇಶನ ನೀಡಲು ಸಾಧ್ಯವಿಲ್ಲ. ವಿಪಕ್ಷದ ನಾಯಕರು ಸದನದ ಕಾರ್ಯವೈಖರಿಯನ್ನ ನಿರ್ಧರಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದರೊಂದಿಗೆ, ʻವಿರೋಧ ಪಕ್ಷದ ನಾಯಕರ ಹುದ್ದೆಯನ್ನು ಖರ್ಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆʼ ಎಂದು ಆರೋಪಿಸಿದ ರಿಜಿಜು, ಒಂದೇ ವಿಷಯವನ್ನ ನಿರಂತರವಾಗಿ ಇದೇ ರೀತಿಯಲ್ಲಿ ಪ್ರಸ್ತಾಪಿಸುವುದು ಸಂಸದೀಯ ಸಂಪ್ರದಾಯಕ್ಕೆ ವಿರುದ್ಧ ಎಂದು ಟೀಕಿಸಿದರು. ಕಾಂಗ್ರೆಸ್ ನಾಯಕ ಪವನ್ ಖೇರಾ ಮೇಲೂ ವ್ಯಂಗ್ಯವಾಡಿದ ರಿಜಿಜು, ʻಪಕ್ಷದ ನಾಯಕತ್ವವೇ ಅವರಿಗೆ ಮೊದಲ ಭಾಷಣ ಮಾಡುವ ಅವಕಾಶ ನೀಡುತ್ತಿಲ್ಲ. ಅದಕ್ಕಾಗಿಯೇ ಅವರು ಸದನದ ಬಾವಿಗೆ ಬಂದು ಘೋಷಣೆಗಳನ್ನ ಕೂಗುತ್ತಿದ್ದಾರೆʼ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯಸಭೆ ಸಭಾಪತಿ ಸಿ.ಪಿ ರಾಧಾಕೃಷ್ಣನ್, ವಿರೋಧ ಪಕ್ಷದ ಭಾವನೆಗಳನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸುವಂತೆ ರಿಜಿಜುಗೆ ಸೂಚಿಸಿದರು. ಇನ್ನೊಂದೆಡೆ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಬಗ್ಗೆ ಅಮಿತ್ ಶಾ ಹೇಳಿಕೆ ನೀಡಬೇಕು, ರಾಮಮಂದಿರ ದೇಣಿಗೆಯ ದುರುಪಯೋಗದ ಕುರಿತು ಚರ್ಚೆ ನಡೆಯಬೇಕು ಹಾಗೂ ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ವಿರೋಧ ಪಕ್ಷಗಳು ಮುಂದುವರಿಸಿದವು. ಬುಧವಾರವೂ INDIA ಮೈತ್ರಿಕೂಟದ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿ, ‘ಪ್ರೇರಣಾ ಸ್ಥಳ’ದಿಂದ ‘ಮಕರ ದ್ವಾರ’ದವರೆಗೆ ಮೆರವಣಿಗೆ ನಡೆಸಿದ್ದರು. ಈ ವೇಳೆ ʻಅಮಿತ್ ಶಾ ಜವಾಬ್ ದೋʼ, ʻಚಂದಾ ಚೋರ್ʼ ಸೇರಿದಂತೆ ವಿವಿಧ ಘೋಷಣೆಗಳನ್ನ ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮುಂಚೂಣಿಯಲ್ಲಿ ಭಾಗವಹಿಸಿದ್ದರು.