80ನೇ ವಯಸ್ಸಿನಲ್ಲೂ ಒಬ್ಬಂಟಿಯಾಗಿ ಬದುಕುತ್ತಿರುವ ‘ಪವಿತ್ರ ರಿಶ್ತಾ’ ನಟಿ
ಬಾಲಿವುಡ್ನ ಹಿರಿಯ ನಟಿ ಉಷಾ ನಾಡಕರ್ಣಿ, ಸುಮಾರು 7 ದಶಕಗಳ ಕಾಲ ಮನರಂಜನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಪವಿತ್ರ ರಿಶ್ತಾ ಎಂಬ ಜನಪ್ರಿಯ ಹಿಂದಿ ಧಾರಾವಾಹಿಯಲ್ಲಿ ಅವರ ಪಾತ್ರವು ಹಿಂದಿ ಮಾತ್ರವಲ್ಲದೆ, ಮರಾಠಿ ಭಾಷೆಯಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿತ್ತು. ಇತ್ತೀಚೆಗೆ ರಾಜಶ್ರೀ ಮರಾಠಿ ಎಂಬುವವರ ಯೂಟ್ಯೂಬ್ ಸಂವಾದವೊಂದರಲ್ಲಿ 1987 ರಿಂದ ಒಬ್ಬಂಟಿಯಾಗಿ ವಾಸಿಸ
ಬಾಲಿವುಡ್ನ ಹಿರಿಯ ನಟಿ ಉಷಾ ನಾಡಕರ್ಣಿ, ಸುಮಾರು 7 ದಶಕಗಳ ಕಾಲ ಮನರಂಜನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಪವಿತ್ರ ರಿಶ್ತಾ ಎಂಬ ಜನಪ್ರಿಯ ಹಿಂದಿ ಧಾರಾವಾಹಿಯಲ್ಲಿ ಅವರ ಪಾತ್ರವು ಹಿಂದಿ ಮಾತ್ರವಲ್ಲದೆ, ಮರಾಠಿ ಭಾಷೆಯಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿತ್ತು. ಇತ್ತೀಚೆಗೆ ರಾಜಶ್ರೀ ಮರಾಠಿ ಎಂಬುವವರ ಯೂಟ್ಯೂಬ್ ಸಂವಾದವೊಂದರಲ್ಲಿ 1987 ರಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ನನ್ನೊಂದಿಗೆ ಒಡಹುಟ್ಟಿದವರೆಲ್ಲರೂ ನಿಧನರಾಗಿದ್ದು, ಮಗ ವಿದೇಶದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಒಂಟಿತನ ಅವರ ಮೇಲೆ ಬೀರಿದ ಪರಿಣಾಮದ ಕುರಿತು ಮಾತನಾಡಿರುವ ಅವರು, ‘ಒಂಟಿತನಕ್ಕೆ ಒಗ್ಗಿಕೊಂಡಿದ್ದೇನೆ. 1987ರಿಂದ ಒಂಟಿಯಾಗಿಯೇ ವಾಸಿಸುತ್ತಿದ್ದೇನೆ. ನನಗೆ ಸ್ವಲ್ಪವೂ ಭಯವಿಲ್ಲ. ಮೊದಲು ಒಂಟಿಯಾಗಿ ಮನೆಗೆ ಬಂದಾಗ ಭಯವಾಗುತ್ತಿತ್ತು. ಹಿಂದಿನಿಂದ ಯಾರಾದರೂ ನನ್ನ ಮೇಲೆ ದಾಳಿ ಮಾಡುತ್ತಾರೆ ಎಂಬ ಭಯದಿಂದ ನಾನು ಕಾವಲುಗಾರನನ್ನು ನೇಮಿಸಿದ್ದೆ. ಆದರೆ ಈಗ ಹೆದರುವುದಿಲ್ಲ’ ಎಂದು ಹೇಳಿದ್ದಾರೆ. ಸಾವಿನ ಬಗ್ಗೆ ಮಾತನಾಡಿರುವ ಅವರು, ‘ಜನರು ಹೇಗೆ ಸಾಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ನಿದ್ದೆಯಲ್ಲಿ ಇರುವಾಗಲೇ ಹೋಗುತ್ತಾರೆ, ಕೆಲವರು ಆಸ್ಪತ್ರೆಯಲ್ಲಿ ಸಾಯುತ್ತಾರೆ. ಆದರೆ ನನಗೆ ಸಾವಿನ ಬಗ್ಗೆ ಸ್ವಲ್ಪವೂ ಭಯವಿಲ್ಲ’ ಎಂದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ‘ಹಲವು ವರ್ಷಗಳ ಹಿಂದೆಯೇ ಪತಿಯಿಂದ ದೂರವಾದೆ. ಆದರೆ ನನ್ನ ಪತಿಯ ಬಗ್ಗೆಯಾಗಲಿ ಅಥವಾ ಅವರ ಕುಟುಂಬದವರ ಬಗ್ಗೆಯಾಗಲಿ ನನಗೆ ಯಾವುದೇ ಬೇಸರವಿಲ್ಲ. ನನಗೆ ಒಬ್ಬ ಮಗನಿದ್ದಾನೆ. ಅವನು ಬಾಲ್ಯದಿಂದಲೂ ನನ್ನ ತಾಯಿಯ ಜೊತೆ ಬೆಳೆದನು’ ಎಂದಿದ್ದಾರೆ. ಈ ಹಿಂದೆ, ಪಿಂಕ್ವಿಲ್ಲಾಗೆ ನೀಡಿದ್ದ ಸಂದರ್ಶನದಲ್ಲಿ, ಉಷಾ ಅವರು ತಮ್ಮ ಮಗ ತನ್ನ ಸಹೋದರನ ಮನೆಯಲ್ಲಿ ಬೆಳೆದ ಎಂದು ಹೇಳಿಕೊಂಡಿದ್ದರು. ‘ರಂಗಭೂಮಿಯಿಂದ ಬಿಡುವು ಮಾಡಿಕೊಂಡು ಸಮಯ ಸಿಕ್ಕಾಗ ಅವನನ್ನು ನೋಡಲು ಹೋಗುತ್ತಿದ್ದೆ. ಒಂದೇ ದಿನದಲ್ಲಿ ಹೆಚ್ಚು ಪ್ರದರ್ಶನಗಳು ಇರುತ್ತಿದ್ದರಿಂದ, ಮರಾಠಿ ನಾಟಕಗಳಿಗಾಗಿಯೇ ಎಲ್ಲಾ ಸಮಯವನ್ನು ವಿನಿಯೋಗಿಸುತ್ತಿದ್ದೆ’ ಎಂದಿದ್ದರು.ಬಾಲ್ಯದಿಂದಲೂ ಹಿಂಸಾತ್ಮಕ ಕುಟುಂಬದಲ್ಲಿ ಬೆಳೆದೆ ಎಂದಿರುವ ಉಷಾ, ‘ನಮ್ಮ ತಂದೆ ವಾಯುಪಡೆಯ ಅಧಿಕಾರಿಯಾಗಿದ್ದರು. ಆದರೆ ನಮ್ಮ ಕುಟುಂಬದಲ್ಲಿ ಅವರು ಹಿಂಸಾತ್ಮಕ ವ್ಯಕ್ತಿಯಾಗಿದ್ದರು. ಅವರ ಅತಿಯಾದ ಕೋಪದಿಂದಾಗಿ ನಾವೆಲ್ಲರೂ ಸದಾ ಭಯದಿಂದ ಬದುಕುತ್ತಿದ್ದೆವು. ಸಣ್ಣ ವಿಷಯಗಳಿಗೂ ಹೆಚ್ಚು ಕೋಪಗೊಳ್ಳುತ್ತಿದ್ದರು’ ಎಂದು ತಂದೆಯ ಬಗ್ಗೆ ಹೇಳಿಕೊಂಡಿದ್ದಾರೆ. ತಂದೆಯ ಅತಿರೇಕದ ಕೋಪವನ್ನು ನೆನಪಿಸಿಕೊಂಡ ನಟಿ, ‘ಒಮ್ಮೆ ಸಹೋದರನಿಗೆ ನಮ್ಮ ತಂದೆ ಹೊಡೆಯುತ್ತಿದ್ದರು. ಆಗ ನಾನು ತಡೆಯಲು ಹೋದೆ. ಆಗ ಚಾಕುವಿನಿಂದ ನನ್ನ ಮೇಲೂ ಸಿಟ್ಟು ತೀರಿಸಿಕೊಂಡರು. ಮರು ದಿನ ನಾಟಕ ಪ್ರದರ್ಶನವಿತ್ತು. ಗಾಯದ ನಡುವೆಯೂ ನಾಟಕದಲ್ಲಿ ಭಾಗಿಯಾದೆ’ ಎಂದು ನೆನಪನ್ನು ಮೆಲುಕು ಹಾಕಿದ್ದಾರೆ. ‘ಬಾಲ್ಯದಿಂದಲೂ ನಟಿಯಾಗಬೇಕೆಂಬ ಕನಸು ಕಂಡಿದ್ದೆ. ಆದರೆ ನನ್ನ ತಾಯಿ ಒಪ್ಪಲಿಲ್ಲ. ಅವರು ಶಿಕ್ಷಕಿಯಾಗಿದ್ದರು. ಅವರ ದೃಷ್ಟಿಕೋನದಲ್ಲಿ ಅವರು ಹೇಳಿದ್ದು ಸರಿಯೇ ಆಗಿತ್ತು. 4ನೇ ತರಗತಿಯಲ್ಲಿದ್ದಾಗ ನಟಿಸಲು ಆರಂಭಿಸಿದೆ. ಈಗ ನನಗೆ 80 ವರ್ಷ. ಇಂದಿಗೂ ನಟಿಸುತ್ತಿದ್ದೇನೆ’ ಎಂದು ನಟಿ ಹೇಳಿದ್ದಾರೆ. ಉಷಾ ನಾಡಕರ್ಣಿ, ಮರಾಠಿ, ಹಿಂದಿ ಸಿನಿಮಾ, ಟಿವಿ ಮತ್ತು ರಂಗಭೂಮಿಯಲ್ಲಿ ಸುಮಾರು 70 ವರ್ಷ ಕೆಲಸ ಮಾಡಿದ್ದಾರೆ. ತನಗೆ ಅರ್ಹವಾದ ಸಂಬಳ, ಗೌರವ ಸಿಗುತ್ತಿಲ್ಲ ಎಂದು ತಿಳಿದಾಗಲೂ ಆರ್ಥಿಕ ಒತ್ತಡದಿಂದಾಗಿ ಅನೇಕ ಯೋಜನೆಯಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿಯೂ ಹೇಳಿಕೊಂಡಿದ್ದಾರೆ.