ಕಣ್ಣಿಲ್ಲ, ಕಿವಿಯೂ ಕೇಳದು; ಅಂಗವಿಕಲರಿಗೆ ಮಾದರಿಯಾದ ಟಿ. ಪ್ರಭಾಕರನ್
ಬಿಗಿ ಭದ್ರತೆ, ಕಠಿಣ ನಿರ್ಬಂಧಗಳು, ಭಾರಿ ತಪಾಸಣೆ ಇರುವ ಸ್ಥಳಗಳಲ್ಲಿ ಸಂಚರಿಸುವುದು ಮತ್ತು ತಾವು ಹೋಗಬೇಕಾದಲ್ಲಿಗೆ ವಿಶ್ವಾಸದಿಂದ ತಲುಪುವುದು ಸಾಮಾನ್ಯರಿಗೆ ಸಾಮಾನ್ಯವೇ ಎನ್ನಬಹುದಾದ ಸಂಗತಿ. ಆದರೆ, ಕಣ್ಣು ಕಾಣದ, ಕಿವಿಯೂ ಕೇಳದವರಿಗೆ ಅದು ಅಷ್ಟು ಸುಲಭವಲ್ಲ. ಆದರೆ, ಟಿ. ಪ್ರಭಾಕರನ್ ಅವರಂತಹ ವ್ಯಕ್ತಿಗಳಿಗೆ ಇದೇನೂ ದೊಡ್ಡ ವಿಷಯವೇ ಅಲ್ಲ. ಅವರಿಗೆ ಕಣ್ಣು, ಕಿವಿ ಇಲ

ಬಿಗಿ ಭದ್ರತೆ, ಕಠಿಣ ನಿರ್ಬಂಧಗಳು, ಭಾರಿ ತಪಾಸಣೆ ಇರುವ ಸ್ಥಳಗಳಲ್ಲಿ ಸಂಚರಿಸುವುದು ಮತ್ತು ತಾವು ಹೋಗಬೇಕಾದಲ್ಲಿಗೆ ವಿಶ್ವಾಸದಿಂದ ತಲುಪುವುದು ಸಾಮಾನ್ಯರಿಗೆ ಸಾಮಾನ್ಯವೇ ಎನ್ನಬಹುದಾದ ಸಂಗತಿ. ಆದರೆ, ಕಣ್ಣು ಕಾಣದ, ಕಿವಿಯೂ ಕೇಳದವರಿಗೆ ಅದು ಅಷ್ಟು ಸುಲಭವಲ್ಲ. ಆದರೆ, ಟಿ. ಪ್ರಭಾಕರನ್ ಅವರಂತಹ ವ್ಯಕ್ತಿಗಳಿಗೆ ಇದೇನೂ ದೊಡ್ಡ ವಿಷಯವೇ ಅಲ್ಲ. ಅವರಿಗೆ ಕಣ್ಣು, ಕಿವಿ ಇಲ್ಲದಿದ್ದರೂ ಮೊಬೈಲ್ನಲ್ಲಿ ಗೂಗಲ್ ಮ್ಯಾಪ್ ತೆರೆದಿಟ್ಟುಕೊಂಡು ಸರಾಗವಾಗಿ ನಡೆದುಬಿಡುತ್ತಾರೆ.‘ಬಹು ಅಂಗಾಂಗ ವೈಕಲ್ಯವುಳ್ಳವರಿಗೆ ಮಾದರಿ’ ಎಂಬ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ಪ್ರಭಾಕರನ್, ಇತ್ತೀಚೆಗೆ ಪ್ರಮುಖ ಸಭೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಪ್ರಯಾಣಿಸಿದ್ದರು. ಅವರಿಗೆ, ದಾರಿ ತೋರಿಸಲು ಕುಟುಂಬದವರಾಗಲೀ, ದುಭಾಷಿಯಾಗಲೀ, ಸಹಾಯಕರಾಗಲೀ ಇರಲಿಲ್ಲ. ಅಂದುಕೊಂಡಲ್ಲಿಗೆ ಹೋಗಲು ಅವರಿಗೆ Google Maps ಹಾಗೂ ಅಪರಿಚಿತ ಸ್ಥಳದಲ್ಲಿ ಜನರೊಂದಿಗೆ ಸಂವಹನ ನಡೆಸಲು Google Translate ಸಾಕಿತ್ತು. ನೇರವಾಗಿ ತಮ್ಮ ಗುರಿ ತಲುಪಿ, ಸಭೆ ಮುಗಿಸಿ, ವಾಪಸ್ ತಮ್ಮ ವಾಸಸ್ಥಾನಕ್ಕೆ ಮರಳಿದ್ದರು. ಯಾರ ಸಹಾಯವನ್ನೂ ಕೇಳದೆ, ಸ್ವತಃ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿರುವುದು ಅವರಿಗೆ ಅತ್ಯಂತ ಸಮಾಧಾನಕರ ಮತ್ತು ಹೆಮ್ಮೆಯ ವಿಚಾರ.‘ತಂತ್ರಜ್ಞಾನ ನನಗೆ ಸ್ವಾತಂತ್ರ್ಯವನ್ನು ನೀಡಿದೆ’ ಎನ್ನುವ ಪ್ರಭಾಕರನ್, ‘ಈ ಹಿಂದೆ ಅಸಾಧ್ಯ ಎಂದುಕೊಂಡಿದ್ದ ಸಂಗತಿಗಳು ಇದೀಗ ನನ್ನ ಬದುಕಿನ ಭಾಗವೇ ಆಗಿವೆ’ ಎಂದು ಹೇಳಿಕೊಂಡಿದ್ದಾರೆ.ಅಂಗವೈಕಲ್ಯಗಳೊಂದಿಗೆ ಕಳೆದ ಬಾಲ್ಯದಂಡಪಾಣಿ ಹಾಗೂ ಗಣಂಬಾಳ್ ಎಂಬ ರೈತ ದಂಪತಿಯ ಮಗನಾಗಿ ಆಂಧ್ರಪ್ರದೇಶದಲ್ಲಿ ಜನಿಸಿದವರು ಪ್ರಭಾಕರನ್. ಶ್ರವಣದೋಷ ಇರುವುದು ಅವರಿಗೆ ಎಂಟು ವರ್ಷದವಾಗಿದ್ದಾಗ ಗೊತ್ತಾಯಿತು. ಕಣ್ಣಿನ ಜೊತೆಗೆ ಶ್ರವಣದೋಷವೂ ಇದ್ದದ್ದು, ಅವರ ಇಡೀ ಬಾಲ್ಯವನ್ನು ಆವರಿಸಿಕೊಂಡಿತ್ತು.ಈ ಎರಡೂ ದೋಷಗಳು ಅವರ ಬೆಳವಣಿಗೆ, ಸಂವಹನಕ್ಕೆ ಹಿನ್ನಡೆ ಹಾಗೂ ಪ್ರತಿಯೊಂದಕ್ಕೂ ಕುಟುಂಬವನ್ನೇ ಅವಲಂಬಿಸುವಂತೆ ಮಾಡಿದ್ದವು. ಈ ರೀತಿಯ ಸಮಸ್ಯೆಗಳಿರುವ ಮಕ್ಕಳಿಗಾಗಿ ಇರುವ ಸೇವೆಗಳ ಸೌಕರ್ಯಗಳ ಬಗ್ಗೆ ಪ್ರಭಾಕರನ್ ಕುಟುಂಬದವರಿಗೆ ಅಷ್ಟೇನೂ ಅರಿವಿರಲಿಲ್ಲ.Sense International India ಸಂಸ್ಥೆಯ ಸಮುದಾಯ-ಆಧಾರಿತ ಪುನರ್ವಸತಿ (CBR) ಕಾರ್ಯಕರ್ತರೊಬ್ಬರು ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಪ್ರಭಾಕರನ್ ಅವರನ್ನು ಭೇಟಿಯಾಗಿದ್ದರು. ಆಗ, 6 ವರ್ಷದವರಾಗಿದ್ದ ಪ್ರಭಾಕರನ್ ಬದುಕಿನಲ್ಲಿ ಒಂದಿಷ್ಟು ಬದಲಾವಣೆಗಳು ಆರಂಭವಾದದ್ದು ಆಗಲೇ.‘Sense..’ ಸಂಸ್ಥೆಯ ಮಾರ್ಗದರ್ಶನ ಹಾಗೂ ಸ್ನೇಹಿತರು, ಕುಟುಂಬದವರ ಪ್ರೋತ್ಸಾಹದ ಫಲವಾಗಿ ಅವರ ಸಂವಹನ ತರಬೇತಿ ನಿಧಾನವಾಗಿ ಆರಂಭವಾಯಿತು. ಸಂವಹನ ಸಾಮರ್ಥ್ಯ ಸುಧಾರಿಸಿದಂತೆ ಅವರ ಆತ್ಮವಿಶ್ವಾಸ ಹೆಚ್ಚಾಯಿತು. ಸ್ವತಂತ್ರ ಪ್ರಯತ್ನಗಳಿಗೆ ಒಡ್ಡಿಕೊಳ್ಳಲಾರಂಭಿಸಿದರು.ತಂತ್ರಜ್ಞಾನವೇ ದುಭಾಷಿ, ಮಾರ್ಗದರ್ಶಿಸ್ನೇಹಿತನ ಸಹಾಯ ಮತ್ತು ಮಾರ್ಗದರ್ಶನದಿಂದ Google Maps ಮತ್ತು Google Translate ಬಳಸುವುದನ್ನು ಕಲಿತ ಪ್ರಭಾಕರನ್, ಅಲ್ಲಿಂದಾಚೆಗೆ ಹಿಂತಿರುಗಿ ನೋಡಿದ್ದೇ ಇಲ್ಲ. ಅಂತಹ ಸಾಧನಗಳ ಬಳಕೆಯನ್ನು ಹೆಚ್ಚು ಮಾಡಿಕೊಂಡರು. ಸ್ಮಾರ್ಟ್ಫೋನ್ಗಳಲ್ಲಿನ ಸ್ಕ್ರೀನ್ ರೀಡರ್ಗಳು, ಧ್ವನಿ ಸಹಾಯ, ಭಾಷಣವನ್ನು ಪಠ್ಯಕ್ಕೆ ಮತ್ತು ಪಠ್ಯವನ್ನು ಭಾಷಣವಾಗಿರುವ ಆ್ಯಪ್ಗಳು, ಮುದ್ರಿತ ದಾಖಲೆಗಳನ್ನು ಗಟ್ಟಿಯಾಗಿ ಓದುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ಆ್ಯಪ್, ಇಚ್ಛೆಯಂತೆ ನಗರಗಳಲ್ಲಿ ಸಂಚರಿಸಲು ನೆರವಾಗುವ ಜಿಪಿಎಸ್ ಆಧಾರಿತ ನ್ಯಾವಿಗೇಷನ್ ಆ್ಯಪ್ ಬಳಸಲಾರಂಭಿಸಿದರು.ಈ ತಂತ್ರಜ್ಞಾನಗಳೊಂದಿಗೆ, ಸಮಯ ಕಳೆದಂತೆ ವೈದ್ಯಕೀಯ ಚಿಕಿತ್ಸೆಗಳೂ ಅವರಿಗೆ ಇನ್ನಷ್ಟು ನೆರವು ನೀಡಿದವು. ಕಣ್ಣಿನ ಶಸ್ತ್ರಚಿಕಿತ್ಸೆ ಬಳಿಕ ಅವರ ದೃಷ್ಟಿ ಸ್ವಲ್ಪ ಸುಧಾರಿಸಿದೆ. ಶ್ರವಣ ಯಂತ್ರವಿಲ್ಲದೆಯೂ ಅಲ್ಪ ಸ್ವಲ್ಪ ಕೇಳುವಷ್ಟು ಚೇತರಿಕೆ ಕಂಡಿದೆ.ಸದ್ಯ ಯೋಜನಾ ಕ್ಷೇತ್ರ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಪ್ರಭಾಕರನ್, ದಾಖಲೆಗಳು, ಇಮೇಲ್ಗಳನ್ನು ಓದಲು ಪಠ್ಯ ಮತ್ತು ಚಿತ್ರಗಳನ್ನು ದೊಡ್ಡದಾಗಿಸಲು ZoomText ಆ್ಯಪ್ ಬಳಸುತ್ತಿದ್ದಾರೆ. ಸಹೋದ್ಯೋಗಿಗಳು ಹಾಗೂ ಗ್ರಾಹಕರೊಂದಿಗೆ ದಾಖಲೆಗಳನ್ನು, ಸಂದೇಶ ವಿನಿಮಯ ಮಾಡಿಕೊಳ್ಳಲು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಬರಹ ರೂಪದಲ್ಲಿರುವ ಸಂದೇಶಗಳನ್ನು ಮತ್ತೊಬ್ಬರ ನೆರವಿಲ್ಲದೆ ಅರ್ಥ ಮಾಡಿಕೊಳ್ಳಲು ‘ಟೆಕ್ಸ್ಟ್ ಟು ಸ್ಪೀಚ್’ ಅವಲಂಬಿಸಿದ್ದಾರೆ.‘ಪ್ರಭಾಕರನ್ ಗಮನಾರ್ಹವಾಗಿ ಬದಲಾಗಿದ್ದಾರೆ’ ಎಂಬುದಾಗಿ ಅವರ ಕುಟುಂಬದವರು ಹೇಳುತ್ತಾರೆ. ‘ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಸಾಧ್ಯತೆಯು ಅವರಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ತಂದಿದೆ. ಸ್ವಾತಂತ್ರ್ಯ ಹಾಗೂ ಯಶಸ್ಸನ್ನೂ ತಂದುಕೊಟ್ಟಿದೆ’ ಎಂದಿದ್ದಾರೆ.ರಾಷ್ಟ್ರೀಯ ಮನ್ನಣೆಭಾರತ ಸರ್ಕಾರವು ಪ್ರಭಾಕರನ್ ಅವರನ್ನು ‘ಬಹು ಅಂಗಾಂಗ ವೈಕಲ್ಯವುಳ್ಳವರಿಗೆ ಮಾದರಿ’ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು 2021ರಲ್ಲಿ ನೀಡಿದೆ. ಇದು ಅವರ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇದು, ಅಂಗವಿಕಲರ ಹಕ್ಕುಗಳು ಹಾಗೂ ವ್ಯವಸ್ಥೆಯಲ್ಲಿ ಅಂತಹ ವ್ಯಕ್ತಿಗಳನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಅವರು ನೀಡಿರುವ ಕೊಡುಗೆಗೆ ಸಂದ ಗೌರವವಾಗಿದೆ.‘ಡಿಜಿಟಲ್ ಸಾಧನಗಳ ಪ್ರವೇಶ ಸಾಧ್ಯವಾದದ್ದು ನನ್ನ ಬದುಕನ್ನೇ ಬದಲಿಸಿದೆ. ತಂತ್ರಜ್ಞಾನವು ಸಂವಹನ ಸಾಧಿಸಲು, ಸ್ವತಂತ್ರವಾಗಿ ಪ್ರಯಾಣಿಸಲು, ಮಾಹಿತಿ ವಿನಿಮಯಕ್ಕೆ, ಆತ್ಮವಿಶ್ವಾಸದಿಂದ ವೃತ್ತಿಪರ ಕೆಲಸ ಮಾಡಲು ನೆರವಾಗಿದೆ. ದೃಕ್–ಶ್ರವಣ ದೋಷವಿರುವ ಪ್ರತಿಯೊಬ್ಬರಿಗೂ ಸಹಾಯಕ ತಂತ್ರಜ್ಞಾನಗಳು ಮತ್ತು ಸೂಕ್ತ ತರಬೇತಿ ಸಿಗುವಂತಾಗಬೇಕು. ಅದರಿಂದ ಅಂತಹ ವ್ಯಕ್ತಿಗಳು ಸ್ವಾವಲಂಬಿ ಜೀವನ ನಡೆಸಲು ಸಾಧ್ಯ. ಸಮಾಜದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಾಧ್ಯ’ ಎಂದು ಪ್ರತಿಪಾದಿಸಿದ್ದಾರೆ.ಹಾಗೆಯೇ, ‘ಗುರಿಗಳನ್ನು ಸಾಧಿಸಲು ಅಂಗವೈಕಲ್ಯವು ಯಾರೊಬ್ಬರಿಗೂ ಅಡ್ಡಿಯಾಗಬಾರದು ಎಂಬುದಕ್ಕೆ ತಮ್ಮ ಜೀವನವೇ ಸಾಕ್ಷಿ’ ಎಂದಿದ್ದಾರೆ.