ಸಿರವಾರ | ಹೆಚ್ಚುವರಿ ಪ್ರಭಾರ: ಇಲಾಖೆ ಆದೇಶಕ್ಕೆ ಆಕ್ರೋಶ
ಸಿರವಾರ: ಶಿಕ್ಷಣ ಇಲಾಖೆಯ ಒಂದು ಆದೇಶದಿಂದಾಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 143 ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಬಂದಿದೆ. ಮೂವರು ಕಾಯಂ ಉಪನ್ಯಾಸಕರಲ್ಲಿ ಇಬ್ಬರನ್ನು ವಾರಕ್ಕೆ ಮೂರು ದಿನ ಮಾನ್ವಿ ಕಾಲೇಜಿಗೆ ಹೆಚ್ಚುವರಿ ಪ್ರಭಾರಿಯಾಗಿ ನೀಡಿರುವುದು ಪಾಲಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.2011ರಲ್ಲಿ ಕೇವಲ 5 ವಿದ್ಯಾರ್ಥಿಗಳೊಂದಿಗ

ಸಿರವಾರ: ಶಿಕ್ಷಣ ಇಲಾಖೆಯ ಒಂದು ಆದೇಶದಿಂದಾಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 143 ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಬಂದಿದೆ. ಮೂವರು ಕಾಯಂ ಉಪನ್ಯಾಸಕರಲ್ಲಿ ಇಬ್ಬರನ್ನು ವಾರಕ್ಕೆ ಮೂರು ದಿನ ಮಾನ್ವಿ ಕಾಲೇಜಿಗೆ ಹೆಚ್ಚುವರಿ ಪ್ರಭಾರಿಯಾಗಿ ನೀಡಿರುವುದು ಪಾಲಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.2011ರಲ್ಲಿ ಕೇವಲ 5 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಸ್ತುತ ಪ್ರಥಮ ಪಿಯುನಲ್ಲಿ 90 ಮತ್ತು ದ್ವಿತೀಯ ಪಿಯುನಲ್ಲಿ 53 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಭೌತಶಾಸ್ತ್ರ ಉಪನ್ಯಾಸಕ ಫರೀದ್ ಮತ್ತು ಗಣಿತ ಉಪನ್ಯಾಸಕಿ ನಜೀಯಾ ಬೇಗಂ ಅವರನ್ನು ಮಾನ್ವಿಗೆ ಹೆಚ್ಚುವರಿಯಾಗಿ ಕಳುಹಿಸಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ತರಗತಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.7 ವಿದ್ಯಾರ್ಥಿಗಳಿಗಾಗಿ 143 ಮಂದಿಯ ಭವಿಷ್ಯಕ್ಕೆ ಕುತ್ತು: ಮಾನ್ವಿ ವಿಜ್ಞಾನ ಕಾಲೇಜಿನಲ್ಲಿ ಕೇವಲ 7 ವಿದ್ಯಾರ್ಥಿಗಳಿರುವಾಗ, ಇಲ್ಲಿನ 143 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಅಪಾಯಕ್ಕೆ ದೂಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪಾಲಕರು ಪ್ರಶ್ನಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ ಕಾಲೇಜು ಜಿಲ್ಲೆಗೆ ಎರಡನೇ ಸ್ಥಾನದಲ್ಲಿ ಫಲಿತಾಂಶ ಪಡೆಯುತ್ತಿರುವುದು ಉಪನ್ಯಾಸಕರ ಶ್ರಮದ ಫಲವಾಗಿದೆ. ವರ್ಗಾವಣೆ, ಬಡ್ತಿ ಅವಕಾಶವಿದ್ದರೂ ಊರಿನ ಕಾಲೇಜಿನ ಮೇಲಿನ ಅಭಿಮಾನದಿಂದ ಉಪನ್ಯಾಸಕ ಫರೀದ್ ಅವರು ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪಾಲಕರು ಹೇಳಿದರು.ಆರಂಭದಲ್ಲಿ ಸರ್ಕಾರಿ ಕಾಲೇಜು ಬೇಡ ಎಂಬ ಪಾಲಕರ ಮನಸ್ಥಿತಿಯನ್ನು ಬದಲಾಯಿಸಿ, ಉಪನ್ಯಾಸಕ ಫರೀದ್ ಅವರು ಕಾಲೇಜು ಪ್ರಾರಂಭದಿಂದ ಇಲ್ಲಿಯವರೆಗೆ ನಿರಂತರವಾಗಿ ಪ್ರಥಮ ಪಿಯು ವಿದ್ಯಾರ್ಥಿನಿಯರಿಗೆ ತಮ್ಮ ಸ್ವಂತ ಹಣದಲ್ಲಿ ನೋಂದಣಿ ಶುಲ್ಕ ಕಟ್ಟಿ ಕರೆತರುತ್ತಿದ್ದಾರೆ. ಇಂತಹ ಉತ್ತಮ ಸ್ಥಿತಿಯ ಕಾಲೇಜಿಗೆ ಈ ಆದೇಶ ನೀಡಿರುವುದು ಖಂಡನೀಯ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.ದೇವೇಂದ್ರಯ್ಯ ಶೆಟ್ಟಿ, ಪಾಲಕ, ಸಿರವಾರಉಪನ್ಯಾಸಕರ ಉತ್ತಮ ಕಾರ್ಯದಿಂದಾಗಿ ನಮ್ಮ ಮಕ್ಕಳನ್ನು ಖಾಸಗಿ ಕಾಲೇಜು ಬಿಟ್ಟು ಸರ್ಕಾರಿ ಕಾಲೇಜಿಗೆ ಸೇರಿಸಿದ್ದೇವೆ. ಶಿಕ್ಷಣ ಇಲಾಖೆ ಈ ರೀತಿಯ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕುಅಜಿತ ಹೊನ್ನಟಗಿ, ಪಾಲಕ, ಪ.ಪಂ ಸದಸ್ಯ, ಸಿರವಾರಕೂಡಲೇ ಇಲಾಖೆ ಆದೇಶ ಹಿಂಪಡೆದು ಉಪನ್ಯಾಸಕರ ಹೆಚ್ಚುವರಿ ಕೆಲಸವನ್ನು ತಡೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260806-32-2051939748