ಜೈಲಿಗಟ್ಟಲಿ, ಹತ್ಯೆ ಮಾಡಲಿ.. ಬಾಂಗ್ಲಾಕ್ಕೆ ಹಿಂದಿರುಗುವುದು ನಿಶ್ಚಿತ: ಹಸೀನಾ
ನವದೆಹಲಿ: ‘ಭವಿಷ್ಯದಲ್ಲಿ ನನಗೇನಾದರೂ ಚಿಂತೆಯಿಲ್ಲ, ನಾನು ನನ್ನ ದೇಶಕ್ಕೆ ಹಿಂತಿರುಗುವುದು ನಿಶ್ಚಿತ’ ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.ಇದೇ ಮೊದಲ ಬಾರಿಗೆ ವರ್ಚುವಲ್ ಆಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.‘ಬರುವ ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಕ್ಕೆ ನಾನು ನಿಶ್ಚಯಿಸಿದ್ದೇನೆ. ದೇಶದಲ್ಲಿ ಪ

ನವದೆಹಲಿ: ‘ಭವಿಷ್ಯದಲ್ಲಿ ನನಗೇನಾದರೂ ಚಿಂತೆಯಿಲ್ಲ, ನಾನು ನನ್ನ ದೇಶಕ್ಕೆ ಹಿಂತಿರುಗುವುದು ನಿಶ್ಚಿತ’ ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.ಇದೇ ಮೊದಲ ಬಾರಿಗೆ ವರ್ಚುವಲ್ ಆಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.‘ಬರುವ ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಕ್ಕೆ ನಾನು ನಿಶ್ಚಯಿಸಿದ್ದೇನೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ನ್ಯಾಯವನ್ನು ಮರುಸ್ಥಾಪಿಸುವುದಕ್ಕಾಗಿ ಬಂಧನ ಅಥವಾ ಮರಣ ದಂಡನೆ ಎದುರಿಸುವುದಕ್ಕೂ ನಾನು ಸಿದ್ಧಳಾಗಿದ್ದೇನೆ’ ಎಂದು ಹೇಳಿದ್ದಾರೆ.‘ಅಧಿಕಾರದ ಆಸೆಯಿಂದಾಗಿ ನಾನು ಬಾಂಗ್ಲಾದೇಶಕ್ಕೆ ವಾಪಸು ಹೋಗಲು ನಿರ್ಧರಿಸಿಲ್ಲ. ದೇಶವನ್ನು ಅಭಿವೃದ್ಧಿ, ಜಾತ್ಯತೀತ ತತ್ವದ ಹಳಿಗೆ ಮರಳಿ ತರುವುದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದಿದ್ದಾರೆ.‘ದೇಶಕ್ಕೆ ಮರಳಿದ ಬಳಿಕ ಅವರು ನನ್ನನ್ನು ಜೈಲಿಗೆ ಅಟ್ಟಬಹುದು ಅಥವಾ ಹತ್ಯೆ ಮಾಡಬಹುದು. ಆದರೆ, ನನ್ನ ಜನರೊಂದಿಗೇ ಇರುವುದಕ್ಕಾಗಿ ನಾನು ಬಾಂಗ್ಲಾದೇಶಕ್ಕೆ ಮರಳುತ್ತಿದ್ದೇನೆ’ ಎಂದು ಹೇಳಿದ್ದಾರೆ.‘ಡಿಸೆಂಬರ್ ನಮ್ಮ ವಿಜಯದ ತಿಂಗಳು. ಆದ್ದರಿಂದ ನಾನು ಡಿಸೆಂಬರ್ ತಿಂಗಳಿನಲ್ಲಿಯೇ ಹಿಂತಿರುಗಲು ಬಯಸುತ್ತೇನೆ. ಮುಂದೆ ಎದುರಾಗಬಹುದಾದ ಸವಾಲುಗಳ ಬಗ್ಗೆ ನನಗೆ ತಿಳಿದಿದೆ’ ಎಂದು ಹೇಳಿದ್ದಾರೆ.ಇದೇ ವೇಳೆ ತಂದೆ ಶೇಖ್ ಮುಜಿಬುರ್ ರಹಮಾನ್ ನೆನೆದು ಭಾವುಕರಾದ ಅವರು, ‘ಬಾಂಗ್ಲಾ ವಿಮೋಚನಾ ಸಂದರ್ಭದಲ್ಲಿ ಹುತಾತ್ಮರಾದ ಎಲ್ಲರಿಗೂ ಗೌರವ ನಮನ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.