ಜಮ್ಮು ಮತ್ತು ಕಾಶ್ಮೀರಕ್ಕೆ ಕೂಡಲೇ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಿ: ಕಾಂಗ್ರೆಸ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಕೂಡಲೇ ಬೇಷರತ್ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಅಲ್ಲಿನ ಸರ್ಕಾರಕ್ಕೆ ಸಂಪೂರ್ಣ ಸಾಂವಿಧಾನಿಕ ಸ್ಥಾನಮಾನ ಸಿಗಬೇಕೆಂದು ಅದು ಹೇಳಿದೆ.ಜಮ್ಮು ಮತ್ತು ಕಾಶ್ಮೀರದ ಜನರಿಗೆ ಭೂಮಿ ಮತ್ತು ಸಾರ್ವಜನಿಕ ಉದ್ಯೋಗಕ್ಕಾಗಿ ಸಾಂವಿಧಾನಿಕ ರಕ್ಷಣೆಯನ್ನು ಒದಗಿಸುವುದರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಕೂಡಲೇ ಬೇಷರತ್ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಅಲ್ಲಿನ ಸರ್ಕಾರಕ್ಕೆ ಸಂಪೂರ್ಣ ಸಾಂವಿಧಾನಿಕ ಸ್ಥಾನಮಾನ ಸಿಗಬೇಕೆಂದು ಅದು ಹೇಳಿದೆ.ಜಮ್ಮು ಮತ್ತು ಕಾಶ್ಮೀರದ ಜನರಿಗೆ ಭೂಮಿ ಮತ್ತು ಸಾರ್ವಜನಿಕ ಉದ್ಯೋಗಕ್ಕಾಗಿ ಸಾಂವಿಧಾನಿಕ ರಕ್ಷಣೆಯನ್ನು ಒದಗಿಸುವುದರ ಜೊತೆಗೆ ಭಾರತದ ಸಾಂವಿಧಾನಿಕ ಚೌಕಟ್ಟು, ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.370ನೇ ವಿಧಿಯಡಿ ಸ್ಥಾನಮಾನ ರದ್ದುಪಡಿಸಿ ಹಿಂದಿನ ರಾಜ್ಯವನ್ನು ವಿಭಜಿಸಿದ ಏಳು ವರ್ಷಗಳ ನಂತರವೂ ಜಮ್ಮು ಮತ್ತು ಕಾಶ್ಮೀರದ ಜನರು ಇನ್ನೂ ಪೂರ್ಣ ರಾಜ್ಯ ಸ್ಥಾನಮಾನಕ್ಕಾಗಿ ಕಾಯುತ್ತಿದ್ದಾರೆ ಎಂದು ಅದು ಹೇಳಿದೆ.ಏಳು ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಪೂರ್ಣ ಪ್ರಮಾಣದ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗಿಳಿಸಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಕೆಳದರ್ಜೆಗಿಳಿಯುವಿಕೆಯ ಯತ್ನ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸೀರ್ ಹುಸೇನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.‘ಈ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ 4 ಹಂತದ ಮಾರ್ಗಸೂಚಿ ಪ್ರಕಟಿಸಿತ್ತು. ಮರುಸಂಯೋಜನೆ, ಮರುವಿಂಗಡಣೆ, ಚುನಾವಣೆ ಮತ್ತು ರಾಜ್ಯದ ಸ್ಥಾನಮಾನಗಳಂತಹ 4 ವಿಷಯಗಳನ್ನು ಪ್ರಸ್ತಾಪಿಸಿತ್ತು. ಕೊನೆಯದನ್ನು ಇನ್ನೂ ಈಡೇರಿಸಿಲ್ಲ’ ಎಂದು ಅವರು ಹೇಳಿದ್ದಾರೆ.ಸಂಸತ್ತಿನ ಕಲಾಪ, ಸುಪ್ರೀಂ ಕೋರ್ಟ್ಗೆ ಸಲ್ಲಿಕೆ, ಚುನಾವಣಾ ರ್ಯಾಲಿಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವುದಾಗುವುದಾಗಿ 2019ರಿಂದ ಈವರೆಗೆ ಸುಮಾರು 7 ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ಹುಸೇನ್ ತಿಳಿಸಿದ್ದಾರೆ.