ಪ್ಯಾರಾ ಅಥ್ಲೀಟ್ ಶಿಲ್ಪಾಗೆ ₹ 15 ಲಕ್ಷ , ನೌಕರಿ
ಬೆಂಗಳೂರು: ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿರುವ ಕರ್ನಾಟಕದ ಕೆ.ಎಸ್. ಶಿಲ್ಪಾ ಅವರು ಅಮೋಘ ಸಾಧನೆ ಮಾಡಿದ್ದಾರೆ. ಅವರಿಗೆ ₹ 15 ಲಕ್ಷ ಬಹುಮಾನ ಮತ್ತು ರಾಜ್ಯ ಸರ್ಕಾರದ ಬಿ ಗುಂಪಿನ ನೌಕರಿ ನೀಡಿ ಗೌರವಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಗುರುವಾರ

ಬೆಂಗಳೂರು: ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿರುವ ಕರ್ನಾಟಕದ ಕೆ.ಎಸ್. ಶಿಲ್ಪಾ ಅವರು ಅಮೋಘ ಸಾಧನೆ ಮಾಡಿದ್ದಾರೆ. ಅವರಿಗೆ ₹ 15 ಲಕ್ಷ ಬಹುಮಾನ ಮತ್ತು ರಾಜ್ಯ ಸರ್ಕಾರದ ಬಿ ಗುಂಪಿನ ನೌಕರಿ ನೀಡಿ ಗೌರವಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಗುರುವಾರ ಶಿಲ್ಪಾ ಅವರನ್ನು ಅಭಿನಂದಿಸಿ ‘ಎಕ್ಸ್’ ಸಂದೇಶ ಹಾಕಿರುವ ಸಚಿವರು, ‘ಶಿಲ್ಪಾ ಅವರು ಇನ್ನೂ ಉನ್ನತ ಸಾಧನೆಗಳನ್ನು ಮಾಡಲು ನಮ್ಮ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದಿದ್ದಾರೆ. ಗ್ಲಾಸ್ಗೊದಿಂದ ನಗರಕ್ಕೆ ಮರಳಿದ ಶಿಲ್ಪಾ, ಮುಖ್ಯ ಕೋಚ್ ಸತ್ಯನಾರಾಯಣ ಮತ್ತು ನೆರವು ಸಿಬ್ಬಂದಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಲಾಖೆಯ ವತಿಯಿಂದ ಸ್ವಾಗತಿಸಲಾಯಿತು. ನಂತರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್, ‘ಶಿಲ್ಪಾ ಅವರು ತಮ್ಮ ಅಮೋಘ ಸಾಧನೆಯಿಂದ ಕರ್ನಾಟಕ ಮತ್ತು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅವರ ಸಾಧನೆಯು ಪ್ರೇರಣೆಯಾಗಿದೆ’ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್ ಮಾತನಾಡಿ, ‘ಶಿಲ್ಪಾ ಅವರ ಈ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಈಗಾಗಲೇ ಗ್ಲಾಸ್ಗೋನಲ್ಲಿ ನಡೆದ 2026 ರ ಪ್ಯಾರಾ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ 8 ಜನರಿಗೆ ಸರ್ಕಾರದ ವತಿಯಿಂದ ತಲಾ ₹ 5 ಲಕ್ಷ ನೀಡಲಾಗಿದೆ’ ಎಂದರು. ಗೌರವ ಸ್ವೀಕರಿಸಿದ ಶಿಲ್ಪಾ, ‘ನನಗೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರ ಮತ್ತು ಸಂಸ್ಥೆಗಳಿಗೆ, ತರಬೇತುದಾರರಿಗೆ ಆಭಾರಿಯಾಗಿದ್ದೇನೆ’ ಎಂದರು. ಇದೇ ಸಂದರ್ಭದಲ್ಲಿ ತರುಬೇತುದಾರರಾದ ರಾಘವೇಂದ್ರ, ಸತ್ಯ ನಾರಾಯಣ ಹಾಗೂ ಪುಷ್ಪಾ ನಿರಂಜನ ಪ್ರಸಾದ್ ಅವರನ್ನು ಸಹ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಂತರರಾಷ್ಟ್ರೀಯ ಕೋಚ್ ಎಸ್ ಡಿ ಈಶನ್, ಕ್ರೀಡಾಪಟುಗಳಾದ ಎಮ್ ಮಹಾದೇವ್, ಅರ್ಜುನ್ ಹಾಲಪ್ಪ ಹಾಜರಿದ್ದರು.