ಸಾರ್ವಜನಿಕ ಸಾರಿಗೆ: ಹೆಣ್ಣು ಸುರಕ್ಷಿತಳೆ?
ದೆಹಲಿಯ ಸಾರ್ವಜನಿಕ ಸಾರಿಗೆ ವಾಹನದಲ್ಲಿ, ಇಬ್ಬರು ಪುರುಷರ ನಡುವೆ ಹುಡುಗಿಯೊಬ್ಬಳು ಸಿಕ್ಕಿಹಾಕಿಕೊಂಡು ನಲುಗಿದ ವಿಡಿಯೊ ಇತ್ತೀಚೆಗೆ ವೈರಲ್ ಆಯಿತು. ಪುರುಷ ಸ್ಪರ್ಶದಿಂದ ಆ ಯುವತಿ ಹಿಂಸೆ ಅನುಭವಿಸುತ್ತಿದ್ದ ವಿಡಿಯೊ ಈಗೀಗ ಸಾರ್ವಜನಿಕ ವಲಯದಲ್ಲಿ ಪ್ರತಿ ಹೆಣ್ಣು ಎದುರಿಸುತ್ತಿರುವ ಸಂಕಟದ ರೂಪಕದಂತೆ ಕಾಣಿಸಿತು.ಈಗೀಗ ಜನಸಂದಣಿ ಸೇರುವ ಬಹುತೇಕ ಜಾಗಗಳಲ್ಲಿ ಹೆಣ್ಣು ಮಾನಸಿ

ದೆಹಲಿಯ ಸಾರ್ವಜನಿಕ ಸಾರಿಗೆ ವಾಹನದಲ್ಲಿ, ಇಬ್ಬರು ಪುರುಷರ ನಡುವೆ ಹುಡುಗಿಯೊಬ್ಬಳು ಸಿಕ್ಕಿಹಾಕಿಕೊಂಡು ನಲುಗಿದ ವಿಡಿಯೊ ಇತ್ತೀಚೆಗೆ ವೈರಲ್ ಆಯಿತು. ಪುರುಷ ಸ್ಪರ್ಶದಿಂದ ಆ ಯುವತಿ ಹಿಂಸೆ ಅನುಭವಿಸುತ್ತಿದ್ದ ವಿಡಿಯೊ ಈಗೀಗ ಸಾರ್ವಜನಿಕ ವಲಯದಲ್ಲಿ ಪ್ರತಿ ಹೆಣ್ಣು ಎದುರಿಸುತ್ತಿರುವ ಸಂಕಟದ ರೂಪಕದಂತೆ ಕಾಣಿಸಿತು.ಈಗೀಗ ಜನಸಂದಣಿ ಸೇರುವ ಬಹುತೇಕ ಜಾಗಗಳಲ್ಲಿ ಹೆಣ್ಣು ಮಾನಸಿಕವಾಗಿ ಮುದುಡಿ ಹೋಗುತ್ತಿದ್ದಾಳೆ. ಯಾರು ಅನುಚಿತವಾಗಿ ಸ್ಪರ್ಶಿಸುತ್ತಾರೋ ಎನ್ನುವ ಆತಂಕ. ಸರ್ಕಾರಿ ಬಸ್ಗಳಲ್ಲಿ ಉಚಿತ ಪಯಣದ ಅವಕಾಶವಿದ್ದರೂ, ಹಣ ನೀಡಿ ಖಾಸಗಿ ಬಸ್ಗೆ ಬರುವ ನನ್ನ ಮಹಿಳಾ ಸಹೋದ್ಯೋಗಿಯನ್ನು ‘ನೀವು ಯಾಕೆ ಹೀಗೆ?’ ಎಂದು ಕೇಳಿದೆ. ‘ಈಗೀಗ ಬಸ್ಗಳು ತೀರಾ ರಶ್... ಅದನ್ನೇ ನೆವ ಮಾಡಿಕೊಂಡು ಗಂಡಸರು ದೇಹ ತಡವುತ್ತಾರೆ. ಹೇಳಲು ಹೇಸಿಗೆಯಾಗುತ್ತದೆ. ಬಹಳ ಹಿಂಸೆ ಸರ್ ಇದು...’ ಎಂದಿದ್ದರು.ಜನಜಂಗುಳಿಯಲ್ಲಿ ಪುರುಷರ ನಡುವೆ ಸಿಕ್ಕಿಹಾಕಿಕೊಳ್ಳು ವಲ್ಲಿ ‘ಆಕೆ’ಯ ದೇಹ ಮಾತ್ರ ಅಲ್ಲಿರುವುದಿಲ್ಲ. ಇಡೀ ಹೆಣ್ಣಿನ ಕುಲ ಇರುತ್ತದೆ. ಪುರುಷ ಅಬ್ಬರದ ಅಸೂಕ್ಷ್ಮ ಕಬಂಧಬಾಹುಗಳು ಅವಳನ್ನು ಕಾಡುತ್ತವೆ. ಇಲ್ಲಿ ಶೋಷಣೆಗೆ ಒಳಗಾಗುವುದು ಬರೀ ಚರ್ಮವಲ್ಲ. ಚರ್ಮದೊಳಗಿರುವ ಆತ್ಮಗೌರವ. ಪ್ರತಿ ಅನಗತ್ಯ ಸ್ಪರ್ಶವೂ ಅವಳ ಅಸ್ತಿತ್ವದ ಮೇಲೆ ದಾಳಿ ಮಾಡುತ್ತದೆ.ಸಾರ್ವಜನಿಕ ಸಾರಿಗೆಯ ಇಕ್ಕಟ್ಟಾದ ಜಾಗದಲ್ಲಿ ಅವಳು ಪಡುವ ಸಂಕಟ, ಹೊರಹಾಕಲಾಗದೆ ಸೋಲುವ ಆಕ್ರೋಶ ಮತ್ತು ಶೋಚನೀಯ ಅಸಹಾಯಕತೆಗಳು ಅವಳನ್ನು ಮತ್ತಷ್ಟು ಕೊಲ್ಲುತ್ತವೆ. ಜನಸಂದಣಿಗೆ ಒಂದು ಸಾಮೂಹಿಕ ಅಸೂಕ್ಷ್ಮತೆ ಇರುತ್ತದೆ. ಇದು ಗಂಡಸಿನ ಇಂತಹ ಹಲವು ವಿಕೃತಿಗೆ ಧೈರ್ಯ ಕೊಡುತ್ತದೆ. ‘ಜಾಗವಿಲ್ಲ, ರಶ್ ಇದೆ’ ಇದೊಂದು ನೆಪವಾಗಿಯೂ, ಅಸ್ತ್ರವಾಗಿಯೂ ಬಳಕೆಯಲ್ಲಿದೆ. ಈ ರಶ್ ಅನ್ನೋದು ಅವರಿಗೆ ಕಾನೂನು ಭಯದಿಂದ ಪಾರಾಗಲು ಇರುವ ಅಸ್ತ್ರ ಅನ್ನುವಷ್ಟು ಈಗೀಗ ಮೈ–ಕೈ ಮುಟ್ಟುವುದು ಸುಲಭವಾಗಿ ಹೋಗಿದೆ.‘ಈ ಸೊಂಟಗಳು ಮುಕ್ತವಾಗಿವೆ, ಅವುಗಳನ್ನು ಯಾರೂ ಬಂಧಿಸಿಡಲು ಸಾಧ್ಯವಿಲ್ಲ. ಅವು ಸಮಾಜದ ಪುಟ್ಟ ಜಾಗದಲ್ಲಿ ಇಕ್ಕಟ್ಟಾಗಿ ಕೂರಲಾರವು, ಅವು ತಮ್ಮದೇ ಆದ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ...’ ಎನ್ನುತ್ತಾಳೆ ಅಮೆರಿಕದ ಕಪ್ಪುವರ್ಣೀಯ ಕವಯಿತ್ರಿ ಲೂಸಿಲ್ಲೆ ಕ್ಲಿಫ್ಟನ್.ನಗರಗಳು ಬೆಳೆಯುತ್ತಿವೆ, ಅವು ಇನ್ನಷ್ಟು ಸ್ಮಾರ್ಟ್ ಆಗುತ್ತಿವೆ. ಮೆಟ್ರೊಗಳು–ಬಸ್ಸುಗಳು ಇನ್ನಷ್ಟು ಚೆಂದವಾಗಿವೆ. ರೈಲುಗಳ ವೇಗ ಅಧಿಕವಾಗಿದೆ. ಆದರೆ, ಇವು ಯಾವುದೂ ಹೆಣ್ಣು ಆರಾಮಾಗಿ ಕೂರಲು, ನಿಲ್ಲಲು ಬೇಕಾದ ಮುಕ್ತ ವಾತಾವರಣವನ್ನು ಕೊಡಲೇ ಇಲ್ಲ. ತುಂಬಿದ ಸಾರಿಗೆಯಲ್ಲಿ ಒಬ್ಬ ಪುರುಷನಿಗೆ ಸಿಗುವ ಸಹಜವಾದ ನಡೆದಾಟದ ಜಾಗ ಹೆಣ್ಣಿಗೆ ಸಿಗುವುದಿಲ್ಲ. ಅವಳು ಸದಾ ತನ್ನ ದೇಹವನ್ನು ಮುದುಡಿಕೊಳ್ಳಬೇಕು. ಸೆರಗು ಸರಿ ಮಾಡಿ ಕೊಳ್ಳಬೇಕು. ಇಡೀ ಪಯಣ ಅವಳನ್ನು ಅವಳು ರಕ್ಷಿಸಿಕೊಳ್ಳುವುದರಲ್ಲೇ ಕಳೆದುಹೋಗಿರುತ್ತದೆ.‘ನನ್ನ ದೇಹ ಯಾರೋ ಬಂದು ತಂಗಿ ಹೋಗುವ ಹೋಟೆಲ್ ರೂಮ್ಅ ಲ್ಲ, ಅದು ನಾನು ವಾಸಿಸುವ ನನ್ನ ಮನೆ. ನನ್ನ ಅನುಮತಿ ಇಲ್ಲದೆ, ನಿನ್ನ ದರ್ಪದಿಂದ ಅದರ ಗೋಡೆಗಳನ್ನು ಮುಟ್ಟುವ ಹಕ್ಕು ನಿನಗಿಲ್ಲ...’ ಎನ್ನುತ್ತಾಳೆ ಇಂಡೊ–ಕೆನಡಿಯನ್ ಕವಯಿತ್ರಿ ರೂಪಿ ಕೌರ್.‘ಮೈ ಕೈ ಮುಟ್ಟಬಾರದು ಅಂತ ಇದ್ರೆ ಕಾರು ಮಾಡಿ ಕೊಂಡು ಹೋಗಿ...’ ಎನ್ನುವ ಕೆಲವು ಪುರುಷರ ಮಾತುಗಳು, ‘ಬಸ್ಸಿನಲ್ಲಿನ ಹಿಂಸೆ ತಪ್ಪಿಸಿಕೊಳ್ಳಲು ಖಾಸಗಿ ಬಸ್ಸಿನಲ್ಲಿ ಹಣಕೊಟ್ಟು ಬರುವೆ...’ ಎನ್ನುವ ಸಹೋದ್ಯೋಗಿಯ ಮಾತು ಒಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತವೆ. ಹೆಣ್ಣಿನ ಸುರಕ್ಷತೆಯು ಆಕೆಯ ಹಕ್ಕು. ಉಚಿತವಾಗಿ ಸಿಗಬೇಕಾದ ಮೂಲಭೂತ ಹಕ್ಕು. ಆಕೆ ಅದನ್ನು ಹಣಕೊಟ್ಟು ಕೊಂಡುಕೊಳ್ಳಬೇಕೆ? ಆಕೆ ಹೆಚ್ಚುವರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಖರೀದಿಸಬೇಕಾದ ಐಷಾರಾಮಿ ವಸ್ತುವಾಗಬಾರದು ಅದು. ಕಾರಿನಲ್ಲಿ ಓಡಾಡುವಷ್ಟು ಅವಳ ರಕ್ಷಣೆ ದುಬಾರಿಯಾಗಬಾರದು.ರಶ್ನಲ್ಲಿ ಹೋಗಬಾರದು, ರಾತ್ರಿ ಹೆಣ್ಣುಮಕ್ಕಳ ಪಯಣ ಸಲ್ಲ, ಅನಗತ್ಯ ಸಂಚಾರ ತಪ್ಪಿಸು... ಇಂತಹ ಮಾತುಗಳನ್ನು ಕೆಲವರು ಹೆಣ್ಣಿನ ಮರ್ಯಾದೆ ಕಾಯುವ ಮಂತ್ರಗಳಂತೆ ಉಚ್ಚರಿಸುತ್ತಾರೆ. ಹೆಣ್ಣು ಮುದುಡಿಕೊಂಡು ಕೂರುವುದು, ಪಕ್ಕದಲ್ಲಿ ಗಂಡು ಕೂತಾಗ ಇಡೀ ದೇಹ ಕಣ್ಣಾಗಿಸಿಕೊಂಡು ಕಾಯುವುದು... ಇವೆಲ್ಲವೂ ಪರಿಹಾರವಲ್ಲ. ಬದಲಿಗೆ, ಸಾರ್ವಜನಿಕ ಜಾಗಗಳನ್ನು ಆಕೆ ತನಗಿರುವ ಹಕ್ಕನ್ನು ಧೀಮಂತಿಕೆಯಿಂದ ಮರುಸ್ವಾಧೀನ ಪಡಿಸಿಕೊಳ್ಳಬೇಕಿದೆ. ಸಿಸಿಟಿವಿ ಕ್ಯಾಮೆರಾ ಹಾಕಿಸಬೇಕು, ಅವಳಿಗೆ ಸೀಟು ಮೀಸಲಿಡಬೇಕು... ಈ ತರಹದ ಸಲಹೆಗಳಿಗಿಂತ ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವ ಲಿಂಗ ಸಂವೇದನಾಶೀಲ ಕಠಿಣ ವ್ಯವಸ್ಥೆ ಜಾರಿಯಾಗಬೇಕಿದೆ.ಆಕೆ ತನ್ನದೇ ಊರಿನ ರಸ್ತೆಗಳಲ್ಲಿ ಅತಿಥಿಯಂತೆ ಮುಜುಗರದಿಂದ ಬದುಕುವ ಕಾಲ ಇನ್ನಾದರೂ ಮುಗಿಯಬೇಕು. ಈ ರಸ್ತೆಗಳು, ಈ ಮೆಟ್ರೊಗಳು, ಈ ಸಾರಿಗೆ ಬಸ್ಸುಗಳು ಎಲ್ಲವೂಆಕೆಯದ್ದೂ ಹೌದು. ಆಕೆಗೆ ಘನತೆ ತರುವ ಕೆಲಸಗಳಾಗಬೇಕು. ಅಲ್ಲಿಯವರೆಗೂ ಇಕ್ಕಟ್ಟಿನಲ್ಲಿ ನಲುಗುವ ಪ್ರತಿ ಹೆಣ್ಣಿನ ಮೌನ ಆಕ್ರೋಶವು ನಮ್ಮ ನಾಗರಿಕ ಸಮಾಜದ ಪ್ರಜ್ಞೆಯನ್ನು ಚುಚ್ಚುತ್ತಲೇ ಇರುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಮಹಿಳೆಯರಲ್ಲಿ ಆಪ್ತಭಾವವನ್ನೂ ಸುರಕ್ಷತೆಯನ್ನೂ ಉಂಟು ಮಾಡಬೇಕು. ಅದು ಸಾಧ್ಯವಾಗದೆ ಹೋದಲ್ಲಿ ಸಾರ್ವಜನಿಕ ಸಾರಿಗೆಯ ಮೂಲ ಆಶಯ ಈಡೇರುವುದಿಲ್ಲ.