ಪೆಟ್ರೋಲ್ ವಾಹನಗಳಿಗೆ ಟಕ್ಕರ್ – ಪರ್ಯಾಯ ಇಂಧನ ವಾಹನಗಳ ಮಾರಾಟ ಭಾರೀ ಏರಿಕೆ
– ಭಾರತದಲ್ಲಿ ದಾಖಲೆಯ ಮಟ್ಟಕ್ಕೇರಿದ ಆಟೋಮೊಬೈಲ್ ಮಾರಾಟ – ಇವಿ ದ್ವಿಚಕ್ರ ವಾಹನ ಖರೀದಿ ಜೋರು ನವದೆಹಲಿ: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪರ್ಯಾಯ ಇಂಧನ ಚಾಲಿತ ಪ್ರಯಾಣಿಕ ವಾಹನಗಳು (Alternative-fuel Passenger Vehicles) ಶೀಘ್ರದಲ್ಲೇ ಪೆಟ್ರೋಲ್ ವಾಹನಗಳನ್ನು (Petrol Vehicle) ಹಿಂದಿಕ್ಕುವ ಸನಿಹಕ್ಕೆ ಬಂದು ತಲುಪಿವೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್

– ಭಾರತದಲ್ಲಿ ದಾಖಲೆಯ ಮಟ್ಟಕ್ಕೇರಿದ ಆಟೋಮೊಬೈಲ್ ಮಾರಾಟ – ಇವಿ ದ್ವಿಚಕ್ರ ವಾಹನ ಖರೀದಿ ಜೋರು ನವದೆಹಲಿ: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪರ್ಯಾಯ ಇಂಧನ ಚಾಲಿತ ಪ್ರಯಾಣಿಕ ವಾಹನಗಳು (Alternative-fuel Passenger Vehicles) ಶೀಘ್ರದಲ್ಲೇ ಪೆಟ್ರೋಲ್ ವಾಹನಗಳನ್ನು (Petrol Vehicle) ಹಿಂದಿಕ್ಕುವ ಸನಿಹಕ್ಕೆ ಬಂದು ತಲುಪಿವೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಗುರುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜುಲೈ ತಿಂಗಳಿನಲ್ಲಿ ಸಿಎನ್ಜಿ (CNG), ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟವು ಒಟ್ಟು ಪ್ರಯಾಣಿಕ ವಾಹನಗಳ ಮಾರಾಟದ ಶೇ. 40.6 ರಷ್ಟನ್ನು ತಲುಪಿದೆ. ಇದು ಶೇ. 41.7 ರಷ್ಟಿರುವ ಪೆಟ್ರೋಲ್ ವಾಹನಗಳ ಪಾಲಿಗಿಂತ ಕೊಂಚ ಹಿಂದೆ ಇದೆ. ಕಳೆದ ವರ್ಷ ಶೇ. 13.2 ರಷ್ಟಿದ್ದ ಈ ವ್ಯತ್ಯಾಸವು, ಇದೀಗ ಕೇವಲ ಶೇ. 1 ಕ್ಕಿಂತ ಕೊಂಚ ಮಟ್ಟಕ್ಕೆ ಇಳಿದಿರುವುದು ಗ್ರಾಹಕರ ಆದ್ಯತೆ ವೇಗವಾಗಿ ಬದಲಾಗುತ್ತಿರುವುದನ್ನು ತೋರಿಸುತ್ತದೆ. ಸಾರ್ವಕಾಲಿಕ ದಾಖಲೆಯ ಮಾರಾಟ ಈ ಧನಾತ್ಮಕ ಬೆಳವಣಿಗೆಯೊಂದಿಗೆ ಭಾರತದ ಆಟೋಮೊಬೈಲ್ (Automobile) ಚಿಲ್ಲರೆ ಮಾರುಕಟ್ಟೆಯು ಜುಲೈ ತಿಂಗಳಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಒಟ್ಟಾರೆ ವಾಹನ ನೋಂದಣಿ ಪ್ರಮಾಣವು ವಾರ್ಷಿಕ ಆಧಾರದಲ್ಲಿ ಶೇ. 25.8 ರಷ್ಟು ಏರಿಕೆಯಾಗಿದ್ದು, ಸಾರ್ವಕಾಲಿಕ ದಾಖಲೆಯ 25.9 ಲಕ್ಷ ಯುನಿಟ್ ತಲುಪಿದೆ. ಮೊದಲ ಬಾರಿಗೆ ಆಟೋಮೊಬೈಲ್ ಕ್ಷೇತ್ರದ ಎಲ್ಲಾ ಆರು ವಿಭಾಗಗಳು—ಅಂದರೆ ದ್ವಿಚಕ್ರ ವಾಹನಗಳು, ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳು, ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್ಗಳು ಹಾಗೂ ಚಕ್ರದ ನಿರ್ಮಾಣ ಉಪಕರಣಗಳು—ಜುಲೈ ತಿಂಗಳಿನಲ್ಲಿ ತಮ್ಮ ಅತ್ಯಧಿಕ ಚಿಲ್ಲರೆ ಮಾರಾಟ ಪ್ರಮಾಣವನ್ನು ಕಾಯ್ದುಕೊಳ್ಳುವ ಮೂಲಕ ಒಟ್ಟಾರೆ ಮಾರುಕಟ್ಟೆಯ ಬೆಳವಣಿಗೆಗೆ ಬೆಂಬಲವಾಗಿ ನಿಂತಿವೆ. ಪ್ರಯಾಣಿಕ ವಾಹನಗಳ (PV) ಚಿಲ್ಲರೆ ಮಾರಾಟವು ವಾರ್ಷಿಕ ಆಧಾರದಲ್ಲಿ ಶೇ. 19 ರಷ್ಟು ಹೆಚ್ಚಾಗಿದ್ದು, 4.1 ಲಕ್ಷ ಯುನಿಟ್ಗಳನ್ನು ತಲುಪಿದೆ. ಜುಲೈ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು 4 ಲಕ್ಷದ ಗಡಿ ದಾಟಿರುವುದು ಇದೇ ಮೊದಲು. ಪ್ರಯಾಣಿಕ ವಾಹನ – ಯಾವುದು ಎಷ್ಟು ಪಾಲು? ಸಿಎನ್ಜಿ (CNG) – ಶೇ. 24.6 ಹೈಬ್ರಿಡ್ (Hybrid) – ಶೇ. 8 ರಷ್ಟು ಎಲೆಕ್ಟ್ರಿಕ್ ವಾಹನಗಳು (EV): ಶೇ. 7.9 ರ ಕಳೆದ ವರ್ಷ ಶೇ. 47.6 ರಷ್ಟಿದ್ದ ಪೆಟ್ರೋಲ್ ವಾಹನಗಳ ಪಾಲು ಈ ಬಾರಿ ಶೇ. 41.6 ಕ್ಕೆ ಕುಸಿದಿದೆ. ಹೈಬ್ರಿಡ್ ವಾಹನಗಳು ಪೆಟ್ರೋಲ್ ಅನ್ನು ಮುಖ್ಯ ಇಂಧನವಾಗಿ ಬಳಸುತ್ತಿದ್ದರೂ, ಅವು ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುವುದರಿಂದ ಇಂಧನ ದಕ್ಷತೆ ಹೆಚ್ಚಿಸಿ ಮಾಲಿನ್ಯ ಕಡಿಮೆ ಮಾಡುತ್ತವೆ. ಹೀಗಾಗಿ ಇವುಗಳನ್ನು ಪರ್ಯಾಯ ಇಂಧನ ವಿಭಾಗದಲ್ಲೇ ವರ್ಗೀಕರಿಸಲಾಗಿದೆ. ಇದನ್ನೂ ಓದಿ: BS-III ವಾಹನಗಳಿಗೆ E20 ಎಫೆಕ್ಟ್- ರಬ್ಬರ್ ಭಾಗ, ಗ್ಯಾಸ್ಕೆಟ್ ಬದಲಾಯಿಸಬೇಕು: ಗಡ್ಕರಿ ಹೊಸ ಮಾಡೆಲ್ಗಳ ಬಿಡುಗಡೆ, ಜಿಎಸ್ಟಿ (GST) ಬದಲಾವಣೆಯಿಂದಾಗಿ ತಗ್ಗಿದ ಬೆಲೆಗಳು ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಮಾಡುವ ಗ್ರಾಹಕರ ಉದ್ದೇಶವು ಪರ್ಯಾಯ ಇಂಧನ ವಾಹನಗಳ ಬೇಡಿಕೆಗೆ ಕಾರಣವಾಗಿದೆ ಎಂದು FADA ತಿಳಿಸಿದೆ. ಜೊತೆಗೆ, E20 ಇಂಧನ ಬದಲಾವಣೆಯ ಕುರಿತಾದ ಅನಿಶ್ಚಿತತೆಯೂ ಗ್ರಾಹಕರನ್ನು ಸಿಎನ್ಜಿ, ಹೈಬ್ರಿಡ್ ಹಾಗೂ ಇವಿ ವಾಹನಗಳತ್ತ ಮುಖ ಮಾಡುವಂತೆ ಮಾಡಿದೆ. ಇವಿ ಮಾರುಕಟ್ಟೆಯಲ್ಲಿ ಜಿಗಿತ ಇಂಧನ ಬದಲಾವಣೆಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಜುಲೈನಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾಲು ಶೇ. 11.2 ರಷ್ಟು ದಾಖಲೆಯ ಮಟ್ಟಕ್ಕೆ ಏರಿದೆ. ಕಳೆದ ವರ್ಷ ಇದು ಶೇ. 7.7 ರಷ್ಟಿತ್ತು. ಎಲ್ಲಾ ವಿಭಾಗಗಳನ್ನು ಒಳಗೊಂಡಂತೆ ಒಟ್ಟಾರೆ ಎಲೆಕ್ಟ್ರಿಕ್ ವಾಹನಗಳ (EV) ಚಿಲ್ಲರೆ ನೋಂದಣಿಯು ಜುಲೈ ತಿಂಗಳಲ್ಲಿ 3.28 ಲಕ್ಷ ಯುನಿಟ್ಗಳ ಸಾರ್ವಕಾಲಿಕ ದಾಖಲೆ ಬರೆದಿದೆ. ಇದರೊಂದಿಗೆ ಒಟ್ಟಾರೆ ವಾಹನ ಮಾರಾಟದಲ್ಲಿ ಇವಿಗಳ ಪಾಲು ಕಳೆದ ವರ್ಷದ ಶೇ. 9.6 ರಿಂದ ಶೇ. 12.7 ಕ್ಕೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಜುಲೈ ತಿಂಗಳಲ್ಲಿ 1.6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುವ ಮೂಲಕ ಅಗ್ರಸ್ಥಾನದಲ್ಲೇ ಮುಂದುವರಿದಿದೆ.