ಮೇಕೆದಾಟು ಯೋಜನೆ: ವಿಜಯ್–ಉದಯನಿಧಿ ನಡುವೆ ಮಾತಿನ ಚಕಮಕಿ
ಚೆನ್ನೈ: ಮೇಕೆದಾಟು ಯೋಜನೆಯು ತಮಿಳುನಾಡು ವಿಧಾನಸಭೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಗಿದ್ದು, ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ಸದನದಲ್ಲಿ ತೀವ್ರ ವಾಗ್ವಾದ ನಡೆಯಿತು.ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಕ್ರಮದ ಬಗ್ಗೆ ಸರ್ಕಾರದ ನಿಲುವನ್ನು ಪ್ರಶ್ನಿಸಿದ ಉದಯನಿಧಿ ಸ್ಟಾಲಿನ್, ಮೇಕ

ಚೆನ್ನೈ: ಮೇಕೆದಾಟು ಯೋಜನೆಯು ತಮಿಳುನಾಡು ವಿಧಾನಸಭೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಗಿದ್ದು, ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ಸದನದಲ್ಲಿ ತೀವ್ರ ವಾಗ್ವಾದ ನಡೆಯಿತು.ಕಾವೇರಿ ಜಲ ವಿವಾದ ಮತ್ತು ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಕ್ರಮದ ಬಗ್ಗೆ ಸರ್ಕಾರದ ನಿಲುವನ್ನು ಪ್ರಶ್ನಿಸಿದ ಉದಯನಿಧಿ ಸ್ಟಾಲಿನ್, ಮೇಕೆದಾಟು ಯೋಜನೆಯನ್ನು ತಡೆಯಲು ವಿಜಯ್ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.ಈ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ವಿಜಯ್, ಮೇಕೆದಾಟು ಯೋಜನೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಮತ್ತು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ. ತಮಿಳುನಾಡು ರೈತರ ಹಿತರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.ಮೇಕೆದಾಟು ವಿಷಯದಲ್ಲಿ ಕರ್ನಾಟಕದ ಎಲ್ಲಾ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವುದನ್ನು ಉಲ್ಲೇಖಿಸಿದ ಉದಯನಿಧಿ, ಈ ವಿಷಯದಲ್ಲಿ ಸರ್ವಪಕ್ಷ ಸಭೆ ನಡೆಸಲು ವಿಜಯ್ ಸರ್ಕಾರ ಏಕೆ ಹಿಂಜರಿಯುತ್ತಿದೆ? ಎಂದು ಪ್ರಶ್ನಿಸಿದರು.‘ಕರ್ನಾಟಕವು ಸರ್ವಪಕ್ಷ ಸಭೆ ಕರೆದಿದೆ. ತಮ್ಮ ಹಕ್ಕುಗಳಿಗಾಗಿ ಅವರು ಒಂದು ತಂಡವಾಗಿ ಒಗ್ಗಟ್ಟಾಗಿದ್ದಾರೆ. ಮೇಕೆದಾಟು ವಿಷಯದಲ್ಲಿ ತಮಿಳರ ಪರವಾಗಿ ಒಗ್ಗಟ್ಟು ಪ್ರದರ್ಶಿಸಲು ಟಿವಿಕೆ ಸರ್ಕಾರ ಸರ್ವಪಕ್ಷ ಸಭೆಯ ಏಕೆ ಕರೆಯುತ್ತಿಲ್ಲ?’ ಎಂದು ಕೇಳಿದರು.ವಿಜಯ್ ಅವರ ಕರ್ನಾಟಕ ಭೇಟಿಯ ಕುರಿತೂ ಸ್ಟಾಲಿನ್ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, ನೆರೆಯ ರಾಜ್ಯದೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ತಿರುಗೇಟು ನೀಡಿದರು.‘ಶತ್ರು ರಾಷ್ಟ್ರಗಳೇ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ನಮ್ಮ ನೆರೆಯ ರಾಜ್ಯದೊಂದಿಗೆ ಮಾತುಕತೆ ನಡೆಸುವ ಬಗ್ಗೆ ನಾನು ಯೋಚಿಸಿದೆ. ಇದನ್ನು ಅವಮಾನ ಎಂದರೆ ಹೇಗೆ? ಅದನ್ನು ಅವಮಾನ ಎಂದು ಹೇಳುವುದಾದರೆ ತಮಿಳುನಾಡಿನ ಜನರಿಗಾಗಿ ನಾನು ಅವಮಾನ ಅನುಭವಿಸಲು ಸಿದ್ಧನಿದ್ದೇನೆ’ ಎಂದು ಹೇಳಿದರು.