ಅಪಘಾತಕ್ಕೀಡಾಗಿ ಚಿಕಿತ್ಸೆಗೆ ಲಕ್ಷ ಲಕ್ಷ ವ್ಯಯಿಸಿದರೂ ನೆರವಿಗೆ ಬಾರದ ರ್ಯಾಪಿಡೊ!
ಬೆಂಗಳೂರು: ರ್ಯಾಪಿಡೊ ಬೈಕ್ ಸವಾರಿ ಬೆಂಗಳೂರಿನ ಮಹಿಳೆಯ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.32 ವರ್ಷದ ಸಾನಿ ಕೃಷ್ಣ ಎಂಬವರು ತಮ್ಮ ಮನೆಯಿಂದ ಕೆಲಸಕ್ಕೆ ಹೋಗುವ ಸಲುವಾಗಿ ಜೂನ್ 17ರಂದು ರ್ಯಾಪಿಡೊ ಬೈಕ್ ಬುಕ್ ಮಾಡಿಕೊಂಡಿದ್ದರು. ಆದರೆ, ಬೈಕ್ ಅಪಘಾತಕ್ಕೀಡಾಗಿ, ಗಂಭೀರವಾಗಿ ಗಾಯಗೊಂಡಿದ್ದರು.ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಂನಲ್ಲಿ

ಬೆಂಗಳೂರು: ರ್ಯಾಪಿಡೊ ಬೈಕ್ ಸವಾರಿ ಬೆಂಗಳೂರಿನ ಮಹಿಳೆಯ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.32 ವರ್ಷದ ಸಾನಿ ಕೃಷ್ಣ ಎಂಬವರು ತಮ್ಮ ಮನೆಯಿಂದ ಕೆಲಸಕ್ಕೆ ಹೋಗುವ ಸಲುವಾಗಿ ಜೂನ್ 17ರಂದು ರ್ಯಾಪಿಡೊ ಬೈಕ್ ಬುಕ್ ಮಾಡಿಕೊಂಡಿದ್ದರು. ಆದರೆ, ಬೈಕ್ ಅಪಘಾತಕ್ಕೀಡಾಗಿ, ಗಂಭೀರವಾಗಿ ಗಾಯಗೊಂಡಿದ್ದರು.ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಚಿಕಿತ್ಸೆಗಾಗಿ ₹ 20 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿದ್ದೇನೆ. ಆದಾಗ್ಯೂ ರ್ಯಾಪಿಡೊ ಕಂಪನಿ ತಮ್ಮ ನೆರವಿಗೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಾಗ್ಮನೆ ಟೆಕ್ ಪಾರ್ಕ್ ಸಮೀಪ ರ್ಯಾಪಿಡೊ ಬೈಕ್ ಸವಾರ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಲು ಯತ್ನಿಸಿದಾಗ ಅಪಘಾತ ಸಂಭವಿಸಿತ್ತು. ಸವಾರನ ಅಜಾಗರೂಕತೆಯಿಂದ, ಬೈಕ್ ನಿಯಂತ್ರಣ ತಪ್ಪಿ ದುರಂತ ಸಂಭವಿಸಿತ್ತು ಎಂದು ಹೇಳಿಕೊಂಡಿದ್ದಾರೆ.ರಸ್ತೆಗೆ ಬಿದ್ದಿದ್ದ ಸಾನಿ ಅವರ ಮೇಲೆ ಟ್ರ್ಯಾಕ್ಟರ್ ಹರಿದು ತೀವ್ರ ಗಾಯವಾಗಿತ್ತು.‘ನಾನು ಗುಲ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಯಕೃತ್ತಿಗೂ ತೀವ್ರ ಹಾನಿಯಾಗಿತ್ತು. ಒಂಬತ್ತು ಪೆಕ್ಕೆಲುಬುಗಳು ಮುರಿದಿದ್ದವು. ಶ್ವಾಸಕೋಶ, ಮುಖಕ್ಕೂ ಹಾನಿಯಾಗಿತ್ತು. ವೈದ್ಯಕೀಯ ವೆಚ್ಚ ಈಗಾಗಲೇ ₹ 20 ಲಕ್ಷ ದಾಟಿದೆ. ಚಿಕಿತ್ಸೆ ಮುಂದುವರಿಸಲು ಹಾಗೂ ಜೀವನಪೂರ್ತಿ ಆರೋಗ್ಯ ನೋಡಿಕೊಳ್ಳಲು ನನಗೆ ಹಾಗೂ ನನ್ನ ಕುಟುಂಬಕ್ಕೆ ಅಪಾರ ಹಣ ಭರಿಸುವುದು ದೊಡ್ಡ ಹೊರೆಯಾಗಿ ಪರಿಣಮಿಸಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಹೇಳಿಕೊಳ್ಳುವ ರ್ಯಾಪಿಡೊ, ಅಪಘಾತದ ಬಳಿಕ ಯಾವುದೇ ರೀತಿಯಲ್ಲೂ ನೆರವಾಗಲಿಲ್ಲ ಎಂದು ಆರೋಪಿಸಿದ್ದಾರೆ.ಜಾಹೀರಾತುಗಳಲ್ಲಿ ಹೇಳಿಕೊಳ್ಳುವಂತೆ ಕಂಪನಿಯು ಸುರಕ್ಷತಾ ಭರವಸೆಯನ್ನು ಈಡೇರಿಸಿಲ್ಲ ಎಂದು ಕಿಡಿಕಾರಿರುವ ಸಾನಿ, ತಮ್ಮಂತೆಯೇ ಇನ್ನಷ್ಟು ಜನರಿಗೆ ಇಂತಹ ಅನುಭವಗಳಾಗಿವೆ. ಈ ವಿಷಯವಾಗಿ ಕಾನೂನಾತ್ಮಕ ಹೋರಾಟ ನಡೆಸುವುದಾಗಿ, ಪ್ರಕರಣವನ್ನು ಗ್ರಾಹಕ ನ್ಯಾಯಾಲಯಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ.‘ಕಂಪನಿಯು ಮಹಿಳೆಯರ ಸುರಕ್ಷತೆ ವಿಚಾರವನ್ನು ಪ್ರಚಾರ ಮಾಡಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ. ಕಚೇರಿ ತಲುಪಲು ಜೂನ್ 17ರಂದು ಆ ಕಂಪನಿಯ ಸೇವೆಯನ್ನು ಆಶ್ರಯಿಸಿದ್ದ ನಾನು, ಟ್ರ್ಯಾಕ್ಟರ್ಗೆ ಸಿಲುಕಿದ್ದೆ. ಅವರು (ಕಂಪನಿ) ನನ್ನನ್ನು ಕೈಬಿಟ್ಟರು’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. View this post on Instagram A post shared by Sani Krishna (@sani_krishna) ಈ ಸಂಬಂಧ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ ಬಳಿಕ, ವಿಮಾ ಕ್ಲೇಮು ಪ್ರಕ್ರಿಯೆಯ ಮೊರೆ ಹೋಗುವಂತೆ ಸೂಚಿಸುವ ಸ್ವಯಂಚಾಲಿತ ಇಮೇಲ್ಗಳು ಮಾತ್ರ ಬಂದಿವೆ ಎಂದು ಇನ್ನಷ್ಟು ಆಕ್ರೋಶ ಹೊರಹಾಕಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ರ್ಯಾಪಿಡೊ, ಸಾನಿ ಕೃಷ್ಣ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ತನಿಖೆ ಕೈಗೊಂಡಿದ್ದು, ಸಮಯಾವಕಾಶ ಕೋರಿದ್ದೇವೆ ಎಂದಿದೆ.