ಕಬ್ಬು ಕಟಾವಿಗಾಗಿ ವಲಸೆ ತೆರಳಿದ್ದ ವ್ಯಕ್ತಿ, ಲಾರಿಯಿಂದ ಬಿದ್ದು ಸಾವು
ಮರಿಯಮ್ಮನಹಳ್ಳಿ: ಕಬ್ಬು ಕಟಾವಿಗೆಂದು ಗುಳೆ ಹೋಗಿದ್ದ ಮರಿಯಮ್ಮನಹಳ್ಳಿ ತಾಂಡಾದ ಕೂಲಿ ಕಾರ್ಮಿಕ ಕೃಷ್ಣ ನಾಯ್ಕ (37) ಕಬ್ಬಿನ ಲಾರಿಯ ಮೇಲಿನಿಂದ ಬಿದ್ದು ಸಾವನ್ನಪ್ಪಿ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಠಾಣಾ ವ್ಯಾಪ್ತಿಯ ಹನುಮನಾಳ ಕಟ್ಟೆಯ ಬಳಿ ಗುರುವಾರ ಸಂಭವಿಸಿದೆ.ಪ್ರತಿ ವರ್ಷದಂತೆ ಈ ವರ್ಷವೂ ಮರಿಯಮ್ಮನಹಳ್ಳಿ ತಾಂಡಾದಿಂದ ಕಬ್ಬು ಕಟಾವಿಗೆ ನ

ಮರಿಯಮ್ಮನಹಳ್ಳಿ: ಕಬ್ಬು ಕಟಾವಿಗೆಂದು ಗುಳೆ ಹೋಗಿದ್ದ ಮರಿಯಮ್ಮನಹಳ್ಳಿ ತಾಂಡಾದ ಕೂಲಿ ಕಾರ್ಮಿಕ ಕೃಷ್ಣ ನಾಯ್ಕ (37) ಕಬ್ಬಿನ ಲಾರಿಯ ಮೇಲಿನಿಂದ ಬಿದ್ದು ಸಾವನ್ನಪ್ಪಿ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಠಾಣಾ ವ್ಯಾಪ್ತಿಯ ಹನುಮನಾಳ ಕಟ್ಟೆಯ ಬಳಿ ಗುರುವಾರ ಸಂಭವಿಸಿದೆ.ಪ್ರತಿ ವರ್ಷದಂತೆ ಈ ವರ್ಷವೂ ಮರಿಯಮ್ಮನಹಳ್ಳಿ ತಾಂಡಾದಿಂದ ಕಬ್ಬು ಕಟಾವಿಗೆ ನೂರಾರು ಮಂದಿ ಗುಳೆ ಹೋಗಿದ್ದಾರೆ. ಈ ಬಾರಿ ಬರ ಪರಿಸ್ಥಿತಿ ಇರುವ ಕಾರಣ ಕಳೆದ ಕೆಲವು ವರ್ಷಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಗುಳೆ ಹೋಗಿದ್ದರು. ಅವರ ಗುಂಪಿನಲ್ಲಿದ್ದ ಕೃಷ್ಣ ನಾಯ್ಕ ಅವರು 15 ದಿನಗಳ ಹಿಂದೆಯಷ್ಟೇ ಟಿ.ನರಸೀಪುರ ತಾಲ್ಲೂಕಿಗೆ ತಲುಪಿದ್ದರು.ಪತ್ನಿ ಸರೋಜಬಾಯಿ ಹಾಗೂ ಪುತ್ರಿ ವಾಣಿಯೊಂದಿಗೆ ತೆರಳಿದ್ದ ಕೃಷ್ಣ ನಾಯ್ಕ ಬಣ್ಣಾರಿ ಅಮ್ಮನ ಶುಗರ್ ಲಿಮಿಟೆಡ್ ಕಂಪನಿಗೆ ಕಬ್ಬು ಕಟಾವಿಗೆ ನಿಯುಕ್ತಿಗೊಂಡಿದ್ದರು. ಎಂದಿನಂತೆ ಬೆಳಿಗ್ಗೆ ಕಬ್ಬು ಕಟಾವು ಮಾಡಿ, ಲಾರಿಗೆ ಕಬ್ಬು ತುಂಬುವ ಸಮಯದಲ್ಲಿ ಲಾರಿಯ ಮೇಲಿನಿಂದ ಬಿದ್ದರು. ತೀವ್ರ ಗಾಯಗೊಂಡ ಆವರನ್ನು ಬನ್ನೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರು.ಕಂಪನಿಯ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ದೂರಿ ಸರೋಜಾಬಾಯಿ ಅವರು ಬನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕೂಲಿಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಕೃಷ್ಣಾನಾಯ್ಕ ಅವರೇ ಜೀವನಾಧಾರವಾಗಿದ್ದರು. ವೃದ್ಧೆ ತಾಯಿ, ಪತ್ನಿ ಹಾಗೂ ಬುದ್ಧಿಬ್ರಮಣೆ ಹೊಂದಿದ 16 ವರ್ಷದ ಪುತ್ರಿ ಹಾಗೂ 6 ವರ್ಷದ ಮಗನೊಂದಿಗೆ ತಾಂಡಾದಲ್ಲಿ ವಾಸವಾಗಿದ್ದರು. ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮರಿಯಮ್ಮನಹಳ್ಳಿ ತಾಂಡಾದಲ್ಲಿನ ಅವರ ಮನೆಯಲ್ಲಿ ದುಃಖ ಮಡುಗಟ್ಟಿತು. ಮೃತನ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಗೆ ಆಸರೆಯಾಗಿದ್ದ ಮಗ, ದುಡಿಯಲೆಂದು ತೆರಳಿ ಶವವಾಗಿ ವಾಪಸ್ ಬಂದಿದ್ದನ್ನು ಕಂಡು ಮರುಗಿದರು. ಶುಕ್ರವಾರ ರಾತ್ರಿ ತಾಂಡಾದಲ್ಲಿ ಅಂತ್ಯಕ್ರಿಯೆ ನಡೆಯಿತು.