ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ನಿಂದೆಯೇ?: ರವಿಕುಮಾರ್ಗೆ ಹೈಕೋರ್ಟ್ ತರಾಟೆ
ಬೆಂಗಳೂರು: ‘ರಾಜಕಾರಣಿಗಳು ಪರಸ್ಪರ ನಿಂದನೆ ಮತ್ತು ಕೀಳು ಮಾತುಗಳನ್ನಾಡುತ್ತಾ ಕೆಸರು ಎರಚಾಡಿಕೊಂಡು ಕೇಸುಗಳ ದಾಖಲೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಪರಿಣಾಮ ಕೊಲೆ–ಸುಲಿಗೆಯಂತಹ ಅಪರಾಧಗಳ ವಿಚಾರಣೆ ನಡೆಸಲಾಗದೆ ಅಧೀನ ಕೋರ್ಟ್ಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಪೆಂಡಿಂಗ್ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.‘ಕಲಬುರಗಿಯ ಸ್ಟೇ

ಬೆಂಗಳೂರು: ‘ರಾಜಕಾರಣಿಗಳು ಪರಸ್ಪರ ನಿಂದನೆ ಮತ್ತು ಕೀಳು ಮಾತುಗಳನ್ನಾಡುತ್ತಾ ಕೆಸರು ಎರಚಾಡಿಕೊಂಡು ಕೇಸುಗಳ ದಾಖಲೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಪರಿಣಾಮ ಕೊಲೆ–ಸುಲಿಗೆಯಂತಹ ಅಪರಾಧಗಳ ವಿಚಾರಣೆ ನಡೆಸಲಾಗದೆ ಅಧೀನ ಕೋರ್ಟ್ಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಪೆಂಡಿಂಗ್ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.‘ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ, ಅರ್ಜಿದಾರರು ಮತ್ತು ಪ್ರಾಸಿಕ್ಯೂಷನ್ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.‘ಜನರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತನಾಡದ ರಾಜಕಾರಣಿಗಳು ಬರೀ ಇಂತಹುದೇ ಹೇಳಿಕೆಗಳನ್ನು ನೀಡುತ್ತಿರುವುದು ವ್ಯಾಪಕವಾಗುತ್ತಿದೆ. ಇದಕ್ಕೆ ಯಾವ ರಾಜಕೀಯ ಪಕ್ಷಗಳೂ ಹೊರತಾಗಿಲ್ಲ. ಅಂತೆಯೇ, ಸರ್ಕಾರವೂ ಕೂಡಾ ಈ ಪ್ರಕರಣದಲ್ಲಿ ತಿರಂಗಾ ಧ್ವಜವನ್ನು ಹಿಡಿದು ಮೆರವಣಿಗೆ ಮಾಡುವುದನ್ನು ನಿರ್ಬಂಧಿಸಿರುವುದು ಅಕ್ಷಮ್ಯ’ ಎಂದು ಕಿಡಿ ಕಾರಿತು.ಇದಕ್ಕೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್, ‘ಜಾಥಾ ಹೊರಟವರನ್ನು 9 ಗಂಟೆಗಳ ಕಾಲ ಅಕ್ರಮವಾಗಿ ವಶದಲ್ಲಿ ಇರಿಸಿಕೊಳ್ಳಲಾಗಿತ್ತು. ಈ ಕಾರಣಕ್ಕಾಗಿ ಅರ್ಜಿದಾರರು, ಜಿಲ್ಲಾಧಿಕಾರಿ ಉಸ್ತುವಾರಿ ಸಚಿವರ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಪಾಕಿಸ್ತಾನದ ಸಂವಿಧಾನ ಚಾಲ್ತಿಯಲ್ಲಿದೆಯೋ ಅಥವಾ ಭಾರತದ ಸಂವಿಧಾನ ಇದೆಯೋ ಎಂದು ಪ್ರಶ್ನಿಸಿದ್ದರು. ಅಷ್ಟಕ್ಕೂ ಅವರೀಗಾಗಲೇ ಈ ಕುರಿತಂತೆ ಈಗಾಗಲೇ ಕ್ಷಮೆ ಕೇಳಿದ್ದಾರೆ’ ಎಂದರು.ಇದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಕ್ಷಮೆ ಕೇಳಿದಾಕ್ಷಣ ಎಲ್ಲ ಅಳಿಸಿಹೋಗಿಬಿಡುತ್ತದೆಯೇ? ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಒಬ್ಬ ಮುಸ್ಲಿಂ ಮಹಿಳೆ ಎಂಬ ಏಕೈಕ ಕಾರಣಕ್ಕಾಗಿ ಅವರನ್ನು ಧರ್ಮದ ಹೆಸರಿನಲ್ಲಿ ಕಟಕಿಯಾಡಿರುವುದು ಎಷ್ಟು ಸರಿ? ನಿಮ್ಮಗಳಿಗೆಲ್ಲಾ ನಾಲಿಗೆ ಮೇಲೆ ಹಿಡಿತವೇ ಇಲ್ಲದಂತಾಗಿದೆ. ಅವರೊಬ್ಬ ಐಎಎಸ್ ಅಧಿಕಾರಿ ಎಂಬುದನ್ನು ಮರೆಯಬೇಡಿ’ ಎಂದು ಅರ್ಜಿದಾರರಿಗೆ ಕಿವಿ ಹಿಂಡಿತು.‘ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆತ್ಮಗೌರವ ಇರುತ್ತದೆ. ಯಾರೂ ಅದಕ್ಕೆ ವಿನಾಕಾರಣ ಧಕ್ಕೆ ತರುವಂತೆ ನಡೆದುಕೊಳ್ಳುವುದು ತರವಲ್ಲ. ರಾಜಕಾರಣಿಗಳು ಇದೇ ರೀತಿ ಮಾತನಾಡಿ ಕೋರ್ಟ್ ಮೆಟ್ಟಿಲು ತುಳಿಯುವುದಾದರೆ ನಾನು ಇಲ್ಲಿ ಯಾವುದೇ ಪರಿಹಾರ ನೀಡುವುದಿಲ್ಲ. ಸುಪ್ರೀಂ ಕೋರ್ಟ್ಗೇ ಹೋಗುವಂತೆ ಮಾಡುತ್ತೇನೆ ಮತ್ತು ತಿರಂಗಾ ಧ್ವಜ ಹಿಡಿದು ಜಾಥಾ ನಡೆಸುವುದಕ್ಕೆ ನಿರ್ಬಂಧ ವಿಧಿಸಿರುವ ಪ್ರಾಸಿಕ್ಯೂಷನ್ ಕ್ರಮ ಎಳ್ಳಷ್ಟೂ ಸಮ್ಮತವಲ್ಲ. ಇದಕ್ಕೆ ದಂಡ ವಿಧಿಸುತ್ತೇನೆ’ ಎಂದು ಮೌಖಿಕವಾಗಿ ಎಚ್ಚರಿಸಿತು. ಅಂತಿಮವಾಗಿ ಅರ್ಜಿದಾರರ ಪರ ವಕೀಲರು; ತಿರಂಗಾ ಧ್ವಜ ಹಿಡಿದು ಜಾಥಾ ನಡೆಸುವುದಕ್ಕೆ ತಡೆಯೊಡ್ಡಿದ ಬಗ್ಗೆಗಿನ ಮತ್ತು ಪ್ರಕರಣ ದಾಖಲಿಸಲು ಅನುಮತಿ ನೀಡಲಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ಕೋರಿದ ಕಾರಣ ನ್ಯಾಯಪೀಠ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿತು. ಅಂತೆಯೇ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಈ ಮೊದಲು ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ‘ಫೌಝಿಯಾ ತರನ್ನುಮ್ ಪಾಕಿಸ್ತಾನದವರೊ ಅಥವಾ ಭಾರತದವರೋ ಎಂಬ ಬಗ್ಗೆ ನನಗೆ ಖಚಿತವಿಲ್ಲ ಎಂದು ರವಿಕುಮಾರ್ ಆಡಿದ್ದಾರೆ’ ಎನ್ನಲಾದ ಮಾತುಗಳನ್ನು ಆಕ್ಷೇಪಿಸಿ ಅವರ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ; ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 196(1)(ಎ)(ಬಿ) ಮತ್ತು 353(2)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.ಅಸಂಸದೀಯ ಪದ ಬಳಕೆ: ಬಿಜೆಪಿಯ ಎನ್.ರವಿಕುಮಾರ್ ವಿರುದ್ಧ ದೂರು