ಪಾಕ್, ಸೌದಿ, ಟರ್ಕಿ ನಡುವೆ ರಕ್ಷಣಾ ಒಪ್ಪಂದ – ‘ಮೆಕ್ಕಾ ಜಾಯಿಂಟ್ ಡಿಫೆನ್ಸ್ ಅಗ್ರಿಮೆಂಟ್’ಗೆ ಸಹಿ
ರಿಯಾಧ್: ಸೌದಿ ಅರೇಬಿಯಾ, ಪಾಕಿಸ್ತಾನ (Pakistan) ಮತ್ತು ಟರ್ಕಿ ಶುಕ್ರವಾರ ಮೆಕ್ಕಾದಲ್ಲಿ ʻಮೆಕ್ಕಾ ಜಾಯಿಂಟ್ ಡಿಫೆನ್ಸ್ ಅಗ್ರಿಮೆಂಟ್ʼ ಎಂಬ ಹೆಸರಿನ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif), ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮಕ್

ರಿಯಾಧ್: ಸೌದಿ ಅರೇಬಿಯಾ, ಪಾಕಿಸ್ತಾನ (Pakistan) ಮತ್ತು ಟರ್ಕಿ ಶುಕ್ರವಾರ ಮೆಕ್ಕಾದಲ್ಲಿ ʻಮೆಕ್ಕಾ ಜಾಯಿಂಟ್ ಡಿಫೆನ್ಸ್ ಅಗ್ರಿಮೆಂಟ್ʼ ಎಂಬ ಹೆಸರಿನ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif), ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮಕ್ಕಾದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು. 3 ಸುನ್ನಿ ಬಹುಸಂಖ್ಯಾತ ರಾಷ್ಟ್ರಗಳ ಈ ಒಪ್ಪಂದವು ಪ್ರಾದೇಶಿಕ ಭದ್ರತೆಯನ್ನು ಬಲಪಡಿಸುವುದು ಹಾಗೂ ಶಾಂತಿ, ಸ್ಥಿರತೆ ಮತ್ತು ಸಹಕಾರ ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ಈ ಒಪ್ಪಂದದ ಅಡಿಯಲ್ಲಿ ದೇಶಗಳು ಕೈಗೊಂಡಿರುವ ನಿರ್ದಿಷ್ಟ ಬದ್ಧತೆಗಳ ವಿವರವನ್ನ ಬಹಿರಂಗಪಡಿಸಲಾಗಿಲ್ಲ. ಪಾಕಿಸ್ತಾನದ ವಿದೇಶಾಂಗ ಕಚೇರಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ಈ ಒಪ್ಪಂದವು ಯಾವುದೇ ಆಕ್ರಮಣಕಾರಿ ಕ್ರಮದ ವಿರುದ್ಧ ಸಾಮೂಹಿಕ ತಡೆಶಕ್ತಿಯನ್ನ ಹೆಚ್ಚಿಸುವ ಗುರಿ ಹೊಂದಿದೆ. ಜೊತೆಗೆ, ಮೂರು ರಾಷ್ಟ್ರಗಳಲ್ಲಿ ಒಂದರ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನ ಉಳಿದ ಎರಡು ರಾಷ್ಟ್ರಗಳ ಮೇಲಿನ ದಾಳಿಯಂತೆಯೇ ಪರಿಗಣಿಸುವ ತತ್ವವನ್ನು ಈ ಒಪ್ಪಂದ ಒಳಗೊಂಡಿದೆ ಎಂದು ವರದಿಗಳು ಹೇಳಿವೆ. ಈ ಬೆಳವಣಿಗೆ ಇರಾನ್ ಹಾಗೂ ಸೌದಿ ಅರೇಬಿಯಾ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ನಡೆದಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯ ಬಳಿಕ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವ ಪಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟರ್ಕಿಯ ಅಧಿಕಾರಿ, ಈ ಒಪ್ಪಂದವು ರಕ್ಷಣಾತ್ಮಕ ಸ್ವರೂಪದ್ದಾಗಿದ್ದು, ಯಾವುದೇ ನಿರ್ದಿಷ್ಟ ದೇಶ ಅಥವಾ ಗುಂಪನ್ನು ಗುರಿಯಾಗಿಸಿಕೊಂಡಿಲ್ಲ. ಇದು ಇತರ ಪ್ರಾದೇಶಿಕ ರಾಷ್ಟ್ರಗಳಿಗೂ ಮುಕ್ತವಾಗಿದ್ದು, ಈಗಾಗಲೇ ಇರುವ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ರಕ್ಷಣಾ ಒಪ್ಪಂದಗಳಿಗೆ ಪರ್ಯಾಯವಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಈ ಒಪ್ಪಂದವು 2025ರಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವೆ ನಡೆದ ರಕ್ಷಣಾ ಸಹಕಾರದ ವಿಸ್ತರಣೆಯಾಗಿ ಪರಿಗಣಿಸಲಾಗುತ್ತಿದೆ. ಮೂರು ರಾಷ್ಟ್ರಗಳೂ ಪ್ರಮುಖ ಸೇನಾ ಸಾಮರ್ಥ್ಯ ಹೊಂದಿವೆ. ಟರ್ಕಿಯು ನ್ಯಾಟೊದಲ್ಲಿ ಎರಡನೇ ಅತಿದೊಡ್ಡ ಸೇನೆಯನ್ನು ಹೊಂದಿದ್ದರೆ, ಸೌದಿ ಅರೇಬಿಯಾ ಗಲ್ಫ್ ಪ್ರದೇಶದ ಪ್ರಮುಖ ಸೇನಾ ಶಕ್ತಿಯಾಗಿದೆ. ಪಾಕಿಸ್ತಾನವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಅಣ್ವಸ್ತ್ರ ಹೊಂದಿರುವ ಏಕೈಕ ದೇಶವಾಗಿದೆ. ಇತ್ತೀಚಿನ ಈ ಬೆಳವಣಿಗೆ ಮಧ್ಯಪ್ರಾಚ್ಯದ ಭದ್ರತಾ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗಿವೆ.