ಆಳ–ಅಗಲ: ಕನಿಷ್ಠ ಠೇವಣಿಗೆ ಗರಿಷ್ಠ ದಂಡ
ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಸರಾಸರಿ ಕನಿಷ್ಠ ಠೇವಣಿ (ಎಎಂಬಿ) ಕಾಯ್ದುಕೊಳ್ಳದಿದ್ದರೆ ಬ್ಯಾಂಕ್ಗಳು ಗ್ರಾಹಕರಿಂದ ದಂಡದ ರೂಪದಲ್ಲಿ ವಸೂಲು ಮಾಡುತ್ತಿರುವ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2025–26ನೇ ಆರ್ಥಿಕ ಸಾಲಿನಲ್ಲಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್ಗಳು ಗ್ರಾಹಕರಿಂದ ₹7,087 ಕೋಟಿಯಷ್ಟು ಸಂಗ್ರಹಿಸಿವೆ. ಹಣಕಾಸು ಖಾತೆ ರಾಜ್ಯ

ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಸರಾಸರಿ ಕನಿಷ್ಠ ಠೇವಣಿ (ಎಎಂಬಿ) ಕಾಯ್ದುಕೊಳ್ಳದಿದ್ದರೆ ಬ್ಯಾಂಕ್ಗಳು ಗ್ರಾಹಕರಿಂದ ದಂಡದ ರೂಪದಲ್ಲಿ ವಸೂಲು ಮಾಡುತ್ತಿರುವ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2025–26ನೇ ಆರ್ಥಿಕ ಸಾಲಿನಲ್ಲಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್ಗಳು ಗ್ರಾಹಕರಿಂದ ₹7,087 ಕೋಟಿಯಷ್ಟು ಸಂಗ್ರಹಿಸಿವೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಇತ್ತೀಚೆಗೆ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಹೋಲಿಸಿದರೆ, ಖಾಸಗಿ ಬ್ಯಾಂಕ್ಗಳೇ ಹೆಚ್ಚು ದಂಡ ವಸೂಲಿ ಮಾಡುತ್ತಿವೆ. ಕಳೆದ ಆರ್ಥಿಕ ವರ್ಷದಲ್ಲಿ ಖಾಸಗಿ ಬ್ಯಾಂಕ್ಗಳು ₹4,949 ಕೋಟಿಯಷ್ಟು ವಸೂಲು ಮಾಡಿದ್ದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ₹2,138 ಕೋಟಿ ದಂಡ ಸಂಗ್ರಹಿಸಿವೆ. ನಾಲ್ಕು ವರ್ಷಗಳಲ್ಲಿ ಖಾತೆದಾರರಿಂದ ವಸೂಲು ಮಾಡಿದ ಮೊತ್ತ ₹26,171 ಕೋಟಿ.ಅತಿ ಹೆಚ್ಚು ದಂಡ ವಸೂಲು ಮಾಡುತ್ತಿರುವ ಖಾಸಗಿ ಬ್ಯಾಂಕ್ಗಳ ಪೈಕಿ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಮುಂದಿವೆ. ಕಳೆದ ವರ್ಷ ಈ ಬ್ಯಾಂಕ್ಗಳು ಕ್ರಮವಾಗಿ ₹1,798 ಕೋಟಿ ಮತ್ತು ₹1,081 ಕೋಟಿ ಸಂಗ್ರಹಿಸಿವೆ. ಖಾಸಗಿ ಬ್ಯಾಂಕ್ಗಳು ವಸೂಲಿ ಮಾಡಿರುವ ಒಟ್ಟಾರೆ ಮೊತ್ತದಲ್ಲಿ ಇವೆರಡರ ಪಾಲು ಅರ್ಧಕ್ಕಿಂತಲೂ ಹೆಚ್ಚು. ಹಿಂದಿನ ಮೂರು ವರ್ಷಗಳಲ್ಲೂ ಈ ಬ್ಯಾಂಕ್ಗಳೇ ಹೆಚ್ಚು ದಂಡ ಸಂಗ್ರಹಿಸಿವೆ.ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಪೈಕಿ ಎಸ್ಬಿಐ ಮುಂದಿದೆ. ಆದರೆ, ‘ಎಸ್ಬಿಐ ಉಳಿತಾಯ ಖಾತೆಗಳಿಗೆ ಕನಿಷ್ಠ ಠೇವಣಿ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವುದಿಲ್ಲ. 2020ರಿಂದ ಈ ನಿಯಮವನ್ನು ಅದು ಜಾರಿಗೊಳಿಸಿದೆ. ಈಗ ಸಂಗ್ರಹಿಸಿರುವ ದಂಡವು ಚಾಲ್ತಿ ಖಾತೆಗಳಿಗೆ ಸಂಬಂಧಿಸಿದ್ದು’ ಎಂದು ಸಚಿವ ಚೌಧರಿ ಹೇಳಿದ್ದಾರೆ.‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗರಿಷ್ಠ ಜನರು ಒಳಗೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್ಗಳ ಪೈಕಿ 10 ಬ್ಯಾಂಕ್ಗಳು, ಕನಿಷ್ಠ ಠೇವಣಿ ಕಾಯ್ದುಕೊಳ್ಳದೇ ಇದ್ದರೆ ದಂಡ ವಿಧಿಸುವ ಪ್ರಕ್ರಿಯೆಯನ್ನು ನಿಲ್ಲಿಸಿವೆ. ಎರಡು ಬ್ಯಾಂಕ್ಗಳು, ಅವುಗಳ ಆಡಳಿತ ಮಂಡಳಿ ಅನುಮೋದನೆ ನೀಡಿದಂತೆ ದಂಡ ವಿಧಿಸುತ್ತಿವೆ’ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.ಏನಿದು ಎಎಂಬಿ?ಕನಿಷ್ಠ ಉಳಿತಾಯ ಠೇವಣಿಯ ( ಆ್ಯವರಿಜ್ ಮಿನಿಮಮ್ ಬ್ಯಾಲೆನ್ಸ್) ಸಂಕ್ಷಿಪ್ತ ರೂಪ ಎಎಂಬಿ. ಬ್ಯಾಂಕ್ಗಳು ಇದನ್ನು ತಿಂಗಳ ಸರಾಸರಿ ಠೇವಣಿ (ಎಂಎಬಿ) ಎಂದು ಕರೆಯುತ್ತವೆ. ಗ್ರಾಹಕರು ತಮ್ಮ ಖಾತೆಯಲ್ಲಿ ತಿಂಗಳ ಅವಧಿಯಲ್ಲಿ ನಿರ್ದಿಷ್ಟ ಮೊತ್ತ ಕಾಯ್ದುಕೊಳ್ಳಬೇಕಾಗಿರುತ್ತದೆ. ಕೆಲವು ಬ್ಯಾಂಕ್ಗಳು ಈ ಮೊತ್ತವನ್ನು ಪ್ರದೇಶವಾರು ನಿಗದಿಪಡಿಸುತ್ತವೆ.ಉದಾಹರಣೆಗೆ: ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ಎಚ್ಡಿಎಫ್ಸಿಯು ಮೆಟ್ರೊ ಅಥವಾ ನಗರಗಳಲ್ಲಿ ಸರಾಸರಿ ಕನಿಷ್ಠ ಠೇವಣಿ ಮೊತ್ತ ₹10 ಸಾವಿರ ಎಂದು ನಿಗದಿಪಡಿಸಿದೆ. ಅರೆ ನಗರ ಪ್ರದೇಶಗಳಲ್ಲಿ ಇದು ₹5,000 ಇದೆ. ಇದೇ ಬ್ಯಾಂಕ್ನ ಡಿಜಿಸೇವ್ ಯೂತ್ ಖಾತೆಗೆ ಕ್ರಮವಾಗಿ ₹5,000 (ನಗರ) ಮತ್ತು ₹2,500 (ಅರೆ ನಗರ) ಎಂಎಬಿ ನಿಗದಿ ಪಡಿಸಿದೆ. ಇದೇ ಮಾದರಿಯಲ್ಲಿ ಬೇರೆ ಬ್ಯಾಂಕ್ಗಳೂ ಎಂಎಬಿ ನಿಗದಿ ಪಡಿಸಿವೆ. ತಿಂಗಳ ಅವಧಿಯಲ್ಲಿ ಸರಾಸರಿಯಾಗಿ ನಿಗದಿತ ಮೊತ್ತ ಕಾಪಾಡಿಕೊಳ್ಳದೇ ಇದ್ದರೆ, ಬ್ಯಾಂಕ್ಗಳಿಗೆ ದಂಡ ವಿಧಿಸುವ ಅವಕಾಶ ಇದೆ. ಬ್ಯಾಂಕ್ನ ಆಡಳಿತ ಮಂಡಳಿಗಳು ಆ ಮೊತ್ತವನ್ನೂ ನಿಗದಿಪಡಿಸಿವೆ.ಸಂಸತ್ನಲ್ಲಿ ಚರ್ಚೆಬ್ಯಾಂಕ್ಗಳು ದಂಡ ವಸೂಲು ಮಾಡುತ್ತಿರುವ ಬಗ್ಗೆ ಸಂಸತ್ತಿನಲ್ಲಿ ಈ ಹಿಂದೆ ಚರ್ಚೆಗಳು ನಡೆದಿದ್ದವು. ಬಡವರು, ರೈತರು, ಗ್ರಾಮೀಣ ಪ್ರದೇಶದವರಿಂದ ದಂಡ ವಸೂಲಿ ಮಾಡುತ್ತಿರುವ ಬ್ಯಾಂಕ್ಗಳ ಕ್ರಮದ ಬಗ್ಗೆ ಹಲವು ಸಂಸದರು ಆಕ್ಷೇಪಿಸಿದ್ದರು.‘ಜನರು ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಲೂ ಆಗದಿರುವಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬ್ಯಾಂಕ್ಗಳು ಅವರನ್ನು ಬೆಂಬಲಿಸುವುದರ ಬದಲಿಗೆ ಅವರ ಮೇಲೆ ಮತ್ತಷ್ಟು ಹೊರೆ ಹೇರುತ್ತಿವೆ. ಬೃಹತ್ ಉದ್ದಿಮೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಬ್ಯಾಂಕ್ಗಳು ವಸೂಲಾಗದ ಸಾಲ ಎಂದು ಕೈಬಿಟ್ಟಿವೆ (ವೈವಿಂಗ್). ಆದರೆ, ಖಾತೆಯಲ್ಲಿ ಕನಿಷ್ಠ ಠೇವಣಿ ಇಡಲಾಗದ ಸಮಾಜದ ದುರ್ಬಲ ವರ್ಗಗಳಿಂದ ಭಾರಿ ಮೊತ್ತದ ದಂಡ ಸಂಗ್ರಹಿಸುತ್ತಿದೆ. ಉದ್ದಿಮೆದಾರರ ಹಣವನ್ನು ಬಡವರಿಂದ ವಸೂಲಿ ಮಾಡುತ್ತಿವೆ’ ಎಂದು ಸಂಸದ ಬಲ್ಬೀರ್ ಸಿಂಗ್ ಸೀಚೆವಾಲ್ ಅವರು ರಾಜ್ಯಸಭೆಯಲ್ಲಿ ಆರೋಪಿಸಿದ್ದರು.ಶೂನ್ಯ ಠೇವಣಿ ಉಳಿತಾಯ ಖಾತೆಬ್ಯಾಂಕ್ಗಳು ಶೂನ್ಯ ಠೇವಣಿ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನೂ ಕಲ್ಪಿಸುತ್ತವೆ. ಬ್ಯಾಂಕಿಂಗ್ ವಲಯದಲ್ಲಿ ಎಲ್ಲರ ಒಳಗೊಳ್ಳುವಿಕೆಗೆ ಉತ್ತೇಜನ ನೀಡಲು, ಸಣ್ಣ ಠೇವಣಿದಾರರಿಗೆ ಅನುಕೂಲ ಕಲ್ಪಿಸಲು ಮತ್ತು ಎಲ್ಲರಿಗೂ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಪ್ರಧಾನ ಮಂತ್ರಿ ಜನ ಧನ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಗಳು ಸೇರಿದಂತೆ ಕನಿಷ್ಠ ಉಳಿತಾಯ ಠೇವಣಿ ಖಾತೆಗಳು (ಬಿಎಸ್ಬಿಡಿಎ) ಶೂನ್ಯ ಠೇವಣಿ ಉಳಿತಾಯ ಖಾತೆಗಳ ವ್ಯಾಪ್ತಿಗೆ ಬರುತ್ತವೆ. ಈ ಖಾತೆಗಳು ಕನಿಷ್ಠ ಠೇವಣಿ ಹೊಂದಿರಬೇಕು ಎಂಬ ನಿಯಮ ಇಲ್ಲ. ಈ ಖಾತೆದಾರರಿಗೆ ಠೇವಣಿ ಇಡುವುದು, ಹಣ ಪಡೆಯುವುದು ಮತ್ತು ಎಟಿಎಂ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಯಾವ ದಂಡವನ್ನೂ ವಿಧಿಸಲಾಗುವುದಿಲ್ಲ. ದೇಶದಲ್ಲಿ ಇಂತಹ ಖಾತೆಗಳು 73 ಕೋಟಿಯಷ್ಟಿವೆ ಎಂದು ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ..