ಕ್ರಿಕೆಟ್ ಅಂಕಿ ಸಂಖ್ಯೆಗಳ ಒಡನಾಡಿಗೆ 80ರ ಸಂಭ್ರಮ
ಬೆಂಗಳೂರು: ‘ವಯಸ್ಸೊಂದು ಸಂಖ್ಯೆಯಷ್ಟೇ. ಸಾಧನೆಯ ಹಾದಿಯಲ್ಲಿ ವಯಸ್ಸು ಅಡ್ಡಿಯಾಗದು..’ ಎನ್ನುವ ಮಾತನ್ನು ಹಲವು ದಿಗ್ಗಜರು ಹೇಳುತ್ತಲೇ ಇರುತ್ತಾರೆ. ಆದರೆ ಎಚ್.ಆರ್. ಗೋಪಾಲಕೃಷ್ಣ ಅವರ ಜೀವನವೇ ಕ್ರಿಕೆಟ್ ಅಂಕಿ ಸಂಖ್ಯೆಗಳ ಕಣಜ. 52 ವರ್ಷಗಳ ದೀರ್ಘ ಕಾಲದಿಂದ ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್ನ ಅಪರೂಪದ ದಾಖಲೆಗಳನ್ನು ಶೋಧಿಸಿ ಕ್ರೀಡಾಪ್ರಿಯರಿಗೆ ಉಣಬಡಿಸ

ಬೆಂಗಳೂರು: ‘ವಯಸ್ಸೊಂದು ಸಂಖ್ಯೆಯಷ್ಟೇ. ಸಾಧನೆಯ ಹಾದಿಯಲ್ಲಿ ವಯಸ್ಸು ಅಡ್ಡಿಯಾಗದು..’ ಎನ್ನುವ ಮಾತನ್ನು ಹಲವು ದಿಗ್ಗಜರು ಹೇಳುತ್ತಲೇ ಇರುತ್ತಾರೆ. ಆದರೆ ಎಚ್.ಆರ್. ಗೋಪಾಲಕೃಷ್ಣ ಅವರ ಜೀವನವೇ ಕ್ರಿಕೆಟ್ ಅಂಕಿ ಸಂಖ್ಯೆಗಳ ಕಣಜ. 52 ವರ್ಷಗಳ ದೀರ್ಘ ಕಾಲದಿಂದ ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್ನ ಅಪರೂಪದ ದಾಖಲೆಗಳನ್ನು ಶೋಧಿಸಿ ಕ್ರೀಡಾಪ್ರಿಯರಿಗೆ ಉಣಬಡಿಸಿದ್ದಾರೆ. ಶುಕ್ರವಾರ 80ನೇ ವಸಂತಕ್ಕೆ ಕಾಲಿಟ್ಟ ಅವರು ಇಂತಹ ಅಂಕಿ ಸಂಖ್ಯೆಗಳನ್ನು ದಾಖಲಿಸಿರುವ ‘ರೆಕಾರ್ಡ್ಸ್ ಗ್ಯಾಲೋರ್–ಎ ಮೆಮೊರ್’ ಕೃತಿಯನ್ನು ಬಿಡುಗಡೆಗೊಳಿಸಿದರು. ಸ್ಕೋರರ್, ಅಂಪೈರ್ ಮತ್ತು ಅಂಕಿ ಸಂಖ್ಯೆ ತಜ್ಞರಾಗಿ ತಮ್ಮ ಅನುಭವವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದ್ದ ದಿನಗಳಲ್ಲಿಯೇ ತಮ್ಮ ಕಾಯಕ ಆರಂಭಿಸಿದ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಿಂದ ಇಲ್ಲಿಯವರೆಗಿನ ಎಲ್ಲ ಪಂದ್ಯಗಳ ಅಂಕಿ ಸಂಖ್ಯೆಗಳನ್ನು ದಾಖಲಿಸಿದವರು. ಮೂಲತಃ ಹಾಸನ ಜಿಲ್ಲೆಯವರಾದ ಗೋಪಾಲಕೃಷ್ಣ ಅವರು ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಕ್ರಿಕೆಟ್ ತಂಡದಲ್ಲಿ ಆಡಿದ್ದರು. ದಕ್ಷಿಣ ವಲಯ - ಆಸ್ಟ್ರೇಲಿಯನ್ಸ್ ನಡುವೆ 1969ರ ಡಿಸೆಂಬರ್ನಲ್ಲಿ ಬೆಂಗ ಳೂರಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ನಡೆದಿತ್ತು. ಆಗ ಸ್ಕೋರರ್ ಆಗಿ ಪದಾರ್ಪಣೆ ಮಾಡಿದ್ದರು.1974ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಣ ಟೆಸ್ಟ್ನಲ್ಲಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಪಯಣ ಆರಂಭವಾಗಿತ್ತು. 2018ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಅಫ್ಗಾನಿಸ್ತಾನ ಟೆಸ್ಟ್ ಅವರು ಕಾರ್ಯನಿರ್ವಹಿಸಿದ ನೂರನೇ ಪಂದ್ಯವಾಗಿತ್ತು. 1977ರಲ್ಲಿ ಅವರು ಆಕಾಶವಾಣಿಯ ಅಧಿಕೃತ ಅಂಕಿ–ಸಂಖ್ಯೆ ತಜ್ಞರಾಗಿ ನೇಮಕವಾದರು. ಕಾಮೆಂಟ್ರಿ ತಂಡಕ್ಕೆ ದಾಖಲೆಗಳನ್ನು ಒದಗಿಸುವ ಕಾರ್ಯ ನಿರ್ವಹಿಸಿದರು. ದೂರದರ್ಶನ, ಬಿಸಿಸಿಐ ವೆಬ್ಸೈಟ್ಗಳಿಗೂ ಕಾರ್ಯನಿರ್ವಹಿಸಿದ್ದಾರೆ.ಕೆಎಸ್ಸಿಎ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಕ್ರಿಕೆಟ್ ದಿಗ್ಗಜ ಜಿ.ಆರ್. ವಿಶ್ವನಾಥ್, ‘ನನ್ನ ಮತ್ತು ಗೋಪಾಲಕೃಷ್ಣ ಒಡನಾಟ ತುಂಬಾ ಹಳೆಯದು. ಅವರು ಕೊಟ್ಟ ಎರಡು ಅಲ್ಬಮ್ಗಳು ಈಗಲೂ ನನ್ನ ಬಳಿ ಇವೆ. ನಾನು ರಣಜಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾಡಿದ ಸಾಧನೆಗಳನ್ನು ಅವುಗಳಲ್ಲಿ ದಾಖಲಿಸಿದ್ದಾರೆ’ ಎಂದು ನೆನಪಿಸಿಕೊಂಡರು.ಈ ಸಂದರ್ಭದಲ್ಲಿ ಹಾಜರಿದ್ದ ಐಸಿಸಿ ಕ್ರಿಕೆಟ್ ರೆಫರಿ ಜಾವಗಲ್ ಶ್ರೀನಾಥ್, ‘ನಾನು ರಣಜಿ ಪಂದ್ಯ ಆಡುವ ದಿನಗಳಿಂದಲೂ ಗೋಪಾಲಕೃಷ್ಣ ಅವರೊಂದಿಗೆ ಒಡನಾಟವಿದೆ. ಆಗ ಕಂಪ್ಯೂಟರ್ ಇರಲಿಲ್ಲ. ಎಲ್ಲಿಯೇ ಪಂದ್ಯಗಳು ನಡೆದರೂ ಗೋಪಾಲಕೃಷ್ಣ ಅವರು ದೊಡ್ಡ ಪೆಟ್ಟಿಗೆಯಲ್ಲಿ ಕ್ರಿಕೆಟ್ ದಾಖಲೆ ಪುಸ್ತಕಗಳನ್ನು ಹೊತ್ತುಕೊಂಡು ಬರುತ್ತಿದ್ದರು. ಎಲ್ಲವನ್ನೂ ಆಳವಾಗಿ ಅಧ್ಯಯನ ಮಾಡಿ ನಿಖರ ಅಂಕಿ ಅಂಶಗಳನ್ನು ಒದಗಿಸುತ್ತಿದ್ದರು. ಆಟಗಾರರೊಂದಿಗೂ ಹಂಚಿಕೊಂಡು ಸಾಧನೆಗೆ ಪ್ರೇರಣೆ ನೀಡುತ್ತಿದ್ದರು’ ಎಂದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಕ್ರಿಕೆಟಿಗರಾದ ಸುಧಾಕರ್ ರಾವ್, ರಘುನಾಥ್ ಬಿರಾಲ, ಅವಿನಾಶ್ ವೈದ್ಯ, ಅಭಿರಾಮ್, ಲೇಖಕ ಆರ್. ಮೋಹನ್ ಹಾಜರಿದ್ದರು. ಬೆಳೆಸಿದವರನ್ನು ನೆನಪಿಸಿಕೊಂಡ ಎಚ್ಆರ್ ಜಿ ಕ್ರಿಕೆಟ್ ನನಗೆಲ್ಲವನ್ನೂ ಕೊಟ್ಟಿದೆ. ಸಾರ್ಥಕ ಸೇವೆಯ ಹೆಮ್ಮೆ ಇದೆ. ದಿಗ್ಗಜ ಕ್ರಿಕೆಟಿಗರ ಸಾಧನೆಗಳನ್ನು ದಾಖಲಿಸಿದ್ದೇನೆ. ಗೌರವ ಸಂಪಾದಿಸಿದ್ದೇನೆ. ಕುಟುಂಬವೂ ನನಗೆ ಬೆಂಬಲವಾಗಿ ನಿಂತಿದೆ. ಆದರೆ ನನ್ನ ಸಾಧನೆಗೆ ಪ್ರಮುಖವಾಗಿ ನಾಲ್ವರು ಕಾರಣರು. ಅದರಲ್ಲಿ ಆನಂದಜೀ ದೊಸ್ಸಾ, ಎ.ವಿ. ವೆಂಕಟನಾರಾಯಣ, ರಘುನಾಥ್ ಬಿರಾಲಾ ಮತ್ತು ಸುಂದರರಾಜ್ ಕವಲೆ ಅವರು ನೀಡಿದ ಪ್ರೋತ್ಸಾಹದಿಂದ ಸಂಖ್ಯಾತಜ್ಞನಾಗಿ ಬೆಳೆದೆ ಎಂದು ಗೋಪಾಲಕೃಷ್ಣ ನೆನಪಿಸಿಕೊಂಡರು.