ರೈಲ್ವೆ ಅಪಘಾತ ಶೇ 88ರಷ್ಟು ಇಳಿಕೆ: ಮೋದಿ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳಿವು...
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಕಳೆದ ಹನ್ನೆರಡು ವರ್ಷಗಳಲ್ಲಿ ಅನಾಹುತಕಾರಿ ರೈಲು ಅಪಘಾತಗಳನ್ನು ಶೇಕಡ 88ರಷ್ಟು ತಗ್ಗಿಸಿದೆ ಎಂದು ವರದಿಯಾಗಿದೆ. 2014-15ರಲ್ಲಿ 135 ರೈಲ್ವೆ ಅಪಘಾತಗಳು ದಾಖಲಾಗಿದ್ದರೆ, 2025-26ರಲ್ಲಿ ಈ ಸಂಖ್ಯೆ 16ಕ್ಕೆ ಕುಸಿದಿದೆ. ಪ್ರಸಕ್ತ ಸಾಲಿನಲ್ಲಿ ಜೂನ್ವರೆಗೆ ಕೇವಲ ಎರಡು ರೈಲು ಅಪಘಾತಗಳು ವರದಿಯಾಗಿವೆ.ಪ್ರತಿ ದಶಲಕ್ಷ ರೈಲು-ಕಿಲೋಮೀಟರ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಕಳೆದ ಹನ್ನೆರಡು ವರ್ಷಗಳಲ್ಲಿ ಅನಾಹುತಕಾರಿ ರೈಲು ಅಪಘಾತಗಳನ್ನು ಶೇಕಡ 88ರಷ್ಟು ತಗ್ಗಿಸಿದೆ ಎಂದು ವರದಿಯಾಗಿದೆ. 2014-15ರಲ್ಲಿ 135 ರೈಲ್ವೆ ಅಪಘಾತಗಳು ದಾಖಲಾಗಿದ್ದರೆ, 2025-26ರಲ್ಲಿ ಈ ಸಂಖ್ಯೆ 16ಕ್ಕೆ ಕುಸಿದಿದೆ. ಪ್ರಸಕ್ತ ಸಾಲಿನಲ್ಲಿ ಜೂನ್ವರೆಗೆ ಕೇವಲ ಎರಡು ರೈಲು ಅಪಘಾತಗಳು ವರದಿಯಾಗಿವೆ.ಪ್ರತಿ ದಶಲಕ್ಷ ರೈಲು-ಕಿಲೋಮೀಟರ್ ಸಂಚಾರದಲ್ಲಿ ಸಂಭವಿಸುವ ಅಪಘಾತಗಳನ್ನು ಅಳೆಯುವ ‘ಅನಾಹುತಕಾರಿ ಅಪಘಾತ ಸೂಚ್ಯಂಕ’ವು (Consequential Accident Index) 2014-15ರಲ್ಲಿ 0.11ರಿಂದ 2025-26ರಲ್ಲಿ 0.01ಕ್ಕೆ ಕುಸಿದಿದ್ದು, ಶೇ 91ರಷ್ಟು ಸುಧಾರಣೆಯನ್ನು ಸೂಚಿಸುತ್ತದೆ.ಸುರಕ್ಷತಾ ಉಪಕ್ರಮಗಳ ಮೇಲಿನ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿಕೊಂಡಿದೆ. ಸುರಕ್ಷತಾ ಬಜೆಟ್ 2013-14ರಲ್ಲಿ ₹39,200 ಕೋಟಿಯಷ್ಟಿತ್ತು. 2025-26ರಲ್ಲಿ ₹1,17,693 ಕೋಟಿಗೆ ಹೆಚ್ಚಾಗಿದ್ದು, 2026-27ಕ್ಕೆ ₹1,20,389 ಕೋಟಿ ಅನುಮೋದಿಸಲಾಗಿದೆ.ಮಾನವ ಸಹಜ ತಪ್ಪುಗಳಿಂದ ಆಗುವ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ 2026ರ ಜೂನ್ 30ರವರೆಗೆ 6,671 ನಿಲ್ದಾಣಗಳಲ್ಲಿ ಪಾಯಿಂಟ್ಗಳು ಮತ್ತು ಸಿಗ್ನಲ್ಗಳ ಕೇಂದ್ರೀಕೃತ ಕಾರ್ಯಾಚರಣೆಯೊಂದಿಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ಸುಧಾರಿತ ಸುರಕ್ಷತೆಗಾಗಿ 10,395 ಲೆವೆಲ್ ಕ್ರಾಸಿಂಗ್ ಗೇಟ್ಗಳಿಗೆ ಇಂಟರ್ಲಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.ವಿದ್ಯುತ್ ಉಪಕರಣಗಳ ಮೂಲಕ ಹಳಿ ಮೇಲೆ ರೈಲು ಇರುವುದನ್ನು ಖಚಿತಪಡಿಸಲು ‘ಟ್ರ್ಯಾಕ್ ಸರ್ಕ್ಯೂಟಿಂಗ್ ವ್ಯವಸ್ಥೆ’ಯನ್ನು 6,671 ನಿಲ್ದಾಣಗಳಲ್ಲಿ ಜಾರಿಗೊಳಿಸಲಾಗಿದೆ. ಕಡ್ಡಾಯ ಪರಿಶೀಲನೆ, ಸಿಗ್ನಲಿಂಗ್ ಸುರಕ್ಷತೆ ಕುರಿತು ವಿವರವಾದ ನಿಯಮಾವಳಿ ಹೊರಡಿಸಲಾಗಿದೆ. ಜತೆಗೆ, ಸಿಗ್ನಲ್ ಮತ್ತು ದೂರಸಂಪರ್ಕ ಉಪಕರಣಗಳ ಸಂಪರ್ಕ ಕಡಿತ ಮತ್ತು ಮರುಸಂಪರ್ಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.ರೈಲು ಚಾಲಕರು (ಲೋಕೋಪೈಲಟ್) ಹೆಚ್ಚು ಜಾಗರೂಕತೆಯಿಂದ ಇರುವಂತೆ ನೋಡಿಕೊಳ್ಳಲು ಎಂಜಿನ್ ಬಳಿ ಇರುವಂತಹ ಸ್ಥಳದಲ್ಲಿ (ಲೋಕೋಮೋಟಿವ್) ಸಿಸಿಟಿವಿ ಕ್ಯಾಮೆರಾ ಸೇರಿದಂತೆ ‘ವಿಜಿಲೆನ್ಸ್ ಕಂಟ್ರೋಲ್ ಡಿವೈಸ್’ಗಳನ್ನು ಅಳವಡಿಸಲಾಗಿದೆ. ಮಂಜು ಮುಸುಕಿದ ವಾತಾವರಣದಲ್ಲಿ ಸ್ಪಷ್ಟವಾಗಿ ಕಾಣಿಸಲು ಸಿಗ್ನಲ್ಗಳಿಗಿಂತ ಮುಂಚಿನ ಓವರ್ಹೆಡ್ ವೈರ್ ಕಂಬಗಳ ಮೇಲೆ ರೆಟ್ರೋ-ರಿಫ್ಲೆಕ್ಟಿವ್ ಸಿಗ್ಮಾ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಹಾಗೆಯೇ, ಜಿಪಿಎಸ್ ಆಧಾರಿತ ‘ಫಾಗ್ ಸೇಫ್ಟಿ ಡಿವೈಸ್’ಗಳು ರೈಲು ಚಾಲಕರಿಗೆ ಸಿಗ್ನಲ್ ಮತ್ತು ಲೆವೆಲ್ ಕ್ರಾಸಿಂಗ್ನಂತಹ ಪ್ರಮುಖ ಸ್ಥಳಗಳ ದೂರದ ಮಾಹಿತಿಯನ್ನು ನೀಡುತ್ತವೆ.ರೈಲು ಹಳಿಗಳು ಮತ್ತು ಮೂಲಸೌಕರ್ಯದಲ್ಲಿನ ಸುಧಾರಣೆ...ಹಳಿಗಳ ನವೀಕರಣದ ಭಾಗವಾಗಿ 60 ಕೆ.ಜಿ ತೂಕದ, 90 ಯುಟಿಎಸ್ ಸಾಮರ್ಥ್ಯದ ಗಟ್ಟಿಮುಟ್ಟಾದ ರೈಲು ಹಳಿಗಳನ್ನು ಜೋಡಿಸಲಾಗುತ್ತಿದೆ. ಇದರ ಜೊತೆಗೆ ಎಲಾಸ್ಟಿಕ್ ಫಾಸ್ಟನಿಂಗ್ ಹೊಂದಿರುವ ಸಿಮೆಂಟ್ ಕಾಂಕ್ರೀಟ್ ಸ್ಲೀಪರ್ಗಳು, ಆಯ್ದ ಜಂಕ್ಷನ್ಗಳಲ್ಲಿ ‘ಫ್ಯಾನ್’ ಆಕಾರದ ಟರ್ನ್ಔಟ್ ವಿನ್ಯಾಸ ಹಾಗೂ ಗಿರ್ಡರ್ ಸೇತುವೆಗಳ ಮೇಲೆ ಸ್ಟೀಲ್ ಚಾನೆಲ್ ಅಥವಾ ಎಚ್-ಬೀಮ್ ಸ್ಲೀಪರ್ಗಳನ್ನು ಅಳವಡಿಸಲಾಗುತ್ತಿದೆ.ಮಾನವ ಸಹಜ ತಪ್ಪುಗಳನ್ನು ತಡೆಯುವ ಹಾಗೂ ಕಾಮಗಾರಿಯ ನಿಖರತೆ ಹೆಚ್ಚಿಸುವ ಉದ್ದೇಶದಿಂದ ಹಳಿ ಜೋಡಣೆ ಪ್ರಕ್ರಿಯೆಯಲ್ಲಿ ವಿಶೇಷ ಯಂತ್ರೋಪಕರಣಗಳ ಬಳಕೆ ಹೆಚ್ಚಿಸಲಾಗಿದೆ. ಅಲ್ಲದೆ, ಹಳಿ ಜೋಡಣೆಗಳ (ಜಾಯಿಂಟ್ ವೆಲ್ಡಿಂಗ್) ಸಂಖ್ಯೆಯನ್ನು ಕಡಿತಗೊಳಿಸಿ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ದೀರ್ಘಾವಧಿಯ ರೈಲು ಪ್ಯಾನಲ್ಗಳನ್ನು ಪೂರೈಸಲಾಗುತ್ತಿದೆ.ದೋಷಪೂರಿತ ಹಳಿಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಮತ್ತು ತೆಗೆದುಹಾಕಲು ಅಲ್ಟ್ರಾಸಾನಿಕ್ ದೋಷ ಪತ್ತೆ ವಿಧಾನವನ್ನು ಅಳವಡಿಸಲಾಗುತ್ತದೆ. ಫ್ಲ್ಯಾಶ್ ಬಟ್ ವೆಲ್ಡಿಂಗ್ ತಂತ್ರಜ್ಞಾನದ ಅಳವಡಿಕೆಯು ಹಳಿಗಳ ಮೇಲಿನ ಗಂಟುಗಳನ್ನು ಸುಧಾರಿಸುತ್ತದೆ. ಆಸಿಲೇಶನ್ ಮಾನಿಟರಿಂಗ್ ಸಿಸ್ಟಮ್ಗಳು ಮತ್ತು ಟ್ರ್ಯಾಕ್ ರೆಕಾರ್ಡಿಂಗ್ ಕಾರುಗಳ ಮೂಲಕ ಹಳಿಗಳ ವಿನ್ಯಾಸವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಹಾಗೆಯೇ ಬಿರುಕುಗಳನ್ನು ಪರೀಕ್ಷಿಸಲು ನಿಯಮಿತ ಗಸ್ತು ನಡೆಸಲಾಗುತ್ತದೆ. ಹೊಸ ಟರ್ನ್ಔಟ್ ನವೀಕರಣ ವಿಧಾನಗಳಲ್ಲಿ ಥಿಕ್ ವೆಬ್ ಸ್ವಿಚ್ಗಳು ಮತ್ತು ವೆಲ್ಡಬಲ್ ಸಿಎಂಎಸ್ ಕ್ರಾಸಿಂಗ್ಗಳು ಸೇರಿವೆ.ಸುರಕ್ಷತೆ ಕುರಿತು ಸಿಬ್ಬಂದಿಗೆ ಮಾರ್ಗದರ್ಶನ ನೀಡಲು ನಿಯಮಿತ ತಪಾಸಣೆ ನಡೆಸಲಾಗುತ್ತದೆ. ಇದಕ್ಕೆ ಪೂರಕವಾಗಿ ರೈಲು ಹಳಿ ಆಸ್ತಿಗಳ ವೆಬ್-ಆಧಾರಿತ ಆನ್ಲೈನ್ ಮೇಲ್ವಿಚಾರಣಾ ವ್ಯವಸ್ಥೆಯು ನಿರ್ವಹಣಾ ಯೋಜನೆ ಮತ್ತು ಸಂಪನ್ಮೂಲಗಳ ಸದ್ಬಳಕೆಗೆ ನೆರವಾಗುತ್ತದೆ. ಸುರಕ್ಷತಾ ಕ್ರಮಗಳು ಇಂಟಿಗ್ರೇಟೆಡ್ ಬ್ಲಾಕ್ಗಳು, ಕಾರಿಡಾರ್ ಬ್ಲಾಕ್ಗಳು, ಕೆಲಸದ ಸ್ಥಳದ ಸುರಕ್ಷತೆ ಮತ್ತು ಮುಂಗಾರು ಮುನ್ನೆಚ್ಚರಿಕೆಗಳಿಗೂ ವಿಸ್ತರಿಸುತ್ತದೆ.ಕಾರ್ಯಾಚರಣೆಯ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕೋಚ್ಗಳು ಮತ್ತು ಬೋಗಿಗಳ ತಡೆಗಟ್ಟುವ ನಿರ್ವಹಣೆಯನ್ನು ಮಾಡಲಾಗುತ್ತದೆ. ಜತೆಗೆ, ಸಾಂಪ್ರದಾಯಿಕ ಐಸಿಎಫ್ ವಿನ್ಯಾಸದ ಕೋಚ್ಗಳನ್ನು ಹಂತ ಹಂತವಾಗಿ ಎಲ್ಎಚ್ಬಿ ವಿನ್ಯಾಸಕ್ಕೆ ಬದಲಾಯಿಸುವ ಕಾರ್ಯ ನಡೆಯುತ್ತಿದೆ. ಬ್ರಾಡ್ ಗೇಜ್ ಮಾರ್ಗಗಳಲ್ಲಿನ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್ಗಳನ್ನು 2019ರ ಜನವರಿ ವೇಳೆಗೆ ತೆರವುಗೊಳಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ನಿಯಮಿತ ತಪಾಸಣೆ ಮತ್ತು ದುರಸ್ತಿಗಳ ಮೂಲಕ ರೈಲ್ವೆ ಸೇತುವೆಗಳ ಸುರಕ್ಷತೆ ಕಾಯ್ದುಕೊಳ್ಳಲಾಗುತ್ತಿದೆ.