ಸಂಪಾದಕೀಯ|ಸಂತ್ರಸ್ತೆ ಸೋಲು, ಆರೋಪಿ ಗೆಲುವು:ಹಳೆಯ ಸಂಕಥನಕ್ಕೆ ಮತ್ತೊಮ್ಮೆ ಅಡಿಗೆರೆ
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕ ಮತ್ತು ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ನ್ಯಾಯಾಲಯ ಖುಲಾಸೆಗೊಳಿಸಿರುವ ಪ್ರಕರಣ ಹಲವು ಆತಂಕಕಾರಿ ಪ್ರಶ್ನೆಗಳನ್ನು ಎತ್ತುವಂತಿದೆ. ಇವು ಹೊಸ ಪ್ರಶ್ನೆಗಳೇನೂ ಅಲ್ಲ. ಲೈಂಗಿಕ ಕಿರುಕುಳ ಆರೋಪದ ಪ್ರಕರಣಗಳಲ್ಲಿ, ವಿಶೇಷವಾಗಿ ಪ್ರಭಾವಿ ವ್ಯಕ್ತಿಗಳು ಆರೋಪಿಗಳಾಗಿ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕ ಮತ್ತು ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ನ್ಯಾಯಾಲಯ ಖುಲಾಸೆಗೊಳಿಸಿರುವ ಪ್ರಕರಣ ಹಲವು ಆತಂಕಕಾರಿ ಪ್ರಶ್ನೆಗಳನ್ನು ಎತ್ತುವಂತಿದೆ. ಇವು ಹೊಸ ಪ್ರಶ್ನೆಗಳೇನೂ ಅಲ್ಲ. ಲೈಂಗಿಕ ಕಿರುಕುಳ ಆರೋಪದ ಪ್ರಕರಣಗಳಲ್ಲಿ, ವಿಶೇಷವಾಗಿ ಪ್ರಭಾವಿ ವ್ಯಕ್ತಿಗಳು ಆರೋಪಿಗಳಾಗಿರುವ ಅನೇಕ ಪ್ರಕರಣಗಳಲ್ಲಿ, ಇಂಥ ಪ್ರಶ್ನೆಗಳು ಈ ಮೊದಲೂ ಉದ್ಭವಿಸಿವೆ. ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿರುವವರು ಸಾಮಾನ್ಯ ವ್ಯಕ್ತಿಗಳಾಗಿರದೆ, ದೇಶದ ಹೆಸರಾಂತ ಕುಸ್ತಿಪಟುಗಳಾಗಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಮತ್ತು ವಿಶ್ವಾಸಾರ್ಹತೆ ಹೊಂದಿದವರಾಗಿದ್ದಾರೆ. ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಕೃತ್ಯಗಳ ಆರೋಪಗಳು ಬ್ರಿಜ್ ಭೂಷಣ್ ಅವರ ಮೇಲಿದ್ದವು. ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಆರು ಮಹಿಳಾ ಕುಸ್ತಿಪಟುಗಳು ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಮತ್ತು ಸಾಕ್ಷಿಗಳ ಹೇಳಿಕೆಗಳಲ್ಲಿನ ವೈರುಧ್ಯದ ಕಾರಣ ನೀಡಿ ನ್ಯಾಯಾಲಯ ಆರೋಪಗಳನ್ನು ತಳ್ಳಿಹಾಕಿದೆ. ದೂರು ಸಲ್ಲಿಸುವಲ್ಲಿ ಆಗಿರುವ ವಿಳಂಬ ಮತ್ತು ಘಟನೆ ನಡೆದ ಬಳಿಕ ದೂರುದಾರರ ವರ್ತನೆಯೂ ಖುಲಾಸೆಗೆ ಕಾರಣಗಳಾಗಿವೆ ಎಂದು ನ್ಯಾಯಾಲಯ ಹೇಳಿದೆ. ಸಾಮಾನ್ಯವಾಗಿ ಮೂರನೇ ಎರಡರಷ್ಟು ಲೈಂಗಿಕ ಕಿರುಕುಳದ ಪ್ರಕರಣಗಳು ಶಿಕ್ಷೆಯಲ್ಲಿ ಕೊನೆಗೊಳ್ಳುವುದಿಲ್ಲ. ಆರೋಪಿಗಳು ಪ್ರಭಾವಿಗಳಾಗಿದ್ದರಂತೂ ಶಿಕ್ಷೆಯಾಗುವ ಸಾಧ್ಯತೆ ಮತ್ತಷ್ಟು ಕಡಿಮೆ. ಬ್ರಿಜ್ ಭೂಷಣ್ ಬಿಜೆಪಿ ಸಂಸದರಾಗಿದ್ದರು ಹಾಗೂ ಪಕ್ಷ–ಸರ್ಕಾರದಲ್ಲಿ ಪ್ರಭಾವ ಹೊಂದಿರುವ ನಾಯಕರಾಗಿದ್ದಾರೆ.ಲೈಂಗಿಕ ಕಿರುಕುಳವನ್ನು ಪ್ರತಿಭಟಿಸಿದ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಾತ್ರವಲ್ಲದೆ, ಇಡೀ ವ್ಯವಸ್ಥೆಯ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿಯನ್ನು ಎದುರಿಸಿದರು. ಎಫ್ಐಆರ್ ದಾಖಲಿಸುವುದೂ ಸುಲಭ ಆಗಿರಲಿಲ್ಲ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರವಷ್ಟೇ ಎಫ್ಐಆರ್ದಾಖಲಾಗಿತ್ತು. ಅಪ್ರಾಪ್ತ ಕುಸ್ತಿಪಟುವೊಬ್ಬರು ಬ್ರಿಜ್ ಭೂಷಣ್ ವಿರುದ್ಧದ ದೂರು ಹಿಂಪಡೆದಿದ್ದರಿಂದಾಗಿ, ‘ಪೋಕ್ಸೊ’ಕಾಯ್ದೆಯಡಿ ದಾಖಲಾಗಿದ್ದ ಪ್ರಕರವನ್ನು ಕೈಬಿಡಲಾಯಿತು. 2023ರಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದಾಗ, ಪ್ರಕರಣ ದೇಶದ ಗಮನ ಸೆಳೆದಿತ್ತು. ಸಂಸತ್ತಿನತ್ತ ಮೆರವಣಿಗೆ ನಡೆಸಲು ಮುಂದಾದ ಕುಸ್ತಿಪಟುಗಳನ್ನು ಪೊಲೀಸರು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದ್ದರು. ಕೆಲವು ಕುಸ್ತಿಪಟುಗಳು ತಾವು ಗೆದ್ದಿದ್ದ ಪದಕಗಳನ್ನು ಹರಿದ್ವಾರದಲ್ಲಿ ಗಂಗೆಗೆ ಎಸೆಯಲು ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಪರಿಶೀಲನೆಗಾಗಿ ಕೇಂದ್ರ ಕ್ರೀಡಾ ಸಚಿವಾಲಯ ಮೇಲ್ವಿಚಾರಣಾ ಸಮಿತಿ ರಚಿಸಿತು. ಆದರೆ, ಆ ಸಮಿತಿಯ ವರದಿ ಸಾರ್ವಜನಿಕಗೊಳ್ಳಲೇ ಇಲ್ಲ.ದೆಹಲಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಮಹಿಳಾ ಕುಸ್ತಿಪಟುಗಳು ಹೇಳಿದ್ದಾರೆ. ನಾವಿನ್ನೂ ಆಶಾಭಾವ ಕಳೆದುಕೊಂಡಿಲ್ಲ ಎಂದು ವಿನೇಶ್ ಫೋಗಟ್ ಹೇಳಿದ್ದಾರೆ. ಅಧಿಕಾರ, ಪ್ರಭಾವ ಮತ್ತು ಸಂಪನ್ಮೂಲಗಳನ್ನು ಹೊಂದಿರುವವರ ವಿರುದ್ಧ ಕಾನೂನು ಹೋರಾಟ ನಡೆಸುವುದು ಹಾಗೂ ನ್ಯಾಯ ಪಡೆಯುವುದು ಎಷ್ಟು ಕಷ್ಟ ಎನ್ನುವುದಕ್ಕೆ ಈ ಪ್ರಕರಣ ಮತ್ತೊಂದು ನಿದರ್ಶನವಾಗಿದೆ. ಕೇರಳದಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಕ್ರೈಸ್ತ ಸನ್ಯಾಸಿನಿಯ ಮೇಲೆ ಪಾದ್ರಿಯೊಬ್ಬ ಅತ್ಯಾಚಾರ ಎಸಗಿರುವ ಆರೋಪದ ಪ್ರಕರಣಗಳೂ ಇದೇ ವಾಸ್ತವವನ್ನು ನೆನಪಿಸುತ್ತವೆ. ಇಂತಹ ಪ್ರಕರಣಗಳು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮತ್ತೆ ಮತ್ತೆ ವಿಫಲವಾದರೆ, ದೌರ್ಜನ್ಯಕ್ಕೆ ಗುರಿಯಾದ ಮಹಿಳೆಯರು ದೂರು ನೀಡಲು ಹಿಂಜರಿಯುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಶಿಕ್ಷೆಗೆ ಒಳಗಾಗುವುದು ಸಂತ್ರಸ್ತೆಯೇ ಹೊರತು ಆರೋಪಿಯಲ್ಲ ಎನ್ನುವ ಸ್ಥಿತಿ ಸೃಷ್ಟಿಯಾಗುತ್ತದೆ. ಬ್ರಿಜ್ ಭೂಷಣ್ ವಿರುದ್ಧ ದೂರು ನೀಡಿದವರು ಸಾಮಾಜಿಕವಾಗಿ ಮತ್ತು ವೃತ್ತಿಪರವಾಗಿ ಕಿರುಕುಳಕ್ಕೆ ಗುರಿಯಾಗಿದ್ದಾರೆ. ಸಂತ್ರಸ್ತೆ ನೋವು ಅನುಭವಿಸಿ ಆರೋಪಿ ಜಯಶಾಲಿ ಆಗುವಂತಾದರೆ, ಘೋರ ಅಪರಾಧಗಳ ಪ್ರಕರಣಗಳಲ್ಲಿ ಸಂತ್ರಸ್ತೆಯ ಪರವಾಗಿ ನಿಂತು ನ್ಯಾಯ ಒದಗಿಸಿಕೊಡುವ ಶಕ್ತಿ ವ್ಯವಸ್ಥೆಗೆ ಇದೆಯೇ ಎನ್ನುವ ಗಂಭೀರ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.