ಸೇನಾಪುರ: ಎಎಸ್ಎಫ್ ಪೀಡಿತ ವಲಯ ಘೋಷಣೆ
ಕುಂದಾಪುರ: ಬೈಂದೂರು, ಕುಂದಾಪುರ ತಾಲ್ಲೂಕಿನ ವಿವಿಧೆಡೆ ಕಳೆದ ತಿಂಗಳಿನಿಂದ ಕಾಡು ಹಂದಿ, ಸಾಕು ಹಂದಿಗಳಲ್ಲಿ ವರದಿಯಾಗಿದ್ದ ಸಾವಿನ ಪ್ರಕರಣಗಳ ಮಾದರಿಗಳ ಪರೀಕ್ಷೆಯಲ್ಲಿ ಆಫ್ರಿಕನ್ ಸ್ವೈನ್ ಫೀವರ್ (ಎಎಸ್ಎಫ್) ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೇನಾಪುರ ಗ್ರಾಮದ ಸುತ್ತ 1 ಕಿ.ಮೀ. ವ್ಯಾಪ್ತಿಯನ್ನು ರೋಗಪೀಡಿತ ವಲಯ, 10 ಕಿ.ಮೀ. ವ್ಯಾಪ್ತಿಯನ್ನು ಸರ್ವೇಕ್ಷಣಾ ವಲಯ

ಕುಂದಾಪುರ: ಬೈಂದೂರು, ಕುಂದಾಪುರ ತಾಲ್ಲೂಕಿನ ವಿವಿಧೆಡೆ ಕಳೆದ ತಿಂಗಳಿನಿಂದ ಕಾಡು ಹಂದಿ, ಸಾಕು ಹಂದಿಗಳಲ್ಲಿ ವರದಿಯಾಗಿದ್ದ ಸಾವಿನ ಪ್ರಕರಣಗಳ ಮಾದರಿಗಳ ಪರೀಕ್ಷೆಯಲ್ಲಿ ಆಫ್ರಿಕನ್ ಸ್ವೈನ್ ಫೀವರ್ (ಎಎಸ್ಎಫ್) ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೇನಾಪುರ ಗ್ರಾಮದ ಸುತ್ತ 1 ಕಿ.ಮೀ. ವ್ಯಾಪ್ತಿಯನ್ನು ರೋಗಪೀಡಿತ ವಲಯ, 10 ಕಿ.ಮೀ. ವ್ಯಾಪ್ತಿಯನ್ನು ಸರ್ವೇಕ್ಷಣಾ ವಲಯ ಎಂದು ಘೋಷಿಸಲಾಗಿದೆ.ಶುಕ್ರವಾರ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಉಡುಪಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ರೆಡ್ಡಪ್ಪ, ಸೋಂಕು ನಿಯಂತ್ರಣಕ್ಕಾಗಿ ರೋಗಪೀಡಿತ, ಸರ್ವೇಕ್ಷಣಾ ವಲಯಗಳಲ್ಲಿ 90 ದಿನಗಳ ಕಾಲ ವಿಶೇಷ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.ರೋಗ ಪೀಡಿತ ವಲಯದ 1 ಕಿ.ಮೀ. ವ್ಯಾಪ್ತಿಯ ಹಂದಿಗಳನ್ನು ‘ಸ್ಟಾಂಪಿಂಗ್ ಔಟ್’ (ಕಲ್ಲಿಂಗ್) ವಿಧಾನದಡಿ ವೈಜ್ಞಾನಿಕವಾಗಿ ನಾಶಪಡಿಸಲಾಗುವುದು. ಈ ಕಾರ್ಯಕ್ಕಾಗಿ ಎಲೆಕ್ಟ್ರಿಕ್ ಸ್ಟನ್ನಿಂಗ್ ಯಂತ್ರವನ್ನು ಕುಂದಾಪುರಕ್ಕೆ ಒದಗಿಸಲಾಗಿದೆ. ಕಲ್ಲಿಂಗ್ ವೇಳೆ ನಾಶಪಡಿಸುವ ಹಂದಿಗಳಿಗೆ ಸರ್ಕಾರದಿಂದ ಪರಿಹಾರಧನ ನೀಡಲಾಗುವುದು. ಸೋಂಕು ದೃಢವಾಗುವ ಮುನ್ನ ಮೃತಪಟ್ಟ ಹಂದಿಗಳಿಗೆ ಪರಿಹಾರ ದೊರೆಯುವುದಿಲ್ಲ. ಮುಖ್ಯ ಪಶುವೈದ್ಯಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಕಲ್ಲಿಂಗ್, ಮಾದರಿ ಸಂಗ್ರಹ, ಆರೋಗ್ಯ ನಿಗಾ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಮಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಾದೇಶಿಕ ಸಂಶೋಧನಾ ಅಧಿಕಾರಿ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಕುಂದಾಪುರ ಭಾಗದಲ್ಲಿ ಕಾಡು ಹಂದಿಗಳ ಸಾವಿನ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಎಎಸ್ಎಫ್ ಸೋಂಕು ಮೊದಲು ಬೆಂಗಳೂರಿನ ಹೆಬ್ಬಾಳ ಪ್ರಯೋಗಾಲಯದಲ್ಲಿ, ಬಳಿಕ ಭೋಪಾಲ್ನ ರಾಷ್ಟ್ರೀಯ ಉಲ್ಲೇಖ ಪ್ರಯೋಗಾಲಯದಲ್ಲೂ ದೃಢಪಟ್ಟಿದೆ. ರಾಷ್ಟ್ರೀಯ ಮಾರ್ಗಸೂಚಿಯಂತೆ ಮುಂದಿನ ಮೂರು ತಿಂಗಳು ಜಿಲ್ಲಾಡಳಿತ, ಪಶುಸಂಗೋಪನೆ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಸೋಂಕು ನಿಯಂತ್ರಣ ಕ್ರಮ ಜಾರಿಗೊಳಿಸಲಿವೆ. ಕಾಡು ಹಂದಿಗಳಲ್ಲಿ ಸೋಂಕು ನಿಯಂತ್ರಿಸುವುದು ಸವಾಲಿನ ಕೆಲಸ. ಸಾರ್ವಜನಿಕರು ಸತ್ತ ಅಥವಾ ಅಸ್ವಸ್ಥ ಹಂದಿಗಳು ಕಂಡುಬಂದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು. ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಮಾದರಿ ಸಂಗ್ರಹಿಸಿ ನಿಗಾ ವಹಿಸಲಾಗುತ್ತಿದೆ ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಕೆ. ಮಾತನಾಡಿ, ಆಫ್ರಿಕನ್ ಸ್ವೈನ್ ಫಿವರ್ ಹಂದಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ವೈರಸ್. ಮನುಷ್ಯರಿಗೆ ಸೋಂಕು ಹರಡುವುದಿಲ್ಲ. ಹಂದಿ ಮೃತಪಟ್ಟರೆ ಗ್ರಾಮ ಪಂಚಾಯಿತಿ, ಪಶುಸಂಗೋಪನೆ, ಆರೋಗ್ಯ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಮೃತಪಟ್ಟ ಹಂದಿಗಳನ್ನು ಸಾರ್ವಜನಿಕರು ಮುಟ್ಟಬಾರದು, ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಕೆ.ಜಿ., ಶಂಕರನಾರಾಯಣ ವಲಯ ಆರ್ಎಫ್ಒ ಸಂದೇಶ್, ಕುಂದಾಪುರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅರುಣ್ ಕುಮಾರ್ ಹೆಗ್ಡೆ, ಬೈಂದೂರು ಪಶುಪಾಲನಾ ಇಲಾಖೆಯ ಡಾ.ಅರುಣ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಭಾಗವಹಿಸಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260808-28-27088555