ಸಿದ್ದರಾಮಯ್ಯರಿಂದ ಡಿಕೆಶಿ ಸರ್ಕಾರ ಅಸ್ಥಿರಗೊಳಿಸುವ ಯತ್ನ: ಗೋವಿಂದ ಕಾರಜೋಳ
ವಿಜಯಪುರ: ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಬಲಿಗರಿಂದ ನಡೆದಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುವುದು ಸಿದ್ದರಾಮಯ್ಯಗೆ ಇಷ್ಟವಿಲ್ಲ. ಈ ಕಾರಣಕ್ಕೆ ಅವರು ಸಂಪುಟ ವಿಸ್ತರಣ

ವಿಜಯಪುರ: ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಬಲಿಗರಿಂದ ನಡೆದಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುವುದು ಸಿದ್ದರಾಮಯ್ಯಗೆ ಇಷ್ಟವಿಲ್ಲ. ಈ ಕಾರಣಕ್ಕೆ ಅವರು ಸಂಪುಟ ವಿಸ್ತರಣೆ ವೇಳೆ ಗೈರಾಗಿದ್ದರು. ಇದೀಗ ಹಿಂದುಳಿದ ವರ್ಗದ ಆಯೋಗದ ವರದಿ ಜಾರಿಗೆ ಹೋರಾಟ ಅಗತ್ಯ ಎಂದು ಹೇಳುತ್ತಿರುವುದು’ ಎಂದು ವಿಶ್ಲೇಷಿಸಿದರು.‘ಸಿದ್ಧರಾಮಯ್ಯ 2013 ರಿಂದ 2018 ಹಾಗೂ 2023 ರಿಂದ 2026ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ಕಾಂತರಾಜು, ಜಯಪ್ರಕಾಶ್ ಹೆಗಡೆ, ಮಧುಸೂದನ್ ನಾಯಕ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗಗಳು ನೀಡಿದ ವರದಿಗಳಲ್ಲಿ ಒಂದನ್ನೂ ಜಾರಿ ಮಾಡದೇ, ತಿಪ್ಪೆಗೆ ಎಸೆದರು. ಇದೀಗ ಏಕಾಏಕಿ ಅವರಿಗೆ ಜ್ಞಾನೋದಯವಾಗಿದೆ. ಹಿಂದುಳಿದವರಿಗೆ ನ್ಯಾಯ ಕೊಡದಿದ್ದರೆ ಹೋರಾಟ ಮಾಡುತ್ತೇನೆ ಎಂದು ಹೇಳಿತ್ತಿರುವುದು ನಂಬಬಹುದೇ’ ಎಂದು ಪ್ರಶ್ನಿಸಿದರು.‘ಸಿದ್ಧರಾಮಯ್ಯನವರಾಗಲಿ ಅಥವಾ ಡಿ.ಕೆ. ಶಿವಕುಮಾರ್ ಅವರಾಗಲಿ ಕಾಂತರಾಜ ವರದಿಯನ್ನು ಏಕೆ ಒಪ್ಪಿಕೊಳ್ಳಲಿಲ್ಲ? ಜಯಪ್ರಕಾಶ್ ಹೆಗಡೆ ವರದಿಯನ್ನು ಏಕೆ ಒಪ್ಪಿಕೊಳ್ಳಲಿಲ್ಲ? ಮಧುಸೂದನ್ ನಾಯಕ್ ವರದಿ ಏಕೆ ಒಪ್ಪಿಕೊಳ್ಳಲಿಲ್ಲ? ಹಿಂದುಳಿದ ವರ್ಗದವರ ವಿಷಯದಲ್ಲಿ ನಾಟಕ ಮಾಡಿ, ಜನರಲ್ಲಿ ಗೊಂದಲ ಸೃಷ್ಟಿ ಮಾಡುವುದರ ಬದಲಾಗಿ ಅಧಿಕಾರ ಬಂದಾಗ ಮಾಡಿ ತೋರಿಸಬೇಕಾಗಿತ್ತು’ ಎಂದರು.ಉಚಿತವಾಗಿ ಮಂತ್ರಿ ಮಾಡಿಲ್ಲ: ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಎರಡು ತಿಂಗಳಾದರೂ ಇನ್ನೂ ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ, ಖಾತೆ ಹಂಚಿಕೆಯಾಗಿಲ್ಲ, ಸಚಿವ ಸ್ಥಾನಕ್ಕೆ ಪೇಮೆಂಟ್ ಆಗಿದೆ, ಯಾರಿಗೂ ಉಚಿತವಾಗಿ ಮಂತ್ರಿ ಮಾಡಿಲ್ಲ ಎಂದು ಅವರ ಪಕ್ಷದ ಹಿರಿಯ ಶಾಸಕರು, ಮಾಜಿ ಮಂತ್ರಿಗಳೇ ಮಾತನಾಡುತ್ತಾ ಇದ್ದಾರೆ. ಆಡಳಿತದ ಮೇಲೆ ಬಿಗಿ ತಪ್ಪಿದೆ. ಜನ ರೋಸಿಹೋಗಿದ್ದಾರೆ’ ಎಂದು ಆರೋಪಿಸಿದರು.ಬರ ನಿರ್ವಹಣೆ ವಿಫಲ: ‘ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಜನರಿಗೆ ಉದ್ಯೋಗವಿಲ್ಲದೇ ಗುಳೆ ಹೋಗುತ್ತಾ ಇದ್ದಾರೆ. ಲಂಬಾಣಿ, ದಲಿತರ ಕೇರಿಗಳು ಖಾಲಿ ಆಗುತ್ತಾ ಇವೆ. ದನಕರುಗಳಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ, ಕುರ್ಚಿ ಕಾದಾಟದಲ್ಲಿ ಕಳೆದ ಮೂರು ವರ್ಷದಿಂದ ಕಾಂಗ್ರೆಸ್ ಸರ್ಕಾರ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಮಾಡಲಿಲ್ಲ’ ಎಂದು ಆರೋಪಿಸಿದರು.‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬರ ಕಾಮಗಾರಿಗಾಗಿ ತಲಾ ₹100 ಕೋಟಿ ಬಿಡುಗಡೆ ಮಾಡಬೇಕು, ಗೋಶಾಲೆ, ಮೇವು ಬ್ಯಾಂಕ್ ಮಾಡಬೇಕು, ಕೃಷಿ ಕಾರ್ಮಿಕರಿಗೆ, ರೈತರಿಗೆ ಉದ್ಯೋಗ ಕೊಡುವಂತಹ ಕೆಲಸ ಮಾಡಬೇಕು, ರೈತರಿಗೆ ಬೆಳೆ ಪರಿಹಾರ ಕೊಡುವ ಕೆಲಸ ಮಾಡಬೇಕು, ರೈತರ ಪಾಲಿನ ವಿಮಾ ಮೊತ್ತವನ್ನು ಸರ್ಕಾರವೇ ಪಾವತಿಸಬೇಕು’ ಎಂದು ಆಗ್ರಹಿಸಿದರು.