ಸಮರ್ಪಕ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ನ್ಯಾಯ ಒದಗಿಸಿ: ಸಚಿವ ಅಜಯ್ ಸಿಂಗ್
ರಾಯಚೂರು: ‘ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳು ನಡೆಸಿರುವ ಸಮೀಕ್ಷೆಯೇ ಸಮರ್ಪಕವಾಗಿಲ್ಲ ಎನ್ನುವ ದೂರುಗಳು ಬಂದಿವೆ. ಹೀಗಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಮಗ್ರವಾಗಿ ಬೆಳೆ ಸಮೀಕ್ಷೆ ನಡೆಸಿ ನಿಖರ ವರದಿ ಸಿದ್ಧಪಡಿಸಬೇಕು’ ಎಂದು ಬರ ಪರಿಶೀಲನಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ ಅಧಿಕಾರಿಗಳಿಗೆ ಸೂಚ

ರಾಯಚೂರು: ‘ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳು ನಡೆಸಿರುವ ಸಮೀಕ್ಷೆಯೇ ಸಮರ್ಪಕವಾಗಿಲ್ಲ ಎನ್ನುವ ದೂರುಗಳು ಬಂದಿವೆ. ಹೀಗಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಮಗ್ರವಾಗಿ ಬೆಳೆ ಸಮೀಕ್ಷೆ ನಡೆಸಿ ನಿಖರ ವರದಿ ಸಿದ್ಧಪಡಿಸಬೇಕು’ ಎಂದು ಬರ ಪರಿಶೀಲನಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಶನಿವಾರ ರಾಯಚೂರು ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರು, ಮುಂಗಾರು ಹಂಗಾಮಿನ ಬಿತ್ತನೆ, ರಸಗೊಬ್ಬರ ಬೇಡಿಕೆ ಹಾಗೂ ಜಾನುವಾರುಗಳ ಸಮಸ್ಯೆಗಳ ಕುರಿತ ಸಭೆ ನಡೆಸಿ ಅವರು ಮಾತನಾಡಿದರು.‘ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿ ಪರಿಶೀಲಿಸಬೇಕು. ಈಗಾಗಲೇ ಶೇ.20ರಷ್ಟು ರೈತರಿಗೆ ಬೆಳೆ ನಷ್ಟವಾಗಿರುವುದು ಕಂಡುಬಂದಿದೆ. ಗ್ರಾಮಗಳಿಗೆ ಭೇಟಿ ನೀಡಿದಾಗ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಅಗತ್ಯವಿರುವ ಕಡೆಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.ಜಿಲ್ಲಾ ಮಟ್ಟದಿಂದಲೇ ಬೆಳೆ ಹಾನಿಯ ಮೈಕ್ರೋ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಬೇಕು. ವಿಮಾ ಕಂಪನಿಗಳ ಪ್ರತಿನಿಧಿಗಳನ್ನು ಕರೆಯಿಸಿ ಎಚ್ಚರಿಕೆ ನೀಡಲಾಗುವುದು. ಮುಖ್ಯಮಂತ್ರಿ ಅವರ ಗಮನಕ್ಕೂ ತಂದು, ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಕಿಸಿಕೊಡಲು ಪ್ರಯತ್ನಿಸಲಾಗುವುದು’ ಎಂದರು.ಕೃಷಿ ಅಧಿಕಾರಿಗಳ ಮಾಹಿತಿ ವಿರುದ್ಧ ಅಸಮಾಧಾನ: ಸಭೆಯಲ್ಲಿ ಶಾಸಕ ಬಸನಗೌಡ ದದ್ದಲ್ ಹಾಗೂ ಶಾಸಕ ಶಿವರಾಜ ಪಾಟೀಲ ಅವರು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಗಮನಿಸಿದರೆ ಜಿಲ್ಲೆಯ ಯಾವುದೇ ತಾಲ್ಲೂಕನ್ನು ಬರಪೀಡಿತ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆ ಪ್ರಮಾಣ ಮತ್ತು ಬೆಳೆ ಪರಿಸ್ಥಿತಿಯ ಪ್ರತ್ಯೇಕ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ಸಭೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.ಪ್ರತಿ ರೈತರ ಜಮೀನಿಗೆ ಭೇಟಿ ನೀಡದೇ ಬೆಳೆ ಹಾನಿ ಸಮೀಕ್ಷೆ ನಡೆಸಿದರೆ ನಿಜವಾದ ಹಾನಿ ದಾಖಲಾಗುವುದಿಲ್ಲ. ಇದರಿಂದ ರೈತರಿಗೂ ಪರಿಹಾರ ದೊರಕುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು. 188 ಮಳೆ ಮಾಪನ ಕೇಂದ್ರಗಳ ಪೈಕಿ 88 ಸ್ಥಗಿತ: ಜಿಲ್ಲೆಯಲ್ಲಿ ಒಟ್ಟು 188 ಮಳೆ ಮಾಪನ ಕೇಂದ್ರಗಳಿದ್ದು, ಈ ಪೈಕಿ 88 ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಸಭೆಯಲ್ಲಿ ಬಹಿರಂಗವಾಯಿತು.ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸದಿದ್ದರೆ ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ನಿಖರ ಮಳೆಯ ಮಾಹಿತಿ ದೊರೆಯುವುದಾದರೂ ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಮಳೆಗಾಲ ಆರಂಭಕ್ಕೂ ಮುನ್ನವೇ ಕೇಂದ್ರಗಳ ದುರಸ್ತಿ ಕಾರ್ಯ ಕೈಗೊಳ್ಳದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಮೂರು ತಾಲ್ಲೂಕುಗಳ ಮಳೆ ಪ್ರಮಾಣದ ಮಾಹಿತಿಯನ್ನು ಮ್ಯಾನುಯಲ್ ಆಗಿ ಸಂಗ್ರಹಿಸಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಬೆಳೆ ವಿಮೆ ಪರಿಹಾರಕ್ಕೆ ಕಠಿಣ ಕ್ರಮ: ‘ರೈತರು ಹಲವು ವರ್ಷಗಳಿಂದ ಬೆಳೆ ವಿಮೆ ಮಾಡಿಸುತ್ತಿದ್ದರೂ ಅನೇಕ ಮಂದಿಗೆ ಪರಿಹಾರ ದೊರೆಯುತ್ತಿಲ್ಲ. ಇದರಿಂದ ರೈತರಲ್ಲಿ ವಿಮಾ ಕಂಪನಿಗಳ ಬಗ್ಗೆ ನಿರಾಸೆ ಮೂಡಿದೆ. ಬೆಳೆಗಳಲ್ಲಿ ತೇವಾಂಶದ ಕೊರತೆಯನ್ನು ದಾಖಲಿಸಿ ವಿಮಾ ಕಂಪನಿಗಳಿಗೆ ಸಲ್ಲಿಸಬೇಕು ಹಾಗೂ ರೈತರಿಗೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಶಿವರಾಜ ಪಾಟೀಲ ಒತ್ತಾಯಿಸಿದರು.‘ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಸಮೀಕ್ಷೆ ನಡೆಸಿದರೆ ರೈತರಿಗೆ ಅನ್ಯಾಯವಾಗುತ್ತದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿ ಪರಿಶೀಲಿಸಬೇಕು’ ಎಂದು ಹೇಳಿದರು.ಕಳೆದ ಏಳು ವರ್ಷಗಳಿಂದ ರೈತರು ಬೆಳೆ ವಿಮೆ ಕಂತು ಪಾವತಿಸುತ್ತಿದ್ದರೂ ಪರಿಹಾರ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ವಿಮೆ ಮಾಡಿಸಲು ರೈತರು ಹಿಂದೇಟು ಹಾಕಲಿದ್ದಾರೆ. ಹೀಗಾಗಿ ವಿಮಾ ಕಂಪನಿಗಳಿಗೆ ಕಠಿಣ ಎಚ್ಚರಿಕೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ, ಬೀಜ ಪೂರೈಕೆ: ‘ರೈತರ ಬೇಡಿಕೆಗೆ ಅನುಗುಣವಾಗಿ ಕಡಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನು ಆಯಾ ಕಂಪನಿಗಳ ಬ್ರ್ಯಾಂಡ್ಗಳಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ರೈತರಿಗೆ ಬೇಕಾದ ಕಂಪನಿಗಳ ಬೀಜಗಳು ಲಭ್ಯವಾಗದೆ ಸಮಸ್ಯೆಯಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ತಿಳಿಸಿದರು.ಕಳೆದ ಐದು ವರ್ಷಗಳ ಮಳೆ ಪ್ರಮಾಣ ಹಾಗೂ ಬೇಡಿಕೆಯನ್ನು ಆಧರಿಸಿ ರಸಗೊಬ್ಬರ ಸಂಗ್ರಹಿಸಿಕೊಳ್ಳಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು ಇದೆ. ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ರಸಗೊಬ್ಬರ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದು, ಜಿಲ್ಲೆಯ ರೈತರಿಗೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದೊರೆಯುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಹಕಾರ ಸಂಘಗಳಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಸಚಿವರು ಸೂಚಿಸಿದರು.ರಸಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು. ₹1,500 ಬೆಲೆಯ ರಸಗೊಬ್ಬರವನ್ನು ₹3 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಶಾಸಕರಾದ ಬಸನಗೌಡ ಬಾದರ್ಲಿ ಹಾಗೂ ಬಸನಗೌಡ ತುರ್ವಿಹಾಳ ಆರೋಪಿಸಿದರು. ಅಕ್ರಮ ಮಾರಾಟ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಕ್ರಮ ರಸಗೊಬ್ಬರ ಮಾರಾಟದಲ್ಲಿ ತೊಡಗಿರುವ ಸಹಕಾರ ಸಂಘಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಅಂತಹ ಸಂಘಗಳಿಗೆ ಮೇಲ್ವಿಚಾರಕರನ್ನು ನೇಮಿಸಬೇಕು ಎಂದು ಶಾಸಕ ಬಸನಗೌಡ ದದ್ದಲ್ ಆಗ್ರಹಿಸಿದರು.ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ: ಬಂಗಾರಪ್ಪ ಕೆರೆಯ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಬೇಕು. ರಾಯಚೂರು ನಗರಕ್ಕೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.ಕುಡಿಯುವ ನೀರಿಗಾಗಿ ₹11 ಕೋಟಿ ಅಗತ್ಯವಿದ್ದು, ಈಗಾಗಲೇ ₹5 ಕೋಟಿ ಬಿಡುಗಡೆಯಾಗಿದೆ. ಇನ್ನೂ ₹6 ಕೋಟಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.‘ನಗರದಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿಯಿಂದ ನೀರು ಬರುತ್ತಿದ್ದರೂ ಸರಬರಾಜು ನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗಿದೆ’ ಎಂದು ಎನ್.ಎಸ್. ಬೋಸರಾಜು ಹೇಳಿದರು. ‘ಹಳೆಯ ನೀರಿನ ಪೈಪ್ಲೈನ್ಗಳನ್ನು ಕತ್ತರಿಸಲಾಗಿದ್ದು, ಹೊಸ ಲೈನ್ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಮಸ್ಯೆ ಎದುರಾಗಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ಸಮರ್ಪಕ ನೀರು ಪೂರೈಸಬೇಕು’ ಎಂದು ಒತ್ತಾಯಿಸಿದರು.ಉದ್ಯೋಗ ಖಾತರಿ ಕಾಮಗಾರಿಗೆ ಆದ್ಯತೆ: ಬರ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಉದ್ಯೋಗ ಖಾತರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಜನರು ಗುಳೆ ಹೋಗುವುದನ್ನು ತಡೆಯಬೇಕು ಎಂದು ಸಚಿವರು ಸೂಚಿಸಿದರು.ಕೆಲಸ ದೊರೆಯದ ಹಿನ್ನೆಲೆಯಲ್ಲಿ ಜನರು ಗುಳೆ ಹೋಗುತ್ತಿದ್ದಾರೆ ಎಂದು ಬಸನಗೌಡ ದದ್ದಲ್ ಹೇಳಿದರು. ದೇವದುರ್ಗ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳ ಪ್ರಮಾಣ ಏಕೆ ಕಡಿಮೆಯಾಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಸಂಸದ ಜಿ. ಕುಮಾರ ನಾಯಕ, ಶಾಸಕರಾದ ಹಂಪಯ್ಯನಾಯಕ ಸಾಹುಕಾರ, ಬಸನಗೌಡ ತುರ್ವಿಹಾಳ, ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಪೂವಿತಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.