UPI ಪಾವತಿಗೆ ಯಾವ್ದೇ ಶುಲ್ಕ ಇಲ್ಲ, ವ್ಯಾಪಾರಿಗಳಿಗೂ ಬಹುತೇಕ ವಹಿವಾಟು ಉಚಿತ: ಹಣಕಾಸು ಸಚಿವಾಲಯ ಹೇಳಿದ್ದೇನು?
ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆ (UPI) ವಹಿವಾಟುಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂಬ ಆತಂಕಕ್ಕೆ ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟನೆ ನೀಡಿದೆ. UPI ಮೂಲಕ ಪಾವತಿ ಮಾಡುವ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸಣ್ಣ ವ್ಯಾಪಾರಿಗಳಿಗೂ ಶುಲ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ವ್ಯಾಪಾರಿಗ

ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆ (UPI) ವಹಿವಾಟುಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂಬ ಆತಂಕಕ್ಕೆ ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟನೆ ನೀಡಿದೆ. UPI ಮೂಲಕ ಪಾವತಿ ಮಾಡುವ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸಣ್ಣ ವ್ಯಾಪಾರಿಗಳಿಗೂ ಶುಲ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ವ್ಯಾಪಾರಿಗಳ ಬಹುತೇಕ UPI ವಹಿವಾಟುಗಳು ಕೂಡ ಉಚಿತವಾಗಿಯೇ ಮುಂದುವರಿಯಲಿದೆ. ಆದರೆ, ಮುಂದಿನ ದಿನಗಳಲ್ಲಿ ಶುಲ್ಕ ವ್ಯವಸ್ಥೆ ಜಾರಿಗೆ ಬಂದರೆ, ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ನಾಮಮಾತ್ರದ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ವಯವಾಗಲಿದೆ. ಈ ಶುಲ್ಕವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ MDR ಗಿಂತಲೂ ಕಡಿಮೆ ಇರಲಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಪೇಮೆಂಟ್ & ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್, 2007ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿರುವ ಮಸೂದೆಯನ್ನ ಆಗಸ್ಟ್ 6ರಂದು ಲೋಕಸಭೆ ಅಂಗೀಕರಿಸಿತು. ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಗ್ರಾಹಕರು UPI ಮೂಲಕ ಪಾವತಿ ಮಾಡುವಾಗ ಯಾವುದೇ ವಹಿವಾಟು ಶುಲ್ಕ ವಿಧಿಸಲಾಗುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಎಲ್ಲಾ ವಹಿವಾಟುಗಳು ಕೂಡ ಉಚಿತವಾಗಿಯೇ ಮುಂದುವರಿಯಲಿವೆ. ಆದರೆ, ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮೊತ್ತದ ಸೀಮಿತ ಪ್ರಮಾಣದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ನಾಮಮಾತ್ರದ MDR ಅನ್ವಯಿಸುವ ಸಾಧ್ಯತೆ ಇದೆ. ಇದು ಎಲ್ಲ ವ್ಯಾಪಾರಿಗಳಿಗೂ ಸಾಮಾನ್ಯವಾಗಿ ವಿಧಿಸುವ ಶುಲ್ಕವಾಗಿರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಎಂಡಿಆರ್ ಅಂದ್ರೆ ಏನು? ಎಂಡಿಆರ್ ಅಂದ್ರೆ ʻಮರ್ಚೆಂಟ್ ಡಿಸ್ಕೌಂಟ್ ರೇಟ್ʼ. ಎಲೆಕ್ಟ್ರಾನಿಕ್ ವಿಧಾನದಲ್ಲಿ ನಡೆಸುವ ವಹಿವಾಟಿನ ಮೇಲೆ (ಬೇರೆಯವರಿಗೆ ಪಾವತಿ ಅಥವಾ ಗ್ರಾಹಕರಿಂದ ಸ್ವೀಕರಿಸುವ ಹಣ) ಬ್ಯಾಂಕುಗಳು ಅಥವಾ ಎಲೆಕ್ಟ್ರಾನಿಕ್ ಪಾವತಿ ಸೇವೆ ನೀಡುವ ಕಂಪನಿಗಳು ವರ್ತಕರಿಗೆ ವಿಧಿಸುವ ಶುಲ್ಕ. ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ. ವ್ಯಾಪಾರಿಗಳ ಬಹುತೇಕ ವಹಿವಾಟುಗಳು ಉಚಿತ UPI ಮೂಲಕ ನಡೆಯುವ ಬಹುತೇಕ ವ್ಯಾಪಾರ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ. MDR ಜಾರಿಗೆ ಬಂದರೂ ಅದು ಎಲ್ಲಾ ವ್ಯಾಪಾರಿಗಳ ಮೇಲೆ ಅನ್ವಯಿಸುವುದಿಲ್ಲ. ಬದಲಾಗಿ, ನಿರ್ದಿಷ್ಟ ಮಿತಿಯನ್ನ ಆಧರಿಸಿ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಟ್ಯಾಕ್ಸೇಶನ್ ಅಂಡ್ ಅದರ್ ಲಾಸ್ (ಅಮೆಂಡ್ಮೆಂಟ್) ಬಿಲ್, 2026 ಸಂಸತ್ತಿನ ಅನುಮೋದನೆ ಪಡೆದ ಬಳಿಕ, MDR ಜಾರಿಗೆ ತರಬೇಕೇ ಅಥವಾ ಬೇಡವೇ ಎಂಬುದನ್ನ NPCI ನೇತೃತ್ವದ ‘UPI ಅಂಡ್ ಸರ್ವೀಸಸ್ ಸ್ಟೀರಿಂಗ್ ಕಮಿಟಿ’ ನಿರ್ಧರಿಸಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಮಸೂದೆಯ ಮೂಲಕ ಪೇಮೆಂಟ್ ಅಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್, 2007ರ ಸೆಕ್ಷನ್ 10Aಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ. ಈ ತಿದ್ದುಪಡಿ ಏಕೆ ಮಹತ್ವದ್ದು? ಈವರೆಗೆ 2007ರ ಕಾಯ್ದೆಯ ಸೆಕ್ಷನ್ 10ಎ ಪ್ರಕಾರ, ಆದಾಯ ತೆರಿಗೆ ಕಾಯ್ದೆ –1961ರ ಸೆಕ್ಷನ್ 269ಎಸ್ಯು ಅಡಿಯಲ್ಲಿ ಹೇಳಿರುವಂತೆ ಯಾವುದೇ ವ್ಯಕ್ತಿ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಮಾಡುವ ಪಾವತಿ ಅಥವಾ ಸ್ವೀಕರಿಸುವ ಹಣಕ್ಕೆ ಯಾವುದೇ ಬ್ಯಾಂಕ್ ಅಥವಾ ಸೇವಾದಾರರು (ಕಂಪನಿಗಳು) ನೇರವಾಗಿ ಅಥವಾ ಪರೋಕ್ಷವಾಗಿ ಶುಲ್ಕ ವಿಧಿಸುವಂತಿರಲಿಲ್ಲ. ವಾರ್ಷಿಕ 50 ಕೋಟಿ ರೂಪಾಯಿಗಿಂತಲೂ ಹೆಚ್ಚು ವಹಿವಾಟು ನಡೆಸುವ ವ್ಯಾಪಾರ ಸಂಸ್ಥೆಗಳು ಗ್ರಾಹಕರಿಗೆ ʻBHIM-UPI QRʼ ಕೋಡ್ ಹಾಗೂ RuPay ಡೆಬಿಟ್ ಕಾರ್ಡ್ ಸೇರಿದಂತೆ ನಿಗದಿತ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಒದಗಿಸಬೇಕು ಎಂಬ ನಿಯಮ ಈಗಲೂ ಜಾರಿಯಲ್ಲಿದೆ. ಈ ಕಾನೂನು ನಿರ್ಬಂಧದಿಂದಾಗಿ ಬ್ಯಾಂಕ್ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್ – Merchant Discount Rate (MDR) ಅನ್ನು ವಿಧಿಸಲು ಸಾಧ್ಯವಾಗುತ್ತಿರಲಿಲ್ಲ. ಹೊಸ ತಿದ್ದುಪಡಿಯಿಂದ ಈ ಕಾನೂನುಬದ್ಧ ನಿರ್ಬಂಧ ತೆರವಾಗಿದ್ದು, ಭವಿಷ್ಯದಲ್ಲಿ ಸರ್ಕಾರ ಅಗತ್ಯವೆಂದು ಕಂಡರೆ MDR ಜಾರಿಗೆ ಅವಕಾಶ ಸಿಗಲಿದೆ. ಹೊಸ ಕಾನೂನಿನಲ್ಲಿ ಏನು ಬದಲಾಗಿದೆ? ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ)–2026 ಮಸೂದೆಯಲ್ಲಿ 2007ರ ಪಾವತಿ ಮತ್ತು ಸೆಟ್ಲ್ಮೆಂಟ್ ವ್ಯವಸ್ಥೆಗಳ ಕಾಯ್ದೆಯ ಸೆಕ್ಷನ್ 10ಎಗೆ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯ ಪ್ರಕಾರ, ಯಾವ ಡಿಜಿಟಲ್ ಪಾವತಿ ವಿಧಾನಗಳಿಗೆ ಶುಲ್ಕ ವಿಧಿಸಬಹುದು ಎಂಬುದನ್ನು ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಅಧಿಸೂಚನೆ (Notification) ಮೂಲಕ ನಿರ್ಧರಿಸುವ ಅಧಿಕಾರ ಪಡೆಯಲಿದೆ. ಈ ಮಸೂದೆ ಅಂಗೀಕಾರ ಆದ ತಕ್ಷಣವೇ UPI ವ್ಯವಹಾರಗಳಿಗೆ ಶುಲ್ಕ ಜಾರಿಗೆ ಬರುತ್ತದೆ ಎಂಬುದಲ್ಲ. ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ ಬಳಿಕ ಮಾತ್ರ ಬ್ಯಾಂಕ್ಗಳು ಮತ್ತು ಪಾವತಿ ಸೇವಾ ಪೂರೈಕೆದಾರರು (Payment Service Providers – PSPs) ಶುಲ್ಕ ವಿಧಿಸಲು ಸಾಧ್ಯವಾಗುತ್ತದೆ. ಅದುವೆರೆಗೆ UPI ವ್ಯವಹಾರಗಳು ಉಚಿತವಾಗಿಯೇ ಮುಂದುವರಿಯಲಿವೆ.