ಸಂಬಂಧಿ ಮನೆಗಳಲ್ಲಿ ಆವರಿಸಿದ ದುಃಖದ ಛಾಯೆ
ಪ್ರಜಾವಣಿ ವಾರ್ತೆಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಗುರುವಾರ ಸಂಜೆ ಟಿಪ್ಪರ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ನಾಗರಿಕರನ್ನು ದುಃಖಿತರನ್ನಾಗಿಸಿದೆ.ನರಿಕೊಂಬು ಗ್ರಾಮದ ನಾಯಿಲ ಪರಿಸರದಲ್ಲಿ ಎರಡು ಪರಸ್ಪರ ಸಂಬಂಧಿ ಮನೆಗಳಿಗೆ ಶುಕ್ರವಾರ ಬೆಳಿಗ್ಗೆ ಮೃತ ದೇಹ ಬರ

ಪ್ರಜಾವಣಿ ವಾರ್ತೆಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಗುರುವಾರ ಸಂಜೆ ಟಿಪ್ಪರ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ನಾಗರಿಕರನ್ನು ದುಃಖಿತರನ್ನಾಗಿಸಿದೆ.ನರಿಕೊಂಬು ಗ್ರಾಮದ ನಾಯಿಲ ಪರಿಸರದಲ್ಲಿ ಎರಡು ಪರಸ್ಪರ ಸಂಬಂಧಿ ಮನೆಗಳಿಗೆ ಶುಕ್ರವಾರ ಬೆಳಿಗ್ಗೆ ಮೃತ ದೇಹ ಬರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕೃಷಿಕ ನಾಯಿಲ ಸಮೀಪದ ಮರ್ಲಿಮಾರ್ ನಿವಾಸಿ ದಯಾನಂದ ಕುಲಾಲ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದ್ದರು. ಸಹ ಸವಾರನಾಗಿದ್ದ ಅವರ ಸಂಬಂಧಿ ನಾಯಿಲ ನಿವಾಸಿ ಕಾರ್ಪೆಂಟರ್ ವೃತ್ತಿಯ ಯಶವಂತ ಕುಲಾಲ್ (44) ಅವರು ಟಿಪ್ಪರ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.ಬಿ.ಸಿ.ರೋಡು ಮುಖ್ಯ ವೃತ್ತ ಬಳಿ ಇದ್ದ ಸಂಚಾರ ಪೊಲೀಸರನ್ನು ಕಂಡು, ಅವರು ದ್ವಿಚಕ್ರ ವಾಹನವನ್ನು ಪಾಣೆಮಂಗಳೂರು ಬದಲಿಗೆ ಬಂಟ್ವಾಳ ಕಡೆಗೆ ತಿರುಗಿಸಿದ್ದಾರೆ. ಇದೇ ವೇಳೆ ಪಾಣೆಮಂಗಳೂರು ಕಡೆಯಿಂದ ಬಂಟ್ವಾಳ ಕಡೆಗೆ ಬರುತ್ತಿದ್ದ ಟಿಪ್ಪರ್ ಹಿಂಬದಿಯಿಂದ ಬಂದು ಡಿಕ್ಕಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದಾಗಿ ಬಿ.ಸಿ.ರೋಡು -ಧರ್ಮಸ್ಥಳ ಮತ್ತು ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಈ ಹಿಂದೆ ಇಲ್ಲಿನ ನಿರ್ಮಣ ಹಂತದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ಕಾರು ಡಿಕ್ಕಿಯಾಗಿ ಬೆಂಗಳೂರಿನ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವು ವಾಹನಗಳು ವೃತ್ತದ ಸುತ್ತಲೂ ಗುದ್ದಿದ ಗುರುತು ಎದ್ದು ಕಾಣುತ್ತಿದೆ. ಇದೀಗ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ನಾಗರಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ನಾಯಿಲ ನಿವಾಸಿ ದಿ.ಸಂಕಪ್ಪ ಮೂಲ್ಯ-ಲೀಲಾ ದಂಪತಿ ಪುತ್ರನಾಗಿದ್ದ ಯಶವಂತ ಕುಲಾಲ್ ಬಡತನದ ನಡುವೆಯೂ ಪತ್ನಿ ಮತ್ತು ಇಬ್ಬರು ಪುತ್ರಿಯರರೊಂದಿಗೆ ಕಾರ್ಪೆಂಟರ್ ವೃತ್ತಿಯಲ್ಲಿ ಬದುಕು ಮುನ್ನಡೆಸುತ್ತಿದ್ದರು. ಅವರ ಇಬ್ಬರು ಹೆಣ್ಮಕ್ಕಳ ಪೈಕಿ ಒಬ್ಬಳು 9ನೇ ತರಗತಿ ಓದುತ್ತಿದ್ದರೆ, ಇನ್ನೊಬ್ಬಳು ಎಲ್ಕೆಜಿ ವಿದ್ಯಾರ್ಥಿನಿ, ಕಿರಿ ಮಗಳ ಜನ್ಮದಿನಕ್ಕೆ ಮನೆಯಲ್ಲಿ ಸಿದ್ಧತೆ ನಡೆಸುತ್ತಿದ್ದ ವೇಳೆ ತಂದೆಯ ನಿಧನವಾಗಿದೆ.ಮನೆ ಕಟ್ಟುವ ಕನಸು ನನಸಾಗಿಲ್ಲ: ನಾಯಿಲ ಸಮೀಪದ ಮರ್ಲಿಮಾರ್ ನಿವಾಸಿ ದಿ.ಫಕೀರ ಮೂಲ್ಯ ಮತ್ತು ಸೀತಾ ದಂಪತಿ ಪುತ್ರ ದಯಾನಂದ ಕುಲಾಲ್ ತನ್ನ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳ ಜೊತೆಗೆ ಕೃಷಿಯಿಂದ ಖುಷಿ ಕಂಡುಕೊಂಡಿದ್ದರು. ಅವರ ಇಬ್ಬರು ಮಕ್ಕಳ ಪೈಕಿ ಹಿರಿಮಗ 4ನೇ ತರಗತಿ ಮತ್ತು ಕಿರಿಮಗ 3ನೇ ತರಗತಿ ಓದುತ್ತಿದ್ದಾರೆ. ದಯಾನಂದ ಅವರು ಕಳೆದ ಒಂದು ವರ್ಷದಿಂದ ಸ್ವಂತ ಮನೆ ಕಟ್ಟುವ ಕನಸು ಹೊಂದಿದ್ದು, ಮನೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅವರ ತಾಯಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ತೀರಿಕೊಂಡ ಪರಿಣಾಮ ಮನೆ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಯಶವಂತ ಅವರ ಅಂತ್ಯಕ್ರಿಯೆ ಪಾಣೆಮಂಗಳೂರು ಸ್ಮಶಾನ, ದಯಾ ನಂದ ಅವರ ಅಂತ್ಯಕ್ರಿಯೆ ನಾಯಿಲ ಸ್ಮಶಾ ನದಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿತು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260808-29-828023081