‘ಶತ್ರು ದೇಶಗಳೇ ಮಾತಾಡುವಾಗ, ಕಾವೇರಿ ಚರ್ಚೆಗೆ ಹಿಂದೇಟು ಯಾಕೆ?’
ಚೆನ್ನೈ: ‘ಪರಸ್ಪರ ಶತ್ರುಗಳಾಗಿರುವ ದೇಶಗಳೇ ಸಮಸ್ಯೆಯ ಇತ್ಯರ್ಥಕ್ಕಾಗಿ ಮಾತುಕತೆ ನಡೆಸುವಾಗ, ನೆರೆಯ ರಾಜ್ಯಗಳ ಮಧ್ಯೆ ಕಾವೇರಿ ನೀರಿನ ಬಗ್ಗೆ ಮಾತುಕತೆ ಏಕೆ ಸಾಧ್ಯವಿಲ್ಲ? ತಮಿಳುನಾಡು ಜನರಿಗಾಗಿ ಮಾತುಕತೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಬೇಕಾಗಿ ಅವಮಾನ ಎದುರಿಸಲೂ ಸಿದ್ಧನಾಗಿದ್ದೇನೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಶುಕ್ರವಾ

ಚೆನ್ನೈ: ‘ಪರಸ್ಪರ ಶತ್ರುಗಳಾಗಿರುವ ದೇಶಗಳೇ ಸಮಸ್ಯೆಯ ಇತ್ಯರ್ಥಕ್ಕಾಗಿ ಮಾತುಕತೆ ನಡೆಸುವಾಗ, ನೆರೆಯ ರಾಜ್ಯಗಳ ಮಧ್ಯೆ ಕಾವೇರಿ ನೀರಿನ ಬಗ್ಗೆ ಮಾತುಕತೆ ಏಕೆ ಸಾಧ್ಯವಿಲ್ಲ? ತಮಿಳುನಾಡು ಜನರಿಗಾಗಿ ಮಾತುಕತೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಬೇಕಾಗಿ ಅವಮಾನ ಎದುರಿಸಲೂ ಸಿದ್ಧನಾಗಿದ್ದೇನೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಶುಕ್ರವಾರ ಹೇಳಿದರು.‘ಕಾವೇರಿ ವಿಚಾರದಲ್ಲಿ ತುಚ್ಛ ರಾಜಕೀಯ ಮಾಡಲು ಬಯಸುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ಮಾತುಕತೆ ನಡೆಸುವ ಪ್ರಸ್ತಾವವನ್ನು ಮುಂದಿಟ್ಟಿದ್ದೇ ನಾನು’ ಎಂದು ಅವರು ತಿಳಿಸಿದರು.ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಕಾವೇರಿ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ವಿಜಯ್ ಅವರು, ‘ಕಾವೇರಿ ವಿಷಯವನ್ನು ಕಾನೂನಾತ್ಮಕವಾಗಿ ಎದುರಿಸುವಲ್ಲಿಯೂ ನಮ್ಮ ಸರ್ಕಾರ ದೃಢವಾಗಿದೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ಕಾವೇರಿ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಬೇಕಿದೆ. ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿಗೆ ಭೇಟಿ ನೀಡಿ ಮಾತುಕತೆ ನಡೆಸುವ ಆಲೋಚನೆ ಇದೆ. ಇದರಿಂದ ಸಕಾರಾತ್ಮಕ ಫಲಿತಾಂಶ ಬರುವ ಭರವಸೆ ಇದೆ’ ಎಂದು ತಿಳಿಸಿದರು.‘ಚರಂಡಿಯಾಗಿ ತಮಿಳುನಾಡು ಬಳಕೆ’ ಮದುರೈ (ತಮಿಳುನಾಡು): ಕರ್ನಾಟಕವು ತನ್ನ ಹೆಚ್ಚುವರಿ ನೀರನ್ನು ಹೊರಹಾಕಲು ತಮಿಳುನಾಡನ್ನು ಕೇವಲ ಚರಂಡಿಯಂತೆ ಬಳಸಿಕೊಳ್ಳುವ ಮೂಲಕ ‘ಆಧಿಪತ್ಯದ ಧೋರಣೆ’ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಆರ್.ಬಿ.ಉದಯಕುಮಾರ್ ಶುಕ್ರವಾರ ಆರೋಪಿಸಿದರು. ‘ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಹಕ್ಕುಗಳ ಕುರಿತು ಒಮ್ಮತದ ನಿಲುವನ್ನು ಪ್ರದರ್ಶಿಸಲು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆಯಿರಿ’ ಎಂದು ಮುಖ್ಯಮಂತ್ರಿ ವಿಜಯ್ ಅವರಿಗೆ ಮನವಿ ಮಾಡಿದರು. ಕರ್ನಾಟಕ ಸರ್ಕಾರವು ನಿರಂತರವಾಗಿ ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಸಮಿತಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ಜಲವಿವಾದ ಮಂಡಳಿಯ ನಿರ್ದೇಶನಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಕರ್ನಾಟಕವು ಐತಿಹಾಸಿಕ ಒಪ್ಪಂದಗಳನ್ನು ಉಲ್ಲಂಘಿಸಿ ಈಗಾಗಲೇ ಐದು ಅಣೆಕಟ್ಟೆಗಳನ್ನು ನಿರ್ಮಿಸಿದೆ. ಇದೀಗ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿದೆ ಎಂದರು. ‘ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಿರಿ’ ಚೆನ್ನೈ: ಕರ್ನಾಟಕದ ಮೇಕೆದಾಟು ಯೋಜನೆಗೆ ತಡೆಯೊಡ್ಡಲು ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೊಂಡೊಯ್ಯಬೇಕು ಎಂದು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಅವರು ಮುಖ್ಯಮಂತ್ರಿ ವಿಜಯ್ ಅವರಲ್ಲಿ ಮನವಿ ಮಾಡಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು‘ಮೇಕೆದಾಟು ಯೋಜನೆ ಕಾರ್ಯಗತ ಆಗಬಾರದು ಮತ್ತು ಕಾವೇರಿ ವಿಚಾರದಲ್ಲಿ ನಮ್ಮ ಹಕ್ಕು ನಮಗೆ ಸಿಗಬೇಕು’ ಎಂದು ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಜ್ಯದ ರೈತರ ಹಿತಾಸಕ್ತಿಯ ರಕ್ಷಣೆಗಾಗಿ ಕಠಿಣ ನಿರ್ಧಾರಗಳ ಅಗತ್ಯವಿದೆ. ಮುಖ್ಯಮಂತ್ರಿ ವಿಜಯ್ ಅವರು ಸರ್ವಪಕ್ಷಗಳನ್ನು ಒಗ್ಗೂಡಿಸಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದರು.