ಮುಳಗುಂದ | ಖರ್ಚು ಮಾಡಿದಷ್ಟೂ ಹಣ ಕೈಗೆ ಸಿಗದು: ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ
ಮುಳಗುಂದ: ಮುಂಗಾರು ವೈಫಲ್ಯದಿಂದ ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ತೀವ್ರ ಹೊಡೆತಬಿದ್ದಿದೆ. ಮುಂಗಾರು ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದ ರೈತರು ಇದೀಗ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ.ಮುಂಗಾರು ಹಂಗಾಮಿನ ಅರ್ಧ ಭಾಗ ಕಳೆದರೂ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಪರಿಣಾಮವಾಗಿ ಶೇಂಗಾ, ಹೆಸರು, ಗೋವಿ

ಮುಳಗುಂದ: ಮುಂಗಾರು ವೈಫಲ್ಯದಿಂದ ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ತೀವ್ರ ಹೊಡೆತಬಿದ್ದಿದೆ. ಮುಂಗಾರು ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದ ರೈತರು ಇದೀಗ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ.ಮುಂಗಾರು ಹಂಗಾಮಿನ ಅರ್ಧ ಭಾಗ ಕಳೆದರೂ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಪರಿಣಾಮವಾಗಿ ಶೇಂಗಾ, ಹೆಸರು, ಗೋವಿನಜೋಳ, ಉದ್ದು, ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಹೆಸರು ಬೆಳೆ ಹೂ ಬಿಡುವ ಹಾಗೂ ಕಾಳು ಕಟ್ಟುವ ಹಂತದಲ್ಲೇ ಒಣಗುತ್ತಿರುವುದರಿಂದ ಇಳುವರಿಯ ನಿರೀಕ್ಷೆ ಕ್ಷೀಣಿಸಿದೆ.‘ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೀಟನಾಶಕ ಖರೀದಿ ಸೇರಿದಂತೆ ಕೃಷಿ ಕಾರ್ಯಗಳಿಗೆ ₹15,000ರಿಂದ ₹20,000ದವರೆಗೆ ಖರ್ಚು ಮಾಡಿರುವ ರೈತರು, ಬೆಳೆ ಕೈಗೆ ಬಾರದೇ ಇರುವ ಆತಂಕದಲ್ಲಿದ್ದಾರೆ. ಮಳೆ ಕೊರತೆ ಮುಂದುವರಿದರೆ ಮುಂಗಾರು ಹಂಗಾಮಿನ ಎಲ್ಲ ಬೆಳೆಗಳು ಸಂಪೂರ್ಣ ಹಾನಿಗೊಳಗಾಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ರೈತರು, ಹೆಸರು ಬೆಳೆ ಹರಗಿದ್ದಾರೆ’ ಎಂದು ರೈತ ದೇವರಾಜ ಸಂಗನಪೇಟಿ ಹೇಳಿದರು.‘ಮುಂಗಾರು ಪೂರ್ವ ಮಳೆ ಕೂಡಾ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಹೀಗಾಗಿ, ಕೆರೆ-ಕಟ್ಟೆಗಳು, ಕೃಷಿ ಹೊಂಡಗಳು ಹಾಗೂ ಸಣ್ಣ ಜಲಾಶಯಗಳು ಬಹುತೇಕ ಬತ್ತಿವೆ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುವ ಆತಂಕವಿದೆ. ತೋಟಗಾರಿಕೆ ಬೆಳೆಗಳಿಗೆ ನೀರುಣಿಸುವುದು ಅಸಾಧ್ಯವಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಒದಗಿಸುವುದೂ ಮುಂಬರುವ ದಿನಗಳಲ್ಲಿ ರೈತರಿಗೆ ಸವಾಲಾಗಿ ಪರಿಣಮಿಸಲಿದೆ’ ಎಂದರು.ಮಳೆ ಅಭಾವದಿಂದ ಕೃಷಿ ಕೂಲಿ ಕಾರ್ಮಿಕರಿಗೂ ಉದ್ಯೋಗದ ಕೊರತೆ ಎದುರಾಗಿದ್ದು, ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಹಲವು ರೈತ ಕುಟುಂಬಗಳು ಸಾಲದ ಹೊರೆಯಲ್ಲಿ ಬಳಲುತ್ತಿವೆ. ಬೆಳೆ ಹಾನಿ ಸಮೀಕ್ಷೆಯನ್ನು ತಕ್ಷಣ ನಡೆಸಬೇಕು. ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು. ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್, ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು.‘52 ಸಾವಿರ ಹೆಕ್ಟೇರ್ನಲ್ಲಿ ಬೆಳೆ ಹಾನಿ’ ‘ಗದಗ ತಾಲ್ಲೂಕಿನಾದ್ಯಂತ ಒಟ್ಟು 55000 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿನ ಬೆಳೆಗಳ ಬಿತ್ತನೆಯಾಗಿದೆ. ಇದರಲ್ಲಿ ಹೆಸರು ಸಂಪೂರ್ಣ ಹಾನಿಯಾಗಿದೆ. ಕೆಲವು ರೈತರು ಶೇಂಗಾ ಗೋವಿನಜೋಳಯನ್ನು ಕೆಂಪು ಮಣ್ಣಿನಲ್ಲಿ ಬಿತ್ತಿದ್ದು ಕೊಳವೆಬಾವಿ ಇದ್ದವರು ಬೆಳೆಗೆ ನೀರು ಹಾಯಿಸಿ ಉಳಿಸಿಕೊಂಡಿದ್ದಾರೆ. ಗೋವಿನ ಜೋಳ ಹತ್ತಿ ಅಲ್ಪ ಪ್ರಮಾಣದಲ್ಲಿ ಉಳಿದಿದೆ. ಬೆಳೆಹಾನಿ ಸಮೀಕ್ಷೆ ನಡೆಸಲಾಗಿದ್ದು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಅಂದಾಜಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದು ಗದಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರಣ್ಣವರ ಹೇಳಿದರು.– ಮಲ್ಲಯ್ಯ ಕೊರಣ್ಣವರ, ಗದಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಗದಗ ತಾಲ್ಲೂಕಿನಲ್ಲಿ ಹೆಸರು–32000 ಹೆಕ್ಟೇರ್ ಗೋವಿನ ಜೋಳ–18000 ಹೆ ಶೇಂಗಾ–3800 ಹೆ ಹತ್ತಿ–1000 ಹೆ. ಸೂರ್ಯಕಾಂತಿ 400 ಹೆ.ನಲ್ಲಿ ಬಿತ್ತನೆಯಾಗಿದೆ. ಮುಳಗುಂದ ವ್ಯಾಪ್ತಿಯ ಹೊಲದಲ್ಲಿ ತೇವಾಂಶವಿಲ್ಲದೆ ಹೆಸರು ಬೆಳೆ ಒಣಗಿದೆ