ಮೈಸೂರು | ಕೆರೆ–ಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಶನಿವಾರ ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದರು.ಸತತ ಮೂರನೇ ದಿನ ಪ್ರವಾಸ ಮುಂದುವರಿಸಿದ ಅವರು, ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಂ. ಕನ್ನೇನಹಳ್ಳಿ ಗ್ರಾಮದಲ್ಲಿ ಕೃ

ಮೈಸೂರು: ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಶನಿವಾರ ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದರು.ಸತತ ಮೂರನೇ ದಿನ ಪ್ರವಾಸ ಮುಂದುವರಿಸಿದ ಅವರು, ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಂ. ಕನ್ನೇನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನುಗಳನ್ನು ಪರಿಶೀಲಿಸಿದರು.ಈ ವೇಳೆ ಮಾತನಾಡಿದ ಅವರು, ‘ಹಾರಂಗಿ ಹಾಗೂ ನುಗು ಜಲಾಶಯಗಳ ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಅಭಾವ ನೀಗಲು ಅನುಕೂಲವಾಗಲಿದೆ’ ಎಂದರು. ‘ಪ್ರಸ್ತುತ ಹರಿಸಲಾಗುವ ನೀರನ್ನು ಕೃಷಿಗಿಂತ ಹೆಚ್ಚಾಗಿ ಕೆರೆಗಳನ್ನು ತುಂಬಿಸಲು ಬಳಸಲಾಗುತ್ತಿದೆ. ಕುಡಿಯುವ ನೀರಿನ ಪೂರೈಕೆ ನಮ್ಮ ಆದ್ಯತೆಯಾಗಿದೆ’ ಎಂದು ತಿಳಿಸಿದರು.‘ಯಾವ್ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆಯೋ ಅಲ್ಲೆಲ್ಲಾ ತಕ್ಷಣ ಹೊಸದಾಗಿ ಕೊಳವೆಬಾವಿ ಕೊರೆಯಲು ಸೂಚಿಸಲಾಗಿದೆ. ಬೋರ್ವೇಲ್ ವಿಫಲವಾದರೆ ಖಾಸಗಿ ಬೋರವೆಲ್ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದರು.‘ಚಾಮನಹಳ್ಳಿಹುಂಡಿ ಗ್ರಾಮದಲ್ಲಿದ್ದ ನೀರಿನ ಸಮಸ್ಯೆಗೆ ಸ್ಪಂದಿಸಿ ಈಗಾಗಲೇ ಎರಡು ನೂತನ ಬೋರ್ವೆಲ್ಗಳನ್ನು ಯಶಸ್ವಿಯಾಗಿ ಕೊರೆಯಲಾಗಿದೆ. ಇವುಗಳಿಂದ ಮೇಲ್ಮಟ್ಟದ ತೊಟ್ಟಿಗೆ ನೀರು ತುಂಬಿಸಿ, ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಪೂರೈಸುವ ನೀರನ್ನು ಕಡ್ಡಾಯವಾಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಹಾಗೂ ನೀರಿನ ಟ್ಯಾಂಕ್ಗಳನ್ನು ನಿರಂತರವಾಗಿ ಶುಚಿಗೊಳಿಸಿ, ಶುದ್ಧ ನೀರನ್ನು ಪೂರೈಸುವಂತೆಯೂ ಸೂಚನೆ ನೀಡಲಾಗಿದೆ‘ ಎಂದು ತಿಳಿಸಿದರು.‘ತಾರಕ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಪೈಪ್ಲೈನ್ ಕಾಮಗಾರಿ ಹಾಗೂ ವಿದ್ಯುತ್ ಸಂಪರ್ಕ ಬಾಕಿ ಇರುವ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ, ಯೋಜನೆಯನ್ನು ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.‘ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಹತ್ತಿ ಬಿತ್ತನೆ ಪ್ರಮಾಣ ಸಂಪೂರ್ಣ ಕ್ಷೀಣಿಸಿದೆ. ಮುಸುಕಿನ ಜೋಳ ಹಾಗೂ ಶುಂಠಿ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣ ಒಣಗಿದ್ದು, ನಷ್ಟ ಸಂಭವಿಸಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.‘ಮಳೆ ಅಭಾವದ ನಡುವೆಯೂ ಬೆಳೆದಿದ್ದ ಮುಸುಕಿನಜೋಳಕ್ಕೆ ರೋಗಬಾಧೆ ಆವರಿಸಿದೆ. ಇದರಿಂದಾಗಿ ಬೆಳೆ ಕೈಸೇರುವ ಮುನ್ನವೇ ರೈತರು ದನ-ಕರುಗಳ ಮೇವಿಗಾಗಿ ಕಟಾವು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕೇವಲ ಸಾರಜನಕ ಮತ್ತು ರಂಜಕ ಗೊಬ್ಬರಗಳನ್ನು ಬಳಸುತ್ತಿದ್ದು, ಪೊಟ್ಯಾಶ್ ಹಾಕದಿರುವುದು ಬೆಳೆಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗಿದೆ’ ಎಂದು ತಿಳಿಸಿದರು.‘ರೈತರು ಎಕರೆಗೆ ₹ 40ಸಾವಿರದಿಂದ ₹50ಸಾವಿರ ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಸಮಗ್ರ ಜಮೀನು ಸಮೀಕ್ಷೆಯನ್ನು ಸ್ಯಾಟಲೈಟ್ ಹಾಗೂ ಭೌತಿಕವಾಗಿ ನಡೆಸಿ ಶೀಘ್ರ ವರದಿ ಸಲ್ಲಿಸಲಿದ್ದಾರೆ. ವರದಿ ಆಧಾರದ ಮೇಲೆ ಸೂಕ್ತ ಪರಿಹಾರ ಘೋಷಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ಕುಮಾರ್ ಜೊತೆಗಿದ್ದರು.