ನಾಗಪುರದಿಂದ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ ಮಹಿಳೆ ಪೋರ್ಚುಗಲ್ನಲ್ಲಿ ಮಾರಾಟ
ನವದೆಹಲಿ: ಕೈತುಂಬಾ ಸಂಬಳ ಸಿಗುವ ವಿದೇಶಿ ಉದ್ಯೋಗದ ಭರವಸೆ ನೀಡಿ 28 ವರ್ಷದ ಮಹಿಳೆಯನ್ನು ಪೋರ್ಚುಗಲ್ನಲ್ಲಿರುವ ಮದ್ಯದಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ಇನ್ಸ್ಟಾಗ್ರಾಂ ಮೂಲಕ ಪುಣೆ ಮೂಲದ 'ವೀ ಮೈಗ್ರೇಟ್' ಉದ್ಯೋಗ ಸಲಹಾ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಸಂಸ್ಥೆಯ
ನವದೆಹಲಿ: ಕೈತುಂಬಾ ಸಂಬಳ ಸಿಗುವ ವಿದೇಶಿ ಉದ್ಯೋಗದ ಭರವಸೆ ನೀಡಿ 28 ವರ್ಷದ ಮಹಿಳೆಯನ್ನು ಪೋರ್ಚುಗಲ್ನಲ್ಲಿರುವ ಮದ್ಯದಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ಇನ್ಸ್ಟಾಗ್ರಾಂ ಮೂಲಕ ಪುಣೆ ಮೂಲದ 'ವೀ ಮೈಗ್ರೇಟ್' ಉದ್ಯೋಗ ಸಲಹಾ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಸಂಸ್ಥೆಯ ಅಧಿಕಾರಿಗಳು ಪೋರ್ಚುಗಲ್ನಲ್ಲಿ ದಿನಕ್ಕೆ 8 ಗಂಟೆಗಳ ಕೆಲಸ, ತಿಂಗಳಿಗೆ ₹ 1.5 ಲಕ್ಷ ವೇತನದ ಉದ್ಯೋಗ ಕೊಡುವುದಾಗಿ ಭರವಸೆ ನೀಡಿದ್ದರು. ವೀಸಾ ಮತ್ತು ಇತರ ದಾಖಲೆಗಳ ವೆಚ್ಚದ ನೆಪದಲ್ಲಿ ಆರೋಪಿಗಳು ಮಹಿಳೆಯಿಂದ ಹಂತ ಹಂತವಾಗಿ ಒಟ್ಟು ₹ 11 ಲಕ್ಷ ಪಡೆದುಕೊಂಡಿದ್ದರು.ಮಹಿಳೆ ಪೋರ್ಚುಗಲ್ ತಲುಪುತ್ತಿದ್ದಂತೆಯೇ, ಅಲ್ಲಿದ್ದ 'ಏಜೆಂಟ್ಗಳು' ಆಕೆಯ ಪಾಸ್ಪೋರ್ಟ್ ಕಸಿದುಕೊಂಡು, ಕೊಠಡಿಯೊಂದರಲ್ಲಿ ಎರಡು ದಿನ ಕೂಡಿ ಹಾಕಿದ್ದರು. ತದನಂತರ ಮಹಿಳೆಯನ್ನು ಬೀರ್ ಶಾಪ್ ಮಾಲೀಕನಿಗೆ ಮಾರಾಟ ಮಾಡಿದ್ದರು. ಅಲ್ಲಿ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುವುದರ ಜೊತೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.ಸುಮಾರು ಒಂದು ತಿಂಗಳ ಕಾಲ ಪೋರ್ಚುಗಲ್ನಲ್ಲಿ ನರಕಯಾತನೆ ಅನುಭವಿಸಿದ ಮಹಿಳೆ, ಕೊನೆಗೂ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲಿಗೆ ಬಸ್ ಮೂಲಕ ಲಿಸ್ಬನ್ಗೆ ತೆರಳಿ ಅಲ್ಲಿಂದ ಮ್ಯಾಡ್ರಿಡ್ಗೆ ಬಂದರು. ದೋಹಾ ಮಾರ್ಗವಾಗಿ ಸಂತ್ರಸ್ತ ಮಹಿಳೆ ಭಾರತಕ್ಕೆ ಮರಳಿದ್ದಾರೆ.'ವೀ ಮೈಗ್ರೇಟ್' ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಎಂಟು ಜನರ ವಿರುದ್ಧ ಮಾನವ ಕಳ್ಳಸಾಗಣೆ, ವಂಚನೆ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.