ಮಂಡ್ಯಕ್ಕೆ ಕೃಷಿ ವಿವಿ ತರಲು ರಕ್ತ ಸುರಿಸಿದ್ದೇನೆ: ಸಚಿವ ಚಲುವರಾಯಸ್ವಾಮಿ
ಮಂಡ್ಯ: ‘ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ತರಲು ನಾವು ಕಣ್ಣೀರಲ್ಲ, ರಕ್ತ ಸುರಿಸಿದ್ದೇವೆ. ₹100 ಕೋಟಿ ಕಾಮಗಾರಿಗೆ ಈಗಾಗಲೇ ಹಣ ಮಂಜೂರಾಗಿದೆ. ಮಂಡ್ಯದ ಅಭಿವೃದ್ಧಿ ನೋಡಿ ವಿರೋಧ ಪಕ್ಷದವರಿಗೆ ಹೊಟ್ಟೆ ಉರಿಯಾಗುತ್ತಿದೆ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಮಂಡ್ಯ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಶನಿವಾ

ಮಂಡ್ಯ: ‘ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ತರಲು ನಾವು ಕಣ್ಣೀರಲ್ಲ, ರಕ್ತ ಸುರಿಸಿದ್ದೇವೆ. ₹100 ಕೋಟಿ ಕಾಮಗಾರಿಗೆ ಈಗಾಗಲೇ ಹಣ ಮಂಜೂರಾಗಿದೆ. ಮಂಡ್ಯದ ಅಭಿವೃದ್ಧಿ ನೋಡಿ ವಿರೋಧ ಪಕ್ಷದವರಿಗೆ ಹೊಟ್ಟೆ ಉರಿಯಾಗುತ್ತಿದೆ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಮಂಡ್ಯ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ನೂತನ ಸಚಿವರುಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ಮಂಡ್ಯಕ್ಕೆ ಒಂದು ಕೃಷಿ ವಿವಿ ತರಲು 20 ವರ್ಷ ಅಧಿಕಾರದಲ್ಲಿದ್ದರೂ ನಿಮ್ಮಿಂದ ಆಗಲಿಲ್ಲ. ನನ್ನದು ಮಂಡ್ಯ ಎಂದು ಹೇಳಿಕೊಳ್ಳಲು ನಾಚಿಕೆ ಆಗಲ್ಲವೇ? ಇಲ್ಲಿಗೆ ಬಂದು ಕಣ್ಣೀರು ಹಾಕುವ ಅಗತ್ಯವಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ‘ನನಗೆ ಸಿಕ್ಕಿರುವ ಈ ಸಚಿವ ಸ್ಥಾನ ಕಾರ್ಯಕರ್ತರ ಭಿಕ್ಷೆ. ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ. 2028ಕ್ಕೆ ಮಂಡ್ಯವನ್ನು ಇನ್ನಷ್ಟು ಬಲಪಡಿಸುತ್ತೇವೆ. ವಿರೋಧಿಗಳು ಎದುರಿಗೆ ಬಂದು ಮಾತನಾಡಲಿ, ಉತ್ತರ ಕೊಡುತ್ತೇನೆ’ ಎಂದು ಸವಾಲು ಹಾಕಿದರು.ಮಂಡ್ಯ ಈಗ ಕಾಂಗ್ರೆಸ್ನ ಭದ್ರಕೋಟೆ. ಲಘುವಾಗಿ ಯಾರೂ ಮಾತನಾಡಬಾರದು. ಈ ಹಿಂದೆ ನಮ್ಮ ಭದ್ರಕೋಟೆ ಅಂದುಕೊಂಡಿದ್ರು. ಜನರ ಪ್ರೀತಿ, ಆಶೀರ್ವಾದದಿಂದ ಜಿಲ್ಲೆಯಲ್ಲಿ 6 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಮತ್ತೊಮ್ಮೆ ಮಂತ್ರಿ ಆಗೋದು ಅಷ್ಟು ಸುಲಭವಲ್ಲ. ನಿಮ್ಮ ಪ್ರೀತಿ ಇದ್ದರೆ ಮಾತ್ರ ಇದು ಸಾಧ್ಯ. ವಿರೋಧಿಗಳ ಟೀಕೆಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರವಾಗಿರುತ್ತದೆ ಎಂದರು. ಈಗ ಎಲ್ಲಿದ್ದಾರೆ?ಕಾವೇರಿ ನೀರು ಮೊದಲು ಕುಡಿಯುವುದಕ್ಕೆ ಮತ್ತು ರೈತರಿಗೆ, ಆಮೇಲೆ ತಮಿಳುನಾಡಿಗೆ ಎಂಬ ನಮ್ಮ ನಿಲುವು ಸ್ಪಷ್ಟವಾಗಿದೆ. ‘ಅಧಿಕಾರಕ್ಕೆ ಬಂದ 5 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ’ ಎಂದು ಹೇಳಿದವರು ಈಗ ಎಲ್ಲಿದ್ದಾರೆ? ಪಕ್ಕದ ರಾಜ್ಯದ ಅನುಮತಿ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ತೀರ್ಮಾನ ತೆಗೆದುಕೊಳ್ಳಲಿಲ್ಲ ಎಂದು ಚಲುವರಾಯಸ್ವಾಮಿ ಎಚ್ಡಿಕೆಯನ್ನು ಟೀಕಿಸಿದರು.ಬಿಜೆಪಿ-ಜೆಡಿಎಸ್ಗೆ ತಿರುಗೇಟು: ಬಿಜೆಪಿಯವರೇ ಯತ್ನಾಳ್ ಅವರನ್ನು ಸಮಾಧಾನಪಡಿಸಿಕೊಳ್ಳಿ. ಕುಮಾರ್ ಬಂಗಾರಪ್ಪ ಅವರನ್ನು ಸರಿ ಮಾಡಿಕೊಳ್ಳಿ. ನಿಮ್ಮದನ್ನು ನೀವು ನೋಡಿಕೊಳ್ಳಿ. ನಮ್ಮತ್ರ ಬರಬೇಡಿ. ನಾವು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಪರ ಇದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.ಕೆಪಿಎಸ್ಸಿ ಚೇರ್ಮನ್ ಹುದ್ದೆಯನ್ನು ಯಡಿಯೂರಪ್ಪ ಮಾಡಿದ್ದರು. ಅವರ ಸಂಬಂಧಿಯೇ ಹಗರಣ ಮಾಡಿದ್ದಾರೆ ಎಂದು ತೇಜಸ್ವಿ ಅವರ ಹೆಸರು ಪ್ರಸ್ತಾಪಿಸಿ, ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ಸಚಿವರು ಪ್ರಶ್ನಿಸಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಳವಳ್ಳಿ ಶಿವಣ್ಣ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಂ.ಶ್ರೀನಿವಾಸ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ವಿಜಯಲಕ್ಷ್ಮಿ ರಘುನಂದನ್, ತಾ.ಪಂ. ಮಾಜಿ ಅಧ್ಯಕ್ಷ ತ್ಯಾಗರಾಜ್, ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.‘ಮಂಡ್ಯದಲ್ಲಿ ಹುಲಿ–ಸಿಂಹ ಗರ್ಜಿಸಲಿ’ಮಂಡ್ಯ ಶಾಸಕ ಪಿ.ರವಿಕುಮಾರ್ ಮಾತನಾಡಿ, ‘ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿರುವುದು ಆನೆ ಬಲ ಬಂದಂತಾಗಿದೆ. ಇಬ್ಬರಿಂದಲೂ ಬಹಳ ನಿರೀಕ್ಷೆ ಇದೆ. ಒಬ್ಬರು ಸಿಂಹ, ಮತ್ತೊಬ್ಬರು ಹುಲಿಯಂತೆ ಗರ್ಜಿಸಲಿ’ ಎಂದರು. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಬ್ಬರ ಸಹಕಾರ ಅಗತ್ಯ. ಮಂಡ್ಯಕ್ಕೆ ಹೆಚ್ಚಿನ ಅನುದಾನ ತರಲಿ. 2028ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲಿ ಎಂದು ಆಶಿಸಿದರು. ‘ಮೈಷುಗರ್ ಉಳಿಸಿದ ಕೀರ್ತಿ ಕಾಂಗ್ರೆಸ್ಗೆ’ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘1999ರಲ್ಲಿ ಜೆಡಿಎಸ್ ಸೋತಾಗ ನಾಗಮಂಗಲದಿಂದ ನಾನು ಗೆದ್ದಿದ್ದೆ. ಮೈಷುಗರ್ ಕಾರ್ಖಾನೆಯನ್ನು ನಾನೇ ಪ್ರಾರಂಭ ಮಾಡಿದೆ. 2019ರಲ್ಲಿ ಕಾರ್ಖಾನೆ ಮುಚ್ಚಿದಾಗ ಹೋರಾಟ ಮಾಡಿ ಉಳಿಸಿದೆವು. 20 ವರ್ಷಗಳ ನಂತರ ಈ ಬಾರಿ ಕಾರ್ಖಾನೆಯಲ್ಲಿ ಶೇ 8.75ರಷ್ಟು ಇಳುವರಿ ಬಂದಿದೆ. ಖಾಸಗೀಕರಣ ಮಾಡದೆ ನಮ್ಮ ಸರ್ಕಾರವೇ ಕಾರ್ಖಾನೆ ಉಳಿಸಿಕೊಂಡಿದೆ. ನಾನು ನಿಮ್ಮ ಜೊತೆಯಲ್ಲಿಲ್ಲದಿದ್ದಾಗ ನೀವು ಏನು ಅಭಿವೃದ್ಧಿ ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.