ಆರ್ಎಸ್ಎಸ್, ಹಿಂದೂಮಹಾಸಭಾ ನಕಲಿ ದೇಶಪ್ರೇಮಿಗಳು: ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ನಕಲಿ ದೇಶಪ್ರೇಮಿಗಳಾದ ಆರ್ಎಸ್ಎಸ್, ಹಿಂದೂಮಹಾಸಭಾಗಳು ದೇಶದ ಇತಿಹಾಸ ತಿರುಚಿ ಮಹಾತ್ಮಗಾಂಧೀಜಿಯವರನ್ನು ಮುಗಿಸಲು ಸಂಚು ರೂಪಿಸಿವೆ. ಆಂದೋಲನದ ಮಾದರಿಯಲ್ಲಿ ಯುವಪೀಳಿಗೆಗೆ ದೇಶದ ಇತಿಹಾಸವನ್ನು ತಿಳಿಸುವ ಮೂಲಕ ಸಂಚು ವಿಫಲಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.ಆಗಸ್ಟ್ ಕ್ರಾಂತಿ ಟ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ನಕಲಿ ದೇಶಪ್ರೇಮಿಗಳಾದ ಆರ್ಎಸ್ಎಸ್, ಹಿಂದೂಮಹಾಸಭಾಗಳು ದೇಶದ ಇತಿಹಾಸ ತಿರುಚಿ ಮಹಾತ್ಮಗಾಂಧೀಜಿಯವರನ್ನು ಮುಗಿಸಲು ಸಂಚು ರೂಪಿಸಿವೆ. ಆಂದೋಲನದ ಮಾದರಿಯಲ್ಲಿ ಯುವಪೀಳಿಗೆಗೆ ದೇಶದ ಇತಿಹಾಸವನ್ನು ತಿಳಿಸುವ ಮೂಲಕ ಸಂಚು ವಿಫಲಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.ಆಗಸ್ಟ್ ಕ್ರಾಂತಿ ಟ್ರಸ್ಟ್ ಹಾಗೂ ಕರ್ನಾಟಕ ಮತ್ತು ಗಾಂಧಿ ಸ್ಮಾರಕ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಆಗಸ್ಟ್ ಕ್ರಾಂತಿ ದಿವಸ, ‘ಚಲೇಜಾವ್’ ಚಳವಳಿಯ ಸ್ಮರಣಾರ್ಥ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.1942 ಆಗಸ್ಟ್ 9ರಂದು ಚಲೇಜಾವು ಚಳವಳಿ ನಡೆಸಲು ಗಾಂಧೀಜಿ ಕರೆ ನೀಡಿದ್ದರು.ಅಂದು ಗಾಂಧೀಜಿ, ನೆಹರೂ ಸಹಿತ ಎಲ್ಲ ನಾಯಕರನ್ನು ಬ್ರಿಟಿಷರು ಬಂಧಿಸಿದ್ದರು. ಹಾಗಾಗಿ ಚಳವಳಿ ನಡೆಯಲಾರದು ಎಂದು ಬ್ರಿಟಿಷರು ಭಾವಿಸಿದ್ದರು. ಆದರೆ, ಗಾಂಧೀಜಿ ಕರೆಯಂತೆ ದೇಶದಾದ್ಯಂತ ಜನರೇ ಚಳವಳಿಯನ್ನು ಮುನ್ನಡೆಸಿದರು ಎಂದು ನೆನಪು ಮಾಡಿಕೊಂಡರು.‘ಗಾಂಧೀಜಿ ನೇತೃತ್ವದಲ್ಲಿ ನಡೆದ ಮೂರು ಚಳವಳಿಗಳು ಭಾರತ ಸ್ವಾತಂತ್ರ್ಯದ ಹೋರಾಟದ ಹಾದಿಯಲ್ಲಿ ಪ್ರಮುಖವಾದುದು. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಗಳು ಇವು. ಈ ಚಳವಳಿಗಳಲ್ಲಿ ಭಾಗವಹಿಸದವರು ಗಾಂಧೀಜಿಯ ಜನ್ಮ ದಿನದಂದು ಕೆಲವು ಕಡೆ ಗಾಂಧೀಜಿ ಪುತ್ಥಳಿಗೆ ಶೂಟ್ ಮಾಡುತ್ತಾರೆ. ವಿದೇಶಗಳಲ್ಲಿ ಅವರೇ ಗಾಂಧೀಜಿ ಪುತ್ಥಳಿಗಳಿಗೆ ಹಾರ ಹಾಕುತ್ತಾರೆ. ಯಾಕೆಂದರೆ ಗಾಂಧೀಜಿಯನ್ನು ಬಿಟ್ಟರೆ ಇವರಿಗೆ ಬೆಲೆ ಇಲ್ಲ. ಹಾಗಾಗಿ ಗಾಂಧೀಜಿಯನ್ನು ಇಟ್ಟುಕೊಳ್ಳಲೂ ಆಗದೇ, ಬಿಡಲೂ ಆಗದೇ ಇರುವ ಸ್ಥಿತಿಯಲ್ಲಿ ಕೋಮುವಾದಿಗಳಿದ್ದಾರೆ’ ಎಂದು ವಿಶ್ಲೇಷಿಸಿದರು.‘ಜವಾಹರಲಾಲ್ ನೆಹರೂ ಅವರಿಗೆ ಮಸಿ ಬಳಿಯುವ ಕೆಲಸವನ್ನು ಕೋಮುವಾದಿಗಳು ಮಾಡಿದ್ದಾರೆ. ಗಾಂಧೀಜಿ ಅವರ ಹೆಸರಿಗೂ ಮಸಿ ಬಳಿಯಲು ನಿರಂತರ ಯತ್ನಿಸುತ್ತಿದ್ದರೂ ಇಲ್ಲಿವರೆಗೆ ಯಶಸ್ವಿಯಾಗಿಲ್ಲ. 127 ದೇಶಗಳಲ್ಲಿ ಗಾಂಧೀಜಿಯ ಪುತ್ಥಳಿ ಸ್ಥಾಪಿಸಿ, ಪ್ರತಿ ವರ್ಷ ಜಾಗತಿಕ ಅಹಿಂಸಾ ದಿನ ಆಚರಿಸಲಾಗುತ್ತಿದೆ’ ಎಂದು ಹೇಳಿದರು.ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ಕೇಂದ್ರದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವಿಲ್ಲ. ಸರ್ವಾಧಿಕಾರಿ ಪಿಶಾಚಿ ಸರ್ಕಾರವಿದೆ. ಮುಂದಿನ ಬಾರಿಗೆ ಚುನಾವಣೆಯಲ್ಲಿ ಸೋಲುತ್ತಾರೆಂದು ಗೊತ್ತಿರುವದರಿಂದ ಅವರು ಅಧಿಕಾರ ಬಿಡಬಾರದೆಂದು ತೀರ್ಮಾನ ಮಾಡಿದ್ದಾರೆ. ಚುನಾವಣೆ ನಡೆದರೆ ಗೆಲ್ಲಬೇಕು. ಇಲ್ಲದೇ ಇದ್ದರೆ ಚುನಾವಣೆಯೇ ನಡೆಯಬಾರದೆನ್ನುವ ತೀರ್ಮಾನ ಮಾಡಿದ್ದಾರೆ. ಚುನಾವಣಾ ಆಯುಕ್ತರನ್ನೇ ಬದಲಾಯಿಸಿರುವುದು, ಇವಿಎಂ ಸಿದ್ದಪಡಿಸಿಕೊಂಡಿರುವುದು, ಎಸ್ಐಆರ್ ತಂದಿರುವುದು, ಡಿಲಿಮಿಟೇಶನ್, ಒಂದು ರಾಷ್ಟ್ರ ಒಂದು ಚುನಾವಣೆ ತರಲು ಹೊರಟಿರುವುದು ಅದಕ್ಕಾಗಿಯೇ ಎಂದು ಹೇಳಿದರು.ಜನಗಣತಿಯಲ್ಲೂ ಸುಳ್ಳು ಅಂಕಿ ಅಂಶ ತುಂಬಿಸುವ ಮೂಲಕ ಅವರು ದೇಶದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾಗಿದೆ, ಎಲ್ಲ ವ್ಯಾಪಾರಗಳು ಅವರ ಕೈಯಲ್ಲಿದೆ, ಹಿಂದೂ ಸಮಾಜ ಕುಸಿದು ಹೋಗುತ್ತಿದೆ ಎಂದುತೋರಿಸಿ, ಗಲಭೆಗಳ ಮೂಲಕ 2028ರಲ್ಲಿ ರಕ್ತಪಾತವಾನ್ನು ಸೃಷ್ಟಿಸುವ ಯೋಜನೆಗಳನ್ನು ಮಾಡುತ್ತಿದ್ದಾರೆ. ‘ಕ್ವಿಟ್ ಇಂಡಿಯಾ’ ಮಾದರಿಯಲ್ಲಿ ಅದಕ್ಕೆ ಉತ್ತರ ನೀಡಬೇಕು. ‘ಸಂವಿಧಾನ ವಿರೋಧಿಗಳೇ ಅಧಿಕಾರ ಬಿಟ್ಟು ತೊಲಗಿ’ ಚಳವಳಿ ನಡೆಸಬೇಕು ಎಂದು ಸಲಹೆ ನೀಡಿದರು.ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಮಾಜಿ ಸಂಸದ ವೆಂಕಟೇಶ್ ವಿ., ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ, ವಿಚಾರವಾದಿಗಳ ಟ್ರಸ್ಟ್ನ ನಾಗೇಶ್ ಅರಳಕುಪ್ಪೆ, ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ, ಹೋರಾಟಗಾರರಾದ ಅಪ್ಪಾ ಸಾಹೇಬ ಯರನಾಳ, ಅಶೋಕ ದಳವಾಯಿ, ರಾಬಿನ್ ಮ್ಯಾಥ್ಯು ಭಾಗವಹಿಸಿದ್ದರು.–ಬಾಕ್ಸ್–ಹೆಸರು ಬರೆಯುತ್ತಿದ್ದೆ ಎಂದಿದ್ದ ವಾಜಪೇಯಿಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ’ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಲು ಅಟಲ್ ಬಿಹಾರಿ ವಾಜಪೇಯಿ ಬೀದಿಗೆ ಇಳಿದಿದ್ದರು. ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. 'ನಾನು ಚಳವಳಿಯಲ್ಲಿ ಭಾಗವಹಿಸಲು ಬಂದಿಲ್ಲ. ಬದಲಾಗಿ ಬ್ರಿಟಿಷರ ವಿರುದ್ಧ ಯಾರೆಲ್ಲ ಇದ್ದಾರೆ ಎಂಬುದನ್ನು ನೋಡಿ ಹೆಸರು ಬರೆದುಕೊಡಲು ಬಂದಿದ್ದೆ. ಆದರೂ ಬಂಧಿಸಿದ್ದಾರೆ" ಎಂದು ಆಗ ವಾಜಪೇಯಿ ಹೇಳಿದ್ದರು. ಅಂಥವರಿಗೆಲ್ಲ ಭಾರತರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.