‘ಕೈ’ ನಾಯಕರ ವಿರುದ್ಧ ಕಾನೂನು ಕ್ರಮ: ರಾಜ್ಯಪಾಲರಿಗೆ ಮನವಿ
ಬೆಂಗಳೂರು:‘ವಿಧಾನಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದ್ದು, ಆಡಳಿತ ಪಕ್ಷದ ನಾಯಕರು ಗೂಂಡಾಗಳಂತೆ ವರ್ತಿಸಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜೀನಾಮೆ ಪಡೆಯಲಾಗಿದ್ದು, ಕಾನೂನು ಕ್ರಮ ಜರುಗಿಸಬೇಕು’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.ಲ

ಬೆಂಗಳೂರು:‘ವಿಧಾನಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದ್ದು, ಆಡಳಿತ ಪಕ್ಷದ ನಾಯಕರು ಗೂಂಡಾಗಳಂತೆ ವರ್ತಿಸಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜೀನಾಮೆ ಪಡೆಯಲಾಗಿದ್ದು, ಕಾನೂನು ಕ್ರಮ ಜರುಗಿಸಬೇಕು’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.ಲೋಕಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಭಾನುವಾರ ಮನವಿ ಪತ್ರ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.‘ಹೊರಟ್ಟಿ ಅವರು ಇದೇ 14 ರಂದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರೂ ಅವಸರದಲ್ಲಿ ಅವರಿಂದ ರಾಜೀನಾಮೆ ಪಡೆದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಸಂವಿಧಾನದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.‘ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಮತ್ತು ವಿಧಾನಪರಿಷತ್ನ ಸದಸ್ಯರೂ ಸೇರಿ ಒಟ್ಟು 30 ಮುಖಂಡರು ಹೊರಟ್ಟಿ ಅವರ ಕೊಠಡಿಗೆ ಹೋಗಿ ರಾಜಕೀಯ ಒತ್ತಡ ಹೇರಿ, ಗೂಂಡಾಗಳಂತೆ ವರ್ತಿಸಿ, ಅಸಾಂವಿಧಾನಿಕವಾಗಿ ರಾಜೀನಾಮೆ ಪಡೆದಿದ್ದಾರೆ. ಆಪ್ತ ಸಹಾಯಕರನ್ನು ಕರೆದು ಲೆಟರ್ಹೆಡ್ ತರಿಸಿ, ಟೈಪ್ ಮಾಡಿಸಿ ದಿನಾಂಕವನ್ನು ಖಾಲಿ ಬಿಟ್ಟು ಸಹಿ ಹಾಕಿಸಿಕೊಂಡು ನಂತರ ದಿನಾಂಕವನ್ನು ಪೆನ್ನಿನಲ್ಲಿ ತಿದ್ದಿದ್ದಾರೆ’ ಎಂದು ತಿಳಿಸಿದರು.‘ಇವೆಲ್ಲ ಘಟನೆಯಿಂದ ನೊಂದು ಹೊರಟ್ಟಿ ಅವರು ಊರಿಗೆ ಹೋಗಿದ್ದಾರೆ. ಅವರ ಫೋನ್ ಸ್ವಿಚ್ ಆಫ್ ಆಗಿದೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆ ದಿನ ಏನೇನು ನಡೆದಿದೆ ಎಂಬುದನ್ನು ವಿವರಿಸಿ ಹೊರಟ್ಟಿ ಅವರೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ’ ಎಂದು ಛಲವಾದಿ ವಿವರಿಸಿದರು.‘ಸಭಾಪತಿ ರಾಜೀನಾಮೆ ನೀಡಲು ಉಪಸಭಾಪತಿ ಇರಬೇಕು. ಆದರೆ, ಉಪಸಭಾಪತಿ ಇಲ್ಲ. ಅವರು ಇಲ್ಲದಿದ್ದಾಗ ಯಾರು ಅಂಗೀಕಾರ ಮಾಡಬೇಕು? ರಾಜ್ಯಪಾಲರ ಕ್ರಮ ಏನು? ಸದನದಲ್ಲಿ ಏನು ಆಗಬೇಕು ಎಂಬ ಬಗ್ಗೆ ಕಾನೂನು ಮಾಹಿತಿ ಕೇಳುತ್ತೇವೆ. ಮುಂದಿನ ನಡೆ ಏನು ಎಂಬುದನ್ನು ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.‘ನಮ್ಮ ದೂರಿಗೆ ಸ್ಪಂದಿಸಿರುವ ರಾಜ್ಯಪಾಲರು ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ತಾವು ಮಧ್ಯಪ್ರವೇಶಿಸಿ ಸಂವಿಧಾನದ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ ಮತ್ತು ಟಿ.ಎ.ಶರವಣ ಇದ್ದರು.