ಮದ್ಯಮುಕ್ತವಾಗಿಸುವ ಯತ್ನಕ್ಕೆ ಫಲ;‘ಹಟ್ಟಿ’ ಉಳಿಸಿಕೊಂಡ ಗಟ್ಟಿಗಿತ್ತಿಯರಿಗೆ ಮನ್ನಣೆ
ಕೊಪ್ಪಳ: ತಮ್ಮ ಊರನ್ನು ಮದ್ಯಮುಕ್ತವಾಗಿಸಲು ಶ್ರಮಿಸಿ, ಅದರಲ್ಲಿ ಯಶಸ್ವಿಯಾದ ತಾಲ್ಲೂಕಿನ ಹಟ್ಟಿ ಗ್ರಾಮದ ಮಹಿಳೆಯರ ಮನೋಬಲಕ್ಕೆ ಈಗ ರಾಜ್ಯ ಮಟ್ಟದ ಮನ್ನಣೆ ಲಭಿಸಿದೆ. ಲೇಬಗೇರಿ ಸಮೀಪದಲ್ಲಿ ಇರುವ ಈ ಗ್ರಾಮದಲ್ಲಿ ವರ್ಷದ ಹಿಂದೆ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿತ್ತು. ಹಲವು ಯುವಕರು ಮದ್ಯವ್ಯಸನಿಗಳಾಗಿದ್ದರು. ಇದರಿಂದ ನೊಂದಿದ್ದ ಮಹಿಳೆಯರು ಊರಿನ ಹಿರಿಯರಿಗೆ ದುಂಬ

ಕೊಪ್ಪಳ: ತಮ್ಮ ಊರನ್ನು ಮದ್ಯಮುಕ್ತವಾಗಿಸಲು ಶ್ರಮಿಸಿ, ಅದರಲ್ಲಿ ಯಶಸ್ವಿಯಾದ ತಾಲ್ಲೂಕಿನ ಹಟ್ಟಿ ಗ್ರಾಮದ ಮಹಿಳೆಯರ ಮನೋಬಲಕ್ಕೆ ಈಗ ರಾಜ್ಯ ಮಟ್ಟದ ಮನ್ನಣೆ ಲಭಿಸಿದೆ. ಲೇಬಗೇರಿ ಸಮೀಪದಲ್ಲಿ ಇರುವ ಈ ಗ್ರಾಮದಲ್ಲಿ ವರ್ಷದ ಹಿಂದೆ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿತ್ತು. ಹಲವು ಯುವಕರು ಮದ್ಯವ್ಯಸನಿಗಳಾಗಿದ್ದರು. ಇದರಿಂದ ನೊಂದಿದ್ದ ಮಹಿಳೆಯರು ಊರಿನ ಹಿರಿಯರಿಗೆ ದುಂಬಾಲು ಬಿದ್ದು, ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿಸಿದ್ದರು. ಅವರ ಈ ಪರಿಶ್ರಮಕ್ಕೆ ಇದೀಗ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ರಾಜ್ಯ ಮಟ್ಟದ ‘ಸಂಯಮ ಪ್ರಶಸ್ತಿ’ಯ ಗೌರವ ಲಭಿಸಿದೆ.ಬಹುತೇಕ ಕೃಷಿಯನ್ನೇ ನಂಬಿಕೊಂಡಿರುವ ಹಟ್ಟಿ ಗ್ರಾಮದಲ್ಲಿ ಅಂದಾಜು 1,500 ಜನಸಂಖ್ಯೆ ಇದೆ. ಈ ಹಿಂದೆ ಗ್ರಾಮ ಹಾಗೂ ಸಮೀಪದಲ್ಲಿ ಏಳು ಮದ್ಯದ ಅಂಗಡಿಗಳಿದ್ದವು. ಹೆಚ್ಚಿನ ಸಂಖ್ಯೆಯಲ್ಲಿದ್ದ ಮದ್ಯವ್ಯಸನಿಗಳಿಂದಾಗಿ ಗ್ರಾಮದಲ್ಲಿ ಮೇಲಿಂದ ಮೇಲೆ ಕಲಹಗಳಾಗುತ್ತಿದ್ದವು. ಕೆಲವು ವಯಸ್ಕ ಗಂಡುಮಕ್ಕಳು ಮದ್ಯವ್ಯಸನದಿಂದ ಪ್ರಾಣವನ್ನೇ ಕಳೆದುಕೊಂಡಿದ್ದರು. ತಮ್ಮೂರಿಗೆ ಎದುರಾದ ಈ ಕಂಟಕದಿಂದ ಮನೆಯ ಮಕ್ಕಳನ್ನು ಹೇಗಾದರೂ ಪಾರು ಮಾಡಲು ನೊಂದವರು ನಿರ್ಧರಿಸಿದರು.ಜಾತ್ರೆಯ ಸಲುವಾಗಿ ದೇವಸ್ಥಾನದಲ್ಲಿ ಗ್ರಾಮದ ಹಿರಿಯರು ಸಭೆ ನಡೆಸುತ್ತಿದ್ದಾಗ ಕಣ್ಣೀರು ಹಾಕುತ್ತಾ ಬಂದ ಮಹಿಳೆಯರು ‘ನೀವೆಲ್ಲರೂ ಸೇರಿ ಗ್ರಾಮದಲ್ಲಿ ಮದ್ಯ ಮಾರಾಟ ನಿಲ್ಲಿಸದಿದ್ದರೆ ನಾವು ಬೀದಿಪಾಲು ಆಗಬೇಕಾಗುತ್ತದೆ. ಇಲ್ಲವಾದರೆ ನಮ್ಮ ಹಾದಿ ನಾವು ನೋಡಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯರು, ಮದ್ಯ ಮಾರಾಟಗಾರರನ್ನು ಕರೆಸಿ, ಸಮಯದ ಗಡುವು ನೀಡಿ, ಅಂಗಡಿ ಬಂದ್ ಮಾಡಲು ಸೂಚಿಸಿದರು. ತಮ್ಮ ಮಾತನ್ನು ಕಡೆಗಣಿಸಿದರೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಎಚ್ಚರಿಕೆಯನ್ನೂ ನೀಡಿದರು.ಹಿರಿಯರ ಮಾತಿಗೆ ಬೆಲೆ ಕೊಟ್ಟು ಅಂಗಡಿಯವರು ಮದ್ಯ ಮಾರಾಟ ಬಂದ್ ಮಾಡಿದ್ದರಿಂದ, ಗ್ರಾಮವು ಒಂದು ವರ್ಷದಿಂದ ಮದ್ಯಮುಕ್ತವಾಗಿದೆ.ಮಂಡಳಿಯು ಇದೇ 16ರಂದು ಹಟ್ಟಿ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ₹1 ಲಕ್ಷ ನಗದು ನೀಡಲಿದೆ. ಪ್ರತಿವರ್ಷ ಸಾಧಕ ವ್ಯಕ್ತಿಗಳಿಗೆ ಮಂಡಳಿಯ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಗ್ರಾಮವೊಂದನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿರುವುದು ವಿಶೇಷ.ಮೊದಲು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗೆ ಪ್ರಶಸ್ತಿ ನೀಡಲು ಮಂಡಳಿ ನಿರ್ಧರಿಸಿತ್ತು. ಆದರೆ, ವ್ಯಕ್ತಿಗಿಂತ ಸ್ವಯಂಪ್ರೇರಣೆಯಿಂದ ಬದಲಾದ ಹಟ್ಟಿ ಗ್ರಾಮಕ್ಕೆ ಪ್ರಶಸ್ತಿ ನೀಡುವಂತೆ ಸ್ವಾಮೀಜಿ ತಿಳಿಸಿದ್ದರಿಂದ ಮಂಡಳಿಯು ಈ ಸಲಹೆಯನ್ನು ಪರಿಗಣಿಸಿದೆ.ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ ಕೊಪ್ಪಳಪ್ರಶಸ್ತಿಯನ್ನು ವ್ಯಕ್ತಿಗಿಂತ ಬದಲಾವಣೆ ಬಯಸಿದ ಮನಸ್ಸುಗಳಿಗೆ ನೀಡುವುದು ಔಚಿತ್ಯಪೂರ್ಣ. ಹಟ್ಟಿ ಗ್ರಾಮದವರೇ ಸ್ವಯಂಪ್ರೇರಣೆಯಿಂದ ಗ್ರಾಮವನ್ನು ಮದ್ಯಮುಕ್ತ ಮಾಡಿದ್ದಾರೆ. ಇದು ಬೇರೆ ಗ್ರಾಮಗಳಿಗೂ ಪ್ರೇರಣೆಯಾಗಲಿದೆ ರಾಮಣ್ಣ ಚೌಡ್ಕಿ ಹಟ್ಟಿ ಗ್ರಾಮದ ಮುಖಂಡರಾಜ್ಯ ಮಟ್ಟದ ಪ್ರಶಸ್ತಿಗೆ ನಮ್ಮ ಗ್ರಾಮ ಆಯ್ಕೆಯಾಗಿದ್ದು ಖುಷಿ ನೀಡಿದೆ. ಪ್ರಶಸ್ತಿಯ ಮೊತ್ತವನ್ನು ನಿಶ್ಚಿತ ಠೇವಣಿಯಾಗಿ ಇರಿಸಿ ಅದರಿಂದ ಬರುವ ಬಡ್ಡಿ ಹಣವನ್ನು ಎಸ್ಎಸ್ಎಲ್ಸಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆಯುವ ಗ್ರಾಮದ ಮಕ್ಕಳಿಗೆ ಬಹುಮಾನವಾಗಿ ಕೊಡಲಾಗುವುದು. ಶರಣಪ್ಪ ಸಲಾದಪುರ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹಟ್ಟಿ ಗ್ರಾಮದ ಜನ ಸ್ವಯಂಪ್ರೇರಣೆಯಿಂದ ಮದ್ಯ ಮಾರಾಟ ನಿಷೇಧ ಮಾಡಿದ್ದು ಬೇರೆಯವರಿಗೆ ಪ್ರೇರಣೆಯಾಗುವ ಕಥನ. ಆದ್ದರಿಂದ ಗ್ರಾಮವನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ