ರೈತ ನಾಗಭೂಷಣ್ ರೆಡ್ಡಿ ಅವರ ಮಾದರಿ ಕೃಷಿ: ಬರದಲ್ಲೂ ನಳನಳಿಸುತ್ತಿದೆ ಬೆಳೆ
ಗೌರಿಬಿದನೂರು: ನೀರಿನ ಲಭ್ಯತೆಗೆ ಅನುಗುಣವಾಗಿ ಮುನ್ನೆಚ್ಚರಿಕೆ ಕ್ರಮವಹಿಸಿ ಬೆಳೆಗಳನ್ನು ಬೆಳೆಯಬೇಕು. ನೀರು ಹೆಚ್ಚು ಬೇಡುವ ಮತ್ತು ಕಡಿಮೆ ಬೇಡುವ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ರೈತರು ಬರ ಎದುರಿಸಬಹುದು.–ಇದು ಗೌರಿಬಿದನೂರು ತಾಲ್ಲೂಕಿನ ಕೆಳಗಿನ ಕುರುಬರಹಳ್ಳಿಯ ರೈತ ನಾಗಭೂಷಣ್ ರೆಡ್ಡಿ ಅವರ ಅನುಭವದ ಮಾತು.ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ.

ಗೌರಿಬಿದನೂರು: ನೀರಿನ ಲಭ್ಯತೆಗೆ ಅನುಗುಣವಾಗಿ ಮುನ್ನೆಚ್ಚರಿಕೆ ಕ್ರಮವಹಿಸಿ ಬೆಳೆಗಳನ್ನು ಬೆಳೆಯಬೇಕು. ನೀರು ಹೆಚ್ಚು ಬೇಡುವ ಮತ್ತು ಕಡಿಮೆ ಬೇಡುವ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ರೈತರು ಬರ ಎದುರಿಸಬಹುದು.–ಇದು ಗೌರಿಬಿದನೂರು ತಾಲ್ಲೂಕಿನ ಕೆಳಗಿನ ಕುರುಬರಹಳ್ಳಿಯ ರೈತ ನಾಗಭೂಷಣ್ ರೆಡ್ಡಿ ಅವರ ಅನುಭವದ ಮಾತು.ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಬಿತ್ತಿದ್ದ ಬೀಜಗಳು ಮೊಳಕೆಯೊಡೆದಿಲ್ಲ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆಲವು ಭಾಗಗಳಲ್ಲಿ ರೈತರು ಮಳೆ ಇಲ್ಲದ ಕಾರಣ ಬಿತ್ತನೆಯನ್ನೇ ಮಾಡಿಲ್ಲ. ಬೀಳು ಜಮೀನು ಎಲ್ಲೆಡೆ ಕಾಣಸಿಗುತ್ತಿವೆ. ಹೊಲಗಳಲ್ಲಿ ಹಸಿರು ಪಸರಿಸಿಲ್ಲ. ಆದರೆ ನಾಗಭೂಷಣ್ ರೆಡ್ಡಿ ಅವರ ಜಮೀನು ಇದಕ್ಕೆ ಅಪವಾದ. ಮಳೆ ಇಲ್ಲದಿರುವ ಈ ಅವಧಿಯಲ್ಲಿಯೂ ಅವರು ಉತ್ತಮವಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರ ಮಿಶ್ರ ಕೃಷಿ ಬರ ಎದುರಿಸಲು ಮಾದರಿಯಾಗಿದೆ. ನಾಗಭೂಷಣ್ ರೆಡ್ಡಿ ಅವರಿಗೆ 12 ಎಕರೆ ಜಮೀನಿದೆ. ಈ ಜಮೀನಿಗೆ ನೀರುಣಿಸಲು ಮೂರು ಕೊಳವೆಬಾವಿ ಮತ್ತು ಒಂದು ತೆರೆದ ಬಾವಿ ಇದೆ. ಈ ನೀರನ್ನು ಹಿತ ಮಿತವಾಗಿ ಬಳಸುತ್ತಿದ್ದಾರೆ. ಸರ್ಕಾರದಿಂದ ಹನಿ ನೀರಾವರಿ ಸಹಾಯ ಸೌಲಭ್ಯ ಪಡೆದು ಈ ಪದ್ಧತಿ ಅಳವಡಿಸಿಕೊಂಡಿದ್ದಾರೆ. ನೀರಿನ ಸದ್ಬಳಕೆಗೆ ಇವರು ಮಾದರಿಯಾಗಿದ್ದಾರೆ.ಕಡಿಮೆ ನೀರು ಬೇಡುವ ಮುಸುಕಿನ ಜೋಳವನ್ನು 9 ಎಕರೆಯಲ್ಲಿ ಬೆಳೆದಿದ್ದಾರೆ. ವರಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ, ದಸರಾದಲ್ಲಿ ಉತ್ತಮ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ಮೂರು ಎಕರೆಯಲ್ಲಿ ಏಲಕ್ಕಿ ಬಾಳೆ ಮತ್ತು ಎರಡು ಎಕರೆಯಲ್ಲಿ ಬೂದುಗುಂಬಳ ಬೆಳೆದಿದ್ದಾರೆ. ಇದು ಈ ಹಬ್ಬದ ಸಮಯಕ್ಕೆ ಫಲ ನೀಡುತ್ತವೆ. ಈ ಎಲ್ಲ ಬೆಳೆಗೂ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ನೀರಿನ ಕೊರತೆಯಾಗದಂತೆ ಎಲ್ಲ ಬೆಳೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ.ಹೆಚ್ಚು ನೀರು ಬೇಡುವ ಬಾಳೆಯನ್ನು ಕಡಿಮೆ ಜಮೀನಿನಲ್ಲಿ ಮತ್ತು ಕಡಿಮೆ ನೀರು ಸಾಕಾಗುವ ಜೋಳ ಮತ್ತು ಬೂದುಗುಂಬಳವನ್ನು ಹೆಚ್ಚಿನ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಇದರಿಂದ ಲಭ್ಯವಿರುವ ನೀರನ್ನು ಎಲ್ಲ ಬೆಳೆಗಳಿಗೂ ಹಾಯಿಸಲಾಗುತ್ತಿದೆ.ಕೃಷಿ ಜೊತೆ ನಾಲ್ಕು ಹಸು ಸಾಕಿದ್ದಾರೆ. ಹಾಲಿನಿಂದ ಪ್ರತಿ ತಿಂಗಳು ₹10 ಸಾವಿರ ಆದಾಯ ಪಡೆಯುತ್ತಿದ್ದಾರೆ. ವ್ಯವಸ್ಥಿತವಾಗಿ ನೀರು ಬಳಸಿಭೂಮಿಯನ್ನು ನಂಬಿ ಆಸಕ್ತಿಯಿಂದ ಮತ್ತು ಸಮಗ್ರ ಕೃಷಿ ಮಾಡಿದರೆ ಹವಾಮಾನ ವೈಪರಿತ್ಯ, ಮಳೆ, ಬೆಲೆ ಏರುಪೇರು ಯಾವುದು ಸಹ ರೈತರ ಆತ್ಮಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ ಎನ್ನುತ್ತಾರೆ ನಾಗಭೂಷಣ್ ರೆಡ್ಡಿ.ಕಡಿಮೆ ನೀರನ್ನು ಸುವ್ಯವಸ್ಥಿತವಾಗಿ ಬಳಕೆ ಮಾಡಿದರೆ ಬೆಳೆಗಳನ್ನು ಉತ್ತಮವಾಗಿ ಬೆಳೆಯಬಹುದು. ಇದರಿಂದ ನಷ್ಟಕ್ಕೆ ಒಳಗಾಗುವ ಸಂಭವ ಕಡಿಮೆ. ನಿರೀಕ್ಷಿತ ಆದಾಯ ಪಡೆಯಲು ಸಾಧ್ಯ ಎಂದರು.ಕೈಹಿಡಿದ ಸಮಗ್ರ ಕೃಷಿ, ಹೈನುಗಾರಿಕೆ‘ಜಮೀನಿನ ಬದುಗಳಲ್ಲಿ 40 ತೆಂಗಿನ ಮರಗಳಿವೆ. ಯಾವುದೇ ಖರ್ಚಿಲ್ಲದೆ ಮತ್ತು ನಿರ್ವಹಣೆ ಇಲ್ಲದೆ ಎಳನೀರು ಮತ್ತು ತೆಂಗಿನಕಾಯಿ ಮಾರಾಟದಿಂದ ವರ್ಷಕ್ಕೆ ₹80 ಸಾವಿರ ಆದಾಯ ಬರುತ್ತದೆ. ಕುರಿ ಮತ್ತು ಕೋಳಿ ಸಾಕಲು ಹೈ–ಟೆಕ್ ಶೆಡ್ ನಿರ್ಮಿಸಿದ್ದೇವೆ. ಕೃಷಿಯ ಎಲ್ಲಾ ಕೆಲಸಗಳಿಗೆ ಮನೆಯವರೇ ಆಧಾರ’ ಎನ್ನುತ್ತಾರೆ ನಾಗಭೂಷಣ್ ರೆಡ್ಡಿ.‘ಮನೆಯಲ್ಲಿ ಎರಡು ಟ್ರ್ಯಾಕ್ಟರ್ ಮತ್ತು ಜೋಳದ ಯಂತ್ರ ಇರುವುದರಿಂದ ಜಮೀನಿನ ಕೆಲಸ ನಾವೇ ಮಾಡಿಕೊಳ್ಳುತ್ತೇವೆ. ಕಳೆ ಕೀಳಲು ಮಾತ್ರ ಕಾರ್ಮಿಕರನ್ನು ಆಶ್ರಯಿಸುತ್ತೇವೆ. ಈ ಬಾರಿ ಮೆಕ್ಕೆಜೋಳದಿಂದ ₹5 ಲಕ್ಷದಿಂದ ₹6 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ. ವರಲಕ್ಷ್ಮಿ ಹಬ್ಬಕ್ಕೆ ಬಾಳೆ ಕಟಾವಿಗೆ ಬರುವುದರಿಂದ ಅಂದಾಜು ₹6 ಲಕ್ಷ ಮತ್ತು ದಸರಾ ಸಮಯಕ್ಕೆ ಬೂದುಗುಂಬಳ ಕಟಾವಿಗೆ ಬರುವುದರಿಂದ ₹1.5 ಲಕ್ಷ ಆದಾಯ ನಿರೀಕ್ಷಿಸಲಾಗಿದೆ’ ಎಂದು ವಿವರಿಸಿದರು.