ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ – ಸಚಿವ ನಾಗೇಂದ್ರಗೆ ಸಂಕಷ್ಟ, ರದ್ದಾಗುತ್ತಾ ಜಾಮೀನು?
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ(Valmiki Board) ನೂರಾರು ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ (B Nagendra) ಅವರು ಕೋರ್ಟ್ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ದೆಹಲಿಗೆ ಪ್ರವಾಸ (Delhi Tour) ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರೋಪದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ED)

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ(Valmiki Board) ನೂರಾರು ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ (B Nagendra) ಅವರು ಕೋರ್ಟ್ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ದೆಹಲಿಗೆ ಪ್ರವಾಸ (Delhi Tour) ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರೋಪದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ED) ಸಾಕ್ಷ್ಯ ಸಂಗ್ರಹಕ್ಕೆ ಇಳಿದಿದೆ. ಆರೋಪ ಸಾಬೀತಾದರೆ ನಾಗೇಂದ್ರ ಅವರ ಜಾಮೀನು ರದ್ದುಗೊಳಿಸಲು ಇ.ಡಿ ಕೋರ್ಟ್ ಮೆಟ್ಟಿಲೇರುವುದು ಬಹುತೇಕ ಖಚಿತವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡುವಾಗ, “ಕರ್ನಾಟಕ ರಾಜ್ಯದಿಂದ ಹೊರಗೆ ಪ್ರಯಾಣಿಸಬೇಕಾದರೆ ನ್ಯಾಯಾಲಯದಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ” ಎಂಬ ಸ್ಪಷ್ಟ ಷರತ್ತು ವಿಧಿಸಿತ್ತು. ಕಠಿಣ ಷರತ್ತುಗಳಿದ್ದರೂ ನಾಗೇಂದ್ರ ಅವರು ನ್ಯಾಯಾಲಯದ ಅನುಮತಿ ಪಡೆಯದೇ ಇದೇ ಜುಲೈ 15 ಮತ್ತು ಜುಲೈ 26ರಂದು ದೆಹಲಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಜುಲೈ 15ರ ಸಂಜೆ 6:15ರ ಇಂಡಿಗೋ ವಿಮಾನ ಹಾಗೂ ಜುಲೈ 26ರ ಮಧ್ಯಾಹ್ನ 1:55ರ ವಿಮಾನದಲ್ಲಿ ಅವರು ದೆಹಲಿಗೆ ತೆರಳಿದ್ದರೆಂದು ಇಡಿಗೆ ಮಾಹಿತಿ ಲಭಿಸಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಇಡಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬಿಟಿವಿ ದೃಶ್ಯಾವಳಿಗಳು, ಶಿಷ್ಟಾಚಾರ (Protocol) ವಿಭಾಗದ ರಿಜಿಸ್ಟರ್ಗಳು ಹಾಗೂ ವಿಮಾನಯಾನ ಸಂಸ್ಥೆಯ ದಾಖಲೆಗಳನ್ನು ಜಾಲಾಡಲು ಆರಂಭಿಸಿದ್ದಾರೆ. ಮೂರು ಬಾರಿ ಅನುಮತಿ: ನ್ಯಾಯಾಲಯವು ಈ ಹಿಂದೆ ಮೂರು ಬಾರಿ ಮಾತ್ರ ನಾಗೇಂದ್ರ ಅವರಿಗೆ ರಾಜ್ಯದಿಂದ ಹೊರಗೆ ಹೋಗಲು ಅನುಮತಿ ನೀಡಿತ್ತು 2026ರ ಏಪ್ರಿಲ್ 26 ರಿಂದ ಜೂನ್ 2ರವರೆಗೆ, ಜೂನ್ 11 ರಿಂದ ಜುಲೈ 7ರವರೆಗೆ, ಜುಲೈ 16 ರಿಂದ ಜುಲೈ 25ರವರೆಗೆ ನ್ಯಾಯಾಲಯದಿಂದ ಅನುಮತಿ ಸಿಕ್ಕಿತ್ತು. ನ್ಯಾಯಾಲಯ ಅನುಮತಿ ನೀಡಿದ್ದ ಅವಧಿಗಿಂತ ಹೊರತಾಗಿ ಜುಲೈ 15 ಹಾಗೂ ಜುಲೈ 26ರಂದು ನಾಗೇಂದ್ರ ಅವರು ದೆಹಲಿಯಲ್ಲಿ ಕಾಣಿಸಿಕೊಂಡಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜುಲೈ 17ರಂದು ಮಾತ್ರ ಎಐಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ವಿಜಯಾನಂದ ಕಾಶಪ್ಪನವರ್, ಅಜಯ್ ಸಿಂಗ್, ಶಾಸಕರಾದ ಎ.ಎಸ್. ಪೊನ್ನಣ್ಣ, ಎನ್.ಎಚ್. ಕೋನರೆಡ್ಡಿ ಅವರ ಜೊತೆ ಇರುವುದು ಮಾತ್ರ ಕೆಲವು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆದರೆ, ಆ ದಿನ ಅವರ ದೆಹಲಿ ಪ್ರವಾಸಕ್ಕೆ ಕೋರ್ಟ್ ಅನುಮತಿ ಇತ್ತು. ಅರ್ಜಿ ತಿರಸ್ಕೃತ: ಜುಲೈ 26 ರಿಂದ ಆಗಸ್ಟ್ 10ರವರೆಗೆ ದೆಹಲಿ ಪ್ರವಾಸ ಕೈಗೊಳ್ಳಲು ಅನುಮತಿ ಕೋರಿ ನಾಗೇಂದ್ರ ಅವರು ಜುಲೈ 23ರಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇ.ಡಿ ಪರ ವಕೀಲರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಆರೋಪಿ ನಾಗೇಂದ್ರ ತನಿಖೆಯನ್ನು ವಿಳಂಬಗೊಳಿಸಲು ಪದೇ ಪದೇ ಪ್ರವಾಸದ ನೆಪ ಹೇಳುತ್ತಿದ್ದಾರೆ. ನೀಡಿದ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸಮನ್ಸ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರವಾಸಕ್ಕೆ ಬಲವಾದ ಕಾರಣ ಅಥವಾ ಆಹ್ವಾನದ ದಾಖಲೆಗಳನ್ನು ನೀಡುತ್ತಿಲ್ಲ” ಎಂದು ವಾದಿಸಿದ್ದರು. ಇ.ಡಿ ವಾದವನ್ನು ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಆಗಸ್ಟ್ 4ರಂದು ನಾಗೇಂದ್ರ ಅವರ ಪ್ರವಾಸದ ಅರ್ಜಿಯನ್ನು ತಿರಸ್ಕರಿಸಿತ್ತು. ಸಾಕ್ಷ್ಯ ಸಿಕ್ಕರೆ ಏನಾಗಬಹುದು? ಇ.ಡಿಗೆ ವಿಮಾನ ಪ್ರಯಾಣದ ಅಧಿಕೃತ ದಾಖಲೆಗಳು ಲಭ್ಯವಾದರೆ ಷರತ್ತು ಉಲ್ಲಂಘನೆ ಆಧಾರದ ಮೇಲೆ ನಾಗೇಂದ್ರ ಅವರ ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದೆ. ಒಂದು ವೇಳೆ ನ್ಯಾಯಾಲಯವು ಜಾಮೀನು ರದ್ದುಪಡಿಸಿದರೆ ಮಾಜಿ ಸಚಿವ ನಾಗೇಂದ್ರ ಮತ್ತೆ ಜೈಲು ಪಾಲಾಗಬೇಕಾಗುತ್ತದೆ. ಸರ್ಕಾರ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಿದ್ದಕ್ಕೆ ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಈ ಬೆಳವಣಿಗೆಯಿಂದ ವಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.