ಯತ್ನಾಳ ವಿರುದ್ಧ ಎಫ್ಐಆರ್
ವಿಜಯಪುರ: ಜೀವಂತ ಇರುವ ವ್ಯಕ್ತಿ ಸತ್ತಿದ್ದಾರೆ ಎಂದು ನಕಲಿ ಮರಣ ಪ್ರಮಾಣಪತ್ರ ಲಗತ್ತಿಸಿ, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಂತೆ ಚುನಾವಣಾ ಅಧಿಕಾರಿಗೆ ಅರ್ಜಿ ಸಲ್ಲಿಸಿದ ಆರೋಪದ ಮೇಲೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಎಫ್ಐಆರ್ ದಾಖಲಾಗಿದೆ.ವಿಜಯಪುರ ನಗರದ ಬಾಗವಾನ ಕಾಲೊನಿ ನಿವಾಸಿ ಅಬ್ದುಲ ರಜಾಕ ಬಾಗವಾನ (50) ಎ

ವಿಜಯಪುರ: ಜೀವಂತ ಇರುವ ವ್ಯಕ್ತಿ ಸತ್ತಿದ್ದಾರೆ ಎಂದು ನಕಲಿ ಮರಣ ಪ್ರಮಾಣಪತ್ರ ಲಗತ್ತಿಸಿ, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಂತೆ ಚುನಾವಣಾ ಅಧಿಕಾರಿಗೆ ಅರ್ಜಿ ಸಲ್ಲಿಸಿದ ಆರೋಪದ ಮೇಲೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಎಫ್ಐಆರ್ ದಾಖಲಾಗಿದೆ.ವಿಜಯಪುರ ನಗರದ ಬಾಗವಾನ ಕಾಲೊನಿ ನಿವಾಸಿ ಅಬ್ದುಲ ರಜಾಕ ಬಾಗವಾನ (50) ಎಂಬವರು ಯತ್ನಾಳ ವಿರುದ್ಧ ಜಲನಗರ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.‘ನಾನು ಜೀವಂತವಾಗಿದ್ದು, ತರಕಾರಿ ವ್ಯಾಪಾರ ಮಾಡುತ್ತೇನೆ. ನಾನು ವಿಜಯಪುರ ನಗರ ಮತಕ್ಷೇತ್ರದ ಮತದಾರನಿದ್ದೇನೆ. ಮತದಾರರ ಗುರುತಿನ ಚೀಟಿಯೂ ಇದೆ. ಶಾಸಕ ಯತ್ನಾಳ ಅವರು ನಾನು ಮೃತಪಟ್ಟಿರುವುದಾಗಿ ನನ್ನ ಹೆಸರಿನಲ್ಲಿ ಖೊಟ್ಟಿ ಮರಣ ಪ್ರಮಾಣ ಪತ್ರವನ್ನು ಲಗತ್ತಿಸಿದ್ದಾರೆ’ ಎಂದು ಅಬ್ದುಲ ರಜಾಕ ಬಾಗವಾನ ದೂರಿನಲ್ಲಿ ತಿಳಿಸಿದ್ದಾರೆ.‘ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಸೆಪ್ಟೆಂಬರ್ 3ರಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಎಸ್ಐಆರ್ ಫಾರ್ಮ್ 7 ಸಲ್ಲಿಸಿ, ಮೋಸ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದ್ದಾರೆ.ಪಾಲಿಕೆ ಸದಸ್ಯನ ವಿರುದ್ಧವೂ ಎಫ್ಐಆರ್:ವಿಜಯಪುರ ನಗರದ ನಿಸಾರಮಡ್ಡಿಯ ನಿವಾಸಿ ಜಾವೀದ ಇಂಡಿಕರ (32) ಎಂಬವರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ, ಶಾಸಕ ಯತ್ನಾಳ ಅವರ ಬೆಂಬಲಿಗ ಗಿರೀಶ ಪಾಟೀಲ ವಿರುದ್ಧ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‘ನಾನು ನಿಸಾರಮಡ್ಡಿಯಲ್ಲಿ ವಾಸವಿಲ್ಲ ಎಂದು ಖೊಟ್ಟಿ ದಾಖಲೆ ಸೃಷ್ಟಿಸಿ, ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವಂತೆ ಗಿರೀಶ ಪಾಟೀಲ ಅವರು ಎಸ್ಐಆರ್ ಫಾರ್ಮ್ 7 ಸಲ್ಲಿಸಿದ್ದು, ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು’ ಎಂದು ಜಾವೀದ ಇಂಡಿಕರ ಅಕ್ಟೋಬರ್ 6ರಂದು ದೂರು ದಾಖಲಿಸಿದ್ದಾರೆ.ತಿಕೋಟಾದಲ್ಲಿ 6 ಜನರ ವಿರುದ್ಧ ಎಫ್ಐಆರ್:ತಿಕೋಟಾ ಪಟ್ಟಣದ ನಿವಾಸಿ ಹಾಜಿಲಾಲ ಕೊಟ್ಟಲಗಿ (68) ಎಂಬವರು ತಮ್ಮ ಸ್ವಂತ ವಿಳಾಸದಲ್ಲಿ ವಾಸವಿಲ್ಲ. ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಎಸ್ಐಆರ್ ಫಾರ್ಮ್ 7 ಸಲ್ಲಿಸಿದ ಆರೋಪ ಮೇಲೆ ಆರು ಜನರ ವಿರುದ್ಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಭೀಮು ಗೊಳಸಂಗಿ, ವಿನಾಯಕ ಮಮದಾಪುರ, ಮಹೇಶ ಮುಕರ್ತಿಹಾಳ, ಆನಂದ ಅಂಬಿಗೇರ, ಹುಚ್ಚಪ್ಪ ಗಾಣಿಗೇರ, ಗೋವಿಂದ ಮುದನೂರ ಎಂಬವರ ವಿರುದ್ಧ ಹಾಜಿಲಾಲ ಕೊಟ್ಟಲಗಿ ಅ.6ರಂದು ದೂರು ದಾಖಲಿಸಿದ್ದಾರೆ.‘ನಾನು ಮುಸ್ಲಿಂ ಎಂಬ ಕಾರಣಕ್ಕಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಂತೆ ಖೊಟ್ಟಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದು, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಹಾಜಿಲಾಲ ದೂರಿನಲ್ಲಿ ಉಲ್ಲೇಖಿಸಿದ್ದಾರೆ.