ಮೈಸೂರು ದಸರಾ ಮಹೋತ್ಸವ | 146 ಕಿ.ಮೀ. ರಸ್ತೆ, 123 ವೃತ್ತಕ್ಕೆ ‘ದೀಪ ಚಪ್ಪರ’
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ವಿದ್ಯುತ್ ದೀಪಾಲಂಕಾರ’ಕ್ಕೆ ಮತ್ತಷ್ಟು ಮೆರುಗು ನೀಡಲು ‘ದಸರಾ ದೀಪಾಲಂಕಾರ’ ಸಮಿತಿಯು ನಿರ್ಧರಿಸಿದೆ. ಹೋದ ವರ್ಷಕ್ಕಿಂತಲೂ ಹೆಚ್ಚಿನ ರಸ್ತೆ, ವೃತ್ತಗಳು ‘ದೀಪ ಚಪ್ಪರ’ದಲ್ಲಿ ಕಂಗೊಳಿಸಲಿದ್ದು, ಪ್ರವಾಸಿಗರನ್ನು ಸೆಳೆಯಲಿವೆ.ಈ ಬಾರಿ ಅ.11ರಿಂದ 21ರವರೆಗೆ ದಸರಾ ನಡೆಯಲಿದ್ದು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ವಿದ್ಯುತ್ ದೀಪಾಲಂಕಾರ’ಕ್ಕೆ ಮತ್ತಷ್ಟು ಮೆರುಗು ನೀಡಲು ‘ದಸರಾ ದೀಪಾಲಂಕಾರ’ ಸಮಿತಿಯು ನಿರ್ಧರಿಸಿದೆ. ಹೋದ ವರ್ಷಕ್ಕಿಂತಲೂ ಹೆಚ್ಚಿನ ರಸ್ತೆ, ವೃತ್ತಗಳು ‘ದೀಪ ಚಪ್ಪರ’ದಲ್ಲಿ ಕಂಗೊಳಿಸಲಿದ್ದು, ಪ್ರವಾಸಿಗರನ್ನು ಸೆಳೆಯಲಿವೆ.ಈ ಬಾರಿ ಅ.11ರಿಂದ 21ರವರೆಗೆ ದಸರಾ ನಡೆಯಲಿದ್ದು, ಉತ್ಸವದ ಮೊದಲನೇ ದಿನವೇ ವಿದ್ಯುತ್ ದೀಪಾಲಂಕಾರಕ್ಕೂ ಅಧಿಕೃತ ಚಾಲನೆ ನೀಡಲಾಗುವುದು. ಈ ಬಾರಿಯೂ ಅ.11ರಿಂದ 21 ದಿನಗಳವರೆಗೆ ವಿದ್ಯುತ್ ದೀಪಾಲಂಕಾರ ಇರಲಿದ್ದು, ಕತ್ತಲಾಗುತ್ತಿದ್ದಂತೆಯೇ ದೀಪಗಳ ಲೋಕ ತೆರೆದುಕೊಳ್ಳಲಿದೆ. ಪಾರಂಪರಿಕ ನಗರಿಯ ಸೌಂದರ್ಯವನ್ನು ಇಮ್ಮಡಿಗೊಳಿಸಲಿವೆ.146 ಕಿ.ಮೀ. ರಸ್ತೆ, 123 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಜೊತೆಗೆ, ಪ್ರಮುಖ ಸ್ಥಳಗಳಲ್ಲಿ 80ಕ್ಕೂ ಹೆಚ್ಚು ವಿವಿಧ ಪ್ರತಿಕೃತಿಗಳನ್ನು ಎಲ್ಇಡಿ ಬಲ್ಬ್ಗಳಿಂದ ಬೆಳಗುವಂತೆ ಸಿದ್ಧಪಡಿಸಲಾಗುತ್ತಿದೆ. ಹೋದ ವರ್ಷ 136 ಕಿ.ಮೀ. ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಪ್ರಮುಖ ವೃತ್ತಗಳಲ್ಲಿ 80 ಪ್ರತಿಕೃತಿಗಳನ್ನು ಹಾಕಲಾಗಿತ್ತು. ರಾತ್ರಿ ದೀಪಗಳ ಬೆಳಕಿನಲ್ಲಿ ಹೊಳೆಯುವ ನಗರವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಮೈಸೂರಿಗೆ ಭೇಟಿ ನೀಡಿದ್ದರು.ಕಣ್ಮನ ಸೆಳೆಯುವಂತೆ: ಅಂಬಾವಿಲಾಸ ಅರಮನೆ ಸುತ್ತಲಿನ ರಸ್ತೆಗಳು, ವೃತ್ತಗಳು ಸೇರಿದಂತೆ ನ್ಯೂಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ವಿನೋಬಾ ರಸ್ತೆ, ಜಿಲ್ಲಾ ಪಂಚಾಯಿತಿ ಎದುರಿನ ರಸ್ತೆ, ನಗರ ಪೊಲೀಸ್ ಕಮಿಷನರ್ ಕಚೇರಿ ಎದುರಿನ ರಸ್ತೆ, ದೇವರಾಜ ಅರಸು ರಸ್ತೆ ಮೊದಲಾದ ಕಡೆಗಳಲ್ಲಿ, ಹೊರವಲಯದ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗುವುದು. ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ರೈಲು ನಿಲ್ದಾಣ ಸಮೀಪ, ಗನ್ಹೌಸ್ ವೃತ್ತ, ಎಲ್ಐಸಿ ವೃತ್ತ ಸೇರಿದಂತೆ ವಿವಿಧೆಡೆ ಹಲವು ಕಲಾಕೃತಿಗಳು ಕಣ್ಮನಸೆಳೆಯಲಿವೆ.ಜೊತೆಗೆ 51 ಬೆಳಕಿನ ಕಮಾನುಗಳನ್ನೂ ಹಾಕಲಾಗುತ್ತಿದ್ದು, ಆಲ್ಬರ್ಟ್ ವಿಕ್ಟರ್, ಸಯ್ಯಾಜಿರಾವ್, ಡಿ.ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ, ಕೃಷ್ಣರಾಜ, ಜಯಚಾಮರಾಜೇಂದ್ರ, ಚಾಮರಾಜೇಂದ್ರ, ಆಯುರ್ವೇದ ಕಾಲೇಜು, ಜೆಎಸ್ಎಸ್ ಮಹಾವಿದ್ಯಾಪೀಠದ ಸಮೀಪ, ಎಲ್ಐಸಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಗಳ ವೈಭವ ಅನಾವರಣಗೊಳ್ಳಲಿದೆ. ಇದಕ್ಕಾಗಿ ಕಾರ್ಮಿಕರು ಈಗಾಗಲೇ ಕೆಲಸದಲ್ಲಿ ತೊಡಗಿದ್ದಾರೆ.ಪ್ರತಿಕೃತಿಗಳು: ‘ವಿದ್ಯುತ್ ದೀಪಾಲಂಕಾರಕ್ಕೆ ಹೋದ ಬಾರಿಗಿಂತಲೂ ಈ ಸಲ ಹೆಚ್ಚಿನ ಮೆರುಗು ನೀಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ತಯಾರಿ ಆರಂಭವಾಗಿದೆ. ಅಲ್ಲಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಅ.11ರಂದು ಸಂಜೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ’ ಎಂದು ‘ಸೆಸ್ಕ್’ ಸೂಪರಿಂಟೆಂಡೆಂಟ್ ಎಂಜಿನಿಯರ್ ಸುನೀಲ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಮೈಸೂರು ಮಹಾರಾಜರು, ನಾಡಿಗೆ ಕೊಡುಗೆ ನೀಡಿದ ವಿವಿಧ ಕ್ಷೇತ್ರದ ಗಣ್ಯರು, ಖ್ಯಾತನಾಮರು ಮತ್ತು ‘ಪಂಚ ಗ್ಯಾರಂಟಿ’ ಮೊದಲಾದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ವಿದ್ಯುತ್ ಪ್ರತಿಕೃತಿಗಳ ಮೂಲಕ ಬಿಂಬಿಸಲಾಗುವುದು’ ಎಂದು ಮಾಹಿತಿ ನೀಡಿದರು. ಹೋದ ವರ್ಷ 21 ದಿನಗಳ ನಂತರವೂ, ಕೆಲವು ದಿನಗಳವರೆಗೆ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರ ಬೇಡಿಕೆ ಮೇರೆಗೆ ಮುಂದುವರಿಸಲಾಗಿತ್ತು.ಸುನೀಲ್ಕುಮಾರ್‘ದಸರಾ ಅಂಗವಾಗಿ ಸೆ.28ರಿಂದ ಅ.5ರವರೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ‘ಯುವ ಸಂಭ್ರಮ’ ನಡೆಯಲಿರುವ ಕಾರಣದಿಂದ ಆ ಸ್ಥಳವನ್ನು ಸಂಪರ್ಕಿಸುವ ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿರುವ ರಸ್ತೆಗಳಿಗೆ ಸೆ.28ರಿಂದಲೇ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು’ ಎಂದು ಸುನೀಲ್ ತಿಳಿಸಿದರು.ಯುವ ಸಂಭ್ರಮಕ್ಕಾಗಿ...ಹೆಚ್ಚು ಡ್ರೋನ್ಗಳ ಬಳಕೆ 2024ರಲ್ಲಿ 1500 ಡ್ರೋನ್ ಬಳಸಿ ಪ್ರದರ್ಶನ ನೀಡಲಾಗಿತ್ತು. 2025ರಲ್ಲಿ ಅಂದರೆ ಕಳೆದ ಬಾರಿ 3 ಸಾವಿರ ಡ್ರೋನ್ಗಳು ಸೆ.28 29 ಮತ್ತು ಅ.1 2ರಂದು ಬಾನಂಗಳದಲ್ಲಿ ಚಿತ್ತಾರ ಸೃಷ್ಟಿಸಿದ್ದವು. ಖ್ಯಾತ ಹಿನ್ನೆಲೆ ಗಾಯಕರಿಂದ ಗಾಯನ ಕಾರ್ಯಕ್ರಮವೂ ಇತ್ತು. ಸಾವಿರಾರು ಮಂದಿ ಪಾಲ್ಗೊಂಡು ವೀಕ್ಷಿಸಿದ್ದರು. ಈ ಬಾರಿ ಹೆಚ್ಚುವರಿಯಾಗಿ 500 ಡ್ರೋನ್ಗಳನ್ನು ಸೇರ್ಪಡೆ ಮಾಡಿ ಒಟ್ಟು 3500 ಡ್ರೋನ್ಗಳಿಂದ ವಿವಿಧ ಕಲಾಕೃತಿಗಳನ್ನು ಸೃಷ್ಟಿಸುವ ಪ್ರದರ್ಶನ ಆಯೋಜಿಸಲು ತೀರ್ಮಾನಿಸಲಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಷೊ ನಡೆಯಲಿದೆ.