ಆ್ಯನ್ ಕಾರ್ಸನ್ಗೆ ಸಾಹಿತ್ಯ ನೊಬೆಲ್
ಸ್ಟಾಕ್ಹೋಮ್ (ಎಪಿ/ಎಎಫ್ಪಿ): ಕೆನಡಾದ ಕವಯಿತ್ರಿ ಹಾಗೂ ಅನುವಾದಕಿ ಆ್ಯನ್ ಕಾರ್ಸನ್ ಅವರಿಗೆ ಸಾಹಿತ್ಯ ಕ್ಷೇತ್ರದ ಈ ಸಾಲಿನ ನೊಬೆಲ್ ದೊರೆತಿದೆ.ಟೊರಾಂಟೊದಲ್ಲಿ ಜನಿಸಿದ ಕಾರ್ಸನ್ ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯದ ವಸ್ತು, ಕಥೆಗಳನ್ನು ಆಧರಿಸಿ ಕವಿತೆ ಮತ್ತು ಪ್ರಬಂಧಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ.‘ಗ್ರೀಕ್ ಪುರಾಣ ಮತ್ತು ಪ್ರಾಚೀನ ಸಾಹಿತ್ಯಕ್ಕೆ ಆ

ಸ್ಟಾಕ್ಹೋಮ್ (ಎಪಿ/ಎಎಫ್ಪಿ): ಕೆನಡಾದ ಕವಯಿತ್ರಿ ಹಾಗೂ ಅನುವಾದಕಿ ಆ್ಯನ್ ಕಾರ್ಸನ್ ಅವರಿಗೆ ಸಾಹಿತ್ಯ ಕ್ಷೇತ್ರದ ಈ ಸಾಲಿನ ನೊಬೆಲ್ ದೊರೆತಿದೆ.ಟೊರಾಂಟೊದಲ್ಲಿ ಜನಿಸಿದ ಕಾರ್ಸನ್ ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯದ ವಸ್ತು, ಕಥೆಗಳನ್ನು ಆಧರಿಸಿ ಕವಿತೆ ಮತ್ತು ಪ್ರಬಂಧಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ.‘ಗ್ರೀಕ್ ಪುರಾಣ ಮತ್ತು ಪ್ರಾಚೀನ ಸಾಹಿತ್ಯಕ್ಕೆ ಆಧುನಿಕ ಸ್ಪರ್ಶ ನೀಡಿ, ಹೊಸ ಶೈಲಿಯ ಬರವಣಿಗೆಯನ್ನು ಪರಿಚಯಿಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ. ಕಾರ್ಸನ್ ಅವರ ಬರಹಗಳು ಸಾಮಾನ್ಯ ವಾಗಿ ಕವಿತೆ, ಪ್ರಬಂಧ ಮತ್ತು ಕಾದಂಬರಿ ಯ ಅಂಶಗಳನ್ನು ಮೇಳೈಸಿಕೊಂಡಿರುತ್ತವೆ’ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ.ತಮಗೆ ಪಾರ್ಕಿನ್ಸನ್ ಕಾಯಿಲೆ ಇರುವುದಾಗಿ ಕಾರ್ಸನ್ ಅವರು 2024 ತಿಳಿಸಿದ್ದರು. ಅವರು ಕಳೆದ ಕೆಲ ವರ್ಷಗಳಿಂದ ಐಸ್ಲ್ಯಾಂಡ್ನಲ್ಲಿ ನೆಲಸಿದ್ದು, ಅಲ್ಲಿನ ಪೌರತ್ವವನ್ನೂ ಪಡೆದುಕೊಂಡಿದ್ದಾರೆ.ಪ್ರಾಚೀನ ಗ್ರೀಕ್ ಸಾಹಿತ್ಯದ ಕಥೆ ಹಾಗೂ ವಸ್ತುವನ್ನು ಆಧರಿಸಿ ಬರೆದಿರುವ ‘ಇರೋಸ್ ದಿ ಬಿಟರ್ಸ್ವೀಟ್’, ಪದ್ಯ ರೂಪದಲ್ಲಿ ಬರೆದ ಕಾದಂಬರಿ ‘ಆಟೊಬಯೋಗ್ರಫಿ ಆಫ್ ರೆಡ್’, ಕವನ ಮತ್ತು ಗದ್ಯಗಳ ಸಂಗ್ರಹ ‘ಮೆನ್ ಇನ್ ದಿ ಆಫ್ ಅವರ್ಸ್’ ಹಾಗೂ ಮರ್ಲಿನ್ ಮನ್ರೊ ಮತ್ತು ಗ್ರೀಕ್ ಪುರಾಣದಲ್ಲಿ ಬರುವ ಹೆಲೆನ್ ಆಫ್ ಟ್ರಾಯ್ ಅವರ ಜೀವನವನ್ನು ಪರಸ್ಪರ ಹೋಲಿಸಿ ಬರೆದಿರುವ ‘ನೋರ್ಮಾ ಜೀನ್ ಬೇಕರ್ ಆಫ್ ಟ್ರಾಯ್’– ಅವರ ಪ್ರಮುಖ ರಚನೆಗಳಾಗಿವೆ. ‘ಮೆನ್ ಇನ್ ದಿ ಆಫ್ ಅವರ್ಸ್’ ಪುಸ್ತಕಕ್ಕೆ 2001ರಲ್ಲಿ ಕೆನಡಾ ಸರ್ಕಾರ ನೀಡುವ ಗ್ರಿಫಿನ್ ಪುರಸ್ಕಾರ ದೊರೆತಿದೆ.ಕಾರ್ಸನ್ ಅವರು ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಕೆನಡಾದ ಮೂರನೆಯವರು. 2013ರಲ್ಲಿ ಆಲಿಸ್ ಮನ್ರೊ ಮತ್ತು 1976ರಲ್ಲಿ ಸಾಲ್ ಬೆಲ್ಲೊ ಅವರು ಈ ಪುರಸ್ಕಾರ ಪಡೆದಿದ್ದರು.1950ರಲ್ಲಿ ಜನಿಸಿದ ಕಾರ್ಸನ್, ಹೈಸ್ಕೂಲ್ನಲ್ಲಿ ಕಲಿಯುತ್ತಿದ್ದಾಗ ಪ್ರಾಚೀನ ಗ್ರೀಕ್ ಭಾಷೆ ಮತ್ತು ಪಠ್ಯಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ‘ಗ್ರೀಕ್ ಭಾಷೆ ನನಗೆ ಅತ್ಯುತ್ತಮ ಭಾಷೆಯಂತೆ ತೋರುತ್ತದೆ’ ಎಂದು 2013ರಲ್ಲಿ ‘ದಿ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜಿನ್’ಗೆ ತಿಳಿಸಿದ್ದರು. ಟೊರಾಂಟೊ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಅವರು ಹಲವು ಕಾಲೇಜುಗಳು ಮತ್ತು ವಿ.ವಿಗಳಲ್ಲಿ ಗ್ರೀಕ್ ಭಾಷೆ, ಸಾಹಿತ್ಯದ ಬೋಧನೆ ಮಾಡಿದ್ದಾರೆ.ಶಾಂತಿ ವಿಭಾಗದ ನೊಬೆಲ್ ಪ್ರಶಸ್ತಿ ಶುಕ್ರವಾರ ಹಾಗೂ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಯು ಸೋಮವಾರ ಘೋಷಣೆಯಾಗಲಿವೆ. ಈ ಬಾರಿಯ ನೊಬೆಲ್ ಪ್ರಶಸ್ತಿ 12 ಮಿಲಿಯನ್ ಸ್ವೀಡಿಷ್ ಕ್ರೊನೊರ್ (₹11.57 ಕೋಟಿ) ನಗದು ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ.