ಹೊಸಪೇಟೆ: ದರೋಜಿ ಕರಡಿಧಾಮದಲ್ಲಿ ವನ್ಯಜೀವಿ ಸಪ್ತಾಹ, ಛಾಯಾಚಿತ್ರ ಪ್ರದರ್ಶನ
ಹೊಸಪೇಟೆ (ವಿಜಯನಗರ): ಮೂಕ ಜೀವಿಗಳು ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಪ್ರಶ್ನಿಸಿ ನ್ಯಾಯ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅವುಗಳ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.ತಾಲ್ಲೂಕಿನ ಕಮಲಾಪುರ ದರೋಜಿ ನಿಸರ್ಗಧಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ 72ನೇ ವನ್ಯಜ

ಹೊಸಪೇಟೆ (ವಿಜಯನಗರ): ಮೂಕ ಜೀವಿಗಳು ತಮ್ಮ ಹಕ್ಕುಗಳ ಉಲ್ಲಂಘನೆಯಾದಾಗ ಪ್ರಶ್ನಿಸಿ ನ್ಯಾಯ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅವುಗಳ ಹಕ್ಕುಗಳಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.ತಾಲ್ಲೂಕಿನ ಕಮಲಾಪುರ ದರೋಜಿ ನಿಸರ್ಗಧಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ 72ನೇ ವನ್ಯಜೀವಿ ಸಪ್ತಾಹದಲ್ಲಿ ಮಾತನಾಡಿದ ಅವರು, ಭೂಮಿಯ ಮೇಲೆ ಬದುಕುವ ಹಕ್ಕು ಪ್ರತಿಯೊಂದು ಜೀವಿಗೂ ಸಮಾನವಾಗಿದೆ. ಮಾನವರು ಇತರ ಜೀವಿಗಳೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಮೂಲಕ ಪ್ರಕೃತಿಯ ಸಮತೋಲನವನ್ನು ಕಾಪಾಡಬೇಕಿದೆ ಎಂದರು.ಮರಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಅರಣ್ಯ ಒತ್ತುವರಿ ತಡೆಯುವುದು ಹಾಗೂ ಕಾಡ್ಗಿಚ್ಚು ನಿಯಂತ್ರಣಕ್ಕೆ ಸಹಕರಿಸುವಂತಹ ಸಣ್ಣ ಸಣ್ಣ ಹೆಜ್ಜೆಗಳ ಮೂಲಕವೂ ಪರಿಸರ, ವನ್ಯಜೀವಿಗಳ ರಕ್ಷಣೆಗೆ ಮಹತ್ವದ ಕೊಡುಗೆ ನೀಡಬಹುದು ಎಂದರು.ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮಾ ಮಾತನಾಡಿ, ವನ್ಯಜೀವಿ ಸಪ್ತಾಹ ಪ್ರಯುಕ್ತ ಜಿಲ್ಲೆಯಲ್ಲಿ 2ರಿಂದ 9ರವರೆಗೆ ಶಾಲಾ-ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳು, ಬೈಕ್ ರ್ಯಾಲಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಆವಾಸಸ್ಥಾನಗಳನ್ನು ಜೋಡಿಸುವುದು, ವನ್ಯಜೀವಿಗಳನ್ನು ರಕ್ಷಿಸುವುದು ಎಂಬ ಆಶಯದಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ರಸ್ತೆ, ಕಾಲುವೆ, ಅಣೆಕಟ್ಟೆ, ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಕಾಡುಗಳು ಪ್ರತ್ಯೇಕ ಪ್ರದೇಶಗಳಾಗಿ ವಿಭಜನೆಯಾಗುತ್ತಿವೆ. ಇದರಿಂದ ವನ್ಯಜೀವಿಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಿಗೆ ಅಡ್ಡಿಯುಂಟಾಗಿ, ಅವುಗಳ ಸಂಚಾರ ಹಾಗೂ ಆಹಾರ ಹುಡುಕಾಟಕ್ಕೆ ತೊಂದರೆಯಾಗುತ್ತಿದೆ. ಇದರ ಪರಿಣಾಮವಾಗಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವುದರ ಜೊತೆಗೆ ಪ್ರತಿವರ್ಷ ಅನೇಕ ವನ್ಯಜೀವಿಗಳು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವುದು ಆತಂಕಕಾರಿ ಎಂದರು.ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಮಾಡಲಾಯಿತು. ಚಿತ್ರಕಲೆ, ಪ್ರಬಂಧ ಸೇರಿದಂತೆ ವಿವಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದ ಡಿಸಿಎಫ್ ರಾಜೇಶ್ ನಾಯಕ್, ಬಳ್ಳಾರಿ ಡಿಸಿಎಫ್ ಮಾರ್ಕಂಡೇಯ, ವನ್ಯಜೀವಿ ಸಂರಕ್ಷಕರು ಹಾಗೂ ಪರಿಸರವಾದಿ ಪಂಪಯ್ಯ ಸ್ವಾಮಿ, ಉರುಗ ತಜ್ಞ ವೇಣುಗೋಪಾಲ್ ಇತರರು ಇದ್ದರು.ಕಾಡೆಂದರೆ ಸಂಕೀರ್ಣ ಪರಿಸರ ವ್ಯವಸ್ಥೆ‘ಕಾಡು ಎಂದರೆ ಕೇವಲ ಮರ-ಗಿಡಗಳ ಸಮೂಹವಲ್ಲ. ಅದೊಂದು ಸಂಕೀರ್ಣ ಪರಿಸರ ವ್ಯವಸ್ಥೆ. ಪದೇಪದೇ ಸಂಭವಿಸುವ ಕಾಡ್ಗಿಚ್ಚಿನಿಂದ ಕ್ರಿಮಿಕೀಟಗಳು, ಚಿಟ್ಟೆಗಳು ಸೇರಿದಂತೆ ಹಲವು ಜೀವಿಗಳು ಹಾಗೂ ಸಸ್ಯ ಪ್ರಭೇದಗಳು ನಾಶವಾಗುತ್ತವೆ. ಚಿಟ್ಟೆ ಮತ್ತು ಜೇನುನೊಣಗಳಂತಹ ಪರಾಗಸ್ಪರ್ಶಕ ಜೀವಿಗಳ ಸಂಖ್ಯೆ ಕುಸಿದರೆ ಪರಾಗಸ್ಪರ್ಶ ಪ್ರಕ್ರಿಯೆ ಮೇಲೆ ಪರಿಣಾಮ ಬಿದ್ದು ಕೃಷಿ ಇಳುವರಿ ಕಡಿಮೆಯಾಗಬಹುದು. ಇದು ಮುಂದಿನ ದಿನಗಳಲ್ಲಿ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಅರಣ್ಯವನ್ನು ಸಂರಕ್ಷಿಸುವುದು ಕೇವಲ ವನ್ಯಜೀವಿಗಳಿಗಾಗಿ ಅಲ್ಲ, ಮಾನವ ಆರೋಗ್ಯ ಮತ್ತು ಭವಿಷ್ಯಕ್ಕಾಗಿ ಕೂಡ ಅಗತ್ಯವಾಗಿದೆ’ ಎಂದು ಡಿಸಿಎಫ್ ಅನುಪಮಾ ಹೇಳಿದರು.