ತಮಿಳುನಾಡಿಗೆ ನಿತ್ಯ 3000 ಕ್ಯೂಸೆಕ್ ಕಾವೇರಿ ನೀರು ಹರಿಸಲು ನಿರ್ದೇಶನ
ನವದೆಹಲಿ: ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ಕಾವೇರಿ ನೀರಿನ ಹರಿವನ್ನು ಖಚಿತಪಡಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯು ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿ ಹಿಡಿಯಿತು. ಶುಕ್ರವಾರ ಬೆಳಿಗ್ಗೆ 8

ನವದೆಹಲಿ: ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ಕಾವೇರಿ ನೀರಿನ ಹರಿವನ್ನು ಖಚಿತಪಡಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯು ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿ ಹಿಡಿಯಿತು. ಶುಕ್ರವಾರ ಬೆಳಿಗ್ಗೆ 8ರಿಂದ ಅನ್ವಯವಾಗುವಂತೆ ಮುಂದಿನ 15 ದಿನಗಳವರೆಗೆ ಒಟ್ಟು 3.88 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಿದೆ. ‘ಹಳೆ ಬಾಕಿ 15.02 ಟಿಎಂಸಿ ಅಡಿ ನೀರು ಹರಿಸಬೇಕು. ಬಿಳಿಗುಂಡ್ಲುವಿನಲ್ಲಿ ಇದೇ 23ರವರೆಗೆ 20.01 ಟಿಎಂಸಿ ಅಡಿ (ದಿನಕ್ಕೆ ಸುಮಾರು 15,050 ಕ್ಯೂಸೆಕ್ಗಳು) ನೀರು ಹರಿಯುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ವೈಜ್ಞಾನಿಕ ಆಧಾರದ ಮೇಲಿನ ಸಂಕಷ್ಟ ಹಂಚಿಕೆ ಸೂತ್ರ ಅಳವಡಿಸಬೇಕು’ ಎಂದು ತಮಿಳುನಾಡು ಪಟ್ಟು ಹಿಡಿಯಿತು. ಈ ಬೇಡಿಕೆಗೆ ಪ್ರಾಧಿಕಾರ ಮನ್ನಣೆ ನೀಡಲಿಲ್ಲ. ‘ಮೆಟ್ಟೂರು ಜಲಾಶಯದಲ್ಲಿ 32.01 ಟಿಎಂಸಿ ಅಡಿ ನೀರಿದೆ. ಒಳಹರಿವು ಪ್ರಮಾಣ 952 ಕ್ಯೂಸೆಕ್ನಷ್ಟಿದೆ. ನೀರಾವರಿಗಾಗಿ ನೀರು ಹರಿಸುವುದು 81 ದಿನಗಳಷ್ಟು ವಿಳಂಬವಾಗಿದೆ. ಸಾಂಬಾ ಬೆಳೆ ಸಂಕಷ್ಟದಲ್ಲಿದೆ. ಕರ್ನಾಟಕವು ಇಲ್ಲಿಯವರೆಗೆ 127.70 ಟಿಎಂಸಿ ಅಡಿ ನೀರು ಹರಿಸಬೇಕಿತ್ತು. 46.04 ಟಿಎಂಸಿ ಅಡಿ ಮಾತ್ರ ಹರಿಸಿದೆ. ಕಳೆದ ಸಭೆಯಲ್ಲಿ ಪ್ರಾಧಿಕಾರ ನೀಡಿದ್ದ ಆದೇಶಗಳನ್ನು ಕರ್ನಾಟಕ ಪಾಲನೆ ಮಾಡಿಲ್ಲ. 4.83 ಟಿಎಂಸಿ ಅಡಿ ಬದಲು 3.898 ಟಿಎಂಸಿ ಅಡಿ ನೀರು ಹರಿಸಿದೆ’ ಎಂದು ತಮಿಳುನಾಡು ದೂರಿತು. ‘ರಾಜ್ಯದ ನಾಲ್ಕು ಜಲಾಶಯಗಳಿಗೆ ಜೂನ್ನಿಂದ ಇಲ್ಲಿಯವರೆಗೆ 117.14 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೊರತೆ ಪ್ರಮಾಣ ಶೇ 54 ರಷ್ಟಿದೆ. ನೈಋತ್ಯ ಮುಂಗಾರು ಮುಗಿದಿದ್ದು, ಜಲಮೂಲಗಳು ಮರುಪೂರಣಗೊಳ್ಳುವ ಸಾಧ್ಯತೆ ತೀರಾ ಕಡಿಮೆಯಾಗಿದೆ’ ಎಂದು ಕರ್ನಾಟಕದ ಅಧಿಕಾರಿಗಳು ವಾದ ಮಂಡಿಸಿದರು. ‘ತಮಿಳುನಾಡಿನ ಮೂರು ಜಲಾಶಯಗಳಲ್ಲಿನ ನೀರಿನ ಸಂಗ್ರಹ 37.99 ಟಿಎಂಸಿ ಅಡಿಯಷ್ಟಿದೆ. ಮಧ್ಯಂತರ ಜಲಾನಯನ ಪ್ರದೇಶದಿಂದ ಹರಿದುಬರುವ ನೀರು, ಕೆಳಹರಿವಿನ ಪ್ರದೇಶದ ಕೊಡುಗೆಗಳು ಮತ್ತು ಅಂತರ್ಜಲ ಲಭ್ಯತೆ ಪರಿಗಣಿಸಿದರೆ, ಒಟ್ಟು ನೀರಿನ ಸಂಪನ್ಮೂಲವು 244.99 ಟಿಎಂಸಿ ಅಡಿಗೆ ತಲುಪಬಹುದು. ಈಶಾನ್ಯ ಮುಂಗಾರು ಮಳೆಯು ಸಾಮಾನ್ಯ ಮಟ್ಟದಲ್ಲಿರುವ ನಿರೀಕ್ಷೆಯಿದ್ದು, ಇದರಿಂದ ತಮಿಳುನಾಡಿಗೆ ಪ್ರಯೋಜನವಾಗಲಿದೆ. ಸಾಂಬಾ ಬೆಳೆಯ ಅಗತ್ಯಕ್ಕೆ ಬೇಕಾದಷ್ಟು ನೀರಿನ ಸಂಗ್ರಹ ಇದೆ’ ಎಂದು ಅವರು ಹೇಳಿದರು.