‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ್ದೇಕೆ?’:ಡಿಕೆಶಿ-ಎಚ್ಡಿಕೆ ಜಟಾಪಟಿ
‘ಕೆಲವು ಸಚಿವರನ್ನು ಗುರಿಯಾಗಿಟ್ಟು ಮಾರುವೇಷದ ಕಾರ್ಯಾಚರಣೆ ನಡೆಯುತ್ತಿದ್ದು, ಹುಷಾರಾಗಿರಿ’ ಎಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಎಚ್ಚರಿಕೆ, ಆಡಳಿತ– ವಿಪಕ್ಷ ನಾಯಕರ ಮಧ್ಯೆ ಆರೋಪ- ಪ್ರತ್ಯಾರೋಪಗಳ ವಾಗ್ಯುದ್ಧಕ್ಕೆ ಕಾರಣವಾಗಿದೆ. ‘ಈ ರಹಸ್ಯ ಕಾರ್ಯಾಚರಣೆಯ ಪಿತಾಮಹ ಯಾರು ಎನ್ನುವುದು ನನಗೆ ಗೊತ್ತಿದೆ’ ಎಂದು ಶಿವಕುಮಾರ್ ಹೇಳಿದ

‘ಕೆಲವು ಸಚಿವರನ್ನು ಗುರಿಯಾಗಿಟ್ಟು ಮಾರುವೇಷದ ಕಾರ್ಯಾಚರಣೆ ನಡೆಯುತ್ತಿದ್ದು, ಹುಷಾರಾಗಿರಿ’ ಎಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಎಚ್ಚರಿಕೆ, ಆಡಳಿತ– ವಿಪಕ್ಷ ನಾಯಕರ ಮಧ್ಯೆ ಆರೋಪ- ಪ್ರತ್ಯಾರೋಪಗಳ ವಾಗ್ಯುದ್ಧಕ್ಕೆ ಕಾರಣವಾಗಿದೆ. ‘ಈ ರಹಸ್ಯ ಕಾರ್ಯಾಚರಣೆಯ ಪಿತಾಮಹ ಯಾರು ಎನ್ನುವುದು ನನಗೆ ಗೊತ್ತಿದೆ’ ಎಂದು ಶಿವಕುಮಾರ್ ಹೇಳಿದರೆ, ‘ಕಾರ್ಯಾಚರಣೆ ಮಾಡುವ ಗುರುವಿಗೇ ತಿರುಮಂತ್ರ ಹೇಳಲು ಸಾಧ್ಯವೇ’ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆನವದೆಹಲಿ: ‘ಮುಖ್ಯಮಂತ್ರಿ ಆದ ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಮಾರುವೇಷದ ಕಾರ್ಯಾಚರಣೆ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನನ್ನು ಸೇರಿಸಿ ಯಾವ ಯಾವ ನಾಯಕರ ವಿರುದ್ಧ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿದಿದೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ಆದರೆ, ಈ ಎಲ್ಲ ವಿಚಾರಗಳನ್ನು ಈಗ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ’ ಎಂದರು.‘ಕೆಲವರು ನನ್ನ ಬಳಿ ಬಂದಿದ್ದರು. ನಾನು ಫೋಟೋಗಳನ್ನು ಬಿಡುಗಡೆ ಮಾಡಲು ಸಿದ್ಧ. ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಕುಂಬಳಕಾಯಿ ಕಳ್ಳ ಎಂದರೆ ಕೆಲವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರು ಬಂದಿದ್ದರೋ ಅವರ ಮೇಲೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪಿತಾಮಹರು ಯಾರು ಎಂದು ತಿಳಿದಿದೆ. ಅದಕ್ಕೆಲ್ಲಾ ಉತ್ತರಿಸಲು ಹೋಗುವುದಿಲ್ಲ. ಅಧಿಕಾರಿಗಳನ್ನು ಸುಮ್ಮನೆ ಸಿಕ್ಕಿಹಾಕಿಸಲು ಪ್ರಯತ್ನ ಮಾಡುತ್ತಿದ್ದು, ಹುಷಾರಾಗಿರಬೇಕು ಎಂದು ಅವರಿಗೂ ಎಚ್ಚರಿಕೆ ನೀಡಿದ್ದೇನೆ. ಈ ಹಿಂದೆ ಮಾಧ್ಯಮದಿಂದ ಮಾರುವೇಷದ ಆಪರೇಷನ್ ಮಾಡಲು ಬಂದಿದ್ದರು. ಅವರಿಗೂ ಎಚ್ಚರಿಕೆ ನೀಡಲಾಗಿದೆ. ಈ ಕಾರ್ಯಾಚರಣೆಗೆ ಕೆಲವು ನಾಯಕರು ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಪಕ್ಕಾ ಮಾಹಿತಿ ಇದೆ’ ಎಂದರು.ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರಿಗೆ ನಾನೇಕೆ ದಾಖಲೆ ಬಿಡುಗಡೆ ಮಾಡಲಿ. ನಾನು ಯಾರಿಗೆ ದಾಖಲೆ ಬಿಡುಗಡೆ ಮಾಡಬೇಕೋ ಮಾಡುತ್ತೇನೆ. ಇಂತಹ ಕೆಲಸಕ್ಕೆ ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಯಾರನ್ನು ಊರು ಬಿಟ್ಟು ಓಡಿಸಿದ್ದಾರೆ ಎಂಬುದೂ ಗೊತ್ತಿದೆ. ಯಾರನ್ನು ಎಲ್ಲಿಗೆ ಕಳುಹಿಸಿದ್ದಾರೆ ಎಂಬ ದಾಖಲೆಯೂ ಇದೆ. ಅದರ ಬಗ್ಗೆ ನೀವು ಯಾಕೆ ಇಷ್ಟು ಯೋಚಿಸುತ್ತಿದ್ದೀರಿ? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ? ನನ್ನ ವಿರುದ್ಧವೇ ಈ ರೀತಿ ಷಡ್ಯಂತ್ರ ಮಾಡುತ್ತಿದ್ದು, ನೀವು ಎಚ್ಚರಿಕೆಯಿಂದ ಇರಿ ಎಂದು ನಾನು ಸಚಿವರಿಗೆ ಹೇಳಿದ್ದೇನೆ. ಅದು ನನ್ನ ಕರ್ತವ್ಯ’ ಎಂದರು.‘ನೈಸ್ ಯೋಜನಾ ಪ್ರದೇಶದಲ್ಲಿ ಯಾರು ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದನ್ನು ಸಮಯ ಬಂದಾಗ ಮಾತನಾಡುವೆ’ ಎಂದ ಅವರು, ‘ಇದು ಯಾರ ಹೆಗಲಿಗೆ ಬರುತ್ತದೆ ಎಂದು ಕಾಲ ನಿರ್ಣಯ ಮಾಡುತ್ತದೆ. ಮಾತೆತ್ತಿದರೆ ನೈಸ್ ನೈಸ್ ಎನ್ನುತ್ತಾರೆ. ಎಲ್ಲವೂ ಬೋಗಸ್. ಅದು ಜೆಡಿಎಸ್ನವರ ಪಾಪದ ಕೂಸು. ನಾನು ಎಲ್ಲೆಂದರಲ್ಲಿ ಮಾತನಾಡುವುದಿಲ್ಲ. ಸಮಯ ಬಂದಾಗ ಸದನದಲ್ಲಿ ಎಲ್ಲವನ್ನು ಬಿಚ್ಚಿಡುವೆ. ರಾಜ್ಯದ ಒಂದು ಯೋಜನೆ ಎನ್ನುವುದು ಬಿಟ್ಟರೆ, ನನಗೂ ನೈಸ್ ಸಂಸ್ಥೆಗೂ ಯಾವ ಸಂಬಂಧವಿದೆ? ನಮ್ಮ ಶಾಸಕರಾಗಿದ್ದವರು, ರಾಜ್ಯದ ಉದ್ಯಮಿಗೆ ಯಾವ ಗೌರವ ನೀಡಬೇಕೋ ಅದನ್ನು ನೀಡುವೆ’ ಎಂದರು. ‘ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ, ಅವರ ಕೈಯಲ್ಲಿ ಯಾಕೆ ಏನೂ ಮಾಡಲು ಆಗಲಿಲ್ಲ? ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಎಚ್ಡಿಕೆ ಮತ್ತು ಅವರ ವ್ಯವಹಾರ ಸೆಟ್ ಆಗಲಿಲ್ಲ ಎಂಬ ಕಾರಣಕ್ಕೆ ಈಗ ಮಾತನಾಡುತ್ತಿದ್ದಾರೆ. ಇವರ ಆಸ್ತಿ ಎಷ್ಟು ಇದೆ. ಇವರ ಕುಟುಂಬದವರು ಎಷ್ಟು ಆಸ್ತಿ ಮಾಡಿದ್ದಾರೆ? ಯೋಜನಾ ಪ್ರಾಧಿಕಾರದಲ್ಲಿ ಯಾರ ಆಸ್ತಿ ಇದೆ ಎಂದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಅವರಷ್ಟು ಜ್ಞಾನ ಭಂಡಾರ ಇಲ್ಲದಿರಬಹುದು, ನಾನು ಪ್ರಧಾನಿ ಮಗನಲ್ಲದಿರಬಹುದು. ಆದರೆ ಅಷ್ಟೋ ಇಷ್ಟೋ ಅನುಭವವಿದೆ’ ಎಂದು ಹೇಳಿದರು.