ನೇಮಕಾತಿ ಅಕ್ರಮ ಆರೋಪ: ವಿಶ್ವವಿದ್ಯಾಲಯದ ನಡೆ ಟೀಕಿಸಿದ ನ್ಯಾಯಪೀಠ
ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ/ ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಕ ಪ್ರಶ್ನಿಸಿ ದಾಖಲಾದ ರಿಟ್ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಕರ್ನಾಟಕ ಹೈಕೋರ್ಟ್ನ ಕಲಬುರಗಿ ನ್ಯಾಯಪೀಠವು ‘ಸಿಯುಕೆಯಲ್ಲಿ ಎಲ್ಲವೂ ಸರಿ ಇದ್ದಂತಿಲ್ಲ’ ಎಂದು ಚಾಟಿ ಬೀಸಿತು.ಸಹಾಯಕ ಕುಲಸಚಿವ/ ಸಾರ್ವಜನಿಕ ಸಂಪರ

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ/ ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಕ ಪ್ರಶ್ನಿಸಿ ದಾಖಲಾದ ರಿಟ್ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಕರ್ನಾಟಕ ಹೈಕೋರ್ಟ್ನ ಕಲಬುರಗಿ ನ್ಯಾಯಪೀಠವು ‘ಸಿಯುಕೆಯಲ್ಲಿ ಎಲ್ಲವೂ ಸರಿ ಇದ್ದಂತಿಲ್ಲ’ ಎಂದು ಚಾಟಿ ಬೀಸಿತು.ಸಹಾಯಕ ಕುಲಸಚಿವ/ ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಕದಲ್ಲಿ ಈಗ ನೇಮಕವಾಗಿರುವ ಅಭ್ಯರ್ಥಿ ವಿ.ವಿ. ನಿಗದಿಪಡಿಸಿದ್ದ ಮಾನದಂಡಗಳನ್ನು ಪೂರೈಸಿಲ್ಲ ಎಂದು ಆರೋಪಿಸಿ ದತ್ತಾತ್ರೇಯ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು.ಅರ್ಜಿದಾರರ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಪಿ. ವಿಲಾಸ್ ಕುಮಾರ್, ‘ವಿಶ್ವವಿದ್ಯಾಲಯದ ಕಾರ್ಯವೈಖರಿಯ ಬಗ್ಗೆ ವಿ.ವಿ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಪಿಆರ್ಒ ಹುದ್ದೆಯ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಬ್ಬರೂ ತಮ್ಮ ಭಿನ್ನಮತವನ್ನು ದಾಖಲಿಸಿದ್ದರು. ಆದಾಗ್ಯೂ, ಪಿಆರ್ಒ ಹುದ್ದೆಗೆ ಆಯ್ಕೆಯಾದ ವ್ಯಕ್ತಿಗೆ ತರಾತುರಿಯಲ್ಲಿ ನೇಮಕಾತಿ ಆದೇಶ ನೀಡಲಾಗಿದೆ. ಹೀಗಾಗಿ, ನೇಮಕಾತಿಗೆ ಮಧ್ಯಂತರ ತಡೆ ನೀಡಬೇಕು’ ಎಂದು ಕೋರಿದರು.ಇದನ್ನು ಆಲಿಸಿದ ನ್ಯಾ.ವಿಜಯಕುಮಾರ್ ಪಾಟೀಲ್ ಅವರಿದ್ದ ಏಕಸದಸ್ಯ ಪೀಠವು ವಿಶ್ವವಿದ್ಯಾಲಯದ ಪರ ಹಾಜರಿದ್ದ ವಕೀಲರತ್ತ ತಿರುಗಿ, ‘ಸುದರ್ಶನ್ ಅವರೇ ನಿಮ್ಮ ವಿಶ್ವವಿದ್ಯಾಲಯದಲ್ಲಿ ಎಲ್ಲವೂ ಸರಿ ಇದ್ದಂತಿಲ್ಲ. ಮುಖ್ಯ ಕಾರ್ಯದರ್ಶಿ ಬರೆದ ಪತ್ರಕ್ಕೆ ವಿ.ವಿ. ತೆಗೆದುಕೊಂಡ ಕ್ರಮಗಳ ಕುರಿತು ದಾಖಲೆಗಳನ್ನು ಸಲ್ಲಿಸಿ’ ಎಂದು ಸೂಚನೆ ನೀಡಿತು. ಆದರೆ, ನೇಮಕಾತಿಗೆ ತಕ್ಷಣಕ್ಕೆ ತಡೆ ನೀಡಲು ಒಪ್ಪಲಿಲ್ಲ.‘ಪಿಆರ್ಒ ಹುದ್ದೆಗೆ ನೇಮಕವಾದ ಅಭ್ಯರ್ಥಿ ತಾನು ಕೆಲಸ ಮಾಡಿರುವ ಪತ್ರಿಕೆಯ ಹೆಸರನ್ನು ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಒಂದು, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಸಂದರ್ಭದಲ್ಲಿ ಬೇರೊಂದು ಹೆಸರನ್ನು ದಾಖಲಿಸಿದ್ದಾರೆ. ಕುಲಸಚಿವರು ಸಲ್ಲಿಸಿದ ಅಫಿಡವಿಟ್ನಲ್ಲಿಯೂ ಬೇರೆ ಬೇರೆ ಪತ್ರಿಕೆಗಳ ಹೆಸರನ್ನು ದಾಖಲಿಸಿದ್ದಾರೆ. ಹಾಗಾದರೆ ಕೆಲಸ ಮಾಡಿದ್ದು ಯಾವ ಪತ್ರಿಕೆಯಲ್ಲಿ’ ಎಂದು ಪ್ರಶ್ನಿಸಿತು.‘ಅರ್ಜಿದಾರರು (ದತ್ತಾತ್ರೇಯ) ನೇಮಕಾತಿ ಪ್ರಕ್ರಿಯೆ ವೇಳೆ ಒಮ್ಮೆಯೂ ಲೋಪಗಳನ್ನು ಪ್ರಶ್ನಿಸಿಲ್ಲ’ ಎಂದು ವಿಶ್ವವಿದ್ಯಾಲಯ ಪರ ಹಾಜರಿದ್ದ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನೇಮಕಾತಿ ಅವಧಿಯಲ್ಲಿ ಲೋಪಗಳನ್ನು ಪ್ರಶ್ನಿಸಬೇಕು ಎಂಬುದೇನೂ ಇಲ್ಲ. ಆ ಬಳಿಕ ಯಾವಾಗ ಬೇಕಾದರೂ ಪ್ರಶ್ನಿಸಲು ಅವರಿಗೆ ಹಕ್ಕಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿದೆ. ಬೇಕಿದ್ದರೆ ನಿಮಗೆ ಆ ಆದೇಶದ ಪ್ರತಿ ಕೊಡುವೆ’ ಎಂದು ಹೇಳಿ ವಿಚಾರಣೆಯನ್ನು ಅ. 16ಕ್ಕೆ ಮುಂದೂಡಿತು.