ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಆರೋಗ್ಯ ಸಂಜೀವಿನಿ: ಹತ್ತಾರು ತೊಡಕುಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಡಿ ಚಿಕಿತ್ಸೆ ಪಡೆಯಲು ಮುಂದಾಗುವ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಣದ ಬೇಡಿಕೆ ಇಡಲಾಗುತ್ತಿದೆ. ಇದರಿಂದ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಬ
ಆರೋಗ್ಯ ಸಂಜೀವಿನಿ: ಹತ್ತಾರು ತೊಡಕುಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಡಿ ಚಿಕಿತ್ಸೆ ಪಡೆಯಲು ಮುಂದಾಗುವ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಣದ ಬೇಡಿಕೆ ಇಡಲಾಗುತ್ತಿದೆ. ಇದರಿಂದ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಪ್ರಶ್ನೆ ಮೂಡಿದೆ. ಯೋಜನೆಯಡಿ ನಗದುರಹಿತ ಚಿಕಿತ್ಸೆಗೆ ಅರ್ಹರಾಗಿರುವ ಕುಟುಂಬಗಳಿಗೆ ಯಾವ ಸೇವೆಗಳು ಒಳಗೊಂಡಿವೆ, ಯಾವ ಸಂದರ್ಭದಲ್ಲಿ ಹೆಚ್ಚುವರಿ ಹಣ ಪಾವತಿಸಬೇಕು ಮತ್ತು ವಾರ್ಡ್ ಸೌಲಭ್ಯದ ಅರ್ಹತೆಯನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಆಸ್ಪತ್ರೆಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ಸೂಕ್ತ ಕ್ರಮಕೈಗೊಳ್ಳಬೇಕು. ಫಲಾನುಭವಿಗಳು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಮತ್ತು ದೂರು ಸಲ್ಲಿಸಲು ಸುಲಭ ವ್ಯವಸ್ಥೆ ರೂಪಿಸಬೇಕು. ಯೋಜನೆಯ ಉದ್ದೇಶ ಕಾಗದದ ಮೇಲಿನ ಸೌಲಭ್ಯವಾಗಿರಬಾರದು. ನೌಕರರ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವಂತಿರಬೇಕು.⇒ಪ್ರಸನ್ನ ಶಿವಾಜಿ ನಾಯಕ, ಜಮಖಂಡಿಬಿಡಿಗಾಸಿನ ಬರ ಪರಿಹಾರ ಸಾಲುವುದೆ?ರೈತರೊಬ್ಬರು ಪರಿಹಾರಕ್ಕಾಗಿ ಕೇಂದ್ರ ಬರ ಪರಿಶೀಲನಾ ತಂಡದ ಅಧಿಕಾರಿಗಳ ಕಾಲಿಗೆ ಬಿದ್ದಿರುವುದು ನೋವಿನ ಸಂಗತಿ. ದೇಶಕ್ಕೆ ಅನ್ನ ನೀಡುವ ರೈತರು ಈ ರೀತಿಬೇಡುವುದು ವ್ಯವಸ್ಥೆಯ ದುರಂತವೇ ಸರಿ. ಕೂಲಿ ಸೇರಿದಂತೆ ರಸಗೊಬ್ಬರ, ಕ್ರಿಮಿನಾಶಕಗಳ ಮೇಲಿನ ವೆಚ್ಚ ಹೆಚ್ಚಾಗುತ್ತಿದೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿಯೂ ರೈತರು ಭೂಮಿಯನ್ನು ನಂಬಿ ಬೀಜ ಬಿತ್ತುತ್ತಾರೆ. ಸಂಬಳ ಒಂದೆರಡು ದಿನ ತಡವಾದರೂ ಪರಿತಪಿಸುವ ಸರ್ಕಾರಿ ನೌಕರರಿದ್ದಾರೆ. ಆದರೆ, ಫಸಲಿಗೆ ಸೂಕ್ತ ಬೆಲೆ ಸಿಗುವುದೋ ಇಲ್ಲವೋ ಎಂಬ ಅನಿಶ್ಚಿತತೆಯಲ್ಲಿಯೇ ಅನ್ನದಾತರು ಬದುಕು ದೂಡಬೇಕಿದೆ. ಮತ್ತೊಂದೆಡೆ ಕೃಷಿಕರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಸರ್ಕಾರವು ಕಾಟಾಚಾರಕ್ಕೆ ಕಳಪೆ ಕಾಮಗಾರಿಗಳ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಲಕ್ಷಾಂತರ ಮೊತ್ತವನ್ನು ಬಿಡುಗಡೆ ಮಾಡುತ್ತದೆ. ಆದರೆ, ಮಾನದಂಡಗಳ ಹೆಸರಿನಲ್ಲಿ ಬರ ಪರಿಶೀಲನೆ ನಡೆಸುವುದು ರೈತನಿಗೆ ಎಸಗುವ ದ್ರೋಹ. ಬಿಡಿಗಾಸಿನ ಪರಿಹಾರ ಯಾವುದಕ್ಕೂ ಸಾಲದು; ಪರಿಹಾರ ವಿತರಣೆಯಲ್ಲಿ ವೈಜ್ಞಾನಿಕ ಮಾನದಂಡ ಪಾಲಿಸಬೇಕಿದೆ.⇒ಅಶೋಕ ಓಜಿನಹಳ್ಳಿ, ಕೊಪ್ಪಳ ಕೆಇಎ ಪರೀಕ್ಷೆ: ವಾಕ್ಯ ರಚನೆಯದ್ದೇ ಸಮಸ್ಯೆಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ. 4ರಂದು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿದೆ. ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹಲವು ಉತ್ತಮ ಅಂಶಗಳನ್ನು ಒಳಗೊಂಡಿದ್ದವು. ಆದರೆ, ಉತ್ತರಸೂಚಿಯಲ್ಲಿ ಸಿ–3ರ ಸರಣಿಯ ಪ್ರಶ್ನೆ 7 ರಜಿಯಾ ಸುಲ್ತಾನಳಿಗೆ ಸಂಬಂಧಿಸಿದೆ. ಇಲ್ತುಮಿಶ್ ರಜಿಯಾಳ ಹೆಸರನ್ನು ನಾಣ್ಯಗಳ ಮೇಲೆ ಮುದ್ರಿಸಿರಲಿಲ್ಲ ಮತ್ತು ಅವಳಿಗೆ ಕುದುರೆ ಸವಾರಿ ಗೊತ್ತಿತ್ತು. ಆದರೆ, ಉತ್ತರದಲ್ಲಿ ಅದರ ವಿರುದ್ಧವಾಗಿ ವಿವರಣೆ ನೀಡಲಾಗಿದೆ. ಕ್ರ.ಸಂ. 98ರ ಪ್ರಶ್ನೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆಗೆ ಸಂಬಂಧಿಸಿದೆ. ಅದರ ಸಭೆಯು 1885ರಲ್ಲಿ ಮುಂಬಯಿಯಲ್ಲಿ ನಡೆಯಿತು. ಡಬ್ಲ್ಯು.ಸಿ. ಬ್ಯಾನರ್ಜಿ ಅಧ್ಯಕ್ಷತೆವಹಿಸಿದ್ದರು. ಅದರಲ್ಲಿ 72 ಪ್ರತಿನಿಧಿಗಳು ಭಾಗವಹಿಸಿದ್ದರು – ಈ ಮೂರು ಸರಿಯಾದ ಉತ್ತರವಾಗಿವೆ. ಆದರೆ, ಮೊದಲ ಎರಡು ಉತ್ತರಗಳು ಸರಿಯೆಂದು ತಪ್ಪು ಮಾಹಿತಿ ನೀಡಲಾಗಿದೆ. ಕನ್ನಡದಲ್ಲಿ ಉತ್ತರದ ವಾಕ್ಯ ರಚನೆ ಕ್ರಮಬದ್ಧವಾಗಿಲ್ಲ. ಈ ತಪ್ಪುಗಳು ಮರುಕಳಿಸದಂತೆ ಪ್ರಾಧಿಕಾರ ಎಚ್ಚರವಹಿಸಬೇಕಿದೆ.⇒ಬಸವರಾಜ ಎನ್. ಅಕ್ಕಿ, ಧಾರವಾಡಗ್ಯಾರಂಟಿಗಳ ಹೊರೆ: ಜನರ ಜೇಬಿಗೆ ಕತ್ತರಿಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಾಲಿನದರ ಮತ್ತು ಸಾರಿಗೆ ಬಸ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಈ ನಡುವೆಯೇ ಸತತ ನಾಲ್ಕು ತಿಂಗಳಿನಿಂದ ಅಕ್ಕಿಯ ಬೆಲೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಅಡುಗೆ ಎಣ್ಣೆ, ಸಕ್ಕರೆ, ತರಕಾರಿ ಬೆಲೆಗಳು ಜನಸಾಮಾನ್ಯರ ಕೈ ಸುಡುತ್ತಿವೆ. ಒಂದೆಡೆ ಸಮರ್ಪಕ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಸಾಮಾನ್ಯ ಕುಟುಂಬಗಳು ಜೀವನ ನಿರ್ವಹಣೆ ಮಾಡಲು ಪರದಾಡುತ್ತಿವೆ. ಈ ಬಗ್ಗೆ ಆಡಳಿತ ನಡೆಸುವವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಅದರ ಹೊರೆಯನ್ನು ಸರಿದೂಗಿಸಲು ಪ್ರತಿನಿತ್ಯ ಜನರ ಜೇಬಿಗೆ ಕತ್ತರಿ ಹಾಕುವ ಬದಲು ಬೆಲೆ ಏರಿಕೆಗೆ ಕಡಿವಾಣ ಹಾಕುವುದತ್ತ ಚಿತ್ತ ಹರಿಸಬೇಕಿದೆ.⇒ಬಸಮ್ಮ ಹಿರೂರ, ವಿಜಯಪುರ ಕಾನೂನು ರಕ್ಷಕರೇ ಭಕ್ಷಕರಾದ ಕಥೆಹೆಣ್ಣು, ಹೊನ್ನು, ಮಣ್ಣಿನ ವಾಂಛೆಯ ಕಬಂಧಬಾಹುವಿಗೆ ಸಿಲುಕಿದರೆ ಏನನ್ನಾದರೂ ಮಾಡಲು ಹೇಸುವುದಿಲ್ಲ ಎಂಬುದಕ್ಕೆ ಕಾರಾಗೃಹ ಇಲಾಖೆಯಲ್ಲಿ ಬೆಳಕಿಗೆ ಬಂದಿರುವ ಪ್ರಕರಣವೇ ನಿದರ್ಶನ. ಸುಪ್ರೀಂ ಕೋರ್ಟ್ ತೀರ್ಪನ್ನೂ ನಕಲು ಮಾಡಿ ಸಜಾ ಬಂದಿಯನ್ನು ಬಿಡುಗಡೆ ಮಾಡಿಸುವಷ್ಟರ ಮಟ್ಟಿಗೆ ಆತ್ಮವಂಚನೆಯ ಕೆಲಸಗಳು ಮುಂದುವರಿದಿವೆ ಎಂದರೆ ದಿನೇ ದಿನೇ ಸರ್ಕಾರಿ ವ್ಯವಸ್ಥೆಯ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಕಾರಾಗೃಹದ ಕಂಬಿಯ ಮುಂದೆ ಇರಬೇಕಾದ ಅಧಿಕಾರಿಗಳು ಕಂಬಿಯ ಹಿಂದೆ ನಿಲ್ಲುವಂತಾಗಿರುವುದು ವಿಪರ್ಯಾಸ. ಇತ್ತೀಚಿನ ದಿನಗಳಲ್ಲಿ ಪರಪ್ಪನ ಅಗ್ರಹಾರದ ಜೈಲಿನ ಕಂಬಿಯ ಹಿಂದೆ ಹೋಗಿರುವವರ ಪಟ್ಟಿ ಗಮನಿಸಿದರೆ ಕಾಲ ಹೀಗೆಯೇ ಇರುವುದಿಲ್ಲ; ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಆಶಾಭಾವ ತಳೆಯಬಹುದಲ್ಲವೆ?⇒ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ